ತಿಳಿನೀಲಿಯ ನೆನಪು

ಹಾರುವ ಗಾಳಿಪಟ
ಕಂಡಾಗಲೆಲ್ಲಾ
ಅವೆಲ್ಲಾ ನೆನಪಾಗುತ್ತದೆ
ಅವನು, ಆ ಕನಸು
ಕೈ ತುಂಬಾ ಮೆತ್ತಿಕೊಂಡ ಬಣ್ಣ
ಬಲಗೈಯ ಕಿರು ಬೆರಳಲಿ ಹಿಡಿದ ನೂಲು
ಮತ್ತು
ಎಡಗೈಯಲ್ಲಿ ನನ್ನ ಕೈ

ಬಣ್ಣ ತುಂಬಲೆಂದು
ಬಯಲಿಗೆ
ಕರೆದುಕೊಂಡು ಹೋದವ
ಅಲ್ಲೆಲ್ಲೋ
ಗಾಳಿಪಟ ಸಿಕ್ಕಿಬಿದ್ದಿರಬೇಕೆಂದು
ನನ್ನ ಕೈ ಬಿಡಿಸಿಕೊಂಡು
ಹುಡುಕಲು ಹೋದ

ಆಗಸದಲಿ ಗಾಳಿಪಟ
ಕಂಡಾಗಲೆಲ್ಲಾ
ಅವೆಲ್ಲವೂ ನೆನಪಾಗುತ್ತದೆ
ಗಾಳಿಪಟದ ಬಣ್ಣ
ಮತ್ತು ಆಗಸವನ್ನು
ತುಂಬಿಕೊಂಡ ಆ ತಿಳಿನೀಲಿ
*******
ಯಾಕೋ ಅವಳು ನೆನಪಾದಳು.
ಸುಮ್ಮನೆ ಹೀಗೇ…ಹಾದಿಯಲ್ಲಿ ನಡೆದು ಹೋಗುವಾಗ ಧುತ್ತನೆ ಎದುರಾದವಳು. ನಾನೂ ಆ ದಾರಿಗೆ ಹೊಸಬ, ಅವಳೂ ಇದ್ದಿರಬಹುದೇನೋ? ಗೊತ್ತಿಲ್ಲ. ಹೀಗೂ ಇದ್ದಿರಬಹುದು. ಆ ಹಾದಿ ಅವಳಿಗೆ ತೀರಾ ಪರಿಚಿತವಿರಲಿಕ್ಕೂ ಸಾಕು. ನನ್ನ ಪಯಣದ ಶ್ರಮ ಹಗುರಾಗಲಿ ಎಂದು ಮುಖದ ಮೇಲೆ ನಗೆ ತಂದುಕೊಂಡೆ. ಆಕೆಯೂ  ಮನಸಾರೆ ನಕ್ಕಳು. ನನ್ನ ದಾರಿಯಲ್ಲಿದ್ದ್ದ ಕತ್ತಲನ್ನು ಆ ಬೆಳಂದಿಗಳು ಬೆಳಗಿತ್ತು. ಖುಷಿಯಾಯಿತು, ಮಾತನಾಡಲು ಪರಿಚಯವಿರಲಿಲ್ಲ, ಅದಕ್ಕೆ ಆ ಹೊತ್ತೂ ಅಲ್ಲ. ಏನೇನೋ ಕಾರಣಗಳಿಂದ ನಾನು ಪ್ರಕಾಶಿಸುತ್ತಿರಲಿಲ್ಲ.
ಆ ಬೆಳಂದಿಗಳಿನಲ್ಲೇ ಮತ್ತಷ್ಟು ದೂರ ಹೋಗಿ ಬದಿಗೆ ಸರಿದು ನಿಂತೆ, ಕತ್ತಲೆಯ ಬೆನ್ನಿಗೆ. ಆಕೆ ತಿರುಗಿ ನೋಡಬಹುದೆಂಬ ಆಸೆ.  ಹಾಗೆ ನೋಡುವಾಗ ನನ್ನ ನೆರಳು ಮತ್ತಷ್ಟು ದೂರ ಚೆಲ್ಲುವ ಆ ಬೆಳಂದಿಗಳನ್ನು ನುಂಗಿ ಬಿಡಬಹುದೆಂಬ ಭೀತಿ. ಅದಕ್ಕೇ ಸರಿದು ನಿಂತದ್ದು. ಇಲ್ಲ…ಬೆಳಂದಿಗಳು ಅತ್ತ ಹಾಯಲೇ ಇಲ್ಲ…ನಾನು ಆ ಕತ್ತಲೆಯಲ್ಲೇ ನಿಂತಿದ್ದೇನೆ….ಪ್ರತಿ ಹುಣ್ಣಿಮೆ ಬಂದಾಗಲೆಲ್ಲಾ ನಿರೀಕ್ಷೆ ಉಕ್ಕಿ ಹರಿಯುತ್ತದೆ, ಅಲೆ ಉಕ್ಕುವ ಹಾಗೆ. ಪೂರ್ಣಿಮೆ ಮುಗಿದು ಅಮಾವಾಸ್ಯೆ ಶುರುವಾದಾಗ ಬೆರಳೆಣಿಸ ತೊಡಗುತ್ತೇನೆ….ಹೀಗೇ ಅಮಾವಾಸ್ಯೆ, ಹುಣ್ಣಿಮೆ,  ಮಧ್ಯೆ ಆಗಾಗ್ಗೆ ಚಂದ್ರ ಗ್ರಹಣವೂ ಬಂದಿದೆ. ನನ್ನೊಳಗಿನ ಅಲೆ ಉಕ್ಕುವುದು ನಿಲ್ಲಿಸಿಲ್ಲ….ಹಾಗಾಗಿಯೆ ಬದುಕಿದ್ದೇನೆ…!
***
ಅವನು ಹಾಗೆಯೇ ಕಾವ್ಯದಂತೆ ಬಂದು ನನ್ನೊಳಗೆ ಸೇರಿದ. ನಿತ್ಯವೂ ಕಾವ್ಯದ ಆರಾಧನೆ ನಡೆಯುತ್ತಿತ್ತು. ಎಷ್ಟೋ ಬಾರಿ ಅವನು ಛಂದಸ್ಸಿನ ಬಗ್ಗೆಯೇ ಪ್ರೀತಿ ತೋರಿ ನನ್ನನ್ನೇ ಮರೆಯುತ್ತಿದ್ದ. ಕೆಲ ಕ್ಷಣ ಬೇಸರ ಎನಿಸುತ್ತಿದ್ದರೂ, ಅವನ ಆ ಅಪ್ಪಟ ಪ್ರೇಮವನ್ನು ವಿರೋಧಿಸುವ ಮನಸ್ಸು ಬರುತ್ತಿರಲಿಲ್ಲ. ಯಾವುದನ್ನೂ ಪ್ರೀತಿಸಿದರೂ ಅವನಂತೆಯೇ ಪ್ರೀತಿಸಬೇಕು ಎನಿಸುತ್ತಿತ್ತು. ಈಗ ಹಾಗೇ ಪ್ರೀತಿಸುವುದನ್ನು ಕಲಿಯಲು ಆರಂಭಿಸಿದ್ದೇನೆ. ಥಟ್ಟನೆ ಆತ ಮತ್ತೆ ನೆನಪಾಗಿ ಅವನ ಪ್ರೀತಿಯಲ್ಲಿ ಮುಳುಗಿಹೋಗುತ್ತೇನೆ, ಕಲಿಕೆಯನ್ನು ಬಿಟ್ಟು.
****
ಪ್ರೀತಿಯಿಲ್ಲದೆಯೂ ಹೂವು ಅರಳಿತು ; ಅದರಲಿ ಕಂಪಿರಲಿಲ್ಲ.
*******
ಜಗತ್ತಿನ ಮೊದಲ ಪೂರ್ಣಿಮೆಯ ದಿನ. ಅಂಗಳದಲ್ಲಿ ಒಂದಿಷ್ಟು ಜನ ಸೇರಿದ್ದರು, ಎಂದಿನ ಚಂದ್ರನನ್ನು ಎದುರುಗೊಳ್ಳುತ್ತಾ. ಚಂದಿರನಿಗೂ ಅಂಗಳದವರನ್ನು ಕಂಡು ಪ್ರೀತಿ, ಅಕ್ಕರೆ. ಆ ದಿನ, ಆ ಹೊತ್ತು ತಮ್ಮ ಪ್ರೀತಿ-ಬಂಧವನ್ನು ನೆನೆಸಿಕೊಂಡು ಎಲ್ಲರೂ ಮನಸ್‌ಪೂರ್ತಿ ನಕ್ಕರು. ಚಂದಿರನೂ ದನಿಯೂ ಸೇರಿಕೊಂಡಾಗ ನಗುವಿನ ರಾಶಿ ರಾಶಿ ಅಂಗಳದಲ್ಲಿ. ಅದುವರೆಗೂ ಚಂದಿರನ ಮುಗುಳ್ನಗೆಯನ್ನೇ ಕಂಡಿದ್ದ ಇವರೆಲ್ಲಾ ಆ ನಗುವಿಗೆ ಹೆಸರಿಡುವುದನ್ನೇ ಮರೆತರು. ಆ ಹೆಸರಿಡದ ಬೆಳಕನ್ನೇ ಬೆಳಂದಿಂಗಳೆಂದು ಅವನೂ-ಅವಳು ಮೊಗೆ ಮೊಗೆದು ತುಂಬಿಕೊಂಡರು.
****
ನಾನು ಕನಸು ಕಂಡೆ, ಅದರಲ್ಲಿ ಚಿತ್ರಗಳಿರಲಿಲ್ಲ. ಅವಳೂ ಕನಸು ಕಂಡಳು, ಬಣ್ಣವಿರಲಿಲ್ಲ. ಈಗ ಇಬ್ಬರೂ ಕಂಡ ಕನಸಿನಲ್ಲಿ ಚಿತ್ರಗಳೂ ಇವೆ, ಬಣ್ಣವೂ ಇದೆ. ಆ ಕನಸಿಗೆ ಇಟ್ಟ ಹೆಸರು ಒಲವು.
*****
ಮುದ್ದಾದ ಕೈಗಳಿಂದ ನನ್ನನ್ನು ಹಿಡಿದು ಅಷ್ಟು ದೂರ ಕರೆದೊಯ್ದು ‘ನನ್ನಲ್ಲಿ ನಿನ್ನನ್ನು ಕಂಡುಕೊಂಡೆ’ ಎಂದಳು. ಅವಳ ಭಾಷೆ ಅರ್ಥವಾಗದೇ ತಲೆ ಮೇಲೆತ್ತಿ ನೋಡಿದೆ. ಹಸಿರು ರಾಶಿ, ಅದರ ಮಧ್ಯೆ ಅರಳಿದ ಹೂವಿನ ರಾಶಿ, ಅದರೊಳಗಿಂದ ಸುರಿಯುತ್ತಿದ್ದ ಕಂಪಿನ ಮಳೆ, ನಮ್ಮನ್ನು ಆವರಿಸಿ ತೊಯ್ದು ಬಿಡುವ ಹಾಗೆ. ಅವಳ ಭಾಷೆ ಅರ್ಥವಾಯಿತು. ನನ್ನೊಳಗೆ ಅವಳನ್ನು ತುಂಬಿಕೊಂಡೆ.
***
ಇಬ್ಬನಿ ಉದುರುವ ಸಮಯ, ನೆಲದ ಮೇಲಿನ ಹುಲ್ಲು ನಿದ್ರಿಸಿತ್ತು. ಏನೋ ತಣ್ಣನೆಯ ಸ್ಪರ್ಶಎಂದು ಕಣ್ತೆರೆಯಿತು. ಆ ಹನಿ ಕಣ್ಣೊಳಗೇ ತುಂಬಿಕೊಂಡಿತು. ಈಗ ಇಬ್ಬರೂ ಪ್ರೀತಿಸುತ್ತಿದ್ದಾರೆ…ರವಿ ಬರುವುದರೊಳಗೆ ಮುಗಿಯಬೇಕು…ಶ್…