ನಾವು ಚಿತ್ರದಲ್ಲಿ ಕಂಡಿರುವುದೂ ಅರ್ಧ ಸಂಸತ್ತನ್ನ. ಅಂದರೆ ಮಾಧ್ಯಮಗಳಾಗಲೀ, ಟಿ. ವಿ. ವಾರ್ತೆಯಲ್ಲಾಗಲೀ ಎಲ್ಲ ಕಡೆಯೂ ಅರ್ಧ ಚಂದ್ರಾಕೃತಿಯ ಸಂಸತ್ತಿನ ಪ್ರತಿಕೃತಿಯನ್ನೇ ತೋರಿಸುತ್ತಾರೆ. ಅಷ್ಟರಲ್ಲೇ ಮನೆಸೆಳೆಯುವ ಸಂಸತ್ತು ಎರಡು ಕಾರಣಕ್ಕೆ ಗಮನಾರ್ಹ. ಒಂದು ಅಧಿಕಾರ ಕೇಂದ್ರ, ಮತ್ತೊಂದು ಇಡೀ ದೇಶಕ್ಕೆ ಆಡಳಿತದ ಬೆಳಕು ನೀಡುತ್ತಿರುವ ದೊಡ್ಡ ದೀಪಸ್ತಂಭ.
ಈ ಕಟ್ಟಡಕ್ಕೆ 72 ವರ್ಷ. 57 ವರ್ಷಗಳ ಕಾಲ ನಮ್ಮ ನೆಲೆಯಾಗಿದ್ದರೆ, ಉಳಿದಷ್ಟು ವರ್ಷ ಬ್ರಿಟಿಷರ ಆಡಳಿತ ಬಿಂದುವಾಗಿತ್ತು.parli

ಮಾಂಟೆಗ್ ಮತ್ತು ಚೆಮ್‌ಪೋರ್ಡ್ ಅವರ ಸುಧಾರಣಾ ವರದಿಗಳು ಬಾರದಿದ್ದರೆ ಇಂತದೊಂದು ವ್ಯವಸ್ಥೆಯೂ ಬರುತ್ತಿರಲಿಲ್ಲ, ಕಟ್ಟಡವೂ ಏಳುತ್ತಿರಲಿಲ್ಲ. ಬ್ರಿಟಿಷ್ ಅಧಿಕಾರಿಗಳಾದ ಇವರ ವರದಿ ನಮ್ಮೊಳಗೆ ಒಂದು ಹೊಸ ವ್ಯವಸ್ಥೆಯನ್ನು ಹುಟ್ಟುಹಾಕಿತು. ಬ್ರಿಟಿಷ್ ಸರಕಾರ, 1909 ರಲ್ಲಿ ಭಾರತೀಯರಿಗೆ ಅಂದರೆ ಭಾರತೀಯ ನಾಯಕರಿಗೆ ಕೊಟ್ಟ ಭರವಸೆಯೆಂದರೆ ಪ್ರತಿ ಹತ್ತು ವರ್ಷಗಳಿಗೊಮ್ಮೆ ಹೊಸ ಸಾಂವಿಧಾನಿಕ ಸುಧಾರಣೆಗಳನ್ನು ಕೈಗೊಳ್ಳಲಾಗುವುದು. ಅದು ಭಾರತದಲ್ಲಿ ಸ್ವಾತಂತ್ರ್ಯ ಹಾಗೂ ನಮ್ಮನ್ನು ನಾವು ಆಳಿಕೊಳ್ಳುವ ಪದ್ಧತಿಯನ್ನು ಪೋಷಿಸುವ ನೆಲೆಯಾಗಬೇಕೆಂಬ ಉದ್ದೇಶವಿತ್ತು.

ಈ ಹಿನ್ನೆಲೆಯಲ್ಲಿ 1919 ರಲ್ಲಿ ಮಾಂಟೆಗ್-ಚೆಮ್‌ಫೋರ್ಡ್ ಸುಧಾರಣಾ ವರದಿ ಕೊಟ್ಟರು. ಅದರ ಪ್ರಕಾರ ಭಾರತದಲ್ಲಿ ದ್ವಿಪ್ರಭುತ್ವ ಆಡಳಿತ ಜಾರಿ, ಅದಕ್ಕೆ ಸೂಕ್ತವಾದ ಮೇಲ್ಮನೆ, ಕೆಳಮನೆ ವ್ಯವಸ್ಥೆ, ಮತ ನೀಡುವ ಅಧಿಕಾರ- ಎಲ್ಲವೂ ವಿವರಿಸಿತು. ಅದಕ್ಕಿಂತ ಮೊದಲು ಬರಿಯ ಆಡಳಿತಕ್ಕೆ ಸರ್ಕ್ಯುಲರ್ ಹೌಸ್ ಅನ್ನು ನಿರ್ಮಿಸಬೇಕೆಂದು ತೀರ್ಮಾನಿಸಲಾಗಿತ್ತು. ಆದರೆ ಆಧುನಿಕ ಪ್ರಜಾತಂತ್ರ ವ್ಯವಸ್ಥೆಯ ರೀತಿ ನೀತಿ ಇದ್ದ ವರದಿ ಆಧರಿಸಿ ಇಡೀ ಲೆಕ್ಕಾಚಾರವೇ ಬದಲಾಯಿತು. ಸರ್ಕ್ಯುಲರ್ ಹೌಸ್ ಬದಲು ವಿನ್ಯಾಸವೇ ಬದಲಾಯಿತು. ಅದಕ್ಕೂ ಒಬ್ಬ ಅಧಿಕಾರಿಯ ದೂರದೃಷ್ಟಿಯೂ ಕಾರಣ.

ವರದಿಯ ಪ್ರಕಾರ ಮೇಲ್ಮನೆಗೆ 60 ಮಂದಿ ಸದಸ್ಯರು, ಕೆಳಮನೆಗೆ 145 ಮಂದಿ ಸದಸ್ಯರು. ಇವರೆಲ್ಲಾ ಕುಳಿತು ಚರ್ಚಿಸಿ ತೀರ್ಮಾನಗಳನ್ನು ಕೈಗೊಳ್ಳಬೇಕಾದರೆ ಪ್ರತ್ಯೇಕ ವ್ಯವಸ್ಥೆ ಅನಿವಾರ‍್ಯವಾಯಿತು. ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಹರ್ಬರ್ಟ್ ಬೇಕರ್ ಎಂಬಾತ ಇದರ ಮೊದಲ ವಿನ್ಯಾಸ ರೂಪಿಸಿದ. ವಾಸ್ತವವಾಗಿ ಈ ಭವನ ಸಂಕೀರ್ಣ ಇವನದ್ದೇ ಕನಸಿನ ಕೂಸು. ನಂತರ ಇವನ ಲೆಕ್ಕಾಚಾರಕ್ಕೆ ತನ್ನದನ್ನೂ ಸೇರಿಸಿದವನು ಎಡ್ವರ್ಡ್ ಲೂಟೆನ್ಸ್. ಇವರಿಬ್ಬರೇ ದಿಲ್ಲಿಗೆ ಬಂದು ಇದರ ನಿರ್ಮಾಣ ಉಸ್ತುವಾರಿ ನೋಡಿಕೊಂಡರು. ಕನಸು ಸಾಕಾರಗೊಳ್ಳುವಂತೆ ಗಮನಹರಿಸಿದರು. ಆದರೂ ನಂತರ ವಿನ್ಯಾಸದ ಬಗ್ಗೆ ಕೆಲವೊಂದು ಟೀಕೆ ಕೇಳಿಬಂತು. ಅದು ಇದ್ದದ್ದೇ, ಯಾಕೆಂದರೆ ನಮ್ಮದು ಪ್ರಜಾತಂತ್ರವಲ್ಲವೇ?

1921 ರ ಫೆಬ್ರವರಿ 12 ರಂದು ಇದರ ಶಂಕುಸ್ಥಾಪನೆ ನೆರವೇರಿತು. ನಿರಂತರ ಆರು ವರ್ಷಗಳ ಪ್ರಯತ್ನದಿಂದ ರೂಪುಗೊಂಡ ಕಟ್ಟಡ ಭಾರತಕ್ಕೆ ಸಮರ್ಪಿತವಾಗಿದ್ದು 1927 ರ ಜನವರಿ 18 ರಂದು. ಇದನ್ನು ಉದ್ಘಾಟಿಸಿದ್ದು ಭಾರತೀಯ ಗವರ್ನರ್ ಜನರಲ್ ಲಾರ್ಡ್ ಇರ್ವಿನ್. ಇಂಥ ಅದ್ಭುತವಾದ ಕಟ್ಟಡಕ್ಕೆ ವೆಚ್ಚವಾದದ್ದು 83 ಲಕ್ಷ ರೂ. ಗಳು ಮಾತ್ರ.

ವೆಚ್ಚವಾದದ್ದು ಇರಲಿ, ಮಾಂಟೆಗ್ ನೀಡಿದ ಸುಧಾರಣಾ ವರದಿ ಪ್ರಕಾರ 1919 ರಲ್ಲಿ ಮತ ಚಲಾಯಿಸುವ ಅಧಿಕಾರ ನಮ್ಮಲ್ಲಿ ಎಷ್ಟು ಮಂದಿಗೆ ಕೊಟ್ಟಿದ್ದರು ಗೊತ್ತೇ ? ಕೇವಲ 8.6 ದಶಲಕ್ಷ ಮಂದಿಗೆ ಮಾತ್ರ. ಈಗ ನಮ್ಮ ಜನಸಂಖ್ಯೆ ಲೆಕ್ಕ ಹಾಕಿ..ನೂರು ಕೋಟಿ !