ಎವರೆಸ್ಟ್ ಏರಲು 15 ಮಾರ್ಗಗಳಿವೆ. ಆದರೆ ಜನಪ್ರಿಯವಾಗಿರುವುದು ಮುಖ್ಯವಾಗಿ ಎರಡು. ಒಂದು ಸುಲಭದಷ್ಟೇ ಅಲ್ಲ ; ದುಬಾರಿಯದ್ದು. ಮತ್ತೊಂದು ಅಗ್ಗದ್ದು ; ಕಷ್ಟದ್ದು. ಉಳಿದ ಮಾರ್ಗಗಳಲ್ಲಿ ಸಾಮಾನ್ಯವಾಗಿ ಹೋಗುವವರು ಕಡಿಮೆ. ಕೆಲವು ಘಟನೆಗಳಲ್ಲಿ ಹೊಸ ಮಾರ್ಗದಲ್ಲಿ ಹೋಗಲು ಹೋಗಿ ಕಣ್ಮರೆಯಾದ ಪ್ರಸಂಗಗಳೂ ಇವೆ.

ಬೇಸ್ ಕ್ಯಾಂಪ್, ಇಲ್ಲಿಂದಲೇ ಆರಂಭ.... ಚಿತ್ರ : ಇಂಟರ್ ನೆಟ್
ಬೇಸ್ ಕ್ಯಾಂಪ್, ಇಲ್ಲಿಂದಲೇ ಆರಂಭ.... ಚಿತ್ರ : ಇಂಟರ್ ನೆಟ್

ನೇಪಾಳದ ದಾರಿ ಚೀನಾ, ಟಿಬೆಟ್ ದಾರಿಗಿಂತ ಸುಗಮ. ಕಾರಣವಿಷ್ಟೇ. ಈ ದಾರಿಯಲ್ಲಿ 12 ರಿಂದ 14 ಸಾವಿರ ಅಡಿವರೆಗೂ ಗಿಡಮರಗಳಿವೆ. ಹಸಿರಿರುವಲ್ಲಿ ಆಮ್ಲಜನಕದ ಸಮಸ್ಯೆ ಕಾಡುವುದಿಲ್ಲ. ಆದರೆ ನಾನು ಆರಿಸಿಕೊಂಡ ದಾರಿ ಕಷ್ಟದ್ದು. ಚೀನಾದ ಜಾಂಗ್‌ಮೂ ಗಡಿ ದಾಟಿ ಹೋಗಬೇಕು. ಇಲ್ಲಿ 3, 500 ಅಡಿಗಳಿಂದಲೇ ಹಸಿರಿಲ್ಲ. ಮೊರೇನ್ ಡೆಸರ್ಟ್. ಅಂದರೆ ಒಂದು ಬಗೆಯ ಧೂಳು ಆವೃತ ಶಿಖರಗಳು. ಅಂಥದ್ದೇ ವಾತಾವರಣ. ಅದೇ ನಮ್ಮನ್ನು ಕೆಡವಿ ಹಾಕಬಹುದು.

ಇಂಥ ಯಾವುದೇ ಕಷ್ಟ ನೇಪಾಳದ ಮಾರ್ಗದಲ್ಲಿಲ್ಲ. ಆದರೆ ಈ ಮಾರ್ಗದಲ್ಲಿ ಸಾಗಿದರೆ ಸುಮಾರು 15 ಲಕ್ಷ ರೂ. ವೆಚ್ಚ ಕಡಿಮೆ. ನೇಪಾಳದ ಮಾರ್ಗಕ್ಕೇ ತೆರುವ ಸುಂಕವೇ ಹೆಚ್ಚು. ಬೇಸ್ ಕ್ಯಾಂಪ್‌ಗೆ ಹೋಗುವ ಮುನ್ನ ನೇಪಾಳದಲ್ಲಿ ಒಂದಷ್ಟು ತರಬೇತಿ ನೀಡುತ್ತಾರೆ. ಭಕ್ತಪುರ ಸುತ್ತಮುತ್ತ ಚಾರಣ ಕಡ್ಡಾಯ. ಅದೆಲ್ಲ ಪೂರೈಸಿದ ಮೇಲೇಯೇ ಬೇಸ್‌ಕ್ಯಾಂಪ್‌ಗೆ ರವಾನೆ.

ಅಷ್ಟರಲ್ಲಿ ನಾನು ಪಾವತಿಸಬೇಕಾದ ಹಣ ಪೂರ್ತಿಯಾಗಿ ಸಂಸ್ಥೆಗೆ ಸೇರಿರಲಿಲ್ಲ. “ನಿನ್ನ ಹಣ ಪಾವತಿಯಾಗದಿದ್ದರೆ ವಾಪಸು ಹೋಗಬೇಕಾದೀತು’ ಎಂಬ “ನೋಟೀಸ್’ ಬಂತು. ಗೆಳೆಯರನ್ನು ಸಂಪರ್ಕಿಸಿದಾಗ ಚಿಂತೆ ಬೇಡ ಎಂದರು. ಗೆಳೆಯರು ಕೈ ಬಿಡಲಿಲ್ಲ . ಚಿಕ್ಕಾಸೂ ಕಡಿಮೆಯಾಗಿದ್ದರೂ ವಾಪಸು ಬರಬೇಕಿತ್ತು. ಯಾವುದೂ ನನ್ನ ಏಕಾಗ್ರತೆಯನ್ನು ಕೊಲ್ಲಲಿಲ್ಲ; ಧೃತಿಗೆಡಲಿಲ್ಲ.

ಎವರೆಸ್ಟ್ ನ ದಕ್ಷಿಣ ತುದಿಯ ಮಾರ್ಗದಲ್ಲಿ ಸಿಗುವ ಅಡ್ವಾನ್ಸ್ ಡ್ ಬೇಸ್ ಕ್ಯಾಂಪ್.
ಎವರೆಸ್ಟ್ ನ ದಕ್ಷಿಣ ತುದಿಯ ಮಾರ್ಗದಲ್ಲಿ ಸಿಗುವ ಅಡ್ವಾನ್ಸ್ ಡ್ ಬೇಸ್ ಕ್ಯಾಂಪ್.

ನನ್ನೊಂದಿಗೆ ಬಂದ ಸಂಗಾತಿಗಳೆಂದರೆ ಎರಡು ಚಾಪೆ, ಸ್ಲೀಪಿಂಗ್ ಬ್ಯಾಗ್ (0 ಡಿಗ್ರಿ ಉಷ್ಣಾಂಶ ಹಾಗೂ ಅದಕ್ಕಿಂತ ಕಡಿಮೆ ಉಷ್ಣಾಂಶಕ್ಕೆ ಹೊಂದಿಕೊಳ್ಳುವ), ಸ್ನೋ ಗಾಗಲ್ಸ್, ಮಂಜುಗೆಡ್ಡೆ ಕತ್ತರಿಸುವ ಕೊಡಲಿ, ಹಗ್ಗ, ಆಕ್ಷಿಜನ್ ಸಿಲಿಂಡರ್, ಸ್ನೋ ಬೂಟ್, ಟೆಂಟ್, ಟಿನ್ ಗ್ಯಾಸ್, ಸಣ್ಣ ಸ್ಟೌ, ಹೆಡ್‌ಲೈಟ್, ಫೆದರ್ ಜಾಕೆಟ್, ಗ್ಲೌಸ್, ಕ್ರಾಂಪ್‌ಬೋನ್ಸ್, ವಿಂಡ್ ಶೀಟರ್ ಇತ್ಯಾದಿ. ಇವುಗಳೆಲ್ಲವೂ ಪರ್ವಾತಾರೋಹಣಕ್ಕೆಂದೇ ವಿಶೇಷವಾಗಿ ತಯಾರಿಸಿದವು. ಸಣ್ಣ ಉದಾಹರಣೆಯೆಂದರೆ ಸ್ಲೀಪಿಂಗ್ ಬ್ಯಾಗ್ ತೆಗೆದುಕೊಳ್ಳಿ. ಅದು ಇಲ್ಲಿ ಬಳಸುವಂತ ತರನದ್ದಲ್ಲ.

ಅದರಲ್ಲೂ ಲೋ ಆಟಿಟ್ಯೂಡ್, ಹೈ ಆಟಿಟ್ಯೂಡ್ ಎಂಬ ಎರಡು ವಿಧಗಳಿವೆ. ಅವೆರಡನ್ನೂ ಕೊಂಡೊಯ್ಯಬೇಕು. ಇದಕ್ಕೆ ತಗಲುವ ವೆಚ್ಚ 20 ಸಾವಿರ. ಸ್ನೋ ಬೂಟ್‌ಗೆ 30 ರಿಂದ 25 ಸಾವಿರ ರೂ. ಒಟ್ಟು ಪರಿಕರಗಳಿಗೆ 2.50 ಲಕ್ಷ ರೂ. ಆಗಬಹುದು. ಇದರೊಂದಿಗೆ ನನಗೆ ಪಿನಾಕಲ್ ಪ್ರತಿಷ್ಠಾನ “ರಿಸ್ಕ್ ವಿಮೆ’ ಮಾಡಿಸಿತ್ತು. ವಿದೇಶದಿಂದ ಬರುವ ಚಾರಣಿಗರು ವಿಮೆ ಮಾಡಿಸಿಕೊಳ್ಳುವುದು ಸರ್ವೇ ಸಾಮಾನ್ಯ.

ಏ. 15 ರಂದು ಬೇಸ್‌ಕ್ಯಾಂಪ್‌ಗೆ ಹೊರಟದ್ದು. ಜಾಂಗ್‌ಮೂ, ನೇಲಂ, ಟಿಂಗ್ರಿ ಮೂರು ಪ್ರದೇಶಗಳಲ್ಲಿ ಒಂದೊಂದು ದಿನ ತಂಗಿ ಬೇಸ್‌ಕ್ಯಾಂಪ್‌ನ್ನು ಮುಟ್ಟಿದ್ದು ಏ. 18 ರಂದು. ಎವರೆಸ್ಟ್ ಪರ್ವತ ಇರುವುದು ಟಿಂಗ್ರಿ ಜಿಲ್ಲಾ ಪ್ರದೇಶದಲ್ಲಿ. ಬೇಸ್‌ಕ್ಯಾಂಪ್, ಮಧ್ಯಂತರ ಶಿಬಿರ (ಐಎಂಸಿ), ಅಡ್ವಾನ್ಸಡ್ ಕ್ಯಾಂಪ್, ನಾರ್ತ್‌ಕೋಲ್ ಅಥವಾ ಕ್ಯಾಂಪ್ 1, ಕ್ಯಾಂಪ್ 2, ಸಮ್ಮಿಟ್ ಕ್ಯಾಂಪ್ ಇವುಗಳನ್ನು ದಾಟಿ ತುತ್ತ ತುದಿಗೆ ಮುಟ್ಟಬೇಕು. ಬೇಸ್‌ಕ್ಯಾಂಪ್ ಇರುವುದು 5, 200 ಮೀಟರ್‌ಗಳಲ್ಲಿ. ಇಲ್ಲಿವರೆಗೆ ವಾಹನಗಳಲ್ಲಿ ಬರಬಹುದು. ಅದಕ್ಕಾಗಿ ದಾರಿ ಮಾಡಲಾಗಿದೆ. ಇಲ್ಲಿಂದ ಉಳಿದ ದೂರವನ್ನು ಕ್ರಮಿಸುವುದೇ ಬದುಕನ್ನು ಪಣವಿಟ್ಟ ಹಾಗೆ.