ಎವರೆಸ್ಟ್ ಅನುಭವ

ಕಂಡ ಕನಸು ಕಪ್ಪು ಬಿಳುಪು ; ನನಸಾದಾಗ ವರ್ಣ ರಂಜಿತ !

2005 ರ ಜೂನ್ 3 ರಂದು ಕರ್ನಾಟಕದ ಇತಿಹಾಸದಲ್ಲಿ ಮರೆಯಲಾಗದ ದಿನ. ಪೊಲೀಸ್ ಅಧಿಕಾರಿ ಪಿ.ಎನ್. ಗಣೇಶ್ ಎಂಬವರು ಮೌಂಟ್ ಎವರೆಸ್ಟ್ ಅನ್ನು ಯಶಸ್ವಿಯಾಗಿ ಏರಿದ್ದರು. ಎವರೆಸ್ಟ್ ನ್ಯೂಸ್ ನೀಡುವ ಮಾಹಿತಿ ಪ್ರಕಾರ  ಅತ್ಯುನ್ನತ ಶಿಖರವೇರಿದ ಎರಡನೇ ದಕ್ಷಿಣ ಭಾರತೀಯ ಗಣೇಶ್. 

ಪಾಠದಲ್ಲಿ ಓದಿದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಎಂಬ ಅಂಶ ಓದಿದ್ದಾಗಲೇ ಪುಳಕವುಂಟಾಗಿತ್ತು. ಜತೆಗೆ ತೇನ್ ಸಿಂಗ್, ಎಡ್ಮಂಡ್ ಹಿಲರಿ…ಸಾಹಸಿಗರ ಕಥೆ ಕೇಳಿದ್ದೆ. ಅದೇ ಎವರೆಸ್ಟ್ ಹತ್ತಿ ಬಂದ ಕನ್ನಡಿಗನ ಸಂದರ್ಶಿಸಿ ವಿಜಯ ಕರ್ನಾಟಕಕ್ಕೆ ಒಂದಿಷ್ಟು ದಿನಗಳ ಕಾಲ ಬರೆಯುವ   ಅವಕಾಶ ಸಿಕ್ಕಿತ್ತು.  ಈಗ ಮತ್ತೆ ಗಣೇಶ್ ಮತ್ತೊಮ್ಮೆ ಎವರೆಸ್ಟ್ ಹಾಗೂ ಅದರ ಕೆಳಗಿನ ಮತ್ತೊಂದು ಪರ್ವತವನ್ನು ಒಂದೇ ಸರಿ ಹತ್ತಲು ಸಿದ್ಧತೆ ನಡೆಸಿದ್ದಾರೆ. ಹೀಗೆ ಹತ್ತುವುದೂ ದಾಖಲೆಯಂತೆ. 

ಅಂದ ಹಾಗೆ ಆಗ ಬರೆದ ಅವರ ಅನುಭವಗಳನ್ನು ನನ್ನ ಬ್ಲಾಗ್ ನಲ್ಲಿ ಹಾಕುತ್ತಿದ್ದೇನೆ. ಓದಿ ಅಭಿಪ್ರಾಯ ತಿಳಿಸಿ. 

*

ಕಂಡ ಕನಸು ಕಪ್ಪು ಬಿಳುಪು ; ನನಸಾದಾಗ ವರ್ಣ ರಂಜಿತ !

“ನಾನು ಎವರೆಸ್ಟ್ ಏರುವ ಕನಸು ಕಂಡಿರಲಿಲ್ಲ ನಿಜ. ಆದರೆ ಎವರೆಸ್ಟ್ ತಪ್ಪಲಲ್ಲಿ ಒಂದಷ್ಟು ಹೊತ್ತು ಕಳೆಯಬೇಕೆಂದು ಕೊಂಡಿದ್ದೆ. ಅದು ಸಾಧ್ಯವೇ ಎಂಬ ಶಂಕೆಯ ತಳದಲ್ಲೇ ಪ್ರಯತ್ನ ಪಟ್ಟರೆ ಸಾಧ್ಯವೆಂಬ ವಿಶ್ವಾಸ ಮೂಡಿತ್ತು. ಕೊನೆಗೂ ತುದಿಯನ್ನು ಮುಟ್ಟಿ ಬಂದೆ. ಜೀವನದ ಸಾರ್ಥಕ್ಯದ ಘಳಿಗೆ ಆ ಎಂಟರಿಂದ ಹನ್ನೆರಡು ನಿಮಿಷ’.

pnganesh

  ಅಷ್ಟೂ ನಿಮಿಷ ಚಾಚಿಕೊಂಡ ಮೋಡಗಳನ್ನು ನೋಡುತ್ತಾ ನಿಂತುಬಿಟ್ಟೆ. ಸ್ವರ್ಗ      ಎನಿಸಿತು. ಭೂಮಿಯ ಅತ್ಯಂತ ಎತ್ತರದ ಜಾಗದಲ್ಲಿ ನಿಂತುಕೊಂಡಿದ್ದೆ. ಹೃದಯ    ತುಂಬಿ ಬಂದಿತ್ತು. ಸುತ್ತಲಿನ ಗಾಳಿಯ ದನಿ ಶ್ರುತಿಯಂತೆ ಕೇಳುತ್ತಿತ್ತು.    ಸಂತೋಷದಿಂದ ಉಬ್ಬಿ ಹೋಗಿದ್ದೆ. ಎವರೆಸ್ಟ್ ಏರಿದ ಸಂಭ್ರಮ  ಹಂಚಿಕೊಳ್ಳೋಣವೆಂದರೆ ಸುತ್ತಲೂ ಯಾರೂ ಇಲ್ಲ, ಒಬ್ಬಂಟಿ’.

 ಬೆಂಗಳೂರಿನ ಕಾಟನ್‌ಪೇಟೆಯ ಬಳಿಯ ರಾಮಕೃಷ್ಣ ಸ್ವತಂತ್ರಾನಂದ ವಿದ್ಯಾ ಸಂಸ್ಥೆಯಲ್ಲಿ ಓದಿದವ. ಎಂಟನೇ ತರಗತಿಯಲ್ಲೆ ಬೆಟ್ಟ ಹತ್ತುವ ಹುಚ್ಚು ಹಿಡಿದಿತ್ತು. ಎಷ್ಟೆಂದರೆ ಕ್ಲಾಸಿಗೂ ಚಕ್ಕರ್ ಹೊಡೆದು ಬೆಟ್ಟ ಹತ್ತಲು ಹೋಗುತ್ತಿದ್ದೆ. ಒಬ್ಬ ಒಳ್ಳೆ ಗೆಳೆಯನಿದ್ದ. ಅವನ ಊರು ರಾಮನಗರ. ನಾನು ಮೊದಲು ಹತ್ತಿದ ಊರಿನ ಎವರೆಸ್ಟ್ ಎಂದರೆ ರಾಮನಗರ ಬೆಟ್ಟ.

ಬಹುಶಃ ಆ ಹುಚ್ಚು ನನ್ನನ್ನು ಆವರಿಸಿಕೊಳ್ಳದಿದ್ದರೆ ಇಂದು ಎವರೆಸ್ಟ್ ಏರುತ್ತಿರಲಿಲ್ಲ. ಮೊದಲಿಂದಲೂ ಬಿಲ್ಟಿಂಗ್ ಹತ್ತುವುದು, ಯಾರಾದರೂ ಜೋರು ಮಾಡಿದರೆ ಅಲ್ಲಿಂದಲೇ ಕೆಳಗೆ ಹಾರುವುದು, ಉಳುಕಿದ ಜಾಗಕ್ಕೆ ಕಾಯಂಗಡಿ ಪಾಪಣ್ಣನ ಬಳಿ ಒಂದು ರೂ. ನೀಡಿ ಔಷಧಿ ತಿಕ್ಕಿಸಿಕೊಳ್ಳುವುದು, ಅಪ್ಪನಿಂದ ಬೈಯಿಸಿಕೊಳ್ಳುವುದೂ ಎಲ್ಲವೂ ಸಾಮಾನ್ಯವಾಗಿತ್ತು. ಹತ್ತುವುದೆಂದರೆ ಅಂದಿನಿಂದಲೂ ಸಂಭ್ರಮವೇ. ಈಗ ದೊಡ್ಡದ್ದನ್ನು ಹತ್ತಿ ಬಂದಿದ್ದೇನೆ ಎಂಬುದು ಸಂಭ್ರಮವನ್ನು ಇಮ್ಮಡಿಸಿದೆ. ಈಗ ಒಂದು ಸಾರ್ಥಕ ಭಾವ ನನ್ನನ್ನು ತುಂಬಿದೆ. 

ನನ್ನ ಹೆಂಡತಿ, ಕುಟುಂಬ ಎಲ್ಲವೂ “ಇದೊಂದು ಬಾರಿ ಹೋಗಿ ಬಾ’ ಎಂದು ಹರಸಿ ಕಳಿಸಿತ್ತು. ಆರ್ಥಿಕ ಸಂಕಷ್ಟವನ್ನು ಹಲವು ಗೆಳೆಯರು ನೀಗಿಸಲು ಹೊಣೆ ಹೊತ್ತಿದ್ದರು. ಇದ್ದದ್ದು ನನಗೊಂದೇ- ಬೆಟ್ಟ ಏರುವ ಕಷ್ಟ. ಎಂದೋ ಅದನ್ನು ಹೊತ್ತುಕೊಂಡದ್ದರಿಂದ ಅಷ್ಟೊಂದು ಭಾರವೆನಿಸಲಿಲ್ಲ. ಒಂದುವೇಳೆ ಈ ಬಾರಿ ನಾನು ಯಶಸ್ವಿಯಾಗದಿದ್ದರೆ ಮತ್ತೆ ನನ್ನವರು ಕಳುಹಿಸುವುದು ಕಷ್ಟವಿತ್ತು. ಅದಕ್ಕೇ ಇರಬೇಕು-ಸಾಗರ್‌ಮಾತಾ (ಎವರೆಸ್ಟ್) ನನ್ನನ್ನು ಬಿಗಿದಪ್ಪಿಕೊಂಡಳು, ಹರಸಿದಳು, ಆಶೀರ್ವದಿಸಿದಳು’. 

1995 ರಲ್ಲಿ ನನ್ನ ಶೆರ್ಫಾ ಹೇಳಿದ ಮಾತು ಸತ್ಯವೆನಿಸುತ್ತಿದೆ. ಆಗಲೂ ಹೀಗೆಯೇ ಕಷ್ಟಪಟ್ಟು ಪರ್ವತ ಹತ್ತಿದ್ದೆ. ಎಲ್ಲ ಸರಿಯಾಗಿತ್ತು. ಅದಕ್ಕೆ ತಗುಲುವ ೧೫ ಲಕ್ಷ ರೂ. ಭರಿಸಲು ಎರಡು ನಿವೇಶನಗಳನ್ನು ಮಾರಿ ದುಡ್ಡು ಹೊಂದಿಸಿದ್ದೆ. ನನ್ನ ಪತ್ನಿ ಸುಮಂಗಲಾ ಮೌನದಿಂದಲೇ ಎಲ್ಲವನ್ನೂ ಸಹಿಸಿಕೊಂಡಿದ್ದಳು. ಅವಳೊಂದಿಗೆ ಮದುವೆಯಾಗುವ ಮುನ್ನ ಕೇಳಿಕೊಂಡಿದ್ದು ಇದೊಂದನ್ನೇ “ಎವರೆಸ್ಟ್ ಏರಲು ಅವಕಾಶ ಕೊಡಬೇಕು’. “ಒಂದೇ ಬಾರಿ’ ಎಂದಿದ್ದಳು. ಎರಡು ಬಾರಿ ಅವಕಾಶ ಕೊಟ್ಟಳು. ಒಮ್ಮೆ ತುದಿಯನ್ನು ಮುಟ್ಟಿ ಬಂದೆ.

ಆ ಬಾರಿ ಅದೃಷ್ಟ ನನ್ನಲ್ಲಿರಲಿಲ್ಲ, ಬರಿ ಶ್ರಮವಿತ್ತು. ಇದ್ದದ್ದನ್ನೆಲ್ಲಾ ಪಣವಿಟ್ಟಂತೆ ತೊಡಗಿಸಿದೆ. ಆದರೂ ೮, ೪೦೦ ಮೀಟರ್ ಹತ್ತಿದೆ. ಇನ್ನೂ ಬರಿ ೪೮ ಮೀಟರ್ ಉಳಿದಿತ್ತು. ಅಷ್ಟೊಂದು ಅಲ್ಪ ದೂರ (೮, ೪೦೦ ಕ್ಕೆ ಹೋಲಿಸಿದರೆ)ಹತ್ತಿ ಬಿಡುವ ಉತ್ಸಾಹವೂ ಇತ್ತು. ಶೆರ್ಫಾನೂ ಮೊದಲು ಸಹಕರಿಸಿದ್ದ. ಆದರೆ ಹವಾಮಾನ ಪ್ರತಿಕೂಲವಾಗಿತ್ತು. ಮೇಲೆ ಹತ್ತಲು ಸಹಕರಿಸುತ್ತಿರಲಿಲ್ಲ. ಅಲ್ಲದೇ ಲ್ಯಾಡರ್ (ಏಣಿ) ಯೂ ಕಣ್ಮರೆಯಾಗಿತ್ತು. ಏನು ಮಾಡುವುದೋ ತೋಚುತ್ತಿರಲಿಲ್ಲ. ವಾಪಸು ಹೋಗಿ ಮತ್ತೊಮ್ಮೆ ಬರೋಣವೆಂದರೆ ಹಣ ಹೊಂದಿಸುವುದು ದುಸ್ತರವೆನಿಸುತ್ತಿತ್ತು. 

ಅಷ್ಟೇ ಅಲ್ಲ. ದೇವರ ಗುಡಿಗೆ ಬಂದು ದೇವರನ್ನು ದರ್ಶನ ಮಾಡಲಿಲ್ಲವಲ್ಲಾ ಎಂಬ ಕೊರಗು ಕೊರೆಯಲಾರಂಭಿಸಿತು. ಆದರೂ ಹುಚ್ಚು ಧೈರ್ಯದಿಂದ ಮತ್ತೊಂದು ಹೆಜ್ಜೆ ಮುಂದಿಟ್ಟೆ. ಆದರೆ ಶೆರ್ಫಾ ಒಂದೇ ಮಾತು ಹೇಳಿದ “ಭಾಯೀ, ಊಪರ್ ಮತ್ ಜಾನಾ. ಜಬ್ ಸಾಗರ್‌ಮಾತಾ ಬುಲಾತಾ ಹೈ, ತಬೀ ಜಾನೇ ಕಾ, ತುಮ್ಹಾರಾ ಜಿಂದಗಿ ಮೇ ಸಾಗರ್‌ಮಾತಾಕಾ ದರ್ಶನ್ ಭಾಗ್ಯ ರಹತೇತೋ ಹೋಗಾ’ ಎಂದ. (ಸಶೇಷ)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s