ಸಂಸದ ಭವನ ಸಂಕೀರ್ಣ ಇರುವುದು ದಿಲ್ಲಿಯ ಸಂಸತ್ ಮಾರ್ಗದಲ್ಲಿ. ಈ ಸಂಕೀರ್ಣ ಇರುವ ಪ್ರದೇಶದ ವ್ಯಾಪ್ತಿ ಎಷ್ಟು ಗೊತ್ತೇ ?

ಬರೋಬ್ಬರಿ 6 ಎಕರೆ ಪ್ರದೇಶ. ಸುಮಾರು 560 ಅಡಿ ವ್ಯಾಸವುಳ್ಳ ವೃತ್ತದಂತಿದೆ ಈ ಪ್ರದೇಶ. ಈ ಸಂಕೀರ್ಣದಲ್ಲಿ ಸಂಸತ್ ಭವನ, ಸ್ವಾಗತಕಾರ ಕಟ್ಟಡ, ಸಂಸದೀಯ ಭವನ, ಸಂಸದರ ಗ್ರಂಥಾಲಯ ಕಟ್ಟಡ, ಉದ್ಯಾನ (ಲಾನ್), ಸಮೃದ್ಧಕೊಳಗಳಲ್ಲಿ ಕಾರಂಜಿಯ ಸೊಬಗು. ಸಂಸತ್ತು ಕಲಾಪ ನಡೆಯುವ ಸಂದರ್ಭದಲ್ಲಿ ಇಡೀ ಕಟ್ಟಡದ ಕೆಲ ಭಾಗಗಳಲ್ಲಿ ಹೂಗಳಿಂದ ಸಿಂಗರಿಸಲಾಗುತ್ತದೆ. ಕಣ್ಣಿಗೆ ಸೊಬಗು ತರಲೆಂದು.

1912-13 ರಲ್ಲಿ ವಿನ್ಯಾಸ ಪರಿಷ್ಕೃತಗೊಂಡು ಕಟ್ಟಡವಾಗಿ ಜನ್ಮ ತಳೆದದ್ದು 1927 ರಲ್ಲಿ. ಪ್ರಪಂಚದ ಅತ್ಯಂತ ವಿಶಿಷ್ಟ ವಿನ್ಯಾಸದ ಕಟ್ಟಡಗಳಲ್ಲಿ ಇದೂ ಒಂದು. ಬಹಳ ವಿಭಿನ್ನವಾಗಿ ಕಾಣುವ ಈ ವಿನ್ಯಾಸದ ಹಿಂದಿನ ಪ್ರೇರಣೆ ಏನು ಎಂಬುದನ್ನು ಹುಡುಕಿ ಹೊರಟರೆ ನಾನಾ ಸಂಗತಿಗಳು ಸಿಗುತ್ತವೆ. ಲಭ್ಯ ಮಾಹಿತಿ ಪ್ರಕಾರ ಸಿಕ್ಕ ಮೊದಲ ಪ್ರೇರಣೆಯೆಂದರೆ ‘ಶಿವನ ದೇವಸ್ಥಾನ’.

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಮಿತಾವಲಿ ಹಳ್ಳಿಯಲ್ಲಿರುವ ಎಂಟನೇ ಶತಮಾನದಷ್ಟು ಹಳೆಯ ಶಿವನ ದೇವಸ್ಥಾನವೇ ಇದರ ಹಿಂದಿನ ವಿನ್ಯಾಸಶಕ್ತಿ.

170 ಅಡಿ ಸುತ್ತಳತೆಯಲ್ಲಿ ವರ್ತುಲಾಕಾರದ ವಾಸ್ತು ವಿನ್ಯಾಸದಿಂದ ಕೂಡಿದ ಅಪರೂಪದ ದೇವಸ್ಥಾನ. 64 ಯೋಗಿನಿಯರರ ಚಿತ್ರಗಳನ್ನು ದೇವಸ್ಥಾನದೊಳಗಿನ ಸ್ತಂಭಗಳಲ್ಲಿ ಕೆತ್ತಲಾಗಿದೆ. ಇದು ೬೪ ಕೋಣೆಗಳನ್ನು ಹೊಂದಿದ್ದು, ಪ್ರತಿಯೊಂದರಲ್ಲೂ ಶಿವಲಿಂಗ ಸ್ಥಾಪಿಸಿರುವುದು ವಿಶೇಷ. ಪುರಾತತ್ವ ಶಾಸ್ತ್ರಜ್ಞರು ಹೇಳುವ ಪ್ರಕಾರ, ಇದು ವೇದ ಹಾಗೂ ಖಗೋಳ ಶಾಸ್ತ್ರ ಅಧ್ಯಯನದ ಮಹತ್ವವಾದ ಸ್ಥಳವಾಗಿತ್ತು. ಇದೇ ಸಂಸತ್ ಭವನದ ವಿನ್ಯಾಸಕ್ಕೆ ಮೂಲ ಪ್ರೇರಣೆ ಎನ್ನಲಾಗಿದೆ.

ಸಂಸತ್ ಕಟ್ಟಡದಲ್ಲಿ ಮೂರು ಅರ್ಧ ಚಂದ್ರಾಕೃತಿಯ ಕಟ್ಟಡಗಳಿದ್ದು, ಅವುಗಳು ಶಾಸನ ಸಭೆ ನಡೆಸಲು ನಿಯೋಜಿಸಲಾಗಿದೆ. ಈ ಮೂರು ಕೊಠಡಿಗಳು ಛೇಂಬರ್ ಆಫ್ ಪ್ರಿನ್ಸ್, ಕೌನ್ಸಿಲ್ ಆಫ್ ಸ್ಟೇಟ್ ಹಾಗೂ ಶಾಸನ ಸಭೆ ಎಂದು ವಿಂಗಡಿಸಲಾಗಿದೆ. ಪ್ರಸ್ತುತ ಅವು ಲೊಕಸಭೆ ಹಾಗೂ ರಾಜ್ಯಸಭೆ, ಗ್ರಂಥಾಲಯವಾಗಿ ಬಳಕೆಯಾಗುತ್ತಿದೆ. ಇದರ ಗಡಿಗೋಡೆಯೂ ಸುಂದರವೇ. ಮರಳುಗಲ್ಲಿನ ಬ್ಲಾಕ್ಸ್ ಗಳನ್ನು (ಸ್ಯಾಂಡ್‌ಸ್ಟೋನ್)ಜಾಮಿತಿಯ ವಿವಿಧಾಕಾರಗಳಲ್ಲಿ ಕೆತ್ತಿ ಬಳಸಲಾಗಿದೆ. ಇದು ಮೊಗಲ್‌ರ ಶೈಲಿಯ ಕಟಾಂಜನ ಮಾದರಿಯನ್ನು ಹೋಲುತ್ತದೆ.

ಛೇಂಬರ್ ಆಫ್ ಪ್ರಿನ್ಸ್ ಎಂಬ ವ್ಯವಸ್ಥೆ ಸ್ಥಾಪನೆಯಾಗಿದ್ದು 1920 ರಲ್ಲಿ. ಇಲ್ಲಿ ಭಾರತದ ರಾಜರುಗಳು ಬ್ರಿಟಿಷ್ ಸರಕಾರಗಳೊಂದಿಗೆ ತಮ್ಮ ರಾಜ್ಯಗಳ ಬೇಕು-ಬೇಡಗಳನ್ನು ಚರ್ಚಿಸಲು ಅವಕಾಶ ಕಲ್ಪಿಸಲಾಗುತ್ತಿತ್ತು. ಈ ವ್ಯವಸ್ಥೆ ಬ್ರಿಟಿಷರ ಆಡಳಿತ ಕೊನೆಗೊಳ್ಳುವವರೆಗೂ ಮುಂದುವರಿದಿತ್ತು. ಅದರ ಮೊದಲ ಸಭೆ ಸೇರಿದ್ದು 1921 ರಲ್ಲಿ.

ಇದೆಲ್ಲದರ ಮಧ್ಯೆ ಸಂಸತ್ತಿನ ಕಟ್ಟಡದಲ್ಲಿರುವ ಸೆಂಟ್ರಲ್ ಹಾಲ್‌ನ ಕಥೆ ಕೇಳಬೇಕು…ಅದೇ ಎಲ್ಲದರ ಜೀವಂತಿಕೆ !