ಮತ್ತೆ ಒಂದಷ್ಟು ಚಿತ್ರಿಕೆಗಳನ್ನು ಆರಂಭಿಸಿದ್ದೇನೆ. “ಚಿತ್ರಿಕೆ” ಗಳು ನನಗೆ ಬಹಳ ಇಷ್ಟವಾದುದು. ಒಂದು “ಚಿತ್ರಿಕೆ” (ಇಮೇಜ್) ಸುತ್ತ ದೃಷ್ಟಿ ಹರಿಸುತ್ತಾ, ಕಣ್ಣಿಗೆ ಕಟ್ಟಿಕೊಳ್ಳುವುದು ಒಂದು ಸೊಗಸು. ಒಮ್ಮೊಮ್ಮೆ ಅಮೂರ್ತವೆನ್ನುವಂತೆಯೂ, ಮತ್ತೊಮ್ಮೆ ತೀರಾ ಡಾಳಾಗಿಯೂ ಕಾಣು ವುದುಂಟು. ನನಗೆ ಅಮೂರ್ತಗೊಳಿಸುವುದೆಂದರೆ ಮತ್ತಷ್ಟು ಖುಷಿಯ ಕೆಲಸ. ಹೊಸ ಚಿತ್ರಿಕೆಗಳನ್ನು ಓದಿ ಅಭಿಪ್ರಾಯವನ್ನು ಮುಕ್ತವಾಗಿ ತಿಳಿಸಿ.

*

ಊರ ಮನೆಗಳ ಹಜಾರ ಖಾಲಿಯಾಗಿವೆ. ಈಗ ನೀವಂದುಕೊಂಡ ಹಾಗಿಲ್ಲ. ಸಂಪೂರ್ಣ ಬದಲು. ಯಾವುದು ಎಲ್ಲಿರಬೇಕಿತ್ತೋ ಅದರ ಸ್ಥಾನ ಬದಲಿ. ಹಜಾರದ ಖಾಲಿ ಜಾಗ ಹೊಸ ಶೂನ್ಯ ಸೃಷ್ಟಿಸುತ್ತಿದೆ. ಆ ಶೂನ್ಯಕ್ಕೆ ಒಂಟಿತನ ಎಂಬ ನಾಮಕರಣ. ಶೂನ್ಯ ತುಂಬುವವರ ಕೊರತೆ ಮಧ್ಯೆ ದಿನಗಳ ಉರುಳಾಟ. ದಿನಗಳೊಂದಿಗೆ ನಮ್ಮದೂ ಉರುಳೇ. ಹಜಾರದ ಜಂತಿಗೆ ಬಡಿದ ಹೊಸ ಬಣ್ಣದಲ್ಲಿ ಹಳೆಯ ಬಣ್ಣದ ಮೆರುಗು ಮಾಯ.

ನಮ್ಮಲ್ಲೆಲ್ಲಾ ಹಜಾರದ ಮೂಲೆಗೆ ಇದ್ದಷ್ಟು ಲವಲವಿಕೆ ಬೇರೆ ಯಾವ ಕೋಣೆಗೂ ಇರುತ್ತಿರಲಿಲ್ಲ. ಅದಕ್ಕಿದ್ದ ಘನತೆ, ಹಿರಿತನ, ಕಾಳಜಿ ಇನ್ಯಾರಿಗೂ ಇರುತ್ತಿರಲಿಲ್ಲ. ಇದೂ ಒಂದು ನಮೂನೆಯ ಪ್ರಧಾನಮಂತ್ರಿ ಸೀಟು. ಅಲ್ಲಿಂದ ಬಿದ್ದ ಹ್ಞೂಂಕಾರಕ್ಕೆ ಮೇರೆಯೇ ಇಲ್ಲ. ಉಳಿದವರೆಲ್ಲಾ ಸಾಲು ಹಿಡಿದು ಅನುಸರಿಸುವುದಷ್ಟೇ ಬಾಕಿ. ಅಗ್ನಿಪರೀಕ್ಷೆಯ ಕ್ಷಣದಲ್ಲೂ ಚಕಾರವೆತ್ತುವಂತಿರಲಿಲ್ಲ. ಮೂಲೆಯ ಆದೇಶವೆಂದರೆ ಅಷ್ಟೊಂದು ಮರ್ಯಾದೆ.

ಮಂತ್ರಿ ಪದವಿಗೆ ಒಂದಷ್ಟು ಲಾಬಿ, ಮತ್ತೊಂದಿಷ್ಟು ಜನಬಲ, ಜೈಕಾರ ಪಡೆ, ಘೋಷಣೆಗಳ ಹರಿಕಾರರು-ಎಲ್ಲರನ್ನೂ ಸುತ್ತಿಟ್ಟು(ಸುತ್ತ ಇಟ್ಟು) ಕೊಂಡು ಓಡಾಡಬೇಕು. ಅವೆಲ್ಲವೂ ಇದ್ದರೆ ಉಳಿದೆಲ್ಲವೂ. ಆದರೆ ಮೂಲೆ ಸೀಟಿಗೆ ಇದ್ಯಾವುದೂ ಗಣ್ಯವಿಲ್ಲ. ಅಷ್ಟಕ್ಕೆ ನಗಣ್ಯ ಎಂದು ತಿಳಿದುಕೊಳ್ಳುವುದು ಬೆಂಕಿನುಂಡೆ ತುಳಿಯುವ ಕಾಯಕ. ಅದು ಸುಗ್ರೀವಾಜ್ಞೆ ಪೀಠಕ್ಕೆ ಸಮಾನ. ಇಲ್ಲಿ ಆeಧಾರಕರು ಒಒರೇ. ಅನುಸರಿಸುವವರು ಮಿಕ್ಕವರು.

ಹಜಾರದ ಜಂತಿಗಳೆಲ್ಲಾ ಈಗ ಅನಾಥ. ಅದನ್ನು ದಿಟ್ಟಿಸುವವರೂ ಇಲ್ಲ ; ಉಪಚರಿಸುವವರೂ ಇಲ್ಲ. ಎಲ್ಲಾ, ಬಣ್ಣದ ಪೆಟ್ಟಿಗೆಯ ಬಣ್ಣಕ್ಕೆ ಮರುಳಾಗಿದ್ದಾರೆ. ಅದಕ್ಕಾಗಿ ಮೂಲೆಯಲ್ಲಿರುವ ಹಿರಿ ಜೀವಿಗೆ ಸ್ಥಾನಾಂತರ. ಕೋಲು ಹಿಡಿದು ‘ಏನೋ ವಾಸ, ಕೊಯ್ಲು ಮುಗೀತೇನೋ?, ಎಷ್ಟು ಮುಡಿಯಾಗಿದೆ?’ಎಂದು ಕೇಳುವ ಅಜ್ಜ, ಅಜ್ಜಿಯರು ಮೂಲೆಪಾಲು. ಅವರ ಆಜ್ಞೆಗಳು ಕಿಮ್ಮತ್ತು ಕಳೆದುಕೊಂಡ ಕಿಲುಬುಕಾಸು. ಪಡೆದ ಅನುಭವ ಸಂಪತ್ತಿಗೆ ಬಿದ್ದ ವಯೋಮಾನದ ಮೊಹರಿಗೂ ಬೆಲೆ ಇಲ್ಲ!

ಈಗ ಹಜಾರದಲ್ಲಿ ಯಾವಾಗಲೂ ಬೆಳಕೇ. ಒಬ್ಬೊಬ್ಬರೂ ಒಂದೊಂದು ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಸೊಸೆ ತನ್ನಷ್ಟಕ್ಕೇ ಗೊಣಗುತ್ತಾ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತ್ತಾಳೆ. ಮಗಳು ಉಪ್ಪರಿಗೆ ಕೋಣೆಯಲ್ಲ್ಲಿ ಮೊದಲ ಪಿಯುಸಿ ಪಾಠಕ್ಕೆ ಶರಣಾಗಿದ್ದಾಳೆ. ಮಗ ಪೇಟೆ ತುಕ್ಕಲಿಕ್ಕೆ ಹೋದವ ಇನ್ನೂ ಬಂದಿಲ್ಲ. ಅಪ್ಪನಿಗೆ ಇನ್ನೂ ಪಟ್ಟಾಂಗ ಮುಗಿದಿಲ್ಲ. ಅಜ್ಜ- ಅಜ್ಜಿಯರ ಮುಖಗಳೂ ಹಾಗೆ. ಕಳೆಗುಂದಿದ ಜಂತಿಗಳಂತೆ. ಕುಟುಂಬದ ಸೀರೆ ನೂಲುಗಳು ಒಂಟಿಯಾಗುವ ಮುನ್ನ ನೇಯ್ಗೆಗಾರರು ಬೇಕು ; ಶೂನ್ಯಕ್ಕೊಂದು ಅರ್ಥ ಮತ್ತು ಹಜಾರಕ್ಕೊಂದು ಹೊಸ ಬಣ್ಣವೂ ಬೇಕು.