ಬೇಸ್‌ಕ್ಯಾಂಪ್‌ನಲ್ಲಿ ಲಯಾಸನ್ ಆಫೀಸರ್ (ಸಮನ್ವಯ ಅಧಿಕಾರಿ) ಇರುತ್ತಾರೆ. ಅವರಿಂದ ಮಾಹಿತಿ ಪಡೆದು ಸಿದ್ಧನಾಗತೊಡಗಿದೆ. ಮೊದಲು ಆ ವಾತಾವರಣ ಹೊಂದಿಕೊಳ್ಳಬೇಕಿತ್ತು. ಅಂದಾಜು -1 ಡಿಗ್ರಿ ಇರುವುದು ಇಲ್ಲಿ ಸಾಮಾನ್ಯ. ಅದಕ್ಕೆ ಮೊದಲು ಹೊಂದಿಕೊಳ್ಳಬೇಕು. ಆರಂಭದ ದಿನ ಸ್ವಲ್ಪ ಕಷ್ಟವಾಗುತ್ತದೆ. ಆದರೆ ಬಹಳ ತೊಂದರೆಯಾಗುವುದಿಲ್ಲ. ಹೈ ಆಟಿಟ್ಯೂಡ್‌ಗೆ ಹೋದಷ್ಟು ನಮಗೆ ಕಷ್ಟವಾಗುತ್ತಾ ಹೋಗುತ್ತದೆ. ಒಮ್ಮೊಮ್ಮೆ ಹವಾಮಾನದಲ್ಲಿ ಏರುಪೇರಾಗಿ – 20 ಡಿಗ್ರಿಗೆ ಇಳಿಯವುದೂ ಇದೆ. ಅಷ್ಟೇ ಅಲ್ಲ ಅದಕ್ಕಿಂತಲೂ ಕಡಿಮೆಯಾಗುವ ಸಾಧ್ಯತೆಯೂ ತಳ್ಳಿ ಹಾಕುವಂತಿಲ್ಲ.
ಬೇಸ್ ಕ್ಯಾಂಪ್ ನ ಟೆಂಟ್
ಬಹಳ ಹಿಮ ಸುರಿಯುವಿಕೆ ಇದ್ದರೂ ಪರ್ವಾತಾರೋಹಣ ಸಾಧ್ಯವಿಲ್ಲ. ನಾವು ಅನುಕೂಲವಾದ ಹವಾಮಾನ ಬರುವವ ರೆಗೂ ಕಾಯಲೇಬೇಕು. ಎಷ್ಟೋ ಬಾರಿ ಬೇಸ್‌ಕ್ಯಾಂಪ್‌ನಲ್ಲೇ ಹತ್ತಿಪ್ಪತ್ತು ದಿನ ಕಳೆಯಬೇಕಾದ ಸಂದರ್ಭಗಳಿರುತ್ತವೆ. ಇನ್ನೂ ಹಲವು ಬಾರಿ ಅಡ್ವಾನ್ಸಡ್ ಕ್ಯಾಂಪ್‌ಗೆ ಹೋಗಿ ವಾಪಸು ಬರುವ ಸನ್ನಿವೇಶಗಳೂ ಇರುತ್ತವೆ. ಎಲ್ಲದಕ್ಕೂ ಮಾನಸಿಕವಾಗಿ ಸಿದ್ಧರಾಗಿರಲೇಬೇಕು. ಬಹಳ ಮುಖ್ಯವಾದ ಸಂಗತಿಯೆಂದರೆ ಪರ್ವಾತಾರೋಹಿಗೆ ತಾಳ್ಮೆ, ಸಂಯಮ ಬೇಕೇ ಬೇಕು.

ಒಂದು ಅರ್ಥದಲ್ಲಿ ಬೇಸ್‌ಕ್ಯಾಂಪ್ “ಕೂಡಲ ಸಂಗಮ’ . ಅಂದರೆ ಎಲ್ಲರೂ ಬಂದು ಇಲ್ಲಿ ಸೇರಲೇಬೇಕು. ವಿವಿಧ ದೇಶಗಳಿಂದ ಬಂದವರೆಲ್ಲಾ ಇಲ್ಲಿ ಸೇರಿ ಪರಸ್ಪರ ಪರಿಚಯ ಮಾಡಿಕೊಳ್ಳುತ್ತಾರೆ. ಮುಂದಿನ ಎಲ್ಲ ಸಿದ್ಧತೆಗಳೂ ಇಲ್ಲಿಂದಲೇ ಆರಂಭವಾಗುತ್ತವೆ. ಪರ್ವತಗಳಿಗೆ ಹಗ್ಗ ಕಟ್ಟುವ ರಸೆಲ್ ಪ್ರೈಸ್ ಅಗತ್ಯ ವಿವರ ಒದಗಿಸುತ್ತಾರೆ. ರಸೆಲ್ ಪ್ರೈಸ್ ಎಂಬ ಕಂಪನಿ ಪರ್ವತಕ್ಕೆ ಹಗ್ಗ ಕಟ್ಟುವ ಗುತ್ತಿಗೆ ಪಡೆದಿದೆ. ಅವರು ಕಟ್ಟಿದ ಹಗ್ಗದಲ್ಲೇ ನಾವು ಪರ್ವತ ಹತ್ತಬೇಕು.

ಮಂಜುಗೆಡ್ಡೆ ಅಲ್ಲಿ ರಾಶಿ ರಾಶಿ, ಆಗಾಗ್ಗೆ ಬೀಳುವುದೂ ಹೀಗೆಯೇ..
ಮಂಜುಗೆಡ್ಡೆ ಅಲ್ಲಿ ರಾಶಿ ರಾಶಿ, ಆಗಾಗ್ಗೆ ಬೀಳುವುದೂ ಹೀಗೆಯೇ..

ಏ. 27 ರಂದು ಇಂಟರ್ ಮೀಡಿಯಟ್ ಕ್ಯಾಂಪ್‌ಗೆ ಹೊರಟೆ. ದಾರಿ ಮಧ್ಯೆ ಪರಿಚಯವಾದವರು ಚೈತನ್ಯ. ನಾನು ಮೇಲಕ್ಕೇರುತ್ತಿದ್ದೆ. ಅವರು ಅಡ್ವಾನ್ಸಡ್ ಕ್ಯಾಂಪ್‌ನಿಂದ ಕೆಳಗಿಳಿಯುತ್ತಿದ್ದರು. ಕೆಳಗೆ ಸಿಗೋಣ ಎಂದು ಚೈತನ್ಯ ಸಂಕೇತ ಮಾಡಿದರು. ಸಮ್ಮಿಟ್ (ತುದಿ ಮುಟ್ಟಲು) ಹೋಗುವಾಗಲೂ ಮತ್ತೆ ಸಿಗೋಣ, ಒಟ್ಟಿಗೆ ಫೋಟೋ ತೆಗೆಸಿಕೊಳ್ಳೋಣ ಎಂದರು. ಹ್ಞೂಂ ಅಂದೆ, ಈಗಲೂ ಅದಕ್ಕೆ ಕಾಯುತ್ತಿದ್ದೇನೆ !

ಏ. 28-ಬೇಸ್‌ಕ್ಯಾಂಪ್‌ನಿಂದ ಹದಿನೆಂಟು ಕಿ.ಮೀ ದೂರದಲ್ಲಿ, 6, 500 ಮೀಟರ್ ಎತ್ತರದಲ್ಲಿರುವ ಅಡ್ವಾನ್ಸಡ್ ಬೇಸ್ ಕ್ಯಾಂಪ್ ತಲುಪಿದಾಗ ಅಲ್ಲಿ ಸಿಕ್ಕಾಪಟ್ಟೆ ಹಿಮಪಾತವಾಗುತ್ತಿತ್ತು. ಕೊರೆಯುವಿಕೆ ಎಣಿಸಿಕೊಳ್ಳಲು ಸಾಧ್ಯವಿರಲಿಲ್ಲ. ದೇವರೇ ಕಾಪಾಡು ಎಂದು ಬೇಡಿಕೊಂಡಿದ್ದಿದೆ.ಎಂಥಾ ಚಳಿಯೆಂದರೆ ಅನುಭವಿಸಿಯೇ ತೀರಬೇಕು. ಮಲಗಲು ಹಾಸಿಗೆ ಹಾಕಿಕೊಂಡರೂ ತಣ್ಣಗೆ. ನಂತರ ನಮ್ಮ ಶರೀರದ ಬಿಸಿಯನ್ನೇ ಸ್ವೀಕರಿಸಿ ಮೆಲ್ಲಗೆ ಮಲಗಿದ್ದಷ್ಟು ಜಾಗ ಬೆಚ್ಚಗಿನ ಅನುಭವ ನೀಡುತ್ತದೆ.

ಇಲ್ಲೊಂದು ವಿಶೇಷವಿದೆ. ಅಲ್ಲಿನ ರೋಚಕ ಅನುಭವ ಹೇಳಿ ಎಂದು ಎಲ್ಲರೂ ಒತ್ತಾಯಿಸುತ್ತಾರೆ. ಅದೂ ನಿಜವೇ. ಆದರೆ ಒಂದು ಸತ್ಯ ಸಂಗತಿ ಹೇಳುತ್ತೇನೆ. ಬೆಂಗಳೂರಿನಂಥ ನಗರದಲ್ಲಿ + 20 ಕ್ಕೆ ಉಷ್ಣಾಂಶ ಇಳಿದರೂ “ಚಳಿ’ ಎಂದು ನಡುಗುತ್ತೇವೆ. ಬೆಚ್ಚಗಿನ ಒಲೆಯೊಳಗೆ ಕುಳಿತು ಬಿಡಬೇಕು ಎಂದುಕೊಳ್ಳುತ್ತೇವೆ. ಎಲ್ಲ ಕಿಟಕಿ ಮುಚ್ಚಿ, ಸ್ವೆಟರ್ ಹಾಕಿ, ರಗ್ಗನ್ನು ಹೊದ್ದುಕೊಂಡು “ಅಯ್ಯೋ ಎಂಥಾ ಗ್ರಹಚಾರ’ ಎನ್ನುತ್ತಾ ಗೊಣಗುತ್ತೇವೆ. ಅಂಥದ್ದರಲ್ಲಿ – 20 ಕ್ಕೆ ಉಷ್ಣಾಂಶ ಇಳಿದಿದೆಯೆಂದರೆ ಹೇಗಿದ್ದೀತು? ಊಹಿಸಿಕೊಳ್ಳಿ. ಕೆಲವೊಮ್ಮೆ – 40 ಕ್ಕೂ ಇಳಿದಾಗ ನಿಮ್ಮ ಉಗುಳೂ ನೆಲಕ್ಕೆ ಮುಟ್ಟುವಾಗ ಮಂಜುಗಡ್ಡೆಯ ತುಂಡು !