ಇಂಥವರ ಬಗ್ಗೆ ಪ್ರಸ್ತಾಪಿಸುವುದೂ ಸಾಧುವಾದುದಲ್ಲ ಎನ್ನುವವರಿದ್ದಾರೆ. ಇಂಥವನ್ನೆಲ್ಲವನ್ನೂ ಬ್ಲಾಗ್ ನಲ್ಲಿ ಬರೆಯಬೇಕೇ? ಚರ್ಚಿಸಬೇಕೇ? ಎಂದು ಪ್ರಶ್ನಿಸುವರೂ ಇದ್ದಾರೆ. ಇದೆಲ್ಲದರ ಮಧ್ಯೆ, “ಇಂಥವರೆಲ್ಲರ ಮಧ್ಯೆಯೂ ಬದುಕಬೇಕು’ ಎಂದು ಹೇಳುವವರಿದ್ದಾರೆ. ಇವೆಲ್ಲವನ್ನೂ ದೂರದಲ್ಲಿಟ್ಟು, “ಒಮ್ಮೆ ಗೊತ್ತಾಯಿತಲ್ಲಾ, ಅಂಥವರ ಸಹವಾಸದಿಂದ ದೂರ ಇದ್ದು ಬಿಡೋದಪ್ಪಾ…’ ಎಂದು ಪರಿಹಾರವನ್ನು ಹತ್ತಿರ ಬಾರದೆಯೇ ದೂರದಿಂದಲೇ ಹೇಳಿ ಬದಿಗೆ ಸರಿದು ಹೋಗುವವರಿದ್ದಾರೆ.

ಕೊನೆಯವರು ಹೇಳಿದ್ದು ನಿಜ. ಅಂಥವರ ಸಹವಾಸಕ್ಕೆ ಹೋಗೋದೇ ಇರೋದೇ ಲೇಸು ಎನ್ಸುತ್ತೆ. ಹಾಗೆ ಎಲ್ಲರೂ ಮಾಡಲಿ ಎಂದೇ ಈ ಬರಹ.

ಈ ಕುರಿತು ಬರೆಯುವ ಮುನ್ನ ಹಲವು ಬಾರಿ ಆಲೋಚಿಸಿದೆ. ಇಂಥವರ ಬಗ್ಗೆ ಬರೆಯೋದು ಸುಮ್ನೆ ವೇಸ್ಟ್ ಅನ್ನಿಸಿತು. ಆದರೆ ನಂತರ ಬರೆಯೋದು ಬರೆಯೋಣ, ಅದನ್ನು ಕಂಡು ನಾಲ್ಕು ಮಂದಿ ಅವರಿಂದ ದೂರ ಇದ್ದರೆ ಸಾಕು ಅಂದುಕೊಂಡೆ. ಅದೂ ನನ್ನ ಭ್ರಮೆ ಇರಬಹುದೇನೋ ಗೊತ್ತಿಲ್ಲ.

ಮೊನ್ನೆ ನನ್ನ ಗೆಳತಿ ಫೋನ್ ಮಾಡಿ ಏನೆಲ್ಲಾ ವಿಷಯ ಹೇಳಿದಳು. ನಂತರ ಸ್ವಲ್ಪ ಕುಂಟುವ ಹಾಗೆ….”ಅವರೂ ಹಾಗೇನೇ…’ ಎಂದಳು. ಅದಕ್ಕೆ ನಾನು ಕಿವಿಯಗಲಿಸಿ, “ಯಾರು…ಹೇಗೆ?’ ಎಂದು ಕೇಳಿದೆ. ಅದಕ್ಕೆ ಅವಳು ಎಲ್ಲವನ್ನೂ ವಿವರಿಸಿದಾಗ ನಿಜಕ್ಕೂ ಬೇಸರವಾಯಿತು. ಈ ಜನಕ್ಕೆ ರಸ್ತೆ ಮೇಲಿರೋರೆಲ್ಲಾ ತಮ್ಮ ಸಖಿಯರಾಗ್ಬೇಕು ಅಂತ ಯಾಕೆ ಬಯಸ್ತಾರೋ ? ಆ ದೃಷ್ಟಿಯಲ್ಲಿ ಯಾಕೆ ಟ್ರೈ ಮಾಡ್ತಾರೋ ? ಆ ಚಟ ಎಂಥದೋ?

ಯಾವುದಾವ್ಯುದೋ ವಾದಗಳ ಬಗ್ಗೆ ಹೇಳಿಕೊಂಡು, ಒಂದಿಷ್ಟು ಅದೂ-ಇದೂ ಅಂತ ಬರ್ಕೊಂಡು ಇರ್ತಾರೆ. ಅದು ಅವ್ರಿಗೆ ಹೆಸರೂ ತಂದುಕೊಟ್ಟಿರ್ತದೆ. ಆ ಹೆಸರು-ಜನಪ್ರೀತಿಯ ಬಂಡವಾಳವನ್ನು ಇಂಥವರಲ್ಲಿ ಹೆಚ್ಚು ಮಂದಿ ಬಳಸೋದು ಬೇಡದ ಕೆಲಸಗಳಿಗಾಗಿ. ಇಂಟರ್ ‌ನೆಟ್ ನಲ್ಲಿ ಚಾಟ್ ಮಾಡುತ್ತಾ….ನಿಮ್ಮ ಬರಹ ಇದು ಇಷ್ಟವಾಯಿತು ಅಂತಾರೆ…ಅದಕ್ಕೆ ಒಪ್ಪಿ ಥ್ಯಾಂಕ್ಸ್ ಹೇಳಿ, ನಿಮ್ಮಂಥವರು ಒಪ್ಪಿಕೊಂಡ್ರೆ ನಿಜವಾಗ್ಲೂ ಖುಷಿ ಎಂದು ಕೃತಜ್ಞತೆ ಸಲ್ಲಿಸಿದರೆ ನಿಮ್ಮ ವಯಸ್ಸು ಕೇಳ್ತಾರೆ. ಸರಿ, ಸುಮ್ನೆ ಕೇಳಿರ್ಬೇಕು ಅಂತ ಫೋಟೋ ಕಳಿಸಿದರೆ…ಮುಂದಿನಬಾರಿ ಚಾಟ್‌ನಲ್ಲಿ ಸಿಕ್ಕಾಗ ಡ್ರೆಸ್ ಕೋಡ್ ಹೇಳ್ತಾರೆ…ನಂತರ ನೀವು ಬಿಟ್ಟ ಹಾಗೆ…ಎಲ್ಲೆಲ್ಲಿಗೋ ಹೋಗಬಹುದು.. ಎಚ್ಚರಿಕೆ!

ಏನಾದ್ರೂ ಇಂಟರ್ ನೆಟ್‌ನ ಚಾಟ್‌ನಲ್ಲಿ ಆಕಸ್ಮಾತ್ ಸಿಕ್ಕು ಬಿಟ್ಟರೆ ಮುಗಿಯಿತು. ಅವನ “ಆಸಕ್ತಿ” ಗೆ ತಕ್ಕಂತೆ ಸ್ಪಂದಿಸದಿದ್ದರೆ ಪುಕಾರು ಹಬ್ಬಿಸತೊಡಗುತ್ತಾರೆ. “ಅವಳು ಬೇರೆಯವರ ಜತೆ ತಿರುಗ್ತಿದ್ದಾಳೆ. ಮನೆಯಲ್ಲಿ ಸಂಬಂಧ ಸರಿಯಿಲ್ಲ. ಅದಕ್ಕೆ ಸಲಹೆ ಕೇಳೋದಕ್ಕೆ ನನ್ನತ್ತಿರ ಬಂದಿದ್ದಳು…ಅವಳು ಹಂಗೇನೇ….’ ಹೀಗೆಲ್ಲಾ ಬೋಧಕನ ರೀತಿಯಲ್ಲಿ ಮಾತನಾಡುತ್ತಾರೆ. ಅಲ್ಲಿಗೇ ಮುಗಿಯುವುದಿಲ್ಲ. “ಏನ್ ಮಡಿವಂತಿಕೆ ಜನವೋ ನೀವು…ಹಳೇ ಕಾಲದಲ್ಲೇ ಇದ್ದೀರಾ? ’ ಎಂದು ಮೂಗು ಮುರಿಯುತ್ತಾರೆ. ಈಗಲಂತೂ ಇಂಥ ವ್ಯಕ್ತಿಯೊಬ್ಬನ ಹೆಸರು ಕಂಡರೆ ಮಾರುದೂರ ಹೋಗ ತೊಡಗಿದ್ದಾರೆ ಬಹಳಷ್ಟು ಮಂದಿ. ಇದ್ಯಾವ ಸಿರಿವಂತಿಕೆಯೋ ನನಗಂತೂ ಗೊತ್ತಿಲ್ಲ. 

ಒಬ್ಬ ಮನುಷ್ಯನ ಬಗ್ಗೆ ಗೌರವ ಮೂಡುವುದು ಆತನ ನಡವಳಿಕೆಯಿಂದ, ಅವನ ಬರವಣಿಗೆ ಅಥವಾ ವಿಶಿಷ್ಟತೆಯಿಂದ. ಆದರೆ ಇಂಥ ಚಾಳಿ ಎಂದಿಗೂ ಅದ್ಯಾವುದರ ಗುಂಪಿಗೂ ಸೇರುವುದಿಲ್ಲ ಎನ್ನುವುದು ನನ್ನ ಅನಿಸಿಕೆ. ಹೀಗೆ ಎಲ್ಲರ ಬಳಿಯೂ ಲಲ್ಲೆಗೆರೆಯಲು ಹೊರಟರೆ ಯಾರಾದರೂ ಒಬ್ಬರು ಸಿಡಿದಾರು ಎಂಬ ಸೂಕ್ಷ್ಮ ಎಚ್ಚರಿಕೆ ಅಂಥವರಲ್ಲಿದ್ದರೆ ಚೆನ್ನಾಗಿರುತ್ತೆ.

ಈ ರೀತಿ ಇರೋದನ್ನೇ, ತರ್ಲೆ ಮಾಡುವುದನ್ನೇ “ಸೋಷಿಯಲ್ ಬಿಹೇವಿಯರ್’ ಅಂತಾ ಇಂಥವರು ತಿಳ್ಕೊಂಡ್ರೆ ಅದನ್ನು ವಿರೋಧಿಸಲೇಬೇಕು. ಮತ್ತೊಬ್ಬರ ಮನಸ್ಸಿಗೆ, ಸಂವೇದನೆಗೆ ಘಾಸಿಯಾಗುವಂತೆ ನಡೆದುಕೊಳ್ಳಬಾರದೆಂಬ ಅರಿವು ಇಲ್ಲದವರನ್ನು ಬೆಳೆಯಲೂ ಕೊಡಕೂಡದು. ಇಂಥ ಕೆಟ್ಟ ಮನಸ್ಸಿನಿಂದ ಇಡೀ ಸಮೂಹ ಹಾಳಾಗದಂತೆ ಎಚ್ಚರಿಕೆ ವಹಿಸುವುದು ಅತ್ಯಂತ ಅವಶ್ಯ. ಇದರ ಮಧ್ಯೆಯೇ ಇಂಥವರನ್ನು ಕಡೆಗಣಿಸಿ ನಾವು ನಮ್ಮ ಗುರಿಯನ್ನು ಮಟ್ಟಬೇಕು.

ಇಂಥವರು ಎಲ್ಲೇ ಸಿಕ್ಕರೂ ಬಿಡಬಾರದು. ಇವರ ನಿಜವಾದ ಬಣ್ಣವನ್ನು ರಸ್ತೇಲಿ ಸುರಿಯಬೇಕು.. ಅದಕ್ಕೆ ನಾಲ್ಕಾರು ಮಂದಿ ಸಿದ್ಧವಾಗಿದ್ದಾರೆ !