ಅಡ್ವಾನ್ಸಡ್ ಬೇಸ್ ಕ್ಯಾಂಪ್‌ನಿಂದ ನಮ್ಮ ಹೊರೆಯನ್ನು ನಾವೇ ಹೊರಬೇಕು. ಸ್ವಲ್ಪ ಶೆರ್ಪಾ ಸಹಾಯ ಮಾಡಬಲ್ಲ. ಆದರೆ ಅವರಿಗೆ ಹೊರಿಸುವಂತಿಲ್ಲ. 40 ಕೆ. ಜಿ. ಯಷ್ಟು ಭಾರವನ್ನು ಹೊತ್ತು ಒಂದು ಹೆಜ್ಜೆ ಇಡಬೇಕೆಂದರೂ ಪ್ರಾಣ ಹೋದಂತಾಗುತ್ತದೆ. ಆದರೆ ಅಂಥದ್ದನ್ನು ಹೊತ್ತುಕೊಂಡೇ ದಿನಕ್ಕೆ ಕನಿಷ್ಠ 12 ರಿಂದ 14 ಕಿ. ಮೀ ನಡೆಯಬೇಕು. ನಾನು ಕ್ಯಾಂಪ್ ಒಂದಕ್ಕೆ ಹೋದ ದಿನ ಅದೃಷ್ಟ ಚೆನ್ನಾಗಿತ್ತು.

ಗಾಳಿ ಸ್ವಲ್ಪ ಜೋರು ಬಿಟ್ಟರೆ ಬೇರೇನೂ ಇದ್ದಿಲ್ಲ. ಅಲ್ಲಿಯೇ ಹವಾಮಾನ ಹೊಂದಾಣಿಕೆಗೆ (ಅಕ್ಲಮಟೈಷೇಶನ್) ಉಳಿದುಕೊಂಡೆ. ಒಮ್ಮೊಮ್ಮೆ ಅಲ್ಲಿ ಸಿಕ್ಕಾಪಟ್ಟೆ ಕೋಲ್ಡ್ ಅಥವಾ ಹಿಮ ಸುರಿಯುವಿಕೆ ಇದ್ದರೆ ಇರಲಾಗದು. ಹೋದ ತಪ್ಪಿಗೆ ಕ್ಯಾಂಪ್ ನಿರ್ಮಿಸಿ ಅಡ್ವಾನ್ಸ್‌ಡ್ ಬೇಸ್‌ಕ್ಯಾಂಪ್‌ಗೆ ವಾಪಸು ಬರಬೇಕು. ಬರುವಾಗ 8-10 ಗಂಟೆ ಬೇಕಾಗಿಲ್ಲ. ಆದರೂ ಬಹಳ ಉಷಾರಾಗಿ ಇಳಿಯಬೇಕು. ಆಯ ತಪ್ಪಿದರೆ ಅನಾಹುತ ತಪ್ಪಿದ್ದಲ್ಲ.
ರಾಂಬುಕ್ ಗ್ಲೇಷಿಯರ್
ನಾವು ತಿನ್ನುವ ಆಹಾರವೆಂದರೆ ಪ್ರೋಟೀನ್ ಪುಡಿ ಹಾಗೂ ಕೆಲವು ಸಿದ್ಧ ತಿನಿಸುಗಳು. ಪರ್ವತ ಏರುವವರಿಗೆ ಕೆಲವು ಕಂಪನಿಗಳು ಹೈ ಆಲ್ಟಿಟ್ಯೂಡ್ ಆಹಾರವನ್ನು ಒದಗಿಸುತ್ತಾರೆ. ಅದು ಪ್ರೋಟೀನ್‌ಯುಕ್ತ ಪುಡಿ. ಬಿಸಿನೀರಿಗೆ ಮಿಶ್ರಣ ಮಾಡಿಕೊಂಡು ಬದುಕಬೇಕು. ನೀರು ಹಾಗೆಯೇ. ಅಷ್ಟೆಲ್ಲಾ ತಣ್ಣಗಿನ ಪ್ರದೇಶದಲ್ಲಿ ಹನಿ ನೀರಿಲ್ಲ. ಒಂದೇ ಒಂದು ಕಡೆ ಕೊಳವಿದೆ. ಅದು ಸ್ಪಟಿಕದಂಥ ಶುಭ್ರ ನೀರು.

ಬಹಳ ತಮಾಷೆಯ ಸಂಗತಿಯೆಂದರೆ ಅಡ್ವಾನ್ಸಡ್ ಬೇಸ್‌ಕ್ಯಾಂಪ್‌ನ ಬಲಕ್ಕೆ ಈ ಕೊಳ ಸಿಗುತ್ತದೆ. ಇದರ ಕೆಳಗೆ, ಸುತ್ತಮುತ್ತ ಮಂಜುಗೆಡ್ಡೆ. ಆದರೆ ಒಂದಷ್ಟು ಪ್ರದೇಶ ಮಾತ್ರ ನೀರು. ಇದು ಏಕೆ ಮತ್ತು ಹೇಗೆ ? ಎನ್ನುವುದು ಕುತೂಹಲದಾಯಕವೇ. ಕಾರಣ ವಿವರಿಸಲು ಅಲ್ಲಿ ಯಾರೂ ಇರುವುದಿಲ್ಲ. ಎಲ್ಲರೂ ನಮ್ಮ ಹಾಗೆ ಬಂದು ಹೋಗುವವರೇ.

ಮೇ 5 ರವರೆಗೆ ಕ್ಯಾಂಪ್ ಒಂದರಲ್ಲಿದ್ದೆ. ಪರವಾಗಿಲ್ಲ ಎನ್ನುವಂತಿತ್ತು ಹವಾಮಾನ. ಐದರ ಸಂಜೆ ಮತ್ತೆ ಚಳಿ ಹೆಚ್ಚತೊಡಗಿತು. ಸೀದಾ ವಾಪಸ್ ಅಡ್ವಾನ್ಸಡ್ ಕ್ಯಾಂಪ್‌ಗೆ ಬಂದೆ. ಮೇ 8 ರವರೆಗೆ ಉಳಿದು ಮತ್ತೆ ನಾರ್ತ್‌ಕೋಲ್‌ಗೆ ಹೊರಟೆ. ಮೇ 13 ರಂದು ತುದಿ ಮುಟ್ಟಬೇಕೆಂಬ ಗುರಿ ಇತ್ತು. ಆದರೆ ನಾರ್ತ್‌ಕೋಲ್‌ನಿಂದ 400 ಮೀಟರ್ ಎತ್ತರದಲ್ಲಿ ಕ್ಯಾಂಪ್ 2 ನಲ್ಲಿ ಶಿಬಿರ ನಿರ್ಮಿಸಲಷ್ಟೇ ಸಾಧ್ಯವಾಯಿತು. ಗುರಿ ಮುಟ್ಟಲು ಆಗಲಿಲ್ಲ, ಜೂ. 3 ರವರೆಗೆ ಕಾಯಬೇಕಾಯಿತು !

ಕ್ಯಾಂಪ್ 2 ರಲ್ಲಿ ಇರುವುದು ಅಪಾಯವೆನಿಸಿದರೂ ಹವಾಮಾನಕ್ಕೆ ಹೊಂದಿಕೊಳ್ಳಲು ಧೈರ್ಯ ಮಾಡಿ ಉಳಿದುಕೊಂಡೆ. ಹಿಮಪಾತ ಸುರಿಯುತ್ತಿತ್ತು. ಮೇ 9 ರ ಬೆಳಗ್ಗೆ ಕ್ಯಾಂಪ್ 2 ನಿಂದ ಸ್ವಲ್ಪ ದೂರ ನಡೆದೆ. ಆದರೆ ಬೆಳಗ್ಗೆ ಬಿಸಿಲಧಗೆಯೂ ಜೋರಿತ್ತು. ಹೇಗೋ ಸಾವರಿಸಿಕೊಂಡು ಮೇ 10 ಕ್ಕೆ ನಾರ್ತ್‌ಕೋಲ್‌ಗೆ ವಾಪಸ್ಸಾಗುವುದು ಕ್ಷೇಮವೆನಿಸಿ ಹಾಗೇ ಮಾಡಿದೆ. ನನ್ನ ದುರಾದೃಷ್ಟ. ಅಲ್ಲಿ ಇನ್ನೂ ಜೋರಾಗಿತ್ತು ಗಾಳಿ. ಗೆಳೆಯನೊಬ್ಬನ ಟೆಂಟ್ ಕಿತ್ತು ರಂಪವಾಗಿತ್ತು.

ವಾಪಸು ಅಡ್ವಾನ್ಸಡ್ ಬೇಸ್‌ಕ್ಯಾಂಪ್‌ಗೆ ಬಂದಾಗ ಸಮಾಧಾನವಾಯಿತು. ಮೇ 11 ಕ್ಕೆ ಪ್ರಯತ್ನಿಸೋಣ ಎಂದುಕೊಂಡೆ. ಆಗಲಿಲ್ಲ. ಶೆರ್ಪಾನೂ ಬೇಡ ಎಂದ. ಗಾಳಿ ನಮಗೆ ಸಹಕರಿಸುತ್ತಿರಲಿಲ್ಲ. ಹಾಗಾಗಿ ಮೇ 13 ರ ಗುರಿ ವಿಫಲವಾಯಿತು. ಅಲ್ಲೇ ಇದ್ದ ಭಾರತೀಯ ವಾಯುಸೇನೆಯ ಗೆಳೆಯರು 21, 22 ರಂದು ಹವಾಮಾನ ಚೆನ್ನಾಗಿರಬಹುದು ಎಂದರು. ಸದಾ ಅಲ್ಲೇ ಸುತ್ತುವ ರಸೆಲ್‌ಪ್ರೈಸ್ ಸಹ ಹೌದು ಎಂದು ಸಲಹೆ ನೀಡಿದರು.

ಇಲ್ಲಿ ನೆನಪಿಸಿಕೊಳ್ಳಬೇಕು. ವಾಯುಸೇನೆ ತಂಡದೊಂದಿಗೆ ಕಳೆದದ್ದು ಅತ್ಯಂತ ಖುಷಿಯ ಹೊತ್ತು. ಚೈತನ್ಯ, ಸ್ಕ್ರಾಡ್ರರ್ ಲೀಡರ್ ಬಸವರಾಜ್, ಕಾರ್ತಿಕ್, ಡಾ. ಹೇಮಂತ್ ಮತ್ತಿತರ ಜತೆಗೆ ಹರ್ಷದಿಂದ ಇದ್ದೆವು. ಅಡ್ವಾನ್ಸಡ್ ಕ್ಯಾಂಪ್‌ನಲ್ಲಿ ಮೊದಲು ತಂಗಿದ್ದಾಗ ಇಂಟರ್‌ಮೀಡಿಯೆಟ್ ಕ್ಯಾಂಪ್‌ನಿಂದ ಬರುವವರೆಗೆ “ನೀರಿನ’ ಸೇವೆ ಮಾಡಿದ್ದೆ. ಸುಮಾರು ಹನ್ನೆರಡು ಕಿ. ಮೀ ನಡೆದು ಬರುವಾಗ ತಂದ ನೀರೆಲ್ಲಾ ಖಾಲಿಯಾಗಿರುತ್ತೆ. ತ್ರಾಣ ಕಡಿಮೆಯಾಗಿರುತ್ತೆ. ಆಗ ನೀರು ನಿರೀಕ್ಷಿಸುವುದು ಸಾಮಾನ್ಯ. ನಾನು ಬಿಸಿನೀರು ಕಾಯಿಸಿ ಕೊಡುತ್ತಿದ್ದೆ. ಅದನ್ನು ಈಗ ಎಲ್ಲರೂ ನೆನೆಸಿಕೊಂಡರು.

ನಾರ್ತ್‌ಕೋಲ್‌ಗೆ ಹೋಗುವಾಗ ಬಲಕ್ಕೆ ಸಿಗುವ ರಾಂಬುಕ್ ಗ್ಲೇಷಿಯರ್ ನೋಡಿದರೆ ಕಣ್ಣು ತುಂಬಿ ಹೋಗುತ್ತದೆ. ಸಪಾಟಾದ ಮೈದಾನದಂಥ ನೀರ್ಗಲ್ಲು. ಹತ್ತು ಕ್ರಿಕೆಟ್ ಸ್ಟೇಡಿಯನಷ್ಟು ದೊಡ್ಡದು. ಅಲ್ಲಿ ಕುಳಿತರೆ ಆ ನೀರವತೆಯಲ್ಲಿ ಕೆಳಗೆಲ್ಲೋ ಭೂಮಿಯ ಶಾಖಕ್ಕೆ ಮಂಜು ಕರಗಿ ನೀರಾಗಿ ಹರಿಯುವುದನ್ನು ಕೇಳಬಹುದು. ಎಷ್ಟು ಸ್ಪಷ್ಟವಾಗಿ ಜುಳು ಜುಳು ಶಬ್ದ ಕೇಳುತ್ತದೆಯೆಂದರೆ ನದಿಯ ತೀರದಲ್ಲಿದ್ದ ಹಾಗೆ.

ಎವರೆಸ್ಟ್ ಹತ್ತುವಾಗ ಸಿಗುವ ಪ್ರಾಚೀನ ಬೌದ್ಧ ಸ್ತೂಪ
ಎವರೆಸ್ಟ್ ಹತ್ತುವಾಗ ಸಿಗುವ ಪ್ರಾಚೀನ ಬೌದ್ಧ ಸ್ತೂಪ

ಒಂದು ಸಂಗತಿ ಮರೆತಿದ್ದೆ. ಬೇಸ್‌ಕ್ಯಾಂಪ್ (5, 200 ಮೀಟರ್)ನಿಂದ 8 ಕಿ. ಮೀ ದೂರದಲ್ಲಿ ಟಿಬೆಟ್‌ನ ಅತ್ಯಂತ ಹಳೆಯ ಬೌದ್ಧ ಸ್ತೂಪವಿದೆ. ರಾಂಬುಕ್ ಮೊನೆಸ್ಟ್ರಿ ಎನ್ನುತ್ತಾರೆ. ಇಲ್ಲಿ ಬೌದ್ಧಗುರು ದಲಾಯಿಲಾಮಾ ಬರುತ್ತಾರೆ. ಪೀಠ ಬದಲಿಸುವುದೂ ಇಲ್ಲಿಯೇ ಎನ್ನಲಾಗುತ್ತದೆ. ಪರ್ವತಾರೋಹಿಗಳು ಇಲ್ಲಿ ಬಂದು ಆಶೀರ್ವಾದ ಪಡೆಯಬೇಕು. ಗುಹೆಗಳಲ್ಲಿ ಬೌದ್ದ ಸನ್ಯಾಸಿಗಳಿದ್ದಾರೆ. ಈ ಗುಹೆಗಳೊಳಗೆ ಒಂಚೂರು ತಣ್ಣಗಿಲ್ಲ. ಇದೊಂದು ವಿಶೇಷ ಸಂಗತಿಯೆಂದು ಮಧ್ಯದಲ್ಲಿ ಹೇಳಿದೆ.