ದುಡ್ಡು ಹೊಂದಿಸುವುದು ಹೇಗೆ ?

ನಾಲ್ಕೈದು ಗೆಳೆಯರಲ್ಲಿ ತೋಡಿಕೊಂಡೆ. ಅದಕ್ಕೆ ತಗಲುವ 16 ಲಕ್ಷ ರೂ. ಹೊಂದಿಸುವಾಗ ಪಿನಕಲ್ ಪ್ರತಿಷ್ಠಾನ ನೆರವು ನೀಡಿತು. ಲ್ಯಾಂಡ್‌ಮಾರ್ಕ್ ಎಜುಕೇಷನ್ ಮತ್ತಿತರ ಸಂಸ್ಥೆಗಳು ನೆರವು ನೀಡಿದವು. ನನ್ನ ಚಿಂತೆಯನ್ನು ದೂರ ಮಾಡುವ ಭರವಸೆ ನೀಡಿದ ಮೇಲೆ ಮಾರ್ಚ್ 27 ಕ್ಕೆ ಸಜ್ಜಾಗತೊಡಗಿದೆ. ಜನವರಿಯಲ್ಲಿ ಬಂದ ಆಯ್ಕೆ ಪತ್ರದಲ್ಲಿ ನನ್ನ ತಾಲೀಮಿಗೆ ಸೂಚನೆ ನೀಡಿದ್ದರು. ಅದರಂತೆ ತಯಾರಾಗತೊಡಗಿದೆ.

ಎಲ್ಲರನ್ನೂ ಕೈ ಬೀಸಿ ಕರೆಯುವ ಸಾಗರಮಾತಾ
ಎಲ್ಲರನ್ನೂ ಕೈ ಬೀಸಿ ಕರೆಯುವ ಸಾಗರಮಾತಾ

ಪ್ರತಿ ದಿನ ಕನಿಷ್ಠ 6 ಕಿ. ಮೀ ಓಡಬೇಕು (ಜಾಗಿಂಗ್). ನಿತ್ಯ ಮೊಳಕೆ ಬರಿಸಿದ ಹುರುಳಿಯನ್ನು ಸೇವಿಸಬೇಕು. ಕಾಲಿನ ಶಕ್ತಿ ಹೆಚ್ಚಿಸಲು ಅತ್ಯಂತ ಸಹಕಾರಿ. ಅದರೊಂದಿಗೆ ದಿನಾ 2 ಲೀಟರ್ ಬಿಸಿನೀರು ಕುಡಿಯಬೇಕು. ಭೂಮಿಯಿಂದ ಬಹಳ ಎತ್ತರದ ಪ್ರದೇಶಕ್ಕೆ (ಹೈ ಆಟಿಟ್ಯೂಡ್‌ಗೆ) ಹೋದಾಗ ಬಿಸಿನೀರು ಕುಡಿಯುವುದು ಅನಿವಾರ್ಯ. ಹಾಗೆ ನಮ್ಮ ದೇಹವನ್ನು ಒಗ್ಗಿಸಿಕೊಳ್ಳಲು ಎರಡು ಮೂರು ತಿಂಗಳು ಬಿಸಿನೀರು ಕುಡಿದು ಅಭ್ಯಾಸ ಮಾಡಿಕೊಳ್ಳಬೇಕು.

“ಆರೋಹಣ’ ವನ್ನು ಅಭ್ಯಾಸವಾಗಲಿಕ್ಕೆ, ಎತ್ತರದ ಪ್ರದೇಶಕ್ಕೆ ಹೊಂದಿಕೊಳ್ಳಲು ಒಂದೆರಡು ಚಾರಣ ಕೈಗೊಳ್ಳಲು ಸೂಚಿಸುತ್ತಾರೆ. ನಾನು ನಂದಿಬೆಟ್ಟ, ಸಾವನದುರ್ಗ ಬೆಟ್ಟ ಹತ್ತಿ ಬಂದೆ. ೮, ೮೪೮ ಮೀಟರ್ ಏರಲು ಇಲ್ಲಿ ತಾಲೀಮು. ನನ್ನ ಎತ್ತರಕ್ಕೆ ತಕ್ಕಷ್ಟು ತೂಕವಿರಲಿಲ್ಲ. 173 ಸೆಂ. ಮೀ ಉದ್ದವಿದ್ದೆ. ಅದಕ್ಕೆ ೭೨ ಕೆ. ಜಿ. ಇರಬೇಕಂತೆ. ಆದರೆ ನಾನಿದ್ದದ್ದು ಸುಮಾರು 69 ಕೆ. ಜಿ. ಅದಕ್ಕೆ ಅಗತ್ಯ ಪ್ರೋಟೀನ್, ಹೆಚ್ಚು ಕ್ಯಾಲೋರಿ ಆಹಾರಗಳನ್ನು ತೆಗೆದುಕೊಳ್ಳಲು ಹೇಳಿದರು. ಅದರಂತೆ ತಯಾರಾಗುತ್ತಾ ಹೋದೆ. ಏಕಾಗ್ರತೆ ಬೆಳೆಸಿಕೊಳ್ಳಲು ತೊಡಗಿದೆ.

ಇಷ್ಟರಲ್ಲಿ ಮನಸ್ಸಿನಲ್ಲಿ ತಲೆ ಎತ್ತಿದ ಮತ್ತೊಂದು ವಿಚಾರವೆಂದರೆ ಹೇಗಿದ್ದರೂ ಹೋಗುವುದು ಒಂದೇ ಬಾರಿ. ಆ ಸಂದರ್ಭದಲ್ಲೂ ಸುಮ್ಮನೆ ಹೋದರೆ ಹೇಗೆ ? ಒಂದು ಸಂದೇಶ ಹೊತ್ತು ಹೋಗೋಣ. ಆ ಸಂದೇಶ ಗಿರಿಶಿಖರದ ಮೇಲೆ ರಾರಾಜಿಸಲಿ ಎನಿಸಿತು. ಆಗ ಹೊಳೆದದ್ದು ವಿಶ್ವ ಸಾಮರಸ್ಯ ಮತ್ತು ಭ್ರಾತೃತ್ವ.
ಮೂಲತಃ ಪೋಲಿಸ್ ಅಧಿಕಾರಿಯಾದ ನನಗೆ ಕೋಮು ಗಲಭೆಯಿಂದ ಆಗುವ ನಷ್ಟ ಚೆನ್ನಾಗಿ ಅರಿವಿದೆ.

ಲಕ್ಷಾಂತರ ರೂ. ನಷ್ಟ, ಜೀವನಷ್ಟ. ಒಂದೇ ಎರಡೇ ? ಪ್ರತಿ ದಿನ ಸಂಶಯದಿಂದ ಬದುಕುವ ಸಂಸಾರಗಳು. ಇದನ್ನೆಲ್ಲಾ ಕಂಡು ಕೋಮು ಸಾಮರಸ್ಯಕ್ಕಾಗಿ ಪ್ರಾರ್ಥಿಸಿದೆ. ಹಾಗೆಯೇ ವಿಶ್ವ ಸಾಮರಸ್ಯ ಸಹ. ಅದರಂತೆ ಭಗವದ್ಗೀತೆ, ಕುರಾನ್, ಬೈಬಲ್, ಸಿಖ್ಖರ ಪವಿತ್ರ ಗ್ರಂಥ ಹೀಗೆ ಎಲ್ಲ ಧರ್ಮದ ಗ್ರಂಥಗಳನ್ನು ಹೊತ್ತುಹೋದೆ. ವಿಶ್ವಸಾಮರಸ್ಯಕ್ಕೆ 162 ದೇಶಗಳ ಬಾವುಟವನ್ನು ಸಂಗ್ರಹಿಸಿದೆ.
ಅದರೊಂದಿಗೆ ನಮ್ಮ ಕನ್ನಡದ ಬಾವುಟವನ್ನೂ ಹೊತ್ತು ಹೋದೆ. ಹಾರಿಸಿ ಬಂದೆ.

ಪರಸ್ಪರ ವಿವಾದ ಬಗೆಹರಿಯಲಿ ಎಂಬ ಆಶಯದಿಂದ ದಕ್ಷಿಣ ರಾಜ್ಯಗಳ ಸಂಕೇತವನ್ನೂ ತುದಿಯವರೆಗೂ ಕೊಂಡೊಯ್ದೆ. ಒಟ್ಟಿನಲ್ಲಿ ಸಾಮರಸ್ಯವನ್ನು ಪ್ರತಿಪಾದಿಸಿದೆ. ಇಂದಿಗೂ ನನಗನ್ನಿಸುವುದು ನನ್ನ ಪ್ರಯತ್ನದಿಂದ ಒಂದು ಕೋಮುಗಲಭೆ ನಿಂತರೆ ನನ್ನ ಪರ್ವಾತಾರೋಹಣಕ್ಕೆ ಮಾಡಿದ ವೆಚ್ಚ ಬಂದಂತೆ. ಅದಾಗಬೇಕೆಂಬುದು ನನ್ನ ಬಯಕೆ.

ಇಷ್ಟೆಲ್ಲಾ ಆಸೆಗಳನ್ನು ಗಂಟು ಕಟ್ಟಿಕೊಂಡು, ಹೆಗಲಿಗೇರಿಸಿಕೊಂಡು ಮೊದಲ ಹೆಜ್ಜೆ ಇಟ್ಟದ್ದು ಮಾ.27 ರಂದು ನೇಪಾಳಕ್ಕೆ. ಸೀದಾ ಹೋದವನೇ ಕಂಡದ್ದು ಅಲ್ಲಿನ ಸೌಂದರ್ಯವನ್ನು. ಖುಷಿಯಾಯಿತು. ಅಲ್ಲಿ ಪರ್ವಾತಾರೋಹಿಗಳ ಸಂಸ್ಥೆಗೆ ಹೋಗಿ ದಾಖಲಿಸಿಕೊಂಡೆ. ನನ್ನೊಂದಿಗೆ ಇನ್ನೂ ಐದು ಮಂದಿ ಇದ್ದರು. ಅವರಿಗೆ ನಾನೇ ನಾಯಕ. ಅಮೆರಿಕಾದ ಸಿ. ಸ್ಯಾಕ್ಸನ್, ಆಸ್ಟ್ರೇಲಿಯಾದ ಕೆನ್‌ಹಿಲ್, ಅರ್ಜೆಂಟೈನಾದ ಜೋಸ್ ಜಿಲನ್, ಇಂಗ್ಲೆಂಡಿನ ಜಿ. ಪಾರ್ಕರ್ ನನ್ನ ತಂಡದಲ್ಲಿದ್ದರು. ನಂತರ ಪೊಲೀಷ್ ದೇಶದ ಮಾರ್ಟಿನ್ ಎಂಬವರು ಬಂದು ಸೇರಿಕೊಂಡರು. ಇಷ್ಟರಲ್ಲಿ ನಾನು ಮತ್ತು ಮಾರ್ಟಿನ್ ’ಸಮ್ಮಿಟ್’ (ತುದಿ ಮುಟ್ಟಿ ಬರುವುದು) ಪೂರೈಸಿದೆವು.

ನೇಪಾಳದ ಕಡೆಯಿಂದ ಎವರೆಸ್ಟ್ ಹತ್ತುವುದು ಚೀನಾ, ಟಿಬೆಟ್ ದಾರಿಗಿಂತ ಸುಗಮ. ಕಾರಣವಿಷ್ಟೇ. ಈ ದಾರಿಯಲ್ಲಿ 12 ರಿಂದ 14 ಸಾವಿರ ಅಡಿವರೆಗೂ ಗಿಡಮರಗಳಿವೆ. ಎಲ್ಲಿವರೆಗೆ ಗಿಡಮರಗಳು ಇರುವುದು ಅಲ್ಲಿ ಆಮ್ಲಜನಕದ ಸಮಸ್ಯೆ ಕಾಡುವುದಿಲ್ಲ. ಆದರೆ ನಾವು ಆರಿಸಿಕೊಂಡ ದಾರಿ ಕಷ್ಟದ್ದೇ. ಚೀನಾದ ಜಾಂಗ್‌ಮೂ ಗಡಿ ದಾಟಿ ಹೋಗಬೇಕು. ಇಲ್ಲಿ 5900 ಅಡಿಗಳಿಂದಲೇ ಹಸಿರು ತೋರುವುದಿಲ್ಲ. ಮೊರೇನ್ ಡೆಸರ್ಟ್. ಅಂದರೆ ಒಂದು ಬಗೆಯ ಧೂಳಿನ ವಾತಾವರಣ. ಅದೇ ನಮ್ಮನ್ನು ಕೆಡವಿ ಹಾಕಬಹುದು. ಇಂಥ ಯಾವುದೇ ಕಷ್ಟ ನೇಪಾಳದ ಮಾರ್ಗದಲ್ಲಿಲ್ಲ.

ಇದೆಲ್ಲಾ ಗೊತ್ತಿದ್ದರೂ ಕಷ್ಟ ಮಾರ್ಗವನ್ನು ಆಯ್ದುಕೊಂಡಿದ್ದು ಎರಡು ಕಾರಣಕ್ಕೆ. ಕಷ್ಟದ ಹಾದಿಯಲ್ಲಿ ಹೋಗೋಣ ಎಂಬ ಅತ್ಯುತ್ಸಾಹ. ಇನ್ನೊಂದು ಸುಮಾರು 15 ಲಕ್ಷ ರೂ. ವೆಚ್ಚ ಕಡಿಮೆ. ನೇಪಾಳದ ಮಾರ್ಗಕ್ಕೆ ತೆರುವ ಸುಂಕವೇ ಅತಿ ಹೆಚ್ಚು.

ನೇಪಾಳದಲ್ಲಿ ಒಂದಷ್ಟು ತರಬೇತಿಯನ್ನು ಪಡೆಯಬೇಕು. ಭಕ್ತಪುರ ಸುತ್ತಮುತ್ತ ಚಾರಣ ಕೈಗೊಳ್ಳಬೇಕು. ಇದಲ್ಲದೇ ಪರ್ವಾತಾರೋಹಣಕ್ಕೆ ಸಂಬಂಧಿಸಿದಂತೆ ವಿಶೇಷ ತರಬೇತಿಗಳನ್ನು ನೀಡಲಾಗುತ್ತದೆ. ಅದೆಲ್ಲವನ್ನೂ ಕೈಗೊಂಡೆ. ಮನಸ್ಸು ಎವರೆಸ್ಟ್‌ಗೆ ಹತ್ತಿರವಾಗುತ್ತಿತ್ತು. ಪ್ರತಿ ದಿನ ವಿಶ್ವಾಸ ಬೆಳೆಯುತ್ತಾ ಹೋಯಿತು. ಏನೇ ಆಗಲೀ, ತುದಿ ಮುಟ್ಟಿಯೇ ಬರಬೇಕು ಎಂದು ನಿಶ್ಚಯಿಸಿಕೊಂಡೆ.

ಅಷ್ಟರಲ್ಲಿ ನಾನು ಪಾವತಿಸಬೇಕಾದ ಹಣ ಪೂರ್ತಿಯಾಗಿ ಸಂಸ್ಥೆಗೆ ಸೇರಿರಲಿಲ್ಲ. “ನಿನ್ನ ಹಣ ಪಾವತಿಯಾಗದಿದ್ದರೆ ವಾಪಸು ಹೋಗಬೇಕಾದೀತು’ ಎಂದು ಎಚ್ಚರಿಸಿದ ಪ್ರಸಂಗಗಳೂ ಇದ್ದವು. ಗೆಳೆಯರನ್ನು ಸಂಪರ್ಕಿಸಿದಾಗ ಚಿಂತೆ ಮಾಡಬೇಡ ಎಂದರು. ಧೃತಿಗೆಡಲಿಲ್ಲ. ನನ್ನ ಗೆಳೆಯರು ಕೈ ಬಿಡಲಿಲ್ಲ ,ಮೇಲಕ್ಕೇರಿದೆ, ಇಲ್ಲದಿದ್ದರೆ ನಾನು ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ವಾಪಸು ಬರಬೇಕಿತ್ತು. ಸಾಗರ್‌ಮಾತಾ ನನ್ನನ್ನು ಕೈ ಹಿಡಿದೆಳೆಯುತ್ತಿದ್ದಳು, ನಾನು ಅತ್ತಲೇ ಚಲಿಸುತ್ತಿದ್ದೆ. ಯಾವ ಚಿಂತೆಯೂ ನನ್ನ ಏಕಾಗ್ರತೆಯನ್ನು ಕೊಲ್ಲಲಿಲ್ಲ. ಎಲ್ಲ ಮುಗಿದು ಏಪ್ರಿಲ್ 15 ರಂದು ಕಾಠ್ಮಂಡುವಿನಿಂದ ಕೊಡಾರಿ ಗಡಿ ದಾಟಿ ಜಾಂಗ್‌ಮೂ ಮಾರ್ಗವಾಗಿ ಬೇಸ್‌ಕ್ಯಾಂಪ್‌ಗೆ ಹೊರಟೆ. ನಾನು ದಾಟುತ್ತಿದ್ದ ನದಿಗೆ ಕಟ್ಟಿದ ಸೇತುವೆ ಹೆಸರು “ಸ್ನೇಹ ಸೇತುವೆ’(ಫ್ರೆಂಡ್‌ಶಿಫ್ ಬ್ರಿಡ್ಜ್). ನಾನು ಬೆಸೆಯಲು ಹೊರಟದ್ದೂ ಅದನ್ನೇ-ಸಾಮರಸ್ಯ.