ಸಂಸತ್ತಿನ ಮಾಲಿಕೆಯ ಎರಡನೇ ಲೇಖನವಿದು. ಓದಿ ಅಭಿಪ್ರಾಯ ತಿಳಿಸಿ.

ಹೌದು, ಎಷ್ಟೋ ಬಾರಿ ಒಂದು ವ್ಯವಸ್ಥೆಯ ಹಿಂದಿನ ಹಿನ್ನೆಲೆಯ ಗೊತ್ತಾಗದ ಹೊರತು ಅದು ಅಚ್ಚರಿ ಎನಿಸುವುದಿಲ್ಲ.

ವೇದಗಳ ಕಾಲದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ನಮಗೆ ಕಣ್ಣಿಗೆ ಕಾಣುತ್ತಿದ್ದ ಮಾದರಿ ಬ್ರಿಟನ್ ನದ್ದು. ಅಲ್ಲಿ ರಾಜ ಆಡಳಿತ. ಈ ಮಧ್ಯೆ ಪ್ರಜಾಪ್ರಭುತ್ವ ಅಂದರೆ ಪ್ರಧಾನಮಂತ್ರಿ ವ್ಯವಸ್ಥೆ ಯಾಕೆ ಬಂದಿತೆಂದರೆ ಬ್ರಿಟನ್‌ನ ರಾಜ ಮೊದಲ ಜಾರ್ಜ್‌ಗೆ (1721-1772)ಇಂಗ್ಲಿಷ್ ಬರುತ್ತಿರಲಿಲ್ಲ. ಆಡಳಿತ ಮಾಡುವುದು ಹೇಗೆ ?

ಹಾಗಾಗಿ ರಾಜ, ತನ್ನ ಆಡಳಿತದಲ್ಲಿ ನೇಮಿಸಿಕೊಂಡಿದ್ದ ಮಂತ್ರಿಗಳಲ್ಲಿ ಹೆಚ್ಚು ಬುದ್ಧಿವಂತ, ಹೆಚ್ಚು ನಂಬಿಕಸ್ಥನಿಗೆ ‘ಪ್ರಧಾನ’ ಎಂಬ ಪಟ್ಟ ಕಟ್ಟಿದ. ಇದರರ್ಥ ಆ ಮಂತ್ರಿ ಪ್ರಧಾನ ಮಂತ್ರಿ. ಉಳಿದವರೆಲ್ಲರೂ ಅವನೊಂದಿಗಿದ್ದರು. ಅದುವೇ ಮಂತ್ರಿಮಂಡಲ. ಆ ಮೂಲಕ ಆಡಳಿತ ನಡೆಸಲು ಶುರು ಮಾಡಿದ ರಾಜ. ಅದೇ ಪ್ರಧಾನಮಂತ್ರಿ ಮೂಲಕ ರಾಜ್ಯ ನಡೆಸುವ ಕಲ್ಪನೆಗೆ ಮೂಲ ಎಂಬುದು ಲಭ್ಯ ಮಾಹಿತಿ. ಆದರೆ ಹೀಗೆ ಸಂಸತ್ತಿನ ಮಾದರಿಗೆ ಇನ್ನೂ ಹಿಂದಿನ ಇತಿಹಾಸವಿದೆ. ಬುದ್ಧನ ಕಾಲದಿಂದಲೂ ನಡೆಯುತ್ತಿದ್ದ ಸಂಘ ಅಂಥದೊಂದು ಉದಾಹರಣೆ. ನಂತರ ಬುದ್ಧನ ಅನುಯಾಯಿಗಳಾದ ಅಶೋಕ ಸೇರಿದಂತೆ ಹಲವು ರಾಜರು ಇಂಥದೊಂದು ಪದ್ಧತಿಯನ್ನು ಜಾರಿಯಲ್ಲಿಟ್ಟಿದ್ದರು.

ಹೀಗೆ ತಲೆ ಎತ್ತಿದ ವ್ಯವಸ್ಥೆ ಆರಂಭದಲ್ಲಿ ರಾಜ ನಿರ್ದೇಶಿತವಾಗಿತ್ತಾದರೂ, ಕ್ರಮೇಣ ಸರಕಾರದ ಮೇಲೆ (ರಾಜರ ಆಡಳಿತ) ಸಂಸತ್ತಿನ ಅಂದರೆ ಮಂತ್ರಿ ಮಂಡಲದ ಹಿಡಿತ ಹೆಚ್ಚುತ್ತಾ ಹೋಯಿತು. ಅದರ ಪರಿಣಾಮ, ಪ್ರಜಾಪ್ರಭುತ್ವೀಕರಣ. ಒಂದು ಹಂತದಲ್ಲಿ ರಾಜಾ, ಪ್ರಧಾನಮಂತ್ರಿಯನ್ನು ಕರೆದು ಸರಕಾರ ರಚಿಸುವ ಅವಕಾಶ ನೀಡುವ ಮಟ್ಟಿಗೆ ತಲುಪಿತು. ಈಗಿನ ರಾಷ್ಟ್ರಪತಿಗಳು ಪಕ್ಷಗಳಿಗೆ ಸರಕಾರ ರಚಿಸಲು ಅವಕಾಶ ನೀಡಿದಂತೆಯೇ.

1832 ರಲ್ಲಿ ಜಾರಿಗೆ ಬಂದ ರಾಜಕೀಯ ವ್ಯವಸ್ಥೆಯ ಸುಧಾರಣಾ ಕಾಯ್ದೆ, ಸಂಸತ್ತಿನ ಸಾರ್ವಭೌಮತ್ವವನ್ನು ಎತ್ತಿ ಹಿಡಿಯಿತು. ಆಗ ಪ್ರಧಾನಮಂತ್ರಿ ಮತ್ತು ಮಂತ್ರಿಮಂಡಲವನ್ನು ಸಂಸತ್ತೇ ನಿರ್ಧರಿಸುವಂತಾಯಿತು. ಹೀಗಿದ್ದರೂ ಸಂಸತ್ತು-ಚರ್ಚೆಯ ವೇದಿಕೆ ಎನ್ನುವ ರೀತಿಯಲ್ಲಿ ಮೂರ್ತ ರೂಪಕ್ಕೆ ಬಂದದ್ದು 1707 ರಲ್ಲಿ. ಬ್ರಿಟನ್‌ನ ಮೊದಲ ಸಭೆ ನಡೆದದ್ದು ಆಗಲೇ.

ಬ್ರಿಟನ್ ರೂಪಿತ ವೆಸ್ಟ್‌ಮಿನಿಸ್ಟರ್ ಪದ್ಧತಿಯನ್ನೇ ಬಹಳಷ್ಟು ರಾಷ್ಟ್ರಗಳು ಅಳವಡಿಸಿಕೊಂಡಿದ್ದು, ಭಾಗಶಃ ನಾವೂ ಅದನ್ನೇ ಆಧರಿಸಿ ನಮ್ಮ ಸಂಸದೀಯ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದೇವೆ. ಇದರಡಿ ನಡೆಯುವ ಆಡಳಿತವೆಲ್ಲವೂ ರಾಷ್ಟ್ರದ, ರಾಜ್ಯದ ಮುಖ್ಯಸ್ಥನ ಹೆಸರಿನಲ್ಲಿ. ಆ ಕಾರ್ಯಗಳನ್ನು ಅನುಷ್ಠಾನಿಸುವವರು ಮಾತ್ರ ಶಾಸಕಾಂಗದವರು. ನಡೆಯುವುದೆಲ್ಲವೂ ಕಾರ‍್ಯಾಂಗದ ಹೆಸರಿನಲ್ಲಿ. ಶಾಸಕಾಂಗದ ಮುಖ್ಯಸ್ಥನಾಗಿ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಕಾರ‍್ಯ ನಿರ್ವಹಿಸಿದರೆ, ಕಾರ‍್ಯಾಂಗದ ಮುಖ್ಯಸ್ಥನಾಗಿ ರಾಷ್ಟ್ರಪತಿ, ರಾಜ್ಯಪಾಲರ ನೇತೃತ್ವ. ಹಾಗಾಗಿಯೇ ನಮ್ಮಲ್ಲಿ ಹೊರಬೀಳುವ ಪ್ರತಿ ಆದೇಶಗಳಿಗೂ ರಾಷ್ಟ್ರಪತಿಗಳ, ರಾಜ್ಯಪಾಲರ ಸಹಿ ಇರಬೇಕು.

ಹೀಗೆ ಜಾರಿಗೆ ಬಂದ ಸಂಸದೀಯ ವ್ಯವಸ್ಥೆಯನ್ನು ಅನುಸರಿಸುತ್ತಿರುವ ಬಹುದೊಡ್ಡ ದೇಶ ನಮ್ಮದು. ಆದ ಕಾರಣ ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ಭಾರತದ್ದು ಎಂಬ ಅಭಿದಾನವಿದೆ. ಹೀಗೆ ಪಾಶ್ಚಾತ್ಯ ಮತ್ತು ವೇದಗಳ ಕಲ್ಪನೆಯಿಂದ ಒಡಮೂಡಿದ ನಮ್ಮ ವ್ಯವಸ್ಥೆ ಇಂದು ಸಂಸತ್ತಾಗಿದೆ.
ಅದಕ್ಕೆ ಎರಡು ಮನೆಗಳು. ಒಂದು ಕೆಳಮನೆ ಮತ್ತೊಂದು ಮೇಲ್ಮನೆ. ಲೋಕಸಭೆಗೆ ಜನರಿಂದ ನೇರವಾಗಿ ಆಯ್ಕೆಯಾದವರೇ ಸದಸ್ಯರು. ರಾಜ್ಯಸಭೆಗೆ ಜನಪ್ರತಿನಿಧಿಗಳಿಂದ ಹಾಗೂ ಸರಕಾರದ ನಾಮನಿರ್ದೇಶನದಿಂದ ನೇಮಿತಗೊಂಡವರು ಸದಸ್ಯರು. ಕೆಳಮನೆಯ ಸದಸ್ಯರಿಗೆ ಆರ್ಥಿಕ ಅಧಿಕಾರಿಗಳುಂಟು, ಮೇಲ್ಮನೆಯವರಿಗೆ ಆ ಅಧಿಕಾರವಿಲ್ಲ. ಹಾಗಾಗಿ ಮೇಲ್ಮನೆಯನ್ನು ಹಿರಿಯರ ಸಭೆ, ತಜ್ಞರ ಸಭೆ ಎನ್ನುವುದೂ ಉಂಟು.

ಇದೆಲ್ಲವನ್ನೂ ಒಳಗೊಂಡ ಸಂಸತ್ತಿನ ಕಟ್ಟಡಕ್ಕೂ ದೊಡ್ಡ ಇತಿಹಾಸವಿದೆ. ಈ ಕಟ್ಟಡ ನಾವು ಕಟ್ಟಿಸಿದ್ದಲ್ಲ ; ಬ್ರಿಟಿಷರದ್ದು. ಅದು ಕಾರ್ಯಾರಂಭ ಮಾಡಿದ್ದೂ ಅವರ ಕಾಲದಲ್ಲೇ.