ಶ್ರೀಶ ಉಡುಪ ಮಹಾರಾಜ ಕಾಲೇಜಿನಲ್ಲಿ ಬಿಎ ಪತ್ರಿಕೋದ್ಯಮ ಓದುತ್ತಿದ್ದಾನೆ. ಒಳ್ಳೆಯ ಗೆಳೆಯ. ಹೆಚ್ಚಾಗಿ ಓದುತ್ತಾನೆ, ಒಂದಿಷ್ಟು ಬರೆಯುತ್ತಾನೆ. ಬರೆಯುವುದಕ್ಕಿಂತಲೂ ಓದಲು ತುಸು ಹೆಚ್ಚಿನ ಹುಮ್ಮಸ್ಸು. ಕಾಲೇಜಿನ ಪತ್ರಿಕೆ “ಮಾನಸ”ದಲ್ಲಿ ಬರೆದ ಕವನವಿದು. ನನಗೆ ಇಷ್ಟವಾಗಿದ್ದರಿಂದ ಬ್ಲಾಗ್ ನಲ್ಲಿ ಹಾಕಿದ್ದೇನೆ. ಅಭಿಪ್ರಾಯ ಹೇಳಿ.

ನಿಸೂರಾಗುವುದೆಂದರೆ… 

ರಾಸ್ಕಾಲ್ನಿಕೋಫ್ ಬೈಬಲ್ ಹಿಡಿದು
ತಪ್ಪೊಪ್ಪಿಗೆ
ಮಾಡಿಕೊಂಡ ಹಾಗೆ ಇತ್ತೇ ಆ
ನೆನಪ ತರ್ಪಣ?
ಅಲ್ಲಿ ಕಂಡ ಮುಖ
ಅದೆಷ್ಟು ಹೊಸದಾಗಿತ್ತು ಎಂದರೆ
ನಾನೇ ಅದನ್ನು ಹೊರಗಿನಿಂದ ನೋಡುತ್ತಾ
ಸರಿ-ತಪ್ಪುಗಳ ಜವಾಬ್ದಾರಿಯಿಂದ ಮುಕ್ತವಾಗಿ
ನಿಸೂರಾಗಿದ್ದೆ-
ಅಂತ ಅಂದುಕೊಂಡಿದ್ದೆ
-2-
ನಿವೇದನೆಗಳಲ್ಲಿ ಯಾಕೆ ತಪ್ಪೊಪ್ಪಿಗೆಗಳಾಗುತ್ತವೆ ?
ಅಥವಾ ಎಲ್ಲ
ಎಲ್ಲ ಕಟ್ಟುಗಳಾಚೆ, ವಿಮುಕ್ತ ನೆಲೆಯಲ್ಲಿ
ಮುಗ್ಧತೆಯ ಮೂಸೆಯಲ್ಲಿ ಮೂಡಿಬರುವ
ನಿವೇದನೆಗಳೆಲ್ಲ,
ನೆನಪುಗಳ ಮೆರವಣಿಗೆಯಲ್ಲಿ, ತೂಗುದೀಪವಾದಾಗ
ನೆರಳುಗಳು ಭೂತವಾಗಿ ಬೆಳೆದು ನಿಂತು
ಕನ್‌ಫೆಷನ್ನಿನ ವೇಷ ತೊಡುತ್ತಿವೆಯೇ?
-3-
ನೆರಳುಗಳು !
ಕಾಯವಿಲ್ಲದ ನೆನಪುಗಳಿಗೂ ನೆರಳುಗಳು !
ನಿಧಾನವಾಗಿ ಒಸರುತ್ತ ಸಾಂದ್ರಗೊಳ್ಳುವ ಭಾವನೆಗಳು
ಗರಿಬಿಚ್ಚಿಕೊಳ್ಳುತ್ತಿರುವಾಗ
ಸಾಂದ್ರತೆಯಲ್ಲೇ ನೆರಳ ಶಾಪ ಪಡೆದಿರುತ್ತವೆಯೇ?
-4-
ನಿಸೂರಾಗುವುದೆಂದರೆ
ಎಂದರೆ…ಸಾಂದ್ರಗೊಳ್ಳುವುದಲ್ಲ ;
ಗುರುತ್ವದ ಹಂಗಿಲ್ಲದೆ, ಆವಿಯಾಗುವ ಭೀತಿಯಿಲ್ಲದೇ
ಮೆದುವಾಗಿ ಜಿನುಗುವುದು,
ಸರಿ-ತಪ್ಪುಗಳ ಎಲ್ಲೆ ಮೀರಿ
ಮುಗ್ಧತೆಯ ಸೀಮೆಯೊಳಕ್ಕೆ
ಜೀಕಿ ಬಿಡುವುದು
ಅಂದರೆ ?
ನೆರಳುಗಳ ಹಂಗು ಮೀರಿ ನಿಸೂರಾಗುವುದು