ಸಂಸತ್ತಿನ ಬಗ್ಗೆ ಬರೆದ ಲೇಖನ ಮಾಲಿಕೆಯನ್ನು ಇಲ್ಲಿ ಹಾಕುತ್ತಿದ್ದೇನೆ. ಸುಮಾರು ಎಂಟು ಕಂತುಗಳ ಬರಹ ನಿರಂತರವಾಗಿ ಪ್ರಕಟವಾಗಲಿದೆ.

ಹದಿನೈದನೇ ಲೋಕಸಭೆಗೆ ನಮ್ಮ ಪ್ರತಿನಿಧಿಯಾಗಿ ಯಾರನ್ನು ಆರಿಸಿ ಕಳುಹಿಸಬೇಕು ? ಯಾರನ್ನು ಆರಿಸಿ ಕಳುಹಿಸಬಾರದು ? ಯಾರು ಆ ಸ್ಥಾನಕ್ಕ ಯೋಗ್ಯ ? ಯಾರೂ ಯೋಗ್ಯರಲ್ಲ? ಮಾಧ್ಯಮಗಳಿಂ ದ ಹಿಡಿದು ಹಲವು ಸೇವಾ ಸಂಸ್ಥೆಗಳವರೆಗೂ ಎಲ್ಲವೂ ಜನರಿಗೆ ಒಂದೇ ಹೇಳಿದ್ದು – ‘ನೀವು ಮತ ಹಾಕಿ ನಿಮ್ಮ ಜನಪ್ರತಿನಿಧಿಯನ್ನು ಆರಿಸಿ’- ಈ ಚರ್ಚೆ ಮುಗಿದು ಯುಪಿಎ ಮತ್ತೆ ಆಡಳಿತ ವಹಿಸಿಕೊಂಡಿದೆ.ಈ ಸಂದರ್ಭದಲ್ಲಿ ನಮ್ಮ ಸಂಸತ್ತಿನ ಬಗ್ಗೆ ಗಮನಿಸಿದರೆ ಹೇಗೆ ಅನಿಸಿತು ? ವಿಜಯ ಕರ್ನಾಟಕಕಕ್ಕೆ ಎಂಟು ದಿನ ನಿರಂತರವಾಗಿ ಬರೆದೆ. ಆ ಬರಹಗಳನ್ನು ಇಲ್ಲಿ ಹಾಕಿದ್ದೇನೆ.

ವಾಸ್ತವವಾಗಿ ತಮ್ಮ ಜನಪ್ರತಿನಿಧಿಗಳ ಬಗೆಗಿನ ಕಾಳಜಿ ಜನರಲ್ಲಿ ಹೆಚ್ಚೆಚ್ಚು ವ್ಯಕ್ತವಾಗುತ್ತಿದೆ. ‘ಇಂಥವರೇ ನಮ್ಮ ಪ್ರತಿನಿಧಿಗಳಾಗಬೇಕು, ನಮ್ಮನ್ನು ಪ್ರತಿನಿಧಿಸುವವರು ಹೀಗೇ ಇರಬೇಕು’ ಎಂದು ಗುಣ ವ್ಯಾಖ್ಯಾನಗಳನ್ನು ಮಾಡ ತೊಡಗಿದ್ದಾರೆ. ಅದಕ್ಕೇ ಬಹುಶಃ ರಾಜ್ಯದಲ್ಲೇ ಈ ಬಾರಿ ಮೊದಲ ಬಾರಿಗೆ ಮೂರಕ್ಕೂ ಹೆಚ್ಚು ಮಂದಿ ‘ಇವರ್ಯಾರೂ ನಮ್ಮನ್ನು ಪ್ರತಿನಿಧಿಸಲು ಅರ್ಹರಲ್ಲ’ ಎಂದು ನಕಾರಾತ್ಮಕ ಮತದಾನ ಮಾಡಿದ್ದು.

ಹೀಗೆ ನಮ್ಮನ್ನು ಆಳಿಕೊಳ್ಳಲು ನಾವೇ ಮನಸ್ಸಿನಲ್ಲಿ ನೆನೆಸಿಕೊಂಡು ರೂಪಿಸಿಕೊಂಡ ವ್ಯವಸ್ಥೆ ಪ್ರಜಾತಂತ್ರ. ಅದು ನಮಗೆ ಕಾಣುವುದಿಲ್ಲ. ಒಂದು ರೀತಿಯಲ್ಲಿ ದೇವರಿದ್ದ ಹಾಗೆ, ಅವನು ಕಾಣುವುದಿಲ್ಲ, ಕೇವಲ ಅನುಭವವಕ್ಕೆ ಮಾತ್ರ ನಿಲುಕುವವನು. ನಮ್ಮ ಪ್ರಜಾತಂತ್ರವೂ ತೋರುವುದಿಲ್ಲ ; ಅನುಭವಕ್ಕೆ ನಿಲುಕುತ್ತದೆ. ಆದರೆ ನಾವು ಅದಕ್ಕೆ ಒಂದು ಮೂರ್ತ ರೂಪ ಕೊಟ್ಟದ್ದು ಸಂಸತ್ತು ಅಥವಾ ಪಾರ್ಲಿಮೆಂಟ್ ಮೂಲಕ. ಅದಕ್ಕೆ ಜೀವ ತುಂಬುವವರು ನಾವು ಆರಿಸಿ ಕಳಿಸಿದ ಜನಪ್ರತಿನಿಧಿಗಳು. ಇಂಥ ಸಂಸತ್ತಿಗೊಂದು ಇತಿಹಾಸವಿದೆ. ಅದಕ್ಕೊಂದು ಹಿನ್ನೆಲೆಯಿದೆ. ಅದರಲ್ಲಿ ಎಂಥೆಂಥವರೆಲ್ಲಾ ಅಗಿ ಹೋಗಿದ್ದಾರೆ.

ನಮ್ಮದು ಸಂಸದೀಯ ಪ್ರಜಾಪ್ರಭುತ್ವ. ಅಂದರೆ ಸಂಸತ್ತಿಗೆ ಪರಮೋಚ್ಚ ಅಧಿಕಾರ. ರಾಷ್ಟ್ರಪತಿಗಳು ರಾಷ್ಟ್ರದ ಪ್ರಥಮ ಪ್ರಜೆಯಾದರೂ, ಆಡಳಿತ ನಡೆಸುವುದು ಸರಕಾರವೇ. ಆ ಸರಕಾರದಲ್ಲಿ ನಾವು ಅರಿಸಿ ಕಳಿಸಿದ ಸಂಸದರು (ಲೋಕಸಭೆ ಸದಸ್ಯರು) ಇರುತ್ತಾರೆ. ಅವರು ಆಯ್ಕೆ ಮಾಡಿದವ ಪ್ರಧಾನ ಮಂತ್ರಿಯಾಗಿ ಕಾರ‍್ಯ ನಿರ್ವಹಿಸುತ್ತಾನೆ. ಆ ಪ್ರಧಾನ ಮಂತ್ರಿ ತನ್ನ ಆಡಳಿತಕ್ಕೆ ಅನುಕೂಲವಾಗು ವವರನ್ನು ಸಚಿವರನ್ನಾಗಿ ನೇಮಿಸಿಕೊಳ್ಳುತ್ತಾನೆ. ಅದರಲ್ಲಿ ಕ್ಯಾಬಿನೆಟ್, ರಾಜ್ಯ ದರ್ಜೆಯ ಮಂತ್ರಿ ಸ್ಥಾನವಿದೆ. ಎಲ್ಲವೂ ನಿಜ. ಅದೂ ನಮ್ಮಲ್ಲಿ ಪಕ್ಷೀಯ ರಾಜಕಾರಣ ಇರುವುದರಿಂದ ಬಹುಮತ ಪಡೆದ ಪಕ್ಷ ತನ್ನ ನಾಯಕನನ್ನು ಆಯ್ಕೆ ಮಾಡಿ ಈ ಪ್ರಧಾನ ಮಂತ್ರಿ ಸ್ಥಾನ ನೀಡುತ್ತದೆ. ಅದೆಲ್ಲವೂ ನಾವು ನೋಡುತ್ತಿರುವಂಥದ್ದು.

ನಮ್ಮ ಸಂಸದೀಯ ವ್ಯವಸ್ಥೆ ಅಥವಾ ಸಂಸತ್ತು ವ್ಯವಸ್ಥೆಗೆ ಬ್ರಿಟನ್‌ನ ಹೌಸ್ ಆಫ್ ಲಾರ್ಡ್ಸ್ ಮತ್ತು ಹೌಸ್ ಆಫ್ ಕಾಮನ್ಸ್ ಪ್ರೇರಣೆ ಎನ್ನಲಾಗುತ್ತದೆ. ಬ್ರಿಟನ್‌ನಲ್ಲೂ ಹೌಸ್ ಆಫ್ ಕಾಮನ್ಸ್ ಎಂದರೆ ನಮ್ಮಲ್ಲಿನ ಲೋಕಸಭೆ (ಕೆಳಮನೆ) ಇದ್ದ ಹಾಗೆ. ಹೌಸ್ ಆಫ್ ಲಾರ್ಡ್ಸ್ ಎಂದರೆ ನಮ್ಮ ರಾಜ್ಯಸಭೆ (ಮೇಲ್ಮನೆ) ಇದ್ದ ಹಾಗೆ. ಎರಡನ್ನೂ ಸಮಾನವಾಗಿ ಕಂಡರೂ ಹೌಸ್ ಆಫ್ ಕಾಮನ್ಸ್ ಗೆ ಹೆಚ್ಚು ಅಧಿಕಾರ. ಅದೇ ಪರಿಸ್ಥಿತಿ ನಮ್ಮಲ್ಲೂ. ಲೋಕಸಭೆಗೆ ಹೆಚ್ಚು ಅಧಿಕಾರ.

ಆದರೆ ಇಂಥದೊಂದು ಕಲ್ಪನೆ ನಮ್ಮ ವೇದದ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ವಿವರಣೆ. ಆರ‍್ಯನ್ನರ ರಾಜ್ಯಾಡಳಿತದಲ್ಲಿ ‘ಸಭೆ’ ಮತ್ತು ’ಸಮಿತಿ’ ಎಂಬವುಗಳಿದ್ದವು. ಇಲ್ಲೂ ‘ಸಭಾ’ ಎಂದರೆ ಜನರ ಪ್ರತಿನಿಧಿ. ಅಂದರೆ ರಾಜ್ಯದ ಆಡಳಿತದಲ್ಲಿ ನಿತ್ಯ ಭಾಗಿಯಾಗಿರುವವರ ಪ್ರತಿನಿಧಿಗಳಿವರು. ‘ಸಮಿತಿ’ ಎಂದರೆ ರಾಜ್ಯದ ಎಲ್ಲ ಪುರುಷ ಸದಸ್ಯರು ಪಾಲ್ಗೊಳ್ಳುವ ವ್ಯವಸ್ಥೆ. ಇದು ಸಭೆ ಸೇರುವುದೇ ಹೊಸ ರಾಜನನ್ನು ಆರಿಸಲು ಅಥವಾ ಈಗಿರುವ ರಾಜನ ಕಾರ‍್ಯನೀತಿಯನ್ನು ವಿಮರ್ಶಿಸಲು. ಈ ಎರಡೂ ವ್ಯವಸ್ಥೆ ಪ್ರಜಾಪತಿಯ ಮಕ್ಕಳು ಎಂಬ ಕಲ್ಪನೆ ಆಗಿತ್ತು.
SansadBhavan
ಪಾಶ್ಚಾತ್ಯ ಅದರಲ್ಲೂ ಬ್ರಿಟನ್‌ನ ಪ್ರಜಾಪ್ರಭುತ್ವ ಮಾದರಿಯನ್ನು ಒಪ್ಪಿಕೊಂಡ ರಾಷ್ಟ್ರಗಳು ಹಲವು. ಆ ಅರ್ಥದಲ್ಲಿ ನಮ್ಮಲ್ಲೂ ಇರುವ ‘ಪಾರ್ಲಿಮೆಂಟ್’ ಎಂಬ ಪದ ಫ್ರೆಂಚ್ ಮೂಲದ್ದು. ಆ ಭಾಷೆಯಲ್ಲಿ ಹಾಗೆಂದರೆ ‘ಮಾತನಾಡಲು ಅಥವಾ ಮಾತನಾಡುವುದು’ ಎಂದರ್ಥ. ಈಗ ಅದೊಂದು ವ್ಯವಸ್ಥೆಯಾಗಿ ಪರಿವರ್ತಿತವಾಗಿರುವುದರಿಂದ ‘ ಮಾತನಾಡುವವರ ಸಭೆ’ ಎಂದು ಅರ್ಥಾಂತರವಾಗಿದೆ. ಹಾಗಾಗಿ ಜನರ ಕಷ್ಟ ಸುಖಗಳ ಬಗ್ಗೆ ಕೈಗೊಳ್ಳಬೇಕಾದ ತೀರ್ಮಾನಗಳು, ಸಲಹೆಗಳನ್ನು ಕುರಿತು ಚರ್ಚಿಸುವ ಸಭೆಯಿದು ಎಂದು ಅರ್ಥ ತುಂಬಲಾಗಿದೆ. ನಮ್ಮನ್ನು ಪ್ರತಿನಿಧಿಸುವವರೆಲ್ಲಾ ಒಂದೆಡೆ ಸೇರಿ ಮಾತನಾಡುವ, ತಮ್ಮನ್ನು ಆರಿಸಿ ಕಳುಹಿಸಿದವರ ಧ್ವನಿಯಾಗುವ ಕ್ಷೇತ್ರ ಈ ‘ಪಾರ್ಲಿಮೆಂಟ್’. ನಮ್ಮ ಸಂಸತ್ತು.

ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪ ‘ಸಂಸತ್ತು’ ಆಗಿತ್ತು ಎಂದು ಹೇಳಲಾಗುತ್ತಿದೆ. ಎಲ್ಲ ಸಜ್ಜನರು, ಜ್ಞಾನಿಗಳು ಇದರ ಸದಸ್ಯರಾಗಿ ಲೋಕ ಹಿತ ಚಿಂತನೆಯನ್ನು ಮಾಡುತ್ತಿದ್ದರಂತೆ. ಅದು ಅಧ್ಯಾತ್ಮದ ನೆಲೆ ಎನ್ನಬಹುದು. ಅದೇ ಅರ್ಥದಲ್ಲಿ ಈಗ ನಮ್ಮ ಸಂಸತ್ತಿನಲ್ಲಿ ಲೋಕ ಚಿಂತನೆಯನ್ನೇ ಮಾಡುತ್ತಿದ್ದಾರೆ, ಅದೂ ಈ ಲೋಕದ್ದು.

ಪ್ರತಿ ಕಲ್ಪನೆಯ ಹಿಂದೆಯೂ ಒಂದೊಂದು ಕಥೆ ಇರುತ್ತದೆ. ಇಷ್ಟಕ್ಕೂ ಬ್ರಿಟನ್‌ನಲ್ಲಿ ಇಂಥದೊಂದು ವ್ಯವಸ್ಥೆ ಯಾಕೆ ಬಂತು ಗೊತ್ತೇ ? ಆ ರಾಜನ ಭಾಷಾ ಸಮಸ್ಯೆಯಿಂದ !