everest
ಆಗ ಬದುಕು ಇದ್ದರೆ ಮತ್ತೊಮ್ಮೆ ಬರಬಹುದು ಎನಿಸಿತು. ಸಾಗರ್‌ಮಾತಾ ಬೇಕೆಂದರೆ ಹೇಗೂ ಕರೆಸಿಕೊಳ್ಳುತ್ತಾಳೆ ಎಂಬ ಶೆರ್ಫಾನ ಮಾತು ಸುಳ್ಳಾಗಲಿಲ್ಲ. ಆಗ ಹೆಜ್ಜೆ ಹಿಂದಕ್ಕಿಡಲು ಮತ್ತೊಂದು ಕಾರಣವೆಂದರೆ ನನ್ನೊಂದಿಗೇ ಮೇಲೆ ಹತ್ತಲು ಹೋದ ಮೂರು ಮಂದಿ ಕೊರಿಯನ್ ಚಾರಣಿಗರು ಏನಾದರೋ ತಿಳಿಯಲೇ ಇಲ್ಲ ? ಅವರೊಂದಿಗಿನ ಆ ಹಿಂದಿನ ಘಳಿಗೆಗಳು ಮಾತ್ರ ಕಣ್ಣ ಮುಂದಿದ್ದವು, ಅವರು ಕಣ್ಮರೆಯಾಗಿದ್ದರು. ಸರಿ ನಾನು ಸೀದಾ ಬೇಸ್ (ತಳ)ಕ್ಯಾಂಪ್‌ಗೆ ಬಂದು ಬಿಟ್ಟೆ. ನಂತರ ಊರಿನ ದಾರಿ ಹಿಡಿದು ಬಿಟ್ಟೆ. 1998 ರಲ್ಲಿ ಹೀಗೇ ನನ್ನಂಥವನೊಬ್ಬನನ್ನು ಏರಲು ಕರೆದೊಯ್ದ ಇದೇ ಶೆರ್ಫಾ ವಾಪಸು ಬರಲಿಲ್ಲ. ಪರ್ವತ ಏರುವ ಬದುಕನ್ನು ಮುಗಿಸಿ ಹಿಮದೊಳಗೆ ಹಿಮವಾದ.

ದಕ್ಷಿಣ ಭಾರತೀಯರೆಂದರೆ ಕಷ್ಟ ಸಹಿಷ್ಣುಗಳಲ್ಲ ಎಂಬ ಉತ್ತರ ಭಾರತೀಯರ ಆರೋಪ ನಿರಾಕರಿಸಲು ನನ್ನ ಮನಸ್ಸು ರಚ್ಚೆ ಹಿಡಿದಿತ್ತು. ಹಾಗಾಗಿ ಎವರೆಸ್ಟ್ ಏರುವ ಸಾಹಸವನ್ನು ತಲೆ ಮೇಲೆ ಹೊತ್ತುಕೊಂಡೆ. ನನ್ನ 24 ನೇ ವಯಸ್ಸಿನಲ್ಲಿ ಪರ್ವಾತಾರೋಹಣಕ್ಕೆ ಸಂಬಂಧಿಸಿದ ಎಲ್ಲ ಕೋರ್ಸ್ ಪೂರೈಸಿದ್ದೆ. ಎಲ್ಲದರಲ್ಲೂ ಒಳ್ಳೆ ಪ್ರದರ್ಶನ ನೀಡಿದ್ದೆ. ಆಗಲೂ ಕೆಲವರು ಹಿಮಾಲಯ ಪರ್ವತ ಶ್ರೇಣಿಗಳ ಆರೋಹಣ ನಿನ್ನಿಂದ ಸಾಧ್ಯ ಎಂದು ಹುರಿದುಂಬಿಸಿದ್ದರು.

ಅದೇ ಖುಷಿಯಲ್ಲಿ ರಾಜ್ಯದ ತಿಮ್ಮಯ್ಯ ಸಾಹಸ ಅಕಾಡೆಮಿಗೆ ಬಂದು ಅಧಿಕಾರಿಗಳನ್ನು ಕೇಳಿದೆ “ನನಗೆ ಎವರೆಸ್ಟ್ ಹತ್ತಬೇಕು’. ಅವರು ನಕ್ಕರು. “ನಿನ್ನನ್ನು ಹೆಲಿಕಾಫ್ಟರ್‌ನಲ್ಲಿ ಕರ್‍ಕೊಂಡು ಹೋಗಿ ಅಲ್ಲಿ ಬಿಡಬೇಕು ಅಷ್ಟೇ ಎಂದು ವ್ಯಂಗ್ಯವಾಡಿದರು. ಅದಕ್ಕೆ ತಗಲುವ ಖರ್ಚು ವೆಚ್ಚ ಲೆಕ್ಕ ಹಾಕಿದ್ದೀಯಾ ? ಅದು ಕನ್ನಡಿಗರಿಗೆ ಬರಿ ಹಗಲುಗನಸು ಎಂದರು. ಅವರ ಒಂದು ಮಾತು ನಿಜ. ಖರ್ಚು,ವೆಚ್ಚ ಒಂದೂ ಲೆಕ್ಕ ಹಾಕಿರಲಿಲ್ಲಾ, ಆದರೆ ತಲೆಯೊಳಗೆ ಎವರೆಸ್ಟ್‌ನ ಕಿಡಿ ಹೊತ್ತಿಕೊಂಡಿತ್ತು.

ಇಷ್ಟೆಲ್ಲಾ ವ್ಯಂಗ್ಯವಾಡಿದ ಅಧಿಕಾರಿಯ ಒಂದು ಮಾತು “ಒಂದು ವೇಳೆ ಅದಕ್ಕೆ ಆಯ್ಕೆಯಾಗಿದ್ದರೆ ಎಲ್ಲಾದರೂ ಪ್ರಯತ್ನಿಸಬಹುದಿತ್ತೇನೋ?’ ಎಂದದ್ದು ತಲೆಯೊಳಗೆ ಹೊಕ್ಕು ಕಿಡಿ ಕಿಚ್ಚಾಗಿ ಮಾರ್ಪಟ್ಟಿತು. ನಿಜವಾಗಲೂ ಹೇಳುತ್ತಿದ್ದೇನೆ, 1995 ರ ಹಿಂದೆ ಬರಿ ಆಯ್ಕೆಯಾಗುವುದೇ ನನ್ನ ದೊಡ್ಡ ಕನಸಾಗಿತ್ತು. ಅದಕ್ಕಾಗಿ ಪಟ್ಟ ಶ್ರಮವೆಲ್ಲಾ ಇಂದು ಅಮೃತಫಲ.
everest-map

ಭಾರತೀಯ ಪರ್ವಾತಾರೋಹಿಗಳ ಸಂಘ (ಐಎಂಎ)ಕ್ಕೆ ದೂರವಾಣಿ ಮಾಡಿ ಮಾಹಿತಿ ಪಡೆದೆ. ಸಾಮಾನ್ಯವಾಗಿ ಎರಡು ಋತುಮಾನಗಳಲ್ಲಿ ಎವರೆಸ್ಟ್ ಏರಲು ಸಜ್ಜಾಗುತ್ತಾರೆ. ಅದೆಂದರೆ ಒಂದು ಏಪ್ರಿಲ್ ಒಂದರಿಂದ ಜೂನ್ 10. ಎರಡನೆಯದ್ದು ಜುಲೈ 1 ರಿಂದ ಅಕ್ಟೋಬರ್ 10. ನಂತರ ಏರಲು ಸಾಧ್ಯವೇ ಇಲ್ಲ.

ಎರಡನೇ ಋತುಮಾನದಲ್ಲಿ ಅವಲಾಂಚ್ (ಹಿಮ ಬಿರುಗಾಳಿ) ಜೋರು. ಅದಕ್ಕಾಗಿಯೇ ಎಲ್ಲರೂ ಮೊದಲನೇ ಋತುಮಾನವನ್ನೇ ಆಯ್ದುಕೊಳ್ಳುತ್ತಾರೆ. ಎಲ್ಲರೂ ಅಂದರೆ ಅಲ್ಲೇನೂ ಟ್ರಾಫಿಕ್ ಜಾಮ್ ಆಗುವುದಿಲ್ಲ. ಕನಸು ಕಂಡವರೆಲ್ಲಾ ಅಲ್ಲಿ ಎವರೆಸ್ಟ್‌ನ ತಪ್ಪಲಿಗೆ ಬರುತ್ತಾರೆ, ಕಣ್ತುಂಬ ತುಂಬಿಕೊಳ್ಳುತ್ತಾರೆ, ಸಿದ್ಧರಾಗುತ್ತಾರೆ. ಅದರೆ ಅದೃಷ್ಟ ಕೈ ಹಿಡಿದರೆ ತುದಿ ಮುಟ್ಟಿ ಬರುತ್ತಾರೆ, ಇಲ್ಲದಿದ್ದರೆ ಇಲ್ಲ !

ಕನಸು ಕಂಡವರೆಲ್ಲಾ ಎವರೆಸ್ಟ್‌ನ ತಪ್ಪಲಿಗೆ ಬರುತ್ತಾರೆ, ಕಣ್ತುಂಬ ತುಂಬಿಕೊಳ್ಳುತ್ತಾರೆ, ಸಿದ್ಧರಾಗುತ್ತಾರೆ. ಅದೃಷ್ಟ ಕೈ ಹಿಡಿದರೆ ತುದಿ ಮುಟ್ಟಿ ಬರುತ್ತಾರೆ, ಇಲ್ಲದಿದ್ದರೆ ಇಲ್ಲ !
ಈ ಮಾತು ಉಪೇಕ್ಷೆಗೆ ಹೇಳುತ್ತಿಲ್ಲ. ಉದಾಹರಣೆಗೆ ನಾನೇ ಮೊದಲ ಪ್ರಯತ್ನದಲ್ಲಿ ಒಂದುವೇಳೆ ಶೆರ್ಪಾನ ಮಾತು ಮೀರಿದ್ದರೆ ಕೊರಿಯನ್ನರಂತೆ ನತದೃಷ್ಟರ ಸಾಲಿಗೆ ಸೇರಬೇಕಿತ್ತು. ಅದಾಗಲಿಲ್ಲ ಎಂಬುದು ಸತ್ಯ.

ಎವರೆಸ್ಟ್ ಏರುವ ಮತ್ತೊಂದು ಪ್ರಯತ್ನ ರೂಪಕ್ಕೆ ಬಂದದ್ದು ಡಿಸೆಂಬರ್‌ನಲ್ಲಿ. ನೇಪಾಳದ ಪರಿಕ್ರಮ ಪರ್ವಾತಾರೋಹಿಗಳ ಸಂಸ್ಥೆಗೆ ಅರ್ಜಿ ಸಲ್ಲಿಸಿದೆ. ನನ್ನ ಹಿಂದಿನ ಪ್ರಯತ್ನವನ್ನೂ ಅದಕ್ಕೆ ಹಾಕಿದ ಶ್ರಮವನ್ನೂ ಅರುಹಿದೆ. ನಂತರ ಸಂಸ್ಥೆಯಿಂದ ಬರಿ ಪತ್ರ ಬರಲಿಲ್ಲ. ಅದರ ಹಿಂದೆ ಇಬ್ಬರು ಅಂತಾರಾಷ್ಟ್ರೀಯ ಪರ್ವಾತಾರೋಹಣ ತಜ್ಞರು ಬಂದರು. ನಾನು ಎವರೆಸ್ಟ್ ಏರಲು ಎಷ್ಟು ಸಮರ್ಥ? ಎನ್ನುವುದನ್ನು ಪರಿಶೀಲಿಸಬೇಕಿತ್ತು. ಇದರ ವೆಚ್ಚ 50 ಸಾವಿರ ರೂ. ಗಳನ್ನು ನಾನೇ ಭರಿಸಬೇಕು.

ಒಂದುವೇಳೆ ನೇಪಾಳಕ್ಕೇ ಪರೀಕ್ಷೆಗೆ ಹೋದರೆ ಈ ಹಣ ತೆರಬೇಕಿಲ್ಲ. ಇಲ್ಲದಿದ್ದರೆ ಅನಿವಾರ್ಯ.
ಜನವರಿಯಲ್ಲಿ ಪರೀಕ್ಷೆ ನಡೆದದ್ದು ಸಾತನೂರು ಬೆಟ್ಟದ ಮೇಲೆ. ಎಲ್ಲ ಖಚಿತಪಡಿಸಿಕೊಂಡು ಹೋದ ತಜ್ಞರು “ನಿಮಗೆ ಅವಕಾಶ ನೀಡಿದ್ದೇವೆ’ ಎಂದು ಪತ್ರ ಕಳುಹಿಸಿದಾಗ ಆದ ಸಂತೋಷ ಅಷ್ಟಿಷ್ಟಲ್ಲ. ಒಂದು ತಮಾಷೆಯ ಸಂಗತಿಯೆಂದರೆ ಅದಕ್ಕೆ ಹೊಂದಿಸಬೇಕಾದ ವೆಚ್ಚವೂ ಆ ಕ್ಷಣದಲ್ಲಿ ನೆನಪಾಗಲಿಲ್ಲ. ಅದೂ ಸರಿಯೇ, ಸಂತೋಷದ ಸಂದರ್ಭದಲ್ಲಿ ದುಃಖದ ಸಂಗತಿ ಏಕೆ ನೆನಪಿಗೆ ಬರಬೇಕು ? ಸಂತೋಷದ ಘಳಿಗೆಯ ನಂತರ ವಾಸ್ತವ ಅರಿವಾದಾಗ ಚಿಂತೆ ಆವರಿಸಿಕೊಂಡಿತು. ದುಡ್ಡು ಹೊಂದಿಸುವುದು ಹೇಗೆ ?