೨೦೦೯…!
ಬದುಕಲಿಕ್ಕೆ ಮತ್ತೊಂದು ವರ್ಷ.
ಬದುಕಿನ ಹಾದಿ ದೊಡ್ಡದು ; ಅದರಲ್ಲಿ ನಡೆದು ಹೋಗುವ ನಾವೇ ಚಿಕ್ಕವರು. ಗಮ್ಯವನ್ನು ಹುಡುಕುತ್ತಲೇ ನಾವೆಲ್ಲೋ ಕಳೆದು ಹೋಗುತ್ತೇವೆ. ಸಾಗಿದ ದಿನಗಳನ್ನು ಲೆಕ್ಕ ಹಾಕುತ್ತಾ ಕುಳಿತಾಗ ದಿನಗಳಿರಲಿ ; ವರ್ಷಗಳೇ ಕಳೆದು ಹೋಗಿರುತ್ತವೆ. ಅವ್ಯಾವುದೂ ಲೆಕ್ಕಕ್ಕೆ ಉಳಿಯುವುದಿಲ್ಲ. ಇಟ್ಟ ಸಾವಿರಾರು ಹೆಜ್ಜೆಗಳಲ್ಲಿ ಎಲ್ಲೋ ಒಂದೆರಡು…ಇಲ್ಲದಿದ್ದರೆ ಮೂರೋ ನಾಲ್ಕು…ಮೈಲಿಗಲ್ಲುಗಳಾಗಿ ತೋರಬಹುದು.

ಅದೇ ಹಾದಿಯಲ್ಲಿ ನಂತರ ಸಾಗಿ ಹೋಗುವವರಿಗೆ ಕೈ ಮರದಂತೆ ತೋರಬಹುದು. ಆದರೆ ಅಂತ ನಾಲ್ಕೈದು ಹೆಜ್ಜೆ ಮೂಡಿಸುವುದೂ ಸುಲಭದ ಮಾತಲ್ಲ. ಕಾರಣವಿಷ್ಟೇ, ನಮ್ಮ ಬದುಕಿನ ಹಾದಿ ಮರಳಿನದು. ಅದರಲ್ಲಿ ಹೆಜ್ಜೆಗಳು ಮೂಡುವುದಿಲ್ಲ. ಮೂಡಿದ ಗುರುತುಗಳೂ ಕ್ಷಣಾರ್ಧದಲ್ಲಿ ಬೀಸಿ ಬರುವ ಗಾಳಿ ಅಳಿಸಿ ಹಾಕಿರುತ್ತದೆ. ಒಂದರ್ಥದಲ್ಲಿ ಅದರಲ್ಲೂ ಅಧ್ಯಾತ್ಮದ ನೆಲೆಯಲ್ಲಿ ಹೇಳುವುದಾದರೆ ಹಾಗೆ ಬದುಕುವುದೇ ನಿಜವಾದ ಬದುಕು. ಅಂದರೆ ಹೆಜ್ಜೆ ಮೂಡಿಸದೇ ಮೂಡಿಸಿದಂತೆ ಬದುಕಬೇಕು. ಹಕ್ಕಿಗಳದ್ದು ಅಂಥ ಹೆಜ್ಜೆ ಮೂಡದ ಹಾದಿ.
ಮತ್ತೊಂದು ಹೊಸ ವರ್ಷ ಎದುರಾಗಿದೆ. ಬದುಕುವ ಜೀವಕೆ ಹೊಸತೇನು ? ಹಳತೇನು ? ವಾಸ್ತವವಾಗಿ ಹೇಳುವುದಾದರೆ ಒಂದು ವರ್ಷ ಕಳೆದು ಮತ್ತೊಂದು ಬರುವುದೆಂದರೆ ಮೃತ್ಯುವಿಗೆ ಹತ್ತಿರವಾಗುವುದು. ಇದು ಕಟು ವಾಸ್ತವ. ನಮಗೆ ಒಮ್ಮೊಮ್ಮೆ ಈ ನೆಲೆಯ ದೃಷ್ಟಿ ನಕಾರಾತ್ಮಕ ಎನಿಸುತ್ತದೆ. ಅದಕ್ಕೆ ಉಳಿದ ಹಾದಿಯನ್ನೂ ಸಂಕಟಮಯ ಮಾಡಿಕೊಳ್ಳದಿರಲು ಅದಕ್ಕೊಂದು ಧನಾತ್ಮಕ ನೆಲೆಯನ್ನು ಒದಗಿಸುತ್ತೇವೆ. ಅದೇ ‘ಹೊಸ ವರ್ಷ’.

ಕಳೆದು ಹೋದ ವರ್ಷದಲ್ಲಿ ಮಾಡಿದ್ದೇನು ? ಎಂದು ನೆನಿಸಿಕೊಂಡರೆ ಶೂನ್ಯ ಎನಿಸಬಹುದು. ಹಾಗೆಂದು ಮುಂದಿನ ವರ್ಷವೂ ಶೂನ್ಯದತ್ತಲೇ ಪಯಣಿಸಬೇಕೆಂದೇನೂ ಇಲ್ಲ. ಹೊಸ ವರ್ಷದ ನೆಲೆಯಲ್ಲಿ ಒಂದಷ್ಟು ಸಾಧನೆಗೆ ಗುರಿ ಇಟ್ಟುಕೊಳ್ಳಬಹುದು. ಅದು ಗೊತ್ತಿಲ್ಲದ ಊರಿಗೆ ಹೋಗುವಾಗ ನಕ್ಷೆ ಇಟ್ಟುಕೊಂಡದ್ದಕ್ಕೆ ಸಮ. ನಡೆಯುವಾಗ ದಾರಿ ತಪ್ಪಿದಂತೆ ಎನಿಸಿದಾಗಲೆಲ್ಲಾ ನಕ್ಷೆ ನೋಡಿ ಖಚಿತಪಡಿಸಿಕೊಂಡು ಮುಂದಡಿ ಇಡುವುದು. ಎಷ್ಟು ರೋಚಕವಲ್ಲವೇ ಬದುಕುವೆಂದರೆ ?

ಹೊಸ ವರ್ಷವೆಂದರೆ ಹೊಸ ಸೂರ್ಯ ಬರುವುದಿಲ್ಲ, ಚಂದಿರನೂ ಅಷ್ಟೇ. ಪ್ರಕೃತಿ ಮತ್ತು ಪ್ರಕೃತಿಯೊಳಗಿನ ನಾವಷ್ಟೇ ಹೊಸ ರೂಪ ಪಡೆಯುವುದು. ಹೇಮಂತನ ಗಾನಕ್ಕೆ ಮನಸೋತು ಕಳೆದು-ಕರಗಿ ಹೋಗುವ ಪ್ರಕೃತಿ ಮತ್ತೆ ವಸಂತನ ಕೊಳಲಗಾನದ ನಾದ ಕೇಳುತ್ತಲೇ ಹೊಸರೂಪ ತಳೆದು ಕಂಗೊಳಿಸಲು ತೊಡಗುತ್ತಾಳೆ. ಬದುಕು ಮತ್ತೆ ಚಿಗುರುತ್ತದೆ ; ಹೂವಂತೆ ಅರಳುತ್ತದೆ ; ಪಟ್ಟ ಪರಿಶ್ರಮವೆಲ್ಲಾ ಕಾಯಾಗಿ, ಹಣ್ಣಾಗಿ ಮಾಗುತ್ತದೆ. ಅದರ ಸವಿಯನ್ನೂ ಸವಿಯುವಷ್ಟರಲ್ಲಿ ವರ್ಷ ಮುಳುಗುತ್ತದೆ ; ನಿತ್ಯದ ಸೂರ್ಯ ಮುಳುಗುವವನಂತೆ.
ಎಷ್ಟೊಂದು ವಿಚಿತ್ರ. ನಾವು ಮತ್ತೆ  ಏಳಬೇಕು, ಹೊಸ ಉತ್ಸಾಹದಲ್ಲಿ. ವೈಫಲ್ಯದ ಕಹಿ ನೆನಪು ಮರೆತು ಸಜ್ಜಾಗಬೇಕು. ಮನುಷ್ಯ ಹಾಗೆಯೇ. ವಿನಾಶದತ್ತಲೇ ಕಾಲಿಡುತ್ತಾ ಉಳಿವಿಗಾಗಿ ಪ್ರಯತ್ನಿಸಿದ. ಅವನ ಇಡೀ ಇತಿಹಾಸ ಅದನ್ನೇ ಹೇಳುತ್ತದೆ. ಕಾಡಿನಲ್ಲಿ ಹುಟ್ಟಿ, ಅರಳಿ, ಬೆಳೆದು, ಒಂದು ದಿನ ಅಳಿದು ಹೋಗುವ ಮರದಂತೆಯೇ ಬದುಕಿತ್ತು. ಅದೇ ಎಷ್ಟೋ ಸೊಗಸು ಎನ್ನುವಂತಿತ್ತು. ಈಗಿನ ಸ್ಥಿತಿ (ಯುದ್ಧ, ಭಯೋತ್ಪಾದನೆ, ಅನ್ಯಾಯಗಳನ್ನು ಕಂಡಾಗ) ಕಂಡರೆ ಅದುವೇ ಸೊಗಸು ಎನ್ನಿಸುವುದಂತೂ ನಿಜ. ಆದರೂ ಮನುಷ್ಯ ಹೊಸ ನಡೆ ಇಟ್ಟಲು ಪಣ ತೊಟ್ಟ. ಏನೇನೋ ಹುಡುಕಿ ಬೆಂಕಿಯನ್ನು ಶೋಧಿಸಿದ. ವಿಪರ್ಯಾಸವೆಂದರೆ ಅದರ ಬೆಳಗುವ ಮತ್ತು ಬೇಯಿಸುವ ಗುಣವನ್ನು ಅರಿಯದೇ ಹೋದ. ಇಂದಿನ ಕತ್ತಲ ದಿನ ಕಂಡರೆ ಅದನ್ನು ಬೆಳಕಾಗಿಸಿಕೊಂಡದ್ದೇ ಕಡಿಮೆ. ಆದರೂ ಮನುಷ್ಯನ ಉತ್ಸಾಹ ಕುಂದಿಲ್ಲ. ಶೋಧನೆಯಲ್ಲಿ ತೊಡಗಿ, ತೊಡಗಿ, ಪರ್ಯಟನೆಯ ಜಗತ್ತು ಅಂಗೈಯಲ್ಲಿ ಬಂದು ನಿಂತಿದೆ. ತಂತ್ರಜ್ಞಾನದ ನೆಲೆ ಭೂಮಿಯನ್ನೇ ಚಿಕ್ಕದಾಗಿಸಿದೆ. ಇದೆಲ್ಲಾ ಇಂಥದೇ ಒಂದೊಂದು ಹೊಸ ವರ್ಷದಲ್ಲಿ ಘಟಿಸಿದ್ದು.

ಅದಕ್ಕೇ ಹಿರಿಯರು ಹೇಳುವ ಮಾತೊಂದಿದೆ. ಭವಿಷ್ಯಕ್ಕೆ ಇತಿಹಾಸ ಪ್ರಮುಖ ಬುನಾದಿ. ಭವಿಷ್ಯದತ್ತ ದೃಷ್ಟಿ ನೆಟ್ಟವ ಇತಿಹಾಸವನ್ನು ತಿರುಗಿ ನೋಡುವ ಸೌಜನ್ಯ, ಕುತೂಹಲ ಉಳಿಸಿಕೊಂಡಿರಬೇಕು. ಕಾರಣವಿಷ್ಟೇ, ಭವಿಷ್ಯ ಒಂದು ಕಲ್ಪನೆ, ಇತಿಹಾಸ ನಮ್ಮೆದುರು ಘಟಿಸಿದ ವಾಸ್ತವ. ಅಂಥದೊಂದು ವಾಸ್ತವದಿಂದ ಭವಿಷ್ಯದ ನಡೆಯನ್ನು ಸ್ಪಷ್ಟಗೊಳಿಸಿಕೊಳ್ಳಬಹುದು. ಆ ಮತ್ತೊಂದು ಅವಕಾಶ ಎದುರಿಗೆ ಬಂದಿದೆ. ಈಗ ಮತ್ತೆ ನಡೆಯೋಣ….ಒಂದಿಷ್ಟು ದೂರದವರೆಗೆ ಸಾಗೋಣ…ಆಯಾಸವಾದರೆ ಕ್ಷಣ ಹೊತ್ತು ನಿಲ್ಲೋಣ…ಮತ್ತೆ ನಡೆಯೋಣ…ಗುರಿ ಮುಟ್ಟದಿದ್ದರೂ ಪರವಾಗಿಲ್ಲ ; ಗುರಿಗೆ ಹತ್ತಿರವಾಗೋಣ.

ನಿರೀಕ್ಷೆಯ ಗಾಳಿಪಟ ಎಂದಿಗೂ ಕೆಳಗೆ ಇಳಿಯುವುದಿಲ್ಲ ; ಆಕಾಶದಲ್ಲಿ ಎತ್ತರೆತ್ತರಕ್ಕೆ ಹಾರುತ್ತಲೇ ಇರುತ್ತದೆ. ಗೋತಾ ಹೊಡೆಯುವ ಸಂದರ್ಭದಲ್ಲೂ ತನ್ನನ್ನು ಉಳಿಸುವ ಮತ್ತೊಂದು ಗಾಳಿಯ ನಿರೀಕ್ಷೆಯಲ್ಲಿರುತ್ತದೆ. ಅದಕ್ಕೇ ಬದುಕೆಂದರೆ ಅಂಥದ್ದೇ ಒಂದು ಗಾಳಿಪಟ. ಅದನ್ನು ನಾವು ಬಾನೆತ್ತರಕ್ಕೆ ಹಾರಿಸೋಣ…ನಾವೂ ಹಾರೋಣ. ಹೊಸ ವರ್ಷದ ಶುಭಾಷಯಗಳು.