ನೀಲನೆಯ ಆಕಾಶ. ಅದಕ್ಕೆ ಹತ್ತಿರವಾಗುವಂತೆ ಹಾರಿ ಹೋಗುತ್ತಿದ್ದ ಹಕ್ಕಿ ದೂರದಲ್ಲಿ ಚುಕ್ಕಿಯಂತೆ ಕಾಣುತ್ತಿತ್ತು. ಹಾರುತ್ತಾ…ಹಾರುತ್ತಾ ಹೋದ ಹಕ್ಕಿಗೆ ಕೆಳಗೆ ಹಸಿರು ಕಂಡಿತು. ಜೀವನೋತ್ಸಾಹ ಉಕ್ಕಿ ಬಂತು. ಮೆಲ್ಲಗೆ ಕೆಳಗಿಳಿಯತೊಡಗಿತು ; ಪುಟ್ಟನೊಬ್ಬ ಅಂಗಳದಲ್ಲಿ ನಿಂತು ಹಾರಿಸಿದ ಗಾಳಿಪಟವನ್ನು ಅತ್ಯಂತ ನಾಜೂಕಿನಿಂದ ಕೆಳಗಿಳಿಸಿಕೊಳ್ಳುತ್ತಿದ್ದ ಹಾಗೆ. ಚೂರು ಆತುರ ಪಟ್ಟರೂ ಗಾಳಿಪಟ ಯಾವುದಾದರೂ ಮರಕ್ಕೋ, ಕಂಬಕ್ಕೋ ಸಿಕ್ಕು ಹಾಳಾಗಿ ಬಿಡಬಹುದೆಂಬ ಕಾಳಜಿ. ಒಟ್ಟೂ ಗಾಳಿಪಟದ ಜೀವ ಉಳಿಸುವ ತವಕ.
blue bird
ಹಾಗೆಯೇ ಈ ಹಕ್ಕಿಯೂ ಸಹ. ಮುಂದೆ ಹಾದಿ ತೋರುತ್ತಿರಲಿಲ್ಲ, ಹಾಗೆಯೇ ಹೆಜ್ಜೆಯೂ ಮೂಡುತ್ತಿರಲಿಲ್ಲ. ಹಾರಿ ಹಾರಿ ಬಂದು ಕೆಳಗಿಳಿದು ಹಸಿರ ಕಂಡು ಉತ್ಸಾಹವನ್ನು ತುಂಬಿಕೊಂಡಿತು. ಕ್ಷಣ ಕಾಲ ಕಣ್ಣುಮುಚ್ಚಿ ಆಯಾಸ ಕಳೆದುಕೊಳ್ಳುವ ಪ್ರಯತ್ನ ಅದರದ್ದು. ಹಾಗೇ ಸುಮ್ಮನೆ ಎನ್ನುವಂತೆ ಕಣ್ಣು ಮುಚ್ಚಿತು. ಒಳಗೆಲ್ಲಾ ಕತ್ತಲೆ ಎನಿಸಿದಾಗ, ಇದೇ ಸುಖ ಎನಿಸಿತು. ಒಂದೆರಡು ಕ್ಷಣ ಹೆಚ್ಚಿಗೆ ಇದ್ದರೆ ಏನೂ ನಷ್ಟವಿಲ್ಲ ಎಂದು ಇನ್ನೂ ಒಂದೆರಡು ಕ್ಷಣ ಬಿಟ್ಟು ಕಣ್ತೆರೆಯಿತು.

ಹಸಿರೆಲ್ಲಾ ಸಂಭ್ರಮದಿಂದ ಕುಣಿಯುತ್ತಿದೆ. ಹಸಿರಿನ ತುದಿಯಲ್ಲೆಲ್ಲಾ ಹತ್ತು ಹಲವು ಬಣ್ಣ. ಉದ್ಯಾನದ ಹೂವುಗಳೆಲ್ಲಾ ಒಂದೇ ದಿನ, ಒಂದೇ ಕ್ಷಣ ಪರಸ್ಪರ ಮಾತನಾಡಿಕೊಂಡ ಹಾಗೆ ಥಟ್ಟನೆ ಅರಳಿದಂತೆ. ಇಡೀ ಹಸಿರಿನ ಬಸಿರಲ್ಲಿ ಬಣ್ಣ ಬಣ್ಣದ ಹೂವುಗಳೆಲ್ಲಾ ಮೂಡಿ ಬಂದಿದ್ದವು. ವಿಚಿತ್ರ ಎನಿಸಿತು ಹಕ್ಕಿಗೆ. ಕೆಲ ಕ್ಷಣಗಳಲ್ಲೇ ಹೀಗೆ ಬದುಕು ಅರಳುತ್ತದೆಯೇ? ಎಂಬ ಪ್ರಶ್ನೆ ಅದರದ್ದು.

ಒಂದೊಂದೇ ಬಣ್ಣವನ್ನು ನುಂಗ ತೊಡಗಿತು ಹಕ್ಕಿ. ಬೆಳ್ಳನೆಯ ಹೂವು…ಬಿಳಿಯ ಬಣ್ಣ ಗಾಯಬ್. ಹಾಗೆಯೇ ಕೆಂಪು…ನೀಲಿ…ಹಳದಿ…ತಿಳಿ ನೀಲಿ…ಗೊರಟೆ ಹೂವಿನ ಕಡು ನೀಲಿ ಬಣ್ಣ…ಕಂದು…ಕಡುಗೆಂಪು…ಬಣ್ಣವೇ ಇಲ್ಲದಂತೆ ತೋರುವ ತಿಳಿಯಾದ ಮತ್ತೊಂದು ಬಣ್ಣ…ಎಲ್ಲಾ ಬಣ್ಣ ನುಂಗಿದ ಹಕ್ಕಿಯ ಬಣ್ಣ ಈಗ ಸಂಪೂರ್ಣ ಕಪ್ಪು.

ಹಕ್ಕಿ ಮೊದಲು ಬಿಳಿಯ ಬಣ್ಣ ನುಂಗಿದಾಗ ತನ್ನ ಬಣ್ಣ ಬಿಳಿಯಾಗುವುದನ್ನು ಕಂಡಿತ್ತು. ಎಂಥಾ ಮೋಹ ಬಣ್ಣದ ಮೇಲೆ ಅದಕ್ಕೆ . ಅದೊಂದೇ ಬಣ್ಣ ನುಂಗಿ ಸುಮ್ಮನಾಗಲಿಲ್ಲ.

ಈಗ ಮತ್ತೆ ಹಸಿರೆ ಕಣ್ಣಿಗೆ ಕಾಣುತ್ತಿದೆ. ಹೂವುಗಳೆಲ್ಲಾ ಬಣ್ಣ ಕಳೆದುಕೊಂಡು ಬಿಳಿಚಿಕೊಂಡಿವೆ. ಅದರೆದುರು ಎಲ್ಲಾ ಬಣ್ಣ ನುಂಗಿದ ಹಕ್ಕಿ ಕುಳಿತಿದೆ. ಅಷ್ಟರಲ್ಲಿ ರಂಗು ರಂಗಿನ ಚಿಟ್ಟೆ ಮಧುವ ಅರಸಿಕೊಂಡು ಬಂತು. ಅದಕ್ಕೆ ತಲೆ ತಿರುಗುವ ಕ್ಷಣ. ಬರೀ ಹಸಿರೇ ಕಾಣುತ್ತಿದೆ, ಅದರ ತುದಿಯಲ್ಲಿ ಒಂದೂ ಹೂವು ಕಾಣುತ್ತಿಲ್ಲ. ಬಿಳಿಚಿಕೊಂಡವೆಲ್ಲಾ ಹೂವೇ…ಅಲ್ಲವೇ ? ಎಂಬ ಅನುಮಾನ.

ಹೀಗೇ ಹತ್ತಾರು ಹಸಿರಿನ ಮೇಲೆ ಲ್ಯಾಂಡ್ ಆಗಲು ಸ್ಥಳ ಹುಡುಕುವ ಹೆಲಿಕಾಪ್ಟರ್ ನಂತೆ ತಿರುಗಿದ ಚಿಟ್ಟೆ, ಹೂವೆಂದುಕೊಂಡ ಹೂವಿನ ಮೇಲೆ ಕುಳಿತಿತು. ಹಸಿರು ಮೆಲ್ಲಗೆ ತಲೆದೂಗುವಂತೆ ಮೈಯ ಅಲುಗಾಡಿಸಿತು. ಕೆಲವೇ ಕ್ಷಣ…ಬಣ್ಣಕ್ಕಾಗಿ ಹಪಹಪಿಸುತ್ತಿದ್ದ ಹಕ್ಕಿ ಆ ಚಿಟ್ಟೆಯನ್ನೂ ನುಂಗಿತು…ಆದರೂ ಬಣ್ಣ ಬದಲಾಗಲಿಲ್ಲ.
ಚಿತ್ರಕೃಪೆ : http://www.ukrsov.kiev.ua