ನಿಜವಾಗಲೂ ಹೆಮ್ಮೆ ಪಡಬೇಕು. ಕನ್ನಡ ಚಿತ್ರರಂಗದಲ್ಲಿ ಇದುವರೆಗೆ ಆಗದೇ ಇರುವ ಸಾಧನೆಯೊಂದು ಸಾಧ್ಯವಾಗಿಸುವುದೇ ನಿಜವಾದ ಸ್ಮರಣೀಯ ಸಂಭ್ರಮದ ಆಚರಣೆ. 

‘ಮಠ’ ದಂಥ ಭಿನ್ನ ನೆಲೆಯ ಅಂದರೆ ವಾಣಿಜ್ಯ ದೃಷ್ಟಿಯ ಪ್ರಯೋಗಾತ್ಮಕ ಚಿತ್ರ ಕೊಟ್ಟವರು ಇದ್ದಕ್ಕಿದ್ದಂತೆ ಅನಿಮೇಷನ್ ಕಡೆ ಮುಖ ಮಾಡಿದ್ದು ಏಕೆ ಎಂದು ಗುರುಪ್ರಸಾದ್ ಅವರಿಗೆ ಪ್ರಶ್ನೆ ಕೇಳಿದೆ. 

guru1

ಸುಮ್ಮನೆ ಎಂದು ಹೇಳಲು ಹೊರಟಿದ್ದರೇನೋ ? ‘ನನಗನ್ನಿಸಿದ್ದು ಇದು. 75 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಆಗದ್ದನ್ನು ಏನಾದರೂ ಮಾಡೋಣ ಅಂತ ಅನ್ಕೊಂಡೆ.  ಏನೋ ಮಾಡಬೇಕು ಎಂದು ದುಡ್ಡು ಕಳೆದುಕೊಳ್ಳೋ ಮನಃಸ್ಥಿತಿ ನನ್ನದಲ್ಲ. ಅದಕ್ಕೆ ಅನಿಮೇಷನ್ ಕಡೆ ಕಣ್ಣು ಹೊರಳಿತು. ಇವತ್ತು ಅನಿಮೇಷನ್ ಪ್ರಪಂಚದಲ್ಲಿ ಬಹಳಷ್ಟು ಪ್ರಯೋಗಗಳಾಗಿವೆ. ಆದರೆ ಕನ್ನಡ ಕಂಪಿನ ಒಂದೂ ಚಿತ್ರ ಬಿಡುಗಡೆಯಾಗಿಲ್ಲ’ ಎಂದು ತಮ್ಮ ಸಕಾರಣ ತಿಳಿಸಿದರು.

ಗುರುಪ್ರಸಾದ್ ಪ್ರತಿಭಾವಂತ ನಿರ್ದೇಶಕರು. ನಟ ಜಗ್ಗೇಶ್ ಅವರನ್ನು ನಾಯಕನಟನಾಗಿ ಬಳಸಿಕೊಂಡು ನಿರ್ದೇಶಿಸಿದ ‘ಮಠ’ ಚಿತ್ರ ಹೆಸರನ್ನೂ ತಂದುಕೊಟ್ಟಿದೆ, ಅವಕಾಶವನ್ನೂ ತಂದುಕೊಟ್ಟಿದೆ. ಈಗ ಅನಿಮೇಷನ್ ಚಿತ್ರಕ್ಕೆ ಕೈ ಹಾಕಿರುವುದೇನು ? ಎಲ್ಲವೂ ಮುಗಿದು ಸೆನ್ಸಾರ್ ಮುಗಿದಿದೆ. 

ಏ. 16 ಚಾರ್ಲಿ ಚಾಪ್ಲಿನ್ ಜನ್ಮದಿನ. ಜಗತ್ತಿನ ಚಿತ್ರರಂಗ ಕಂಡ ಒಬ್ಬ ಅದ್ಭುತ ನಟ. ಅವನ ಹೆಸರನ್ನು ತಮಗೆ ಬೇಕಾದಂತೆ ಬಳಸಿಕೊಳ್ಳಲು ಯತ್ನಿಸಿ ವಿವಾದಕ್ಕೀಡಾದ ಪ್ರಸಂಗ ಮೊನ್ನೆ ಮೊನ್ನೆ ಮುಗಿದಿರುವಾಗ ಈ ಬಾರಿಯ ಚಾರ್‍ಲಿ ಚಾಪ್ಲಿನ್ ಜನ್ಮದಿನವನ್ನು ಕನ್ನಡ ಚಿತ್ರರಂಗ ಸಂಭ್ರಮದಿಂದ ಆಚರಿಸಬಹುದಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಚಿತ್ರ ಬಿಡುಗಡೆ ಲೆಕ್ಕಾಚಾರ ಮೇ ತಿಂಗಳಿಗೆ ಮುಂದೂಡಲಾಗಿದೆ.ಒಟ್ಟೂ ಈ ಅನಿಮೇಷನ್ ಚಿತ್ರ ಬಿಡುಗಡೆಯಾಗುವ ದಿನ ಕನ್ನಡ ಚಿತ್ರರಂಗದ ಮಹತ್ವದ ಮೈಲಿಗಲ್ಲಿನ ದಿನ. ಇದುವರೆಗೆ ಇಲ್ಲದ ಮತ್ತೊಂದು ಸಾಧನೆ ಸಾಧ್ಯವಾಗುವ ದಿನ. ಅಂದರೆ ಅನಿಮೇಷನ್ ಚಿತ್ರ ಜಗತ್ತಿನಲ್ಲಿ ಕನ್ನಡ ಪಾದಾರ್ಪಣೆ ಇಡುವ ದಿನ.

ಇದುವರೆಗೆ ಪೂರ್ಣ ಪ್ರಮಾಣದ ಚಿತ್ರ ಬಂದಿಲ್ಲ. ಸಾಮಾನ್ಯವಾಗಿ ಜನರಲ್ಲಿ ಅನಿಮೇಷನ್ ಎಂದರೆ ಕಾರ್ಟೂನ್ ಎಂಬ ಕಲ್ಪನೆಯಿದೆ. ಡೊನಾಲ್ಡ್, ಮಿಕ್ಕಿ ಇತ್ಯಾದಿ. ಆದರೆ ಗುರುಪ್ರಸಾದ್ ನಿರ್ದೇಶಿಸುತ್ತಿರುವ ‘ಇದು ಬೊಂಬೆಯಾಟವಯ್ಯಾ’ ಚಿತ್ರ ಕಾರ್ಟೂನ್‌ನಂತಲ್ಲ. ವಾಸ್ತವ ಜಗತ್ತಿನ ಪಾತ್ರಗಳನ್ನೇ ಆಧರಿಸಿ ರೂಪಿಸಿದ್ದು. ಅಲ್ಲಿರುವ ಪಾತ್ರಗಳಿಗೆ ಹಲವರು ‘ರೂಪದರ್ಶಿ’ ಗಳಿದ್ದಾರೆ.  ಪಾಪ ಪಾಂಡು ಖ್ಯಾತಿಯ ಜಹಂಗೀರ್ ಸಹ ಇಲ್ಲಿ ಒಂದು ಪಾತ್ರ. ಅಷ್ಟೇ ಏಕೆ ? ತಿಕ್ಕಲ ರಾಜನ ಪಾತ್ರದಲ್ಲಿ ಸ್ವತಃ ನಿರ್ದೇಶಕರೇ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ಪಾತ್ರದಲ್ಲಿ ಹಿರಿಯ ನಟ ರತ್ನಾಕರ್ ಸಹ ಇದ್ದಾರೆ. 

ಗುರುಪ್ರಸಾದ್ ಕಣ್ಣಿಟ್ಟಿರುವ ಮಾರುಕಟ್ಟೆ ಬಹಳ ದೊಡ್ಡದೇ. ಹಿರಿತೆರೆಗಳ ಮಾರುಕಟ್ಟೆ ಅಂದಾಜು ಮಾಡಿದರೆ ಸುಮಾರು 300 ಬಿಲಿಯನ್ ಕೋಟಿ ರೂ. ಗಳದ್ದು. ಉದಾಹರಣೆಗೆ ಕಿರುತೆರೆಯನ್ನೇ ಗಮನಿಸಿದರೂ ಇದರ ಸಾಧ್ಯತೆ ಅರಿವಾಗಬಲ್ಲದು. ಉದಾಹರಣೆಗೆ ಮಕ್ಕಳೇ ನಿರ್ಧರಿಸುವ ಉತ್ಪನ್ನಗಳ ರಾಯಭಾರಿಗಳೆಲ್ಲಾ ಅನಿಮೇಷನ್ ಪಾತ್ರ (ಕ್ಯಾರಕ್ಟರ್)ಗಳೇ.

‘ಘಟೋತ್ಕಚ’ ಎಂಬ ಚಿತ್ರ ತೆಲುಗು-ತಮಿಳಿನಿಂದ ಡಬ್ಬಿಂಗ್ ಮಾಡಲಾಗಿದ್ದರೂ ಅದು ಸಂಪೂರ್ಣ ಕನ್ನಡ ಚಿತ್ರವಲ್ಲ. ಆ ಸಂಗತಿಯಲ್ಲಿ ನಿಜಕ್ಕೂ ಇದು ಮೈಲಿಗಲ್ಲೇ. ‘ಇದು ಬೊಂಬೆಯಾಟವಯ್ಯಾ’ ಹೆಸರಿಟ್ಟಿರುವುದೂ ಸ್ಪಷ್ಟ ಉದ್ದೇಶದಿಂದಲೇ. ಎ.ಎನ್. ಪ್ರಕಾಶ್ ಅವರ ‘ಬಂದ ಕೋಡಂಗಿ’ ನಾಟಕವನ್ನು ಸಿನಿಮಾಕಥೆಗೆ ಪುನರ್ ರೂಪಿಸಿಕೊಳ್ಳಲಾಗಿದೆ. ಅನಿಮೇಷನ್ ಪಾತ್ರಗಳು ಒಂದು ರೀತಿಯಲ್ಲಿ ಬೊಂಬೆಗಳಂತೆ. ಹಾಗಾಗಿ ಇದಕ್ಕೆ ಈ ಹೆಸರು. 

animation

ಗುರುಪ್ರಸಾದ್ ಅವರು ತಮ್ಮ ಲೆಕ್ಕಾಚಾರಗಳನ್ನು ವಿವರಿಸುವಂತೆ ಈ ಚಿತ್ರ ಒಂದು ಕೋಟಿ ರೂ. ವೆಚ್ಚದ್ದು. ಭಗವತಿ ಕ್ರಿಯೇಷನ್ಸ್ ರೂಪಿಸುತ್ತಿರುವ ಚಿತ್ರದ ಎಲ್ಲ ನಿರ್ಮಾಣಗೊಂಡಿರುವುದು ಮೈಸೂರಿನಲ್ಲಿ. ವಾಸ್ತವವಾಗಿ ಕನ್ನಡ ಚಿತ್ರರಂಗದ ಮೂಲವೂ ಮೈಸೂರೇ. ಈಗ ಹೊಸ ಸಾಧನೆಯ ಶಾಸನ ಬರೆಯುತ್ತಿರುವುದೂ ಇಲ್ಲಿಯೇ. 

ರಂಗ ಕಲಾವಿದ ಅಬ್ದುಲ್ ಕರೀಂ, ಭದ್ರಾವತಿಯ ಶ್ರೀಹರಿ ಗೌತಂ, ಕಲಾವಿದ ಪುರಂದರ್- ಈ ಮೂರು ಮಂದಿ ಸೇರಿ ರಚಿಸಿಕೊಂಡಿದ್ದು ಎಪಿಎಸ್ ಅನಿಮೇಷನ್ಸ್. ಗುರುಪ್ರಸಾದರ ಹೂರಣವನ್ನೆಲ್ಲಾ ತೆರೆಯ ಮೇಲೆ ಜೀವ ತುಂಬುತ್ತಿರುವುದು ಇದೇ ಎಪಿಎಸ್ ತಂಡ. ಸುಮಾರು 60 ಪಾತ್ರಗಳಿರುವ ಚಿತ್ರಕ್ಕೆ 4.5 ಲಕ್ಷದಷ್ಟು ಚಿತ್ರ ಬರೆದು ಜೀವ-ಭಾವ ತುಂಬಲಾಗಿದೆ. ಇದು ಸಂಪೂರ್ಣವಾಗಿ ಕನ್ನಡಿಗರೇ ರೂಪಿಸಿದ 110 ನಿಮಿಷದ ೨ಡಿ ಅನಿಮೇಷನ್ ಚಿತ್ರ. ತಂತ್ರಜ್ಞಾನದಿಂದ ಹಿಡಿದು ಪಾತ್ರದವರೆಗೂ ಎಲ್ಲವೂ ಕನ್ನಡಿಗರದ್ದೇ. ಚಿತ್ರ ನಿರ್ಮಾಣದ ಶೇ. 90 ರಷ್ಟು ಕೆಲಸ ಮುಗಿದಿರುವುದೂ ಮೈಸೂರಿನಲ್ಲಿ. ಧ್ವನಿ ಮುದ್ರಣ ಮಾತ್ರ ಬೆಂಗಳೂರಿನಲ್ಲಿ. 

ಅಂದ ಹಾಗೆ ಏ.16 ರಂದು ಬೆಂಗಳೂರಿನ 9 ಚಿತ್ರಮಂದಿರಗಳಲ್ಲಿ ಮೊದಲು ಬಿಡುಗಡೆ. ನಂತರ ಉಳಿದ ಊರುಗಳಿಗೆ. ಲೆಕ್ಕಾಚಾರ ಬಹಳ ದೊಡ್ಡದಿದೆ. ಸಾಗುವ ಹಾದಿಯೂ ದೊಡ್ಡದು. ಆದರೆ ಇಡುವ ಹೆಜ್ಜೆಯೂ ದೊಡ್ಡದೆಂಬುದೇ ಸಂಭ್ರಮಕ್ಕೆ ಕಾರಣ.

ಇನ್ನು ಹಾಕಿದ್ದು-ಪಡೆದದ್ದು ಎಂಬ ಲೆಕ್ಕಾಚಾರಕ್ಕೆ ಬಂದರೆ ಉತ್ಸಾಹ ಕುಂದಿಸುವಂಥದ್ದೇನೂ ಇಲ್ಲ. ಹಾಕಿದ ದುಡ್ಡು ಮರಳಿ ಪಡೆಯುವುದರಲ್ಲಿ ಅವರಿಗೆ ಸಂದೇಹವಿಲ್ಲ. ಇವರ ಗಣಿತ ಸರಿಯಾದರೆ ಈ ಚಿತ್ರ ಎಲ್ಲ ಭಾಷೆಗಳಿಗೂ ಡಬ್ಬಿಂಗ್ ಆಗಲಿದೆ. ಇಂಗ್ಲಿಷ್‌ಗೂ ಕಳಿಸುವ ಇರಾದೆ ಇದೆ. ಕಾರಣ, ಅನಿಮೇಷನ್ ಚಿತ್ರಕ್ಕೆ ಭಾಷೆಯ ಹಂಗಿಲ್ಲ. ಅದೆಲ್ಲವೂ ಸಾಧ್ಯವಾದರೆ ಹಾಕಿದ ದುಡ್ಡು ವಾಪಸ್ ಬಂದಂತೆ. 

ಮೊದಲೇ ಹೇಳಿದಂತೆ ದುಡ್ಡು ಹಾಕಿ ಕಳೆದುಕೊಳ್ಳುವ ಜಾಯಮಾನ ಗುರುಪ್ರಸಾದರದ್ದಲ್ಲ. ಕಾರಣ ಅವರ ಜೀವನದ ಅನುಭವದ ಪದರಗಳಲ್ಲಿ ಮಾರ್ಕೆಟಿಂಗ್ ಸಹ ಒಂದು ಪದರ. ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿದ್ದವರು ಗುರುಪ್ರಸಾದ್. ಅಂದರೆ ಉತ್ಪನ್ನಗಳನ್ನು ಕೊಂಡೊಯ್ದು ಅದರ ಅಭಿರುಚಿಯೇ ಇರದ ಮಂದಿಗೂ ಆಸಕ್ತಿ ಹುಟ್ಟಿಸಿ ಮಾರಿಕೊಂಡು ಬರುವ ಜಾಯಮಾನದವರು. ಹಾಗಾಗಿ ತಮ್ಮ  ಉತ್ಪನ್ನಕ್ಕೆ ಮಾರುಕಟ್ಟೆಯ ಆಯಾಮಗಳನ್ನು ಹುಡುಕಿಕೊಂಡೇ ಹೆಜ್ಜೆ ಇಟ್ಟಿದ್ದಾರೆ. 

‘ನಾವು ಭಿಕ್ಷೆ ಬೇಡಬಾರದು. ಇಂಥ ಕಚ್ಚಾವಸ್ತು ಹಾಕಿ ಇಂಥದೇ ಉತ್ಪನ್ನವನ್ನೇ ರೂಪಿಸಿ ಕೊಡ್ತೇವೆ ಎನ್ನುವ ಆತ್ಮವಿಶ್ವಾಶ, ಖಚಿತತೆ ನಮ್ಮಲ್ಲಿ ಇರಬೇಕು. ಆ ಭರವಸೆ-ಸ್ಪಷ್ಟತೆ ಕೊಟ್ಟರೆ ಜನ ನಮ್ಮ ಉತ್ಪನ್ನಗಳನ್ನು ಸ್ವೀಕರಿಸುತ್ತಾರೆ. ಅದರಲ್ಲಿ ಎರಡು ಮಾತಿಲ್ಲ. ‘ಮಠ’ ವನ್ನು ಪ್ರಯೋಗಾತ್ಮಕವಾಗಿ ಮಾಡಿ ಯಶಸ್ವಿಯಾಗಿದ್ದೇ ನನ್ನ ಅಂಥ ವಿಶ್ವಾಸವನ್ನು ಖಚಿತಪಡಿಸಿದೆ’ ಎನ್ನುತ್ತಾರೆ ಗುರು.

ಪ್ರಸ್ತುತ ಕನ್ನಡದಲ್ಲಿ ವಾರ್ಷಿಕ ಸರಿಸುಮಾರು ೧೫೦ ಚಿತ್ರಗಳು ತಯಾರಾಗುತ್ತಿವೆ. ಅದರಲ್ಲಿ ಒಳ್ಳೆಯ ಪ್ರಯತ್ನ ಎನಿಸುವುದು ಮತ್ತು ಯಶಸ್ವಿಯಾಗುತ್ತಿರುವುದು ಶೇ. ೩ ರಷ್ಟು ಮಾತ್ರ. ಹಿಂದಿಯಲ್ಲಿ ಕೊಂಚ ಪರವಾಗಿಲ್ಲ ಸ್ಥಿತಿ. ಹಾಲಿವುಡ್‌ನಲ್ಲೂ ಪರಿಸ್ಥಿತಿ ಇದರ ಹತ್ತಿರವೇ ಇದೆಯಂತೆ. ಈ ಮಧ್ಯೆ ಇಂಗ್ಲಿಷ್‌ಗೆ ಹೋಗಬೇಕೆನ್ನುವ ಆಸೆಯೂ ಗುರುವಿಗಿದೆ.

ಹೊಸ ಯುವ ತಲೆಮಾರನ್ನು ಕೇಂದ್ರೀಕರಿಸುತ್ತಿರುವ ಗುರುಪ್ರಸಾದ್ ಅವರಿಗೆ ಆ ಮಂದಿ ಸಿಕ್ಕರೆ ಸಾಕಂತೆ. ಅವರಿಗೆ ಇಂಥದೊಂದು ಒಳ್ಳೆ ಚಿತ್ರ ಇದೆ ಎನಿಸಿದರೆ ನೋಡಬಲ್ಲರು. ಅಂಥದೊಂದು ಗುಂಪನ್ನು ತನ್ನ ಪರವಾಗಿ ಮಾಡಿಕೊಳ್ಳಬೇಕೆಂಬ ಅದಮ್ಯ ಆಸೆ. ಅದರತ್ತಲೇ ಪಯಣ. ಹಾದಿಯ ತುಂಬಾ ಕಲ್ಲುಮುಳ್ಳೋ, ಹೂವು-ಹಣ್ಣೋ ಪ್ರೇಕ್ಷಕ ಮಹಾಶಯ ನಿರ್ಧರಿಸಬೇಕು.

ಕೊನೆ ಮಾತೆಂದರೆ ಮಾರ್ಕೆಟಿಂಗ್ ಕ್ಷೇತ್ರದ ಗುರುಪ್ರಸಾದ್‌ಗೆ ಚಿತ್ರ ನಿರ್ದೇಶಕನಾಗಬೇಕೆಂಬ ಕನಸು ಬಹಳ ದಿನಗಳದ್ದು. ‘ಸಿಪಾಯಿರಾಮು’ ಚಿತ್ರ ಬಂದಾಗ ಅಮ್ಮನ ಜತೆಗೆ ಹೋಗಿದ್ದರು. ಚಿತ್ರ ಕಂಡು ಅಮ್ಮ ಗಳಗಳ ಅಳುತ್ತಿದ್ದರಂತೆ. ಆಗ ‘ಅಳುವಿಗೆ ಕಾರಣ ಹಾಗೂ ಅಳಿಸಿದವನ ಹಿನ್ನೆಲೆ’ ಹುಡುಕಿಕೊಂಡು ಹೋದಾಗ ಎಲ್ಲದಕ್ಕೂ ನಿರ್ದೇಶಕನೇ ಹೊಣೆ ಎಂಬುದು ತಿಳಿಯಿತು. ಆಗ ಅಂಥದೊಂದು ಹುಚ್ಚು  ಶುರುವಾಯಿತು. 

ನಂತರ ಒಂದು ಮತ್ತಿನ ಕಥೆ ಶೂಟಿಂಗ್ ಚಿತ್ರವೊಂದನ್ನು ಪತ್ರಿಕೆಯಲ್ಲಿ ನೋಡಿದಾಗ ಅಚ್ಚರಿಯೋ ಅಚ್ಚರಿ. ತಮ್ಮ ಮಾದರಿ ನಟ ಡಾ. ರಾಜಕುಮಾರ್ ಅವರೇ ಲಂಗೋಟಿ ಉಟ್ಟುಕೊಂಡು ಒಬ್ಬ ವ್ಯಕ್ತಿಯ ಎದುರು ಕೈ ಕಟ್ಟಿನಿಂತಿದ್ದರು. ಹಾಗೆ ನಿಲ್ಲಿಸಿಕೊಂಡು ವಿವರಿಸುತ್ತಿದ್ದ ವ್ಯಕ್ತಿ ಶಂಕರನಾಗ್. ಅದನ್ನು ಕಂಡು ನಿರ್ದೇಶಕನ ಶಕ್ತಿಯೂ ಅರಿವಾಗಿ ಸಿನಿಮಾ ಕುರಿತ ಅಧ್ಯಯನಕ್ಕೆ ತೊಡಗಿದರು. ಹೀಗೇ….ಬಂದು ಈಗ ಹೀಗಾಗಿದ್ದಾರೆ. 

ಒಂದು ಸಿನಿಮಾ ಯಶಸ್ಸಿಗೆ ಅದರಲ್ಲಿನ ‘ಡ್ರಾಮಾ’ (ನಾಟಕೀಯ ನೆಲೆ)ಪ್ರೇಕ್ಷಕನನ್ನು ಒಳಗೊಳ್ಳುವ ಅಂಶ, ಸನ್ನಿವೇಶಗಳನ್ನು ನಿರ್ದೇಶಕ ಕಥೆಯನ್ನಿಟ್ಟುಕೊಂಡೇ ಪುನರ್ ರೂಪಿಸಬೇಕು. ಅದನ್ನು ಪುನರ್ ಸೃಷ್ಟಿಸುವ ಸಾಮರ್ಥ್ಯ ಬೇಕೆಬೇಕು. ಅದಿಲ್ಲವಾದರೆ ಸಿನಿಮಾ ಸೋಲುತ್ತದೆ. ಸುಮುಧುರ ದಾಂಪತ್ಯದ ಬಗ್ಗೆ ಹೇಳುವ ‘ಹಾಲುಜೇನು’ ಅಂಥ ಚಿತ್ರ ಮತ್ತೊಂದು ಬಂದಿಲ್ಲ. ಅದರಲ್ಲಿನ ಡ್ರಾಮಾ ಅಂಶಗಳೇ ಜೀವಾಳ. ನಾವೀಗ ಡ್ರಾಮಾದ ಬಗ್ಗೆ ಗಮನ ಕಳೆದುಕೊಂಡಿದ್ದೇವೆ. ಹಾಗಾಗಿ ನಿರ್ಭಾವುಕ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ’ ಎನ್ನುತ್ತಾರೆ.

ಅನಿಮೇಷನ್ ಚಿತ್ರದಲ್ಲಿ ನಿಮಗೆ ಪಾತ್ರಗಳು ಚಿತ್ರಗಳಂತೆ ತೋರಿದರೂ ಅದರೊಳಗೆ ಜೀವ-ಭಾವ ತುಂಬುವಾಗ ‘ಡ್ರಾಮಾ’ ಅಂಶಗಳನ್ನು ತುಂಬುವಲ್ಲಿ ಮರೆತಿಲ್ಲವಂತೆ. 

ಅನಿಮೇಷನ್‌ಗೆ ಮಕ್ಕಳೇ ಪ್ರೇಕ್ಷಕರು. ಅವರನ್ನು ಕೇಂದ್ರೀಕರಿಸಿ ಉತ್ತಮ ಚಿತ್ರ ಅಥವಾ ಕಥೆ ರೂಪಿಸಿದವನಿಗೆ ಮಕ್ಕಳ ಪೋಷಕರು ಬೋನಸ್. ಮಕ್ಕಳನ್ನು ಚಿತ್ರಮಂದಿರಕ್ಕೆ ಪೋಷಕರೇ ಕರೆದೊಯ್ಯಬೇಕು. ಜತೆಗೆ ಸಾಮಾನ್ಯವಾಗಿ ಗೆಳೆಯರ ಗುಂಪು ಇರುವಂಥದ್ದೇ. ಹಾಗಾಗಿ ೨ + ೨ ಎನ್ನೋ ಲೆಕ್ಕಚಾರ ಗ್ಯಾರಂಟಿ. ಅಲ್ಲಿಗೆ ಲಾಭವೇ.

ನಾವೀಗ ಸದ್ಯಕ್ಕೆ ರಾಮಾಯಣ, ಮಹಾಭಾರತದಿಂದ ಹಿಡಿದು ಹಲವು ಮಹಾಕಾವ್ಯಗಳನ್ನು ಹೇಳಲು ಇಂಥ ಅನಿಮೇಷನ್ ಪಾತ್ರಗಳನ್ನು ಬಳಸಲಾಗುತ್ತಿದೆ. ಆದರೆ ಅಜ್ಜ-ಅಜ್ಜಿಯರ ಸಹವಾಸ-ಕಥೆಗಳ ಸಖ್ಯವನ್ನು ಕಳೆದುಕೊಳ್ಳುತ್ತಿರುವ ಮಕ್ಕಳಿಗೆ ಇವು ಒಂದು ರೀತಿಯಲ್ಲಿ ಕಥೆ ಹೇಳಲು ಬಂದಿವೆ. ಸಾಹಸ, ವಿನೋದದಂಥ ರಸಗಳ ಮೂಲಕ ರಂಜಿಸುತ್ತಿರುವ ಅನಿಮೇಷನ್ ವಾಸ್ತವ ನೆಲೆಯ ಪಾತ್ರಗಳಿಗೂ ಒಗ್ಗಿಸುವ ಪ್ರಯತ್ನವಿದು. ಇದು ಸಾಧ್ಯವಾದರೆ ಹೀರೋ ಇಲ್ಲದೇ ಚಿತ್ರ ನಿರ್ಮಿಸುವ ದಿನಗಳು ಬರಬಹುದು. ಇಂಗ್ಲಿಷ್‌ನಲ್ಲಿ ಅದು ಈಗಾಗಲೇ ಬಂದಿದೆ. (ವಿಜಯ ಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟವಾಗಿರುವ ಲೇಖನ)