ನನ್ನ ನಲಿವಿನ ಮರದಲ್ಲಿ ಮತ್ತೊಂದು ಚಿಗುರು. ಅದರ ಹೆಸರು ಯುಗಾದಿ…

ಮತ್ತೆ ಯುಗಾದಿ ಬಂದಿದೆ, ತನ್ನ ಬೊಗಸೆಯಲ್ಲಿ ಒಂದಿಷ್ಟು ಹೊಸತನ್ನು ತಂದಿದೆ. ಹೋದ ವರ್ಷದ ಬ್ಯುಸಿ ಈ ವರ್ಷವೂ ಇದ್ದದ್ದೇ. ಆದರೂ ತುಸು ವಿರಾಮ ಮಾಡಿಕೊಂಡು ಆ ಬೊಗಸೆಯಲ್ಲಿನ ಹೊಸತನ್ನು ಹಂಚಿಕೊಳ್ಳೋಣ. 

ನನಗೆ ಸದಾ ಹೊಸ ವರ್ಷ ಎಂದ ಕೂಡಲೇ ನೆನಪಿಗೆ ಬರುವಂಥದ್ದು, ಕಾಡುವಂಥದ್ದು ಒಂದು ಹಾಡು. ಪಿ. ಕಾಳಿಂಗರಾಯರು ‘ರಾಜಹಂಸ’ ಧ್ವನಿಸುರುಳಿಯಲ್ಲಿ ಈ ಹಾಡು ಕೇಳಿರುತ್ತೀರಿ. ಆದರೂ ಕೇಳದಿದ್ದರೆ ಒಮ್ಮೆ ಕೇಳಿ. ದೂರದಲ್ಲೆಲ್ಲೋ ಕೇಳಿಬರುವಂತೆ ಅನುಭವ ನೀಡುವ ಕಾಳಿಂಗರಾಯರ ಅ ದನಿ ನಿಜಕ್ಕೂ ನಮ್ಮನ್ನು ಸೆಳೆದುಕೊಳ್ಳುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಆ ಪದ್ಯ ಆರ್. ಸಿ. ಭೂಸನೂರುಮಠರದ್ದು. ಅವರ ಇನ್ನೂ ಕೆಲವು ಗೀತೆಗಳು ನನ್ನನ್ನು ಸದಾ ಕಾಡಿವೆ. ಆದರೆ ಈ ಪದ್ಯದೊಳಗಿನ ಸಾಲುಗಳು ಸದಾ ನನ್ನನ್ನು ಕಾಡುವಂಥವು. 

ಹೋದ ವರುಷ ಬಂದ ಹಬ್ಬ

ಹೋದ ವರುಷ ಹೊಳೆದ ಬೆಳಕು

ಮತ್ತೆ ಮರಳಿ ಬಂದಿತಿಂದು

ಮತ್ತೆ ಮರಳಿ ಹೊಳೆಯಿತಿಂದು

 

ಅಂದು ಕಂಡ ಇಳೆಯ ಹಸಿರು

ಅಂದು ಕಂಡ ಬೆಳೆಯ ಉಸಿರು

ಕಣ್ಗೆ  ಮತ್ತೆ ಮುಕ್ತಿ ನೀಡಿ

ಜನ್ಮಕ್ಕೆ ಉಸಿರು ತಂದಿತಿಂದು

 

ಬೆಳಕನಿದನು ಕಾಣಲಿಕ್ಕೆ 

ದೀಪವಿದನು ಹಚ್ಚಲಿಕ್ಕೆ

ಒಂದು ವರುಷ ಕಾಯಬೇಕೇ

ಒಂದು ವರುಷ ಕಳೆಯಬೇಕೇ

 

ಒಮ್ಮೆ ಹೊಳೆದ ದೀಪ ನಂದಿ

ಒಮ್ಮೆ ಕಂಡ ಕಿರಣ ಅಡಗಿ

ಒಮ್ಮೆ ಕಲೆದ ನಲಿವು ತೊಲಗಿ

ಮತ್ತೆ ಬಳಲಿ ಬಾಡಲೇಕೆ?

 

ಮನದ ಇಳೆಯ ಹಸುರಿನಲ್ಲಿ

ಗುಣದ ಬೆಳೆಯ ಸುಳಿಯ ತೆಗೆದು

ಒಳಗೆ ದೀಪ ಹಚ್ಚಿ  ನಲಿದು

ಬೆಳಕಿನೊಳಗೆ ಬೆಳಕ ಕಾಣೆ

ಎಂದಿಗೂ ದೀಪೋತ್ಸವ,

ಎಂದಿಗೂ ದಿವ್ಯೋತ್ಸವ…

ಈ ಸಾಲುಗಳನ್ನು ಕೇಳುತ್ತಿದ್ದರೆ ನಮ್ಮೊಳಗೆ ಇಳಿದು ಒಳ್ಳೆ ಗುಣವಾಗಿ ಅರಳಿ ಸುಳಿಯಂತೆ ಕಂಗೊಳಿಸುತ್ತದೇನೋ ಎನಿಸುತ್ತಿದೆ. ಎಷ್ಟು ಬಾರಿ ಕೇಳಿದರೂ ಬೇಸರ ಎನಿಸುವುದಿಲ್ಲ. ಆ ಸಾಹಿತ್ಯ, ಅದರೊಳಗಿನ ಅರ್ಥ, ಕಾಳಿಂಗರಾಯರ ದನಿ ಕಾಡುವ ಬಗೆಯೇ ಬೇರೆ. ಹೇಗೆ ಒಂದು ವರ್ಷ ಹಳತಾಗಿಯೂ ಮತ್ತೊಂದು ವರ್ಷ ಹೊಸತು ಬಂದಂತೆಯೇ ಈ ಹಾಡೂ ಸಹ. 

ಈ ಯುಗಾದಿ ಎಲ್ಲರಿಗೂ ಒಳ್ಳೆಯದನ್ನು ತುಂಬಿಕೊಡಲಿ. ಬೇವಿರಲಿ, ಬೆಲ್ಲದ ಸವಿಯಲ್ಲಿ ಅದರ ಕಹಿಯನು ಮರೆಯೋಣ. ನಮ್ಮೊಳಗಿನ ಕತ್ತಲೆಗೆ ಹಣತೆಯ ಬೆಳಕಿನಿಂದ ಮೋಕ್ಷ ನೀಡಿ, ನಾವೂ ಬೆಳಗೋಣ-ಬೆಳಗಿಸೋಣ. ಆಗ ಈ ಪದ್ಯದ ಸಾಲೇ ಹೇಳುವಂತೆ ಎಂದಿಗೂ ದೀಪೋತ್ಸವ…ದಿವ್ಯೋತ್ಸವ. (ಈ ಹಾಡಿನ ಸಾಹಿತ್ಯ ಧ್ವನಿಸುರುಳಿಯಿಂದಲೇ ಕೇಳಿ ಬರೆದುಕೊಂಡಿದ್ದು, ಒಂದೆರಡು ಪದ ತಪ್ಪಿರಬಹುದೇನೋ, ಕ್ಷಮಿಸಿ ಬಿಡಿ)