ಈ ಲೇಖನದೊಂದಿಗೆ ಎವರೆಸ್ಟ್ ಪ್ರವಾಸದ ಮಾಲಿಕೆ ಮುಗಿಯಿತು. ಎವರೆಸ್ಟ್ ಹತ್ತಿ ಕನ್ನಡದ ಬಾವುಟ ಹಾರಿಸಿದ ಪಿ.ಎನ್. ಗಣೇಶ್ ಈಗ ಮತ್ತೊಮ್ಮೆ ಏಕಬಾರಿಗೆ ಎರಡು ಪರ್ವತ ಹತ್ತುವ ಸಾಹಸಕ್ಕೆ ಇಳಿದಿದ್ದಾರೆ. ಅವರಿಗೆ ಎಲ್ಲ ರೀತಿಯ ಸಹಕಾರ ಅಗತ್ಯವಿದೆ. ಈ ಸಂದರ್ಭದಲ್ಲೇ ಅವರು ಯಶಸ್ವಿಯಾಗಲಿ ಎಂದು ಹಾರೈಸುತ್ತಲೇ ಈ ಮಾಲಿಕೆ ಮುಗಿಸುತ್ತಿದ್ದೇನೆ. ಪಿ.ಎನ್. ಗಣೇಶ್ ಅವರ ಮೊಬೈಲ್ ಸಂಖ್ಯೆ 98453 99705

ಮೇ 30 ರಂದು ಸಮಿಟ್‌ಗೆ ಪ್ರಯತ್ನಿಸುವುದಾಗಿ ಚೈತನ್ಯ ಹೇಳಿದ್ದರು. ಅದಕ್ಕಾಗಿ ಸಿದ್ಧತೆ ನಡೆಸಿದ್ದರು. ಮೇ 21,22 ರ ಹವಾಮಾನ ನಿರೀಕ್ಷೆಯಲ್ಲೇ ಮೇ 18 ಕ್ಕೆ ಮೇಲಕ್ಕೆ ಹೊರಟೆ. ಅರ್ಧ ದಾರಿಗೆ ಹೋದೆ. ಗ್ಲೌಸ್ ಹಾಕಿಕೊಂಡಿದ್ದರೂ ತಣ್ಣಗೆ ಹೆಚ್ಚಾಗುತ್ತಿತ್ತು. ಮನಸ್ಸಲ್ಲೇಕೋ ಅಂಜಿಕೆ ಶುರುವಾಯಿತು. ಹೇಗೂ ಇರಲಿ ಎಂದು ವಾಪಸು ಬಂದವನು ಮತ್ತೆ ಹೊರಟದ್ದು 20 ರಂದೇ. ಕೆಲವರು ಸಮಿಟ್‌ಗೆ ಪ್ರಯತ್ನಿಸಿ ವಿಫಲರಾದರು. ನಾನು ಹೋಗದಿದ್ದುದೇ ಸೂಕ್ತ ಎನಿಸಿ ಸುಮ್ಮನೆ ಕುಳಿತುಕೊಂಡೆ.

ರಾತ್ರಿ ಮಲಗುವೆಂದದರೂ ಯಮಹಿಂಸೆಯೇ. ಸಾಮಾನ್ಯವಾಗಿ ಸಮಿಟ್ ಮಾಡಬೇಕೆಂದರೆ -10 ಉಷ್ಣಾಂಶ ಇದ್ದರೆ ಪರ ವಾಗಿಲ್ಲ. ಒಂದುವೇಳೆ -15 ಇದ್ದರೂ ಸುಧಾರಿಸಿಕೊಳ್ಳಬಹುದು. ಅದಕ್ಕಿಂತ ಹೆಚ್ಚಿದ್ದರೆ ಸಾಧ್ಯವಿಲ್ಲ. ಆರೋಗ್ಯ ಕುಸಿಯುತ್ತದೆ. ಗಾಳಿಯೂ 100 ಕ್ಕಿಂತ ಹೆಚ್ಚು ವೇಗದಲ್ಲಿದ್ದರೆ ಅತ್ಯಂತ ಕಷ್ಟ. ಆ ಅನುಕೂಲಕರ ಹವಾಮಾನಕ್ಕೆ ಕಾಯುವುದೇ ದೊಡ್ಡ ಪ್ರಯಾಸ.

ತ್ರಿವರ್ಣ ಧ್ವಜ ಹಾರಿಸುತ್ತಿರುವ ಗಣೇಶ್
ತ್ರಿವರ್ಣ ಧ್ವಜ ಹಾರಿಸುತ್ತಿರುವ ಗಣೇಶ್

ಮೇ 20 ಕ್ಕೆ ಹೊರಟು 70 ಡಿಗ್ರಿ ಕೋನದಲ್ಲಿ ನಾರ್ತ್‌ಕೋಲ್‌ಗೆ ಹೋದೆ. ಅಲ್ಲಿಂದ ಕ್ಯಾಂಪ್ 2 ಕ್ಕೆ ಹೋಗುವಾಗ ನನಗೆ ದಾರಿ ತಪ್ಪಿತು. ಕಡಿದಾದ ದಾರಿಯಲ್ಲಿ ಹಿಮ ಸುರಿಯುತ್ತಿತ್ತು. ಆಮ್ಲಜನಕ ಕೊರತೆ ಬಾಧಿಸತೊಡಗಿತು. ವಾಸ್ತವವಾಗಿ ನಾವು ಪರ್ವತ ಹತ್ತುವಾಗ ದಾರಿ ತೋರಿಸುವುದು ಹೆಜ್ಜೆಗಳೇ. ಹೆಜ್ಜೆ ಇರುವಲ್ಲಿಯೇ ದಾರಿ. ಮಂಜು ಸುರಿಯುತ್ತಲೇ ಇದ್ದರೆ ಯಾವ ಹೆಜ್ಜೆ ಗುರುತುಗಳೂ ಇರುವುದಿಲ್ಲ. ನಡೆದುಹೋದ ಮರುಕ್ಷಣವೇ ಮಂಜಿನಿಂದ ಅಳಿಸಿಹೋಗುತ್ತದೆ. ನಾನು ಊಹಿಸಿಕೊಂಡು ಮುನ್ನಡೆದೆ. ಅದು ಬೇರೆಲ್ಲೋ ಹೋಗುತ್ತಿದ್ದೆ.

ಶೆರ್ಪಾನಿಗೂ ಗೊತ್ತಾಗಲಿಲ್ಲ. ಒಂದಷ್ಟು ದೂರ ಹೋದಮೇಲೆ ಅನುಮಾನವಾಯಿತು. ಕೇಳುವುದಾದರೂ ಯಾರಿಗೇ ? ಅಲ್ಲಿ ಯಾರೂ ಇರುವುದಿಲ್ಲ. ಅಷ್ಟರಲ್ಲಿ ನ್ಯೂಜಿಲೆಂಡ್‌ನ ಇಬ್ಬರು ಆರೋಹಿಗಳು ಹಿಂಬಾಲಿಸಿಕೊಂಡು ಬಂದು “ರಸ್ತೆ ಇದಲ್ಲ, ಈ ಬದಿಗೆ ಬನ್ನಿ’ ಎಂದು ಕರೆದೊಯ್ದರು. ಅವರು ಬೈನಾಕ್ಯುಲರ್ ಸಹಾಯದಿಂದ ನಾನು ದಾರಿ ತಪ್ಪಿರುವುದನ್ನು ಖಚಿತಪಡಿಸಿ ಕೊಂಡರು.

ಆಕಸ್ಮಾತ್ ಅವರ ಸಹಾಯ ಸಿಗದಿದ್ದರೆ ನಾನು ಮೌಂಟ್ ಎವರೆಸ್ಟ್‌ನ ಯಾವ ತುದಿಗೆ ಹೋಗುತ್ತಿದ್ದೇನೋ ? ಸರಿದಾರಿಗೆ ಬಂದವನು ಮತ್ತೆ ಮೇಲೆ ಹೋಗಲಿಲ್ಲ. ನೇರವಾಗಿ ಅಡ್ವಾನ್ಸಡ್ ಬೇಸ್‌ಕ್ಯಾಂಪ್‌ಗೆ ಬಂದೆ. ಮೇ 30 ರವರೆಗೆ ಅಲ್ಲೇ ಠಿಕಾಣಿ. ಜೂನ್ ಮೂರು ನನ್ನ ಗುರಿಯಿರಿಸಿಕೊಂಡ ದಿನ. ಆದರೆ ಜಂಘಾಬಲವನ್ನೇ ಕೊಲ್ಲುವ ಸುದ್ದಿ ಬರಸಿಡಿಲಿನಂತೆ ಬಡಿಯಿತು.

ಮೇ 30 ರಂದು ಸಮಿಟ್ ಹೋದ ಚೈತನ್ಯ ಕಣ್ಮರೆಯಾಗಿದ್ದರು. ತುದಿಯವರೆಗೆ ಹೋದಮೇಲೆ ಏನಾಯಿತೋ ಗೊತ್ತಿಲ್ಲ. ಅವರು ಸಮಿಟ್ ಹೊರಟ ಸಂದರ್ಭದಲ್ಲಿ ಸ್ವಲ್ಪ ಕೆಮ್ಮವೂ ಇತ್ತು. ಅದೇನಾದರೂ ಆಕ್ಸಿಜನ್ ಸ್ವೀಕರಿಸುವಾಗ ತೊಂದರೆ ಕೊಟ್ಟು ಬಿದ್ದರೆ ? ಗಾಳಿ ಹೊಡೆದುಕೊಂಡು ಹೋಯಿತೇ ? ಗೊತ್ತಿಲ್ಲ. ಅವರು ಶೆರ್ಪಾನನ್ನೂ ಕರೆದೊಯ್ದಿರಲಿಲ್ಲ. ಒಂದುವೇಳೆ ಶೆರ್ಪಾನನ್ನು ಕರೆದೊಯ್ದಿದ್ದರೆ ಅವನು ಸಹಾಯ ಮಾಡುತ್ತಿದ್ದ ಎಂಬ ನಂಬಿಕೆ ಕ್ಯಾಂಪ್‌ನಲ್ಲಿದ್ದ ಎಲ್ಲರದ್ದಾಗಿತ್ತು.

ನನಗೆ ಇದ್ದ ಎಲ್ಲ ಧೈರ್ಯ ಕುಸಿಯಿತು. ನನಗಾಗಿ ಕಾಯುತ್ತಿರುವ ಸಂಸಾರ ಎಲ್ಲವೂ ಕಣ್ಮುಂದೆ ಬಂತು. ನೇಪಾಳಕ್ಕೆ ಹೊರಡಲು ಅನುವಾದೆ. ಶೆರ್ಪಾನಿಗೆ ಗಂಟು ಕಟ್ಟಲು ಸಹಕರಿಸುವಂತೆ ಕೋರಿದೆ. ಆಗ ವೆಚ್ಚ ಸರಿದೂಗಿಸಲು ಗೆಳೆಯರು ಪಟ್ಟ ಕಷ್ಟವೂ ನೆನಪಾಯಿತು. ಅದರೊಂದಿಗೆ ನಾನೂ ವಾಪಸ್ಸಾದರೆ ಇನ್ನು ಮುಂದೆ ಎಲ್ಲ ಕನ್ನಡಿಗರೂ “ಪರ್ವತಾರೋಹಣ ಜೀವಕ್ಕೆ ಅಪಾಯ’ ಎಂದು ವ್ಯಾಖ್ಯಾನಿಸಿ ದೂರ ಉಳಿದಾರೆಂದೆನಿಸಿತು. ಸರಿ ಮತ್ತೆ ಧೈರ್ಯ ತಂದುಕೊಂಡೆ. ರಾತ್ರಿಯೆಲ್ಲಾ ಅದೇ ಕನಸು, ಧ್ಯಾನಿಸಿದ್ದಾಳೆ.

ವಿಶ್ವಶಾಂತಿಯ ಸಂದೇಶ ಹೊತ್ತ ಗಣೇಶ್ ಎವರೆಸ್ಟ್ ತುದಿಯಲ್ಲಿ
ವಿಶ್ವಶಾಂತಿಯ ಸಂದೇಶ ಹೊತ್ತ ಗಣೇಶ್ ಎವರೆಸ್ಟ್ ತುದಿಯಲ್ಲಿ

ಮಗ ಸುಘೋಷ್ “ಅಮ್ಮಾ, ಅಪ್ಪಾ ಬರುವುದು ಯಾವಾಗ ? ’ ಎಂದು ಕೇಳುತ್ತಿದ್ದನಂತೆ. ಮಗಳು ಸಾಗರಿಕಾ (ಸಾಗರ್‌ಮಾತಾ ನೆನಪಿಗೆ ಇಟ್ಟದ್ದು) ನನ್ನನ್ನು ಬಿಟ್ಟು ಇರುವವಳಲ್ಲ. ಅವಳನ್ನೂ ಬಿಟ್ಟು ಎರಡೂವರೆ ತಿಂಗಳು ಇರಬೇಕಾಯಿತು.

ಅದೂ ವಾಪಸು ಹೋದೆನೆಂಬ ಗ್ಯಾರಂಟಿಯಿಲ್ಲದೇ. ನನಗಿಂತಲೂ ನನ್ನನ್ನು ಅವಲಂಬಿಸಿದವರಿಗೆ ಹಾಗೆ ಎಣಿಸಿಕೊಂಡು ಬದುಕುವುದು ಕಷ್ಟ. ಬೇಸ್‌ಕ್ಯಾಂಪ್‌ನವರೆಗೆ ಹೋಗುವವರೆಗೆ ಪತ್ನಿಯೊಂದಿಗೆ ಮಾತನಾಡುತ್ತಿದ್ದೆ. ನಂತರ ಇಲ್ಲ. ಚೈತನ್ಯ ಕಣ್ಮರೆಯಾಗಿ ದೊಡ್ಡ ಸುದ್ದಿಯಾದಾಗ ಎಲ್ಲರೂ ಗಲಿಬಿಲಿಯಾಗಿದ್ದಾರೆ.

ಕೆಲವರು “ನಿಮ್ಮ ಪತಿಯೂ ಅವರೊಂದಿಗಿದ್ದರಂತೆ’ ಎಂದು ಸುದ್ದಿ ಹಬ್ಬಿಸಿದಾಗ ನನ್ನ ಸಂಸಾರಕ್ಕೆ ದಿಗಿಲಾಗಿದೆ. ಸುಮಂಗಲಾ ದೇವರ ಕೋಣೆ ಬಿಟ್ಟು ಬರುವ ಪರಿಸ್ಥಿತಿಯಿರಲಿಲ್ಲ. ನಂತರ ಸತ್ಯ ತಿಳಿದಾಗ ಕೊಂಚ ಹಗುರವಾಯಿತು. ವಾಸ್ತವವಾಗಿ ತಿಳಿಯಾದದ್ದು ಜೂ. ೩ ರಂದು ಗುರಿ ಮುಟ್ಟಿ, ಜೂ. 8 ರಂದು ನೇಪಾಳಕ್ಕೆ ವಾಪಸು ಬಂದು ದೂರವಾಣಿ ಮಾಡಿದಾಗಲೇ ನಿರಾಳ (ಇದೆಲ್ಲಾ ಬೆಂಗಳೂರಿಗೆ ಬಂದಾಗ ಹೆಂಡತಿ ವಿವರಿಸಿದಳು).
pn ganes-3
8,300 ಮೀಟರ್‌ನವರೆಗೂ ನಾವು ಸಾಮಾನ್ಯವಾಗಿ ಬೆಳಗ್ಗೆಯೇ ಪ್ರಯಾಣಿಸುತ್ತೇವೆ. ಹಗಲಿನಲ್ಲಿ ಸ್ವಲ್ಪ ಹೆಚ್ಚು ಪ್ರಯಾಣಿಸ ಬಹುದು. ಆದರೆ ತುದಿ ಮುಟ್ಟುವ (ಸಮಿಟ್) ಕೆಲಸಕ್ಕೆ ಮಾತ್ರ ಸಿದ್ಧವಾಗುವುದು ರಾತ್ರಿಯೇ. ಕಾರಣವಿಷ್ಟೇ ರಾತ್ರಿ 11 ರ ಸುಮಾರಿ ಗೆ ಹೊರಟರೆ ಬೆಳಗ್ಗೆ 8 ರಿಂದ 9 ಗಂಟೆಯೊಳಗೆ 148 ಮೀಟರ್ ಕ್ರಮಿಸಿ ತುದಿ ಮುಟ್ಟಬಹುದು. ಬೆಳಗ್ಗೆ 10 ರ ನಂತರ ಕ್ಷಣ ಕ್ಷಣ ಕ್ಕೂ ಹವಾಮಾನ ಬದಲಾಗಬಹುದು. ಆದರೆ ಒಂಬತ್ತರಷ್ಟೊತ್ತಿಗೆ ಸಾಮಾನ್ಯವಾಗಿ ಮೋಡಗಳ ರಾಶಿ ಇರುವುದಿಲ್ಲ. ಒಳ್ಳೆ ಬೆಳಕು ಇರುತ್ತದೆ. ಹಾಗಾಗಿ ರಾತ್ರಿ ಪ್ರಯಾಣವನ್ನು ನಾವು ಯೋಜಿಸಿಕೊಳ್ಳುತ್ತೇವೆ.

ಜೂ. 1 ಕ್ಕೆ ಹೊರಟವ ಎಲ್ಲೂ ವಾಪಸು ಬರಲಿಲ್ಲ. ನಾರ್ತ್‌ಕೋಲ್‌ಗೆ ಹೋದವನೇ ಆರಾಮ ತೆಗೆದುಕೊಂಡು ಕ್ಯಾಂಪ್ 2 ಕ್ಕೆ ಹೋದೆ. ಅಲ್ಲಿಂದ ಜೂ. 2 ರ ಸಂಜೆ 4.30 ರಷ್ಟೊತ್ತಿಗೆ 8,300 ಅಡಿಯಲ್ಲಿರುವ ಸಮಿಟ್ ಕ್ಯಾಂಪ್‌ಗೆ ಬಂದೆ. ರಾತ್ರಿ 11 ವರೆಗೆ ಮಲಗಿಕೊಂಡೆ. ನಂತರ ಹೆಡ್‌ಟಾರ್ಚ್ ಸಹಾಯದಿಂದ 548 ಮೀಟರ್ ಕ್ರಮಿಸಲು ನಿರ್ಧರಿಸಿದೆ. ನನ್ನಲ್ಲಿ ಮತ್ತೊಂದು ಸಮಿಟ್ ಆಕ್ಸಿಜನ್ ಟ್ಯಾಂಕ್ ಇರಲಿಲ್ಲ. ಸಮಿಟ್ ಟ್ಯಾಂಕ್‌ಗೆ ದುಬಾರಿ. ಆದ್ದರಿಂದ ಶೆರ್ಫಾನನ್ನು ಅಲ್ಲಿಯೇ ಇರಲು ಹೇಳಿದೆ. ಅಷ್ಟರಲ್ಲಾಗಲೇ ಪುನರೂ ಕೆಲ ವಸ್ತುಗಳನ್ನು ವಾಪಸು ತೆಗೆದುಕೊಂಡು ಕೆಳಗಿಳಿದ್ದಿದ್ದ. ಆದರೆ ಅಂಗ್ರಿತಾ ಸ್ವಲ್ಪ ದೂರ ಬಂದು ನಿಂತುಕೊಂಡ. ರಸೆಲ್‌ಪ್ರೈಸ್ ಮೇಲೆ ಹೋಗುತ್ತಿದ್ದರು. ಇದನ್ನೇ ಬಳಸಿಕೊಂಡು ರಾತ್ರಿ 11 ಕ್ಕೆ ಮೇಲೆ ಹತ್ತಲು ಶುರುಮಾಡಿದವನಿಗೆ ಬೆಳಗ್ಗೆ ಹತ್ತರವರೆಗೆ ನಡೆಯಬೇಕಾಯಿತು.

ಭಾರತೀಯ ಕಾಲಮಾನ ಜೂ. 3 ರ ಬೆಳಗ್ಗೆ ಸುಮಾರು 10 ರಷ್ಟೊತ್ತಿಗೆ ನನ್ನ ಮೊದಲ ಹೆಜ್ಜೆಯಿದ್ದದ್ದು ಪ್ರಪಂಚದ ಅತ್ಯಂತ ಎತ್ತರದ ಪ್ರದೇಶದ ಮೇಲೆ (ಚೀನಾ ಕಾಲಮಾನ ಮಧ್ಯಾಹ್ನ 12)ಮನಸ್ಸಿನಲ್ಲಿ ಖುಷಿ ಉಕ್ಕಿ ಹರಿದಿತ್ತು. ಕೃತಕ ಆಕ್ಸಿಜನ್‌ನಿಂದ ಉಸಿರಾಡುತ್ತಿದ್ದೆ. ಕಣ್ಣನ್ನು ಗಾಗಲ್ಸ್ ಸುತ್ತುವರಿದ್ದಿದ್ದವು. ಒಮ್ಮೆ ಕೂಗೋಣ ಎಂದರೆ ಕೂಗಲಾಗದ ಸ್ಥಿತಿ. “ಅಭಿನಂದನೆ’ ಹೇಳಲಿಕ್ಕೆ ಯಾರೂ ಇರಲಿಲ್ಲ. ರಾಷ್ಟ್ರ ಧ್ವಜ, ಕನ್ನಡ ಧ್ವಜವನ್ನೆಲ್ಲಾ ಹಿಡಿದು ನಿಂತೆ.

ರಸೆಲ್ ಪ್ರೈಸ್ ಸ್ನೇಹಿತರು ಫೋಟೋ ಕ್ಲಿಕ್ಕಿಸಿದರು. ಆಗ ಉಕ್ಕಿ ಬಂದ ಸಂತೋಷವನ್ನೂ ಹೇಗೂ ವರ್ಣಿಸಲಾಗದು ; ಅನುಭವಿಸಿಯೇ ತೀರಬೇಕು. ಸುತ್ತಲೂ ಕಂಡ ಪರ್ವತಗಳ ಸಮುದ್ರದ ಮಧ್ಯೆ ದೊಡ್ಡ ಅಲೆಯ ಮೇಲೆ ನಾನು ನಿಂತಂತೆ ಭಾಸವಾಯಿತು. ಒಂದೆರಡು ಕ್ಷಣ ಕಣ್ಣುಮುಚ್ಚಿಕೊಂಡು ಆನಂದಿಸಿದೆ. ಸುಮಾರು ಹನ್ನೆರಡು ನಿಮಿಷ ಇದ್ದದ್ದೇ ಕಷ್ಟ. ಕೆಳಗಿಳಿಯುತ್ತಾ ಬಂದೆ. ಒಂದಷ್ಟು ಕೆಳಗೆ ಬಂದ ಮೇಲೆ ಅಂಗ್ರಿತಾ ಸಿಕ್ಕ. ಗುರಿ ಮುಟ್ಟಿದ ತೃಪ್ತಿಯಲ್ಲಿ ಇಳಿದು ಬಂದೆ.

ಎಲ್ಲೋ ಓದಿದ ಸಾಲುಗಳು ನೆನಪಾಗುತ್ತಿದ್ದವು. “ಮನುಷ್ಯ ನಿಸರ್ಗವನ್ನು ಗೆಲ್ಲುತ್ತಾನೆ. ಆದರೆ ಗೆದ್ದು ನಿಲ್ಲುವುದಿಲ್ಲ, ಇಳಿದು ಬರುತ್ತಾನೆ, ಮತ್ತೆ ನಿಸರ್ಗಕ್ಕೆ ಶರಣಾಗಿ ಬದುಕುತ್ತಾನೆ’. ಆ ಸಾಲುಗಳು ಆಪ್ತವೆನಿಸಿದವು. ಸತ್ಯದರ್ಶನ !

ನಿಯಮದ ಪ್ರಕಾರ ಬೇಸ್‌ಕ್ಯಾಂಪ್‌ನಲ್ಲಿರುವ ಚೀನಾ ಟಿಬೆಟ್ ಪರ್ವತಾರೋಹಿಗಳ ಸಂಘಕ್ಕೆ ಯಶಸ್ವಿಯಾಗಿ ಗುರಿ ಮುಟ್ಟಿ ವಾಪಸು ಬಂದು ಪ್ರಮಾಣ ಪತ್ರ ಪಡೆಯಬೇಕು ಎನ್ನುತ್ತಾರೆ. ಅದಿರಲಿ. ಎವರೆಸ್ಟ್ ಏರಿದ ಮೊದಲ ಕನ್ನಡಿಗ ಯಾರೆಂಬ ಚರ್ಚೆ ಆರಂಭವಾಗಿದೆ. ಆದರೆ ನನಗೆ ಹಾಗೆನ್ನಿಸುವುದಿಲ್ಲ. ಚರ್ಚೆಯಾಗುವ ಸಂಗತಿಯೂ ಅಲ್ಲ. ಕೀರ್ತಿಯೆಲ್ಲಾ ಚೈತನ್ಯರಿಗೇ ಇರಲಿ ; ನಮಗೆ ಮತ್ತೆ ಪರ್ವತ ಏರುವ “ಚೈತನ್ಯ’ವಿರಲಿ, ಪ್ರತಿ ಕನ್ನಡಿಗನಲ್ಲೂ ಆ “ಚೈತನ್ಯ’ ತುಂಬಲಿ, ಅಷ್ಟೇ ಸಾಕು, ಅಲ್ಲಿಗೆ ನಾನು ಧನ್ಯ !