pandinje10-n

ಮತ್ತೊಂದು ಸಾಹಿತ್ಯ ಸಮ್ಮೇಳನವನ್ನು ನೋಡಿಬಂದೆ. ಅದರ ಅನುಭವವೂ ವಿಭಿನ್ನ. ಹಲವು ಅಪಸವ್ಯಗಳ ಮಧ್ಯೆ ತನ್ನದೇ ಆದ ಅನುಭವವನ್ನು ನನಗೆ ತುಂಬಿಸಿಕೊಟ್ಟಿದೆ. ಅದರ ಬಗ್ಗೆ ಬರೆಯುವ ಮೊದಲು ಹತ್ತು ದಿನಗಳಿಂದ ಬರೆಯಲೇಬೇಕೆಂದು ಪ್ರಸ್ತಾಪಿಸಲೇ ಬೇಕಿದ್ದ ವಿಷಯವನ್ನು ಮೊದಲು ಹೇಳಿಬಿಡುವೆ. ನಂತರ ಉಳಿದದ್ದು.

ಪತ್ರಕರ್ತರು ಏನಿದ್ದರೂ “ಋಣಾತ್ಮಕ’ ನಿಲುವುಗಳತ್ತಲೇ ಹೆಚ್ಚು ಒಲವು ತೋರುತ್ತಾರೆ, ಸಮಾಜದ ಪ್ರಗತಿಗೆ ಸಲಹೆ ನೀಡುವುದಕ್ಕಿಂತಲೂ ಆಗಿರುವುದನ್ನು ಟೀಕಿಸುವುದಕ್ಕೆ ಹೆಚ್ಚು ಕಾಲ ನಿಯೋಜಿಸುತ್ತಾರೆ ಎಂಬ ಟೀಕೆ ಅತ್ಯಂತ ಸಾಮಾನ್ಯವಾಗಿ ಕೇಳಿಬರುವಂಥದ್ದು ; ಕೇಳಿ ಬರುತ್ತಲೇ ಇದೆ.

ಸಂತಸದ ಸಂಗತಿಯೆಂದರೆ ಇಂಥ ಟೀಕೆ ಸದಾ ಕೇಳಿಬರುತ್ತಲೇ ಇರಲಿ ; ನಾವು ನಮ್ಮಷ್ಟಕ್ಕೇ ನಡೆಯುತ್ತಿರುತ್ತೇವೆ ಎಂದು ನಡೆದವರು ವಿರಳ. ಅಂಥ ಗುಂಪಿಗೆ ಇತ್ತೀಚೆಗಷ್ಟೆ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಕೆಲ ಸದಸ್ಯರು ಸೇರಿಕೊಂಡರು. ಅದುವೇ ಸಮಾಧಾನದ ಸಂಗತಿ.

ಈಗಾಗಲೇ ಹೇಳಿದಂತೆ ಪತ್ರಕರ್ತರು ಏನೇ ಇದ್ದರೂ ಒಂದು ಹಂತದ ಪ್ರಭಾವಿ ಸ್ಥಾನದಲ್ಲಿ ನಿಲ್ಲುವವರು. ಜನಸಾಮಾನ್ಯರು ಹೇಳುವುದಕ್ಕಿಂತಲೂ ಪತ್ರಕರ್ತರು ಹೇಳುವುದನ್ನು ಅಧಿಕಾರಸ್ಥರು, ರಾಜಕಾರಣಿಗಳು, ಸಂಸ್ಥೆಗಳು ಸ್ವಲ್ಪ ಆಸಕ್ತಿಯಿಂದ ಕೇಳುತ್ತವೆ. ಅಷ್ಟೇ ಅಲ್ಲ ; ಸ್ವಲ್ಪ ಬೆನ್ನು ಬಿದ್ದರೆ ಜಾರಿಗೂ ಇಚ್ಛಾಶಕ್ತಿ ತೋರುತ್ತವೆ, ತೋರುತ್ತಾರೆ. ವಾಸ್ತವ ಸ್ಥಿತಿ ಹೀಗಿರುವಾಗ ಪತ್ರಕರ್ತರು ಸಮಾಜಮುಖಿಯುತ್ತ ಚಿಕಿತ್ಸಾ ನೆಲೆಯಲ್ಲಿ ನೋಡಿದರೆ ಒಂದಷ್ಟು ಪುಟ್ಟ ಪುಟ್ಟ ಕೆಲಸಗಳು ಆಗುವುದು ದೊಡ್ಡ ಅಚ್ಚರಿಯೇನಲ್ಲ.

harsha-1

ಬಸ್ ನಿಲ್ದಾಣ ಇಲ್ಲದ ಕಡೆ ಬಸ್ಸು ನಿಲ್ದಾಣ ಬರುತ್ತದೆ, ಕುಡಿಯುವ ನೀರು ಸೌಲಭ್ಯವಿಲ್ಲದೆಡೆ ಕೊನೇ ಪಕ್ಷ ಸಮೀಕ್ಷೆ ಆರಂಭವಾಗುತ್ತದೆ, ರಸ್ತೆಯೇ ಇಲ್ಲದ ಕಡೆ ಡಾಂಬರು ಬಾರದಿದ್ದರೂ ಜಲ್ಲಿಕಲ್ಲು ಹಾಕಿ ಮಣ್ಣನ್ನು ಹಾಕುತ್ತಾರೆ…ಇಂಥ ಕೆಲವು ಉದಾಹರಣೆಗಳು ಘಟಿಸುವುದು ಸುಳ್ಳಲ್ಲ. ಹಾಗಾಗಿ ಅದರತ್ತ ಕೊಂಚ ಬಿಡುವು ಮಾಡಿಕೊಂಡು ಗಮನಿಸಬೇಕಷ್ಟೇ. ಅಂಥದೊಂದು ಸಾಹಸಕ್ಕೆ ಜನವರಿಯ ಒಂದು ಭಾನುವಾರ ಕೈ ಹಾಕಿದ್ದು ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯರು. ತಮ್ಮದೇ ಜಿಲ್ಲೆಯ ವೇಣೂರು ಬಳಿಯ ಒಂದು ಕುಗ್ರಾಮಕ್ಕೆ ಹದಿನೈದು ಮಂದಿಯ ತಂಡ ಭೇಟಿ ನೀಡಿತು. ಮಂಗಳೂರಿನ ಭಂಡಾರಿ ಕಾಲೇಜಿನವರು ತಂಡದ ಪ್ರಯತ್ನ ಕೇಳಿಯೇ ಖುಷಿಪಟ್ಟು ಬಸ್ ನ ಸೌಲಭ್ಯ ಕಲ್ಪಿಸಿದರಂತೆ ; ಜತೆಗೆ ಖನಿಜನೀರು.

ಫಣ್ಣಿಂಜೆ-ವೇಣೂರಿನಿಂದ ಸುಮಾರು ಎಂಟು ಕಿ.ಮೀ. ದೂರ. ಸರಿಯಾಗಿ ಹೋದರೆ ಹತ್ತು ನಿಮಿಷ. ದಾರಿ ಗೊತ್ತಿರದಿದ್ದರೆ ಹತ್ತು ದಿನ ಬೇಕು. ಸೌಲಭ್ಯಗಳನ್ನು ಕೇಳಬೇಡಿ. ಶಾಲೆ ಇಲ್ಲ, ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಇದೊಂದು ರೀತಿಯಲ್ಲಿ ಪರ್‍ಯಾಯ ದ್ವೀಪ. ಮೂರೂ ಕಡೆ ನೀರು, ಮಧ್ಯೆ ಈ ಊರು.

ನಮ್ಮ ಪತ್ರಕರ್ತರ ತಂಡವು ಊರನ್ನು ಹುಡುಕಿ ಹುಡುಕಿ ತಲುಪಲು ಒಂದು ಗಂಟೆ ತೆಗೆದುಕೊಂಡಿತಂತೆ. ಅಲ್ಲಿ 121 ಕುಟುಂಬಗಳು ವಾಸವಿವೆ. ಮಲೆ ಕುಡಿಯರು, ಪರಿಶಿಷ್ಟ ವರ್ಗ, ಬ್ರಾಹ್ಮಣರು ಹೀಗೆ ಎಲ್ಲ ಜಾತಿಯವರೂ ಇದ್ದಾರೆ. ಪಕ್ಕದಲ್ಲೇ ಸಾಗುವ ಫಲ್ಗುಣಿಯೇ ಇವರಿಗೆ ಆಧಾರ. ಊರಿನ ಮಂದಿ ತಿಂಗಳ ಪಡಿತರ ತರಲು ದೋಣಿ ಹತ್ತಿ ದಡ ದಾಟಿ ವೇಣೂರಿಗೆ ಹೋಗಬೇಕು. ಮಕ್ಕಳು ಶಾಲೆ ಕಲಿಯಲೂ ಇದೇ ಸ್ಥಿತಿ. ವಾಸ್ತವವಾಗಿ ಇದು ಮೂರು ನದಿಗಳ ಸಂಗಮ ಸ್ಥಾನವೂ ಹೌದು.

ತಂಡ ಎಲ್ಲರನ್ನು ಮುಖಾಮುಖಿಯಾಯಿತು. ಸಮಸ್ಯೆಗಳ ಪಟ್ಟಿ ಸಿದ್ಧಪಡಿಸಿತು. ಇರುವ ಸೌಲಭ್ಯ, ಆಗಬೇಕಾದ ಸೌಲಭ್ಯ ಹಾಗೂ ತುರ್ತು ಸೌಲಭ್ಯ ಎಲ್ಲವನ್ನೂ ಪಟ್ಟಿಮಾಡಿಕೊಂಡು ಮಂಗಳೂರಿಗೆ ವಾಪಸ್ಸಾಯಿತು. ಇನ್ನೊಂದು ವಿಷಯವನ್ನು ಹೇಳಬೇಕು. ಆ ಊರಿನಲ್ಲಿ ಮದ್ದಳೆ, ಮೃದಂಗ ಸೇರಿದಂತೆ ಹದಿನಾಲ್ಕು ಮಾದರಿ ವಾದ್ಯ ತಯಾರಿಸುವ ಲಕ್ಷ್ಮಣ್ ಹೆಬ್ಬಾರ್ ಇದ್ದಾರೆ. ಅವರಲ್ಲಿ ದೊಡ್ಡ ದೊಡ್ಡ ಗಾಯರಕೆಲ್ಲ ಬಂದು ಹೋಗುತ್ತಾರೆ. ನಿಜವಾಗಲೂ ವನಸುಮದಂತೆಯೇ ಬಾಳಿದ್ದಾರೆ ಹೆಬ್ಬಾರ್.

ರಸ್ತೆಗೆ ಡಾಂಬರು ಆಗಿಲ್ಲ, ಪ್ರತಿವರ್ಷವೂ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿ, ಬೇಸಿಗೆ ಬೆಳೆ ಬೆಳೆದುಕೊಳ್ಳುತ್ತಿದ್ದರು. ಜತೆಗೆ ಅವರ ಬಾವಿಗಳಿಗೂ ನೀರು ಬರುತ್ತಿತ್ತು. ಕೊರತೆ ಇರುತ್ತಿರಲಿಲ್ಲ. ಎರಡು ವರ್ಷದಿಂದ ಅದೂ ಸಾಧ್ಯವಾಗುತ್ತಿಲ್ಲ. ಜನ ಸಿಗುತ್ತಿಲ್ಲ ಅಡ್ಡ ಕಟ್ಟಲಿಕ್ಕೆ.

ಊರಿಗೆ ಹೋಗುವಲ್ಲಿ ಕನಿಷ್ಠ ಯಾವ ಮಾರ್ಗನಕ್ಷೆ (ರೂಟ್ ಮ್ಯಾಪ್)ಗಳಾಗಲೀ, ಕೈಮರವಾಗಲೀ, ಫಲಕವಾಗಲೀ ಇಲ್ಲ. ಹಾಗಾಗಿ ದಾರಿ ತಪ್ಪುವುದು ಇದ್ದದ್ದೇ. 1967 ರಲ್ಲಿ ಟ್ರಾನ್ಸ್‌ಫಾರ್ಮರ್ ಹಾಕಿದ್ದು, ಮತ್ತೆ ಬದಲಿಸಿಲ್ಲ ; ತಂತಿಗಳನ್ನೂ ಸಹ.

ಹೀಗೇ ಸಮಸ್ಯೆಗಳನ್ನೆಲ್ಲಾ ಗುಡ್ಡೆ ಹಾಕಿಕೊಂಡು ಬಂದರು. ಪತ್ರಿಕೆಗಳಲ್ಲಿ ವರದಿ ಪ್ರಕಟವಾದವು.
ಫೆಬ್ರವರಿ ಕೊನೆ ವಾರದೊಳಗೆ ಜಿಲ್ಲಾಧಿಕಾರಿಗೆ ಫಣ್ಣಿಂಜೆಯ ಸ್ಥಿತಿಗತಿ ಕುರಿತು ವರದಿ ನೀಡಲಿದೆ ಈ ತಂಡ. ಜತೆಗೆ ಕಾಲಮಿತಿಯೊಳಗೆ ಕನಿಷ್ಠ ಸೌಲಭ್ಯಗಳನ್ನಾದರೂ ಕಲ್ಪಿಸಲು ಪ್ರಯತ್ನಿಸುತ್ತದೆ. ಈಗಾಗಲೇ ಈ ಸಂಬಂಧ ವರದಿಯನ್ನು ಸಿದ್ಧಪಡಿಸಿ ಸಿ.ಡಿ ಯೊಂದಿಗೆ ಜಿಲ್ಲಾಡಳಿತಕ್ಕೆ ಸಲ್ಲಿಸಲಿದೆ.

ನಿಜಕ್ಕೂ ಖುಷಿ ಕೊಟ್ಟ ಸಂಗತಿಯಿದು. ನಕಾರಾತ್ಮಕ ನೆಲೆಯಲ್ಲೇ ಸಾಗುತ್ತಿರುವ ಸಂದರ್ಭದಲ್ಲಿ ಇಂಥದೊಂದು ಒಳ್ಳೆಯ ಕೆಲಸ ನಡೆಯುತ್ತಿದೆ. ಎಲ್ಲರೂ ಸ್ವಾಗತಿಸಬೇಕು. ನಮ್ಮ ರಾಜ್ಯಾದ್ಯಂತ ಇರುವ ಪತ್ರಕರ್ತರ ಸಂಘಗಳು ಇಂಥದೊಂದು ದೀಕ್ಷೆಯನ್ನು ತೊಟ್ಟರೆ, ಕೆಲ ವರ್ಷಗಳಲ್ಲಿ ತಮ್ಮ ತಮ್ಮ ಜಿಲ್ಲೆಗಳ ಕುಗ್ರಾಮಗಳಿಗೆ ಸೌಲಭ್ಯ ಕಲ್ಪಿಸಬಹುದು. ಹಾಗಾಗಿ ಅಲ್ಲ-ಸಲ್ಲದ ಕಾರಣಗಳಿಗೆ ಸುದ್ದಿಯಾಗುತ್ತಿರುವ ಮಂಗಳೂರಿನಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ ದಕ್ಷಿಣ ಕನ್ನಡ ಪತ್ರಕರ್ತರ ಸಂಘಕ್ಕೆ ಭೇಷ್ ಎನ್ನಬೇಕು, ಶುಭ ಹಾರೈಸಬೇಕು.