ಹಿಮ ಕುರುಡು (ಸ್ನೋ ಬರ್ನ್) ಎಲ್ಲರೂ ಬಳಲುವಂಥದ್ದು. ಪ್ರಖರವಾದ ಬಿಸಿಲು ಇರುವಾಗ ಸಂಭವಿಸುವ ದುರಂತ. ಮೇಲಕ್ಕೆ ದಿಟ್ಟಿಸುತ್ತಾ ಹತ್ತುವಾಗ ಪರ್ವತದ ಮೇಲೆ ಬಿದ್ದ ಸೂರ್ಯನ ಕಿರಣ ಕಣ್ಣನ್ನು ಕುಕ್ಕುತ್ತಿರುತ್ತದೆ. ಅದನ್ನು ನಾವು ಬರಿಗಣ್ಣಿಂದ ದಿಟ್ಟಿಸಿದರೆ ಕಣ್ಣೇ ಕಳೆದುಕೊಂಡ ಅನುಭವವಾಗುತ್ತದೆ.

ಕೊರೆಯುವಿಕೆ ಎಂದರೆ ಗ್ಲೌಸ್ ಬಿಚ್ಚಿದರೆ ಆ ಕ್ಷಣದಲ್ಲೇ ನಮ್ಮ ರಕ್ತ ಹೆಪ್ಪುಗಟ್ಟಬಹುದು. ಕಾಲುಗಳೆಲ್ಲಾ ಮರಗಟ್ಟಿ ಹೋಗುತ್ತವೆ. ಮೂಗು, ಕೆನ್ನೆ ಎಲ್ಲವೂ ಸ್ಪರ್ಶ ಅನುಭವವನ್ನೇ ಕಳೆದುಕೊಳ್ಳುತ್ತವೆ. ಇದು ರೋಚಕವಲ್ಲವೇ ? ಹುಲಿ, ಸಿಂಹ, ಆನೆಗಳಿಂದ ತಪ್ಪಿಸಿಕೊಂಡರೆ ಮಾತ್ರ ರೋಚಕವೇ ಎನಿಸುವುದೂ ಉಂಟು. ನಾನು ಸುಮಾರು ೫೭ ದಿನ ಹೀಗೆ ಕಳೆದಿದ್ದೇನೆ.

ಹೈ ಅಲ್ಟಿಟ್ಯೂಡ್ ಪ್ರದೇಶಕ್ಕೆ ಹೋದಾಗ ಒಮ್ಮೊಮ್ಮೆ ಹೆಪೊ (ಹೈ ಆಲ್ಟಿಟ್ಯೂಡ್ ಪಲ್ಮನರಿ ಅಡಿಮಾ) ಎಂಬ ತೊಂದರೆಯಿಂದ ಬಳಲುತ್ತೇವೆ. ಇದರಿಂದ ಹುಚ್ಚರಂತಾಗುತ್ತೇವೆ. ಸಾಮಾನ್ಯವಾಗಿ ಇಂಥ ಸ್ಥಿತಿಗೆ ಗುರಿಯಾಗುವವರು ತಮ್ಮ ಬಟ್ಟೆಯನ್ನೆಲ್ಲಾ ಬಿಚ್ಚಿ ಎಸೆಯುತ್ತಾರೆ. ಸಂಪೂರ್ಣ ಸಂವೇದನೆಯನ್ನೇ ಕಳೆದುಕೊಳ್ಳುತ್ತಾರೆ. ಆಗ ಅವರನ್ನು ಬಚಾವು ಮಾಡುವುದಕ್ಕೆ ಇರುವುದೊಂದೆ ದಾರಿಯೆಂದರೆ ಅದು ಬೇಸ್‌ಕ್ಯಾಂಪ್‌ಗೆ ಕರೆದೊಯ್ಯುವುದು. ಏಕಾಗ್ರತೆಯನ್ನು ಕಳೆದುಕೊಂಡು ವಿಚಿತ್ರ ಸ್ಥಿತಿಗೆ ದೂಡಿದಂತಾಗುವವರನ್ನು ಸರಿಮಾಡುವುದೆಂದರೂ ಒಂದು ಹರಸಾಹಸವೇ.

ಅಲ್ಲಿ ಬಿಸಿಲೇ ಇಲ್ಲವೇ ಎಂದು ಅನಿಸಬಹುದು. ಅದೂ ಸುಳ್ಳು. ಮೋಡವಿಲ್ಲದಿದ್ದರೆ ಅಲ್ಲಿ ಸಾಮಾನ್ಯವಾಗಿ ಇರುವ (ಮೊದಲ ಋತುಮಾನದಲ್ಲಿ )ಉಷ್ಣಾಂಶ + ೪೦ ಯಿಂದ ೫೦. ಬೆವರೆನ್ನುವುದು ಹಿಮ ಕರಗಿ ನೀರಾಗುವಂತೆ ಇಳಿಯುತ್ತಲೇ ಇರುತ್ತದೆ. ನಾವು ಹಾಕಿಕೊಂಡ ಹಲವು ಬೆಚ್ಚಗಿನ ವಸ್ತ್ರಗಳು ಸೆಕೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಹಾಗೆಂದು ಅವನ್ನು ತೆಗೆದು ವಿರಮಿಸುವಂತಿಲ್ಲ. ಯಾವುದೇ ಕ್ಷಣದಲ್ಲಿ ಬಿಸಿಲು ಮಾಯವಾಗಿ ಉಷ್ಣಾಂಶ ಕುಸೀಬಹುದು.ಆಗ ಮತ್ತೆ ತಣ್ಣಗಿನ ಅನುಭವ !

ಹಿಮ ಕುರುಡು (ಸ್ನೋ ಬರ್ನ್) ಎಲ್ಲರೂ ಬಳಲುವಂಥದ್ದು. ಪ್ರಖರವಾದ ಬಿಸಿಲು ಇರುವಾಗ ಸಂಭವಿಸುವ ದುರಂತ. ಮೇಲಕ್ಕೆ ದಿಟ್ಟಿಸುತ್ತಾ ಹತ್ತುವಾಗ ಪರ್ವತದ ಮೇಲೆ ಬಿದ್ದ ಸೂರ್ಯನ ಕಿರಣ ಕಣ್ಣನ್ನು ಕುಕ್ಕುತ್ತಿರುತ್ತದೆ. ಅದನ್ನು ನಾವು ಬರಿಗಣ್ಣಿಂದ ದಿಟ್ಟಿಸಿದರೆ ಕಣ್ಣೇ ಕಳೆದುಕೊಂಡ ಅನುಭವವಾಗುತ್ತದೆ. ಏನೂ ಕಾಣುವುದಿಲ್ಲ. ಅಲ್ಲದೇ ನೂರಾರು ಸೂಜಿಗಳನ್ನು ಕಣ್ಣಿಗೆ ಚುಚ್ಚಿದಂತಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಸ್ನೋ ಗಾಗಲ್ಸ್ ಹಾಕಿಕೊಂಡಿರುತ್ತೇವೆ. ಆದರೆ ಯಾವುದಾದರೂ ಬದಿಯಿಂದ ಸಣ್ಣ ಕಿರಣವೊಂದು ಸೀಳಿಕೊಂಡು ಬಂದರೂ ಅನಾಹುತ ತಪ್ಪಿದ್ದಲ್ಲ.

ಹಿಂದಿನ ಬಾರಿ ನಾನು ಕೆಲವರು ಇಂಥ ತೊಂದರೆಯಿಂದ ಬಳಲಿದ್ದನ್ನು ಕಂಡಿದ್ದೇನೆ. “ಅಯ್ಯೋ ಅಮ್ಮಾ, ಅಪ್ಪಾ” ಎಂದು ನರಳುತ್ತಿರುತ್ತಾರೆ. ಅಲ್ಲಿ ಸಂತೈಸಲು, ಸಮಾಧಾನಿಸಲು ಯಾರೂ ಇರುವುದಿಲ್ಲ. ಅವನೊಬ್ಬನೇ. ಇವುಗಳನ್ನೆಲ್ಲಾ ಎಣಿಸಿಕೊಂಡಾಗ ಪರ್ವತಾರೋಹಣ ಯಾಕಪ್ಪಾ ಎನಿಸುವುದುಂಟು. ಕಾಯಿಲೆ ಪೀಡಿತರಾದವರನ್ನು ಭುಜದ ಮೇಲೆ ಹೊತ್ತುಕೊಂಡು ವಾಪಸು ಬೇಸ್ ಕ್ಯಾಂಪ್‌ಗೆತರುವ ಶೆರ್ಪಾಗಳಿಗೆ ಪ್ರತ್ಯೇಕ ಹಣ ನೀಡಬೇಕು. ಸತ್ತವರ ಹೆಣ ಕೆಳ ತರುವುದೂ ಇವರೇ !

ನನ್ನೊಂದಿಗೆ ಬಂದಿದ್ದ ಶೆರ್ಪಾ ಪುನರೂ ಹೊರಡಲು ಸಿದ್ಧತೆ ನಡೆಸಿದ. ಅಡ್ವಾನ್ಸಡ್ ಬೇಸ್ ಕ್ಯಾಂಪ್‌ನವರೆಗೆ ಯಾಕ್ ಪ್ರಾಣಿ (ಕೋಣದಂತಿರುತ್ತದೆ) ನಮ್ಮ ಸರಕನ್ನು ಹೊತ್ತು ತರುತ್ತದೆ. ಅಂದಾಜು ೪೦ ಕೆ. ಜಿ. ಭಾರ ಹೊರಬಲ್ಲದು. ತದನಂತರ ೮, ೮೪೮ ಮೀಟರ್‌ವರೆಗೆ ನಮ್ಮ ಭಾರವನ್ನೇ ನಾವು ಹೊರಬೇಕು. ಶೆರ್ಪಾ ನಮಗೆ ದಾರಿ ತೋರಿಸಲು, ಮಾರ್ಗದರ್ಶನ ಮಾಡಲು ಹಾಗೂ ದುರಂತದ ಸಂದರ್ಭದಲ್ಲಿ ರಕ್ಷಿಸಲು ಬರುತ್ತಾನೆ. ನೇಪಾಳದಿಂದಲೇ ನಮ್ಮೊಂದಿಗೆ ಬರುತ್ತಾನೆ.

ಇಲ್ಲಿ ಮಲಗುವುದೂ ಒಂದು ಕಿರಿಕಿರಿ. ಯಾಕ್ ರಾತ್ರಿಯೆಲ್ಲಾ ತಲೆ ಅಲ್ಲಾಡಿಸುತ್ತಲೇ ಇರುತ್ತದೆ. ಅದರ ಕೊರಳಿಗೆ ಕಟ್ಟಿದ ಗಂಟೆಯ ಶಬ್ದ ಅಷ್ಟೊಂದು ನೀರವತೆಯಲ್ಲಿ ಪ್ರತಿಧ್ವನಿಸುತ್ತಿರುತ್ತದೆ. ಯಾಕ್‌ಗೆ ಒಂದು ದಿನಕ್ಕೆ ತೆರಬೇಕಾದ ಮಜೂರಿ ೮೦ ಡಾಲರ್. ಸಾಮಾನ್ಯವಾದ ಮತ್ತೊಂದು ಪ್ರಶ್ನೆಯೆಂದರೆ ಶೆರ್ಪಾಗಳು ಎವರೆಸ್ಟ್ ಹತ್ತುತ್ತಾರಲ್ಲ ? ಅವರದ್ದು ಸಾಧನೆಯಲ್ಲವೇ?

ಅವರದ್ದೂ ಸಾಧನೆಯೇ. ಅದು ನಿತ್ಯದ ಕಾಯಕ. ನಾವು ಶೆರ್ಪಾನಿಗೆ ನೀಡಬೇಕಾದ ಬಾಡಿಗೆ ೨ ರಿಂದ ೨.೫೦ ಲಕ್ಷರೂ. ಅದರಲ್ಲೂ ಅವನೇನಾದರೂ ಎರಡು ಮೂರು ಬಾರಿ ತುದಿ ಮುಟ್ಟಿದ್ದರೆ (ಪರ್ವತಾರೋಹಿ ಜತೆ) ಅವನಿಗೆ ನೀಡಬೇಕಾದ ಸಂಭಾವನೆ ಹೆಚ್ಚು. ಅವನ ಅನುಭವದಂತೆ ಸಂಭಾವನೆ. ಒಂದುವೇಳೆ ನಾವು ಗುರಿ ಮುಟ್ಟಿದರೆ ಅವನಿಗೆ ಸುಮಾರು ೫೦೦ ಡಾಲರ್ ಬೋನಸ್ ನೀಡಲೇಬೇಕು. ಅದು ಭಕ್ಷೀಸು.

ಬೇಸ್‌ಕ್ಯಾಂಪ್‌ನಲ್ಲಿ ಪ್ರತಿಯೊಬ್ಬರ ಸಾಧನೆಯನ್ನೂ ದಾಖಲಿಸಿಕೊಳ್ಳಲಾಗುತ್ತದೆ. ಚೀನಾ ಟಿಬೆಟ್ ಪರ್ವತಾರೋಹಿಗಳ ಸಂಘದ ಪ್ರತಿನಿಧಿಗಳು ದಾಖಲಿಸಿ ಪ್ರಮಾಣ ಪತ್ರ ನೀಡುತ್ತಾರೆ. ಇಲ್ಲಿ ಶೆರ್ಪಾ ಮತ್ತು ಚಾರಣಿಗರ ಸಾಧನೆಯನ್ನು ಪ್ರತ್ಯೇಕವಾಗಿ ದಾಖಲಿಸಿಕೊಳ್ಳಲಾಗುತ್ತದೆ. ಈ ಬಾರಿ ನನ್ನ ಯಶಸ್ಸಿಗೆ ಇಬ್ಬರು ಶೆರ್ಪಾ ಸಹಕರಿಸಿದರು. ಒಬ್ಬ ಪುನರೂ, ಮತ್ತೊಬ್ಬ ಅಂಗ್ರಿತಾ.