ಗೆಳೆಯರೇ, ಬ್ರಹ್ಮಚಾರಿಗಳ ಪುಟಗಳನ್ನು ಮತ್ತೆ ಮುಂದುವರಿಸಿದ್ದೇನೆ. ಕೆಲ ಕಾರಣಗಳಿಂದ ಮಧ್ಯೆ ನಿಂತು ಹೋಗಿತ್ತು. ಈಗ ಮತ್ತೆ ಆರಂಭಿಸಿದ್ದೇನೆ. ಓದಲು ಮರೆಯಬೇಡಿ. ಅಂದ ಹಾಗೆ, ನಮ್ಮದು ಪ್ರಜಾಪ್ರಭುತ್ವ !

ಪುಟ -13

“ನೋಡಯ್ಯಾ, ನಗರಕ್ಕೆ ಬಂದ ಮೇಲೆ ಏನಾದರೂ ಮಾಡಬೇಕು. ಸುಮ್ನೆ ಇದ್ದರೆ ಊರಲ್ಲೇ ಇರಬಹುದಿತ್ತಲ್ಲಾ?’-ಬೆಳಗ್ಗೆ ಊರಿನಿಂದ ಬೆಂಗಳೂರು ಬಸ್ ಸ್ಟ್ಯಾಂಡ್‌ನಲ್ಲಿ ಬಸ್ಸಿನಿಂದ ಇಳಿದಾಗ ಮೊದಲು ಅನಿಸಿದ್ದು. ಇದು ಬಿಡಿ, ಎಲ್ಲರನ್ನೂ ಕಾಡುತ್ತಲೇ ಇರುತ್ತೆ. ಮೊದಲು, ದೊಡ್ಡದ ನಗರದಲ್ಲಿ ಚಿಕ್ಕದೊಂದು ಬಾಡಿಗೆ ಮನೆ ಹಿಡಿಯಲು ತೊಡಗಿದಾಗಲೇ ಆ ಸರ್ಕಸ್ಸಿನ ಮಜ-ಕಷ್ಟ ಎರಡೂ ಅರ್ಥವಾಗೋದು. 

ನಮ್ಮ ಹಲಸೂರಿನ ಮನೆ ಅಂಥವರಿಗೆ ಒಂದು ವೇದಿಕೆಯಾಗಿತ್ತು. ನಮ್ಮೂರಿನ ಅಥವಾ ಬೇರೆ ಊರಿನ ಯಾರಾದರೂ ಪರಿಚಯಸ್ಥರು ಹೇಳಿ ಕಳುಹಿಸಿದರೆ ಸಾಕು. ಬೆಂಗಳೂರಿನಲ್ಲಿ ಪುಟ್ಟದೊಂದು ಕೆಲಸ ಹುಡುಕಿಕೊಳ್ಳುವವರೆಗೆ (ಅಂದರೆ ಎರಡು-ಮೂರು ತಿಂಗಳು) ನಮ್ಮಲ್ಲಿ ವಾಸ್ತವ್ಯ. ಅಷ್ಟೇ ಅಲ್ಲ. ಇದನ್ನು ಹೆಗ್ಗಳಿಕೆ ಎನ್ನುವುದಕ್ಕೂ ಹೇಳುತ್ತಿಲ್ಲ. ಅವರಿಂದ ಊಟಕ್ಕಾಗಲೀ, ವಾಸ್ತವ್ಯಕ್ಕಾಗಲೀ ಹಣ ಪಡೆಯುತ್ತಿರಲಿಲ್ಲ. ಅವರ ವೆಚ್ಚವನ್ನು ನಾವೇ ಎಲ್ಲರೂ ಸಮಪಾಲಿನಿಂದ ಭರಿಸುತ್ತಿದ್ದೆವು. ಅವನೊಬ್ಬನಿಂದ ಬೀಳುವ ವೆಚ್ಚ ನೂರು ರೂ.ಎಂದಿಟ್ಟುಕೊಳ್ಳಿ. ನಾವೆಲ್ಲಾ ೧೫ ರೂ. ಭರಿಸುತ್ತಿದ್ದೆವು. ಹೀಗೆ ಖುಷಿಯಿಂದ ಹಂಚಿಕೆಯ ಕೆಲಸ ಮತ್ತು ಖುಷಿಯನ್ನು ಹಂಚುವ ಕೆಲಸ. 

ಸುಮಾರು ಮಂದಿ ಹೀಗೆ ವಾಸ್ತವ್ಯವಿದ್ದರು. ಕಾರಣವಿಷ್ಟೇ. ನಾವೂ ಹೀಗೆ ಎಷ್ಟೋ ಮಂದಿಯಿಂದ ಬೆಳೆದು ಬಂದಿದ್ದು. ನಾನು ಪತ್ರಿಕೋದ್ಯಮಕ್ಕೆ ಬರಲು ಕಾರಣವಾಗಿದ್ದು, ಉತ್ಸಾಹ ತುಂಬಿದ್ದು ನನಗೆ ಗುರುತು ಪರಿಚಯವಿಲ್ಲದವರಿಂದ. ನಾನು ಆ ಮೊದಲು ಕೆಲಸ ಮಾಡುತ್ತಿದ್ದ ಕ್ಷೇತ್ರದಲ್ಲಿ ಪರಿಚಯವಾದವರಿಂದ. ಅದಕ್ಕೇ, ಇಂಥವರನ್ನು ಕಂಡಾಗ ಮನುಷ್ಯರ ಮೇಲಿನ ನಂಬಿಕೆ ಮತ್ತಷ್ಟು ದೃಢಗೊಳ್ಳುತ್ತದೆ. 

ಒಂದೊಂದು ಕಡೆಯಿಂದ, ಒಂದೊಂದು ಹಿನ್ನೆಲೆಯಿಂದ ಬಂದ ನಾವೆಲ್ಲರೂ ಸೇರಿ ನಡೆಸುತ್ತಿದ್ದುದೇ ಸೌಹಾರ್ದದ ನಾವೆ. ನಮಗೆ ಅದು ಬದುಕನ್ನು ಅರ್ಥೈಸಿದೆ, ಬದುಕುವುದನ್ನು ಕಲಿಸಿಕೊಟ್ಟಿದೆ. ಒಂದಂತೂ ನಿಜ. ಯಾರನ್ನೂ ನಮ್ಮಲ್ಲಿ ಸೋಮಾರಿಯಾಗಲು ಬಿಡುತ್ತಿರಲಿಲ್ಲ. ಹಾಗೆ ಎಲ್ಲರಿಗೂ ಕೆಲಸದ ಹಂಚಿಕೆಯಾಗುತ್ತಿತ್ತು. 

ನಾನು ಸ್ವಲ್ಪ ವಯಸ್ಸಿನಲ್ಲಿ ದೊಡ್ಡವ (ಬಹಳ ಅಲ್ಲ, ಮೂರು ವರ್ಷವಿರಬಹುದು). ಹಾಗಾಗಿ ಸ್ವಲ್ಪ ಗೌರವ ಇತ್ತು. ಒಮ್ಮೊಮ್ಮೆ ಲಘುವಾಗಿ ಕಾಲೆಳೆಯುತ್ತಿದ್ದರು ಅನ್ನಿ, ನಮ್ಮ ಅದೃಷ್ಟಕ್ಕೆ ಅದು ಗ್ರಾನೈಟ್ ನೆಲವಾಗಿರಲಿಲ್ಲ. ಬೀಳುತ್ತಿರಲಿಲ್ಲ. ಕಡಪ ಕಲ್ಲಿನ ಮನೆ. ಖುಷಿ ಕೊಡುವ ನಂದನವನ. 

ಬೆಳಗ್ಗೆ ಗೆಳೆಯರಿಗೆಲ್ಲಾ ಉಪಾಹಾರ ಮಾಡುವುದು ನನ್ನ ಹೊಣೆ. ನನಗೆ ಹರ್ಷ, ನವೀನ, ರಮೇಶ್ ನನ್ನ ತಂಡದಲ್ಲಿ. ಹಾಗೆಯೇ ಸಂಜೆ ಅರವಿಂದ ಸಿಗದಾಳ್ ಮತ್ತು ಅರುಣ ಊಟದ ಸಿದ್ಧತೆಯನ್ನು ನಡೆಸುತ್ತಿದ್ದರು. ಅವರಿಗೆ ಸಂಜೆ ಯಾರು ಮನೆಯಲ್ಲಿರುತ್ತಿದ್ದರೋ ಅವರು ಸಹಕಾರ ನೀಡುತ್ತಿದ್ದರು. 

ನನ್ನನ್ನು ಹೆಚ್ಚು ನನ್ನ ಗೆಳೆಯರು ಸಿಟ್ಟು ಮಾಡಿಕೊಳ್ಳುತ್ತಿದ್ದುದು ಒಂದು ಸ್ವಭಾವಕ್ಕೆ. ಬೆಳಗ್ಗೆಯ ತಿಂಡಿಗೆ ಏನು ಬೇಕು (ಪೂರಕವಾಗಿ) ಎಂಬುದನ್ನೆಲ್ಲಾ ಬೆಳಗ್ಗೆಯೇ ಹೇಳುತ್ತಿದ್ದೆ.  ಆ ಹೊತ್ತಿಗೆ ಅಂಗಡಿ ತೆಗೆದಿರುವುದಿಲ್ಲ, ದೂರ ಹೋಗಬೇಕು ಎಂಬುದು ಗೆಳೆಯರ ದೂರ. ಹಾಗಾಗಿ ಮಧ್ಯಾಹ್ನವೇ ನಾಳೆಗೆ ಏನು ಬೇಕೆಂದು ಹೇಳಿದರೆ ತರಬಹುದು ಎಂಬುದು ಸಲಹೆ. ಆದರೆ ನಾನು ರಾತ್ರಿ ತಡವಾಗಿ ಮನೆಗೆ ಬರುತ್ತಿದ್ದುದರಿಂದ ಯೋಚಿಸಲು ಸಾಧ್ಯವಾಗುತ್ತಿರಲಿಲ್ಲ. 

ಹಾಗಾಗಿ ಎಷ್ಟೋ ಬಾರಿ ಬೆಳಗ್ಗೆ ಉಪ್ಪಿಟ್ಟಿಗೆ ರವೆ ಹುರಿಯುವಾಗ ಕರಿಬೇವಿನ ಸೊಪ್ಪು ತರಿಸಲು ಕಳಿಸಿದ್ದಿದೆ. ಅದನ್ನು ತೆಗೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ “ಹಾಗೆಯೇ ಮೆಣಸಿನಕಾಯಿ ತಾ’ ಎಂದು ವಾಪಸು ಕಳಿಸಿದ್ದಿದೆ. ವಿಚಿತ್ರವಾದ ಜನ ಬಿಡಿ ನೀವು ಎಂದುಕೊಂಡು ಎಲ್ಲ ಗೆಳೆಯರು ಸಹಕರಿಸಿದ್ದರು, ನಿಜಕ್ಕೂ ಅದನ್ನು ನೆನೆಸಿಕೊಂಡರೆ ತಮಾಷೆ ಎನಿಸುತ್ತದೆ. 

ಇಷ್ಟೆಲ್ಲಾ ಆದ ಮೇಲೆ ಕೆಲ ತಿಂಡಿ ಕೆಲವರಿಗೆ ಹಿಡಿಸುತ್ತಿರಲಿಲ್ಲ, ಅಂದರೆ ಒಬ್ಬರಿಗೆ ವಾಂಗೀಭಾತ್ ಬೇಡ ಎಂದಾದರೆ, ಇನ್ನು ಕೆಲವರಿಗೆ ಪೊಂಗಲ್ ಎಂದರೆ ದೂರ. ನಾವು ಬಹುಮತದ ಸರಕಾರದ ಆಡಳಿತ ನಡೆಸುತ್ತಿದ್ದೆವು. ಅಂದರೆ, ಐದು ಮಂದಿಗೆ ವಾಂಗೀಭಾತು ಆಗುವುದಾದರೆ, ಮತ್ತೊಬ್ಬ ಸಹಿಸಬೇಕು !