ನಿಜಕ್ಕೂ ಖುಷಿಯಾಗುತ್ತಿದೆ. ನಮ್ಮ ಮುಂದಿನ ಸವಾಲು ಮತ್ತಷ್ಟು ಕಠಿಣವಾಗಿದೆ. ಸುಮ್ಮನೆ ಎಂದು ಆರಂಭಿಸಿದ “ಸಾಂಗತ್ಯ’ದ ಪ್ರಯತ್ನಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜ.3 ಮತ್ತು 4 ರಂದು ಕುಪ್ಪಳ್ಳಿಯಲ್ಲಿ ನಡೆಯುವ “ನಮ್ಮ ಚಿತ್ರೋತ್ಸವ’ ಕ್ಕೆ ಸಿಕ್ಕ ಪ್ರತಿಕ್ರಿಯೆ ಹಾಗೂ ನೋಂದಣಿ ನಿಜಕ್ಕೂ ಹೊಸ ಹುಮ್ಮಸ್ಸು ಮೂಡಿಸಿದೆ. ಈ ಹಿಂದೆ ಮಂಥನದ ಗೆಳೆಯರು ಮತ್ತು ನಾನು ಕೊಡಚಾದ್ರಿಯಲ್ಲಿ ಕುಳಿತು ಯೋಚಿಸುತ್ತಿದ್ದಾಗ ಹೊಳೆದ ಆಲೋಚನೆ ಇದು. ಅದೀಗ “ಸಾಂಗತ್ಯ’ ಎಂಬ ಹೊಸ ರೂಪ ಪಡೆದಿದೆ.

ನಾವು ನೋಂದಣಿಗೆ ಕೋರಿದ್ದೆವು. ನಾವು ನಿಗದಿಪಡಿಸಿರುವುದೇ ಮೂವತ್ತೈದು ಮಂದಿಗೆ ಮಾತ್ರ. ಆದರೆ ಸುಮಾರು ೪೫ ಕ್ಕೂ ಹೆಚ್ಚು ಮಂದಿ ಅವಕಾಶ ಕೋರಿದ್ದಾರೆ. ಹಾಗಾಗಿ ಒಮ್ಮೆ ಖಚಿತಪಡಿಸಿದವರನ್ನು ಮತ್ತೊಮ್ಮೆ ನಾವೇ ಕೇಳಿ ಹೆಚ್ಚುವರಿ ಹತ್ತು ಮಂದಿಯಲ್ಲಿ ಕೆಲವರಿಗಷ್ಟೇ ಅವಕಾಶ ಕಲ್ಪಿಸಲು ಸಾಧ್ಯವಾಗಿದೆ.

ಬಹಳ ಖುಷಿಯ ಸಂಗತಿಯೆಂದರೆ ಶೇ. 60 ಕ್ಕೂ ಹೆಚ್ಚು ಮಂದಿ ಎಲ್ಲರೂ ಹೊಸಬರು. ಕೇವಲ ಸಿನಿಮಾದ ಆಸಕ್ತಿಯಿಂದಲೇ ಒಟ್ಟಿಗೆ ಸೇರುತ್ತಿದ್ದಾರೆ. ರಾಜ್ಯದ ವಿವಿಧೆಡೆಯಿಂದಲೂ ಬರುತ್ತಿದ್ದಾರೆ. ನಿಜಕ್ಕೂ ನಮ್ಮ ಸಾಂಗತ್ಯದೊಂದಿಗೆ ನಡೆಯಲು ಹಲವರು ಸಿದ್ಧರಿದ್ದಾರೆ ಎಂಬುದೇ ಹೊಸ ಖುಷಿ.

ಸಂಖ್ಯೆಯನ್ನು ನಿಗದಿಪಡಿಸಿದ್ದಕ್ಕೆ ಒಂದು ಕಾರಣವಿದೆ. ನಾವು ಚಿತ್ರಗಳನ್ನು ನೋಡುತ್ತಿರುವ ಸ್ಟುಡಿಯೋ ೪೦ ಮಂದಿಗೆ ಹೇಳಿ ಮಾಡಿದ್ದು. ಸುಮಾರು ೩೫ ಮಂದಿ ಪಾಲ್ಗೊಳ್ಳುವವರಾದರೆ, ಸಂಘಟಕರು ಐದಾರು ಮಂದಿ. ಅಲ್ಲಿಗೆ ಕೊಠಡಿ ಹೌಸ್‌ಪುಲ್. ಇದೊಂದೇ ಕಾರಣವಲ್ಲ. ಆ ಕೊಠಡಿಯಲ್ಲಿ ಚಿತ್ರ ನೋಡುವ ಅನುಭವವೇ ವಿಶಿಷ್ಟ ಎಂಬುದು ನಮ್ಮ ಅಂದಾಜು.

ಇನ್ನೂ ಒಂದು ಕಾರಣವೆಂದರೆ, ಚಿತ್ರದ ಚರ್ಚೆಗೆ ಒಂದಿಷ್ಟೇ ಮಂದಿ ಇದ್ದರೆ ಸೂಕ್ತ ಎಂಬುದು ನಮ್ಮ ಅನಿಸಿಕೆಯೂ ಸಹ. ನಮ್ಮಲ್ಲಿ ಉಪನ್ಯಾಸಗಳು ಇರುವುದಿಲ್ಲ. ಭಾಷಣವೂ ಇರುವುದಿಲ್ಲ. ಅದರ ಬದಲಾಗಿ ಸಿನಿಮಾ ರಂಗದಲ್ಲಿ ಸಾಕಷ್ಟು ಅನುಭವ ಹೊಂದಿರುವ ಹಾಗೂ ಸಾಕಷ್ಟು ತಿಳಿದಿರುವ ಶ್ರೀ ಪರಮೇಶ್ ಗುರುಸ್ವಾಮಿ ಹಾಗೂ ರಂಗನಟ ಕೃಷ್ಣಮೂರ್ತಿ ಕವತ್ತಾರ್ ನಮ್ಮೊಂದಿಗೆ ಭಾಗವಹಿಸುತ್ತಿದ್ದಾರೆ. ಬೇರೊಂದು ಕಾರ್ಯಕ್ರಮಕ್ಕೆ ಸಿದ್ಧವಾಗುತ್ತಿರುವ ಶ್ರೀ ವಸುಧೇಂದ್ರ ಅವರು ಶೇ. 90 ರಷ್ಟು ಭಾಗವಹಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶ್ರೀ ಜಿ. ಎನ್. ಮೋಹನ್ ಅವರು, ಜ. 4 ರಂದು ಶಿವಮೊಗ್ಗದಲ್ಲೇ ಇರುವುದರಿಂದ ಕೆಲ ಹೊತ್ತು ನಮ್ಮೊಡನೆ ಕಳೆಯುವುದಾಗಿ ಹೇಳಿದ್ದಾರೆ. ಒಂದೆರಡು ನಿಮಿಷಗಳ ಉದ್ಘಾಟನೆಯನ್ನು ಜ. 3 ರಂದು ಬೆಳಗ್ಗೆ 9.30 ಕ್ಕೆ ಮಾಡಿಕೊಡಲು ಕುವೆಂಪು ಟ್ರಸ್ಟ್‌ನ ಹಾಗೂ ಕುಪ್ಪಳ್ಳಿಯಲ್ಲಿ ವ್ಯವಸ್ಥೆ ಕಲ್ಪಿಸಿ ಸಹಕರಿಸಿರುವ ಶ್ರೀ ಕಡಿದಾಳ್ ಪ್ರಕಾಶ್ ಒಪ್ಪಿದ್ದಾರೆ. ನಾವೇನೋ ಫಿಲ್ಮ್ ಗಳನ್ನು ಹೊತ್ತುಕೊಂಡು ಹೋಗುತ್ತೇವೆ. ಅದಕ್ಕೆ ಸೂಕ್ತ ವ್ಯವಸ್ಥೆಯನ್ನು ಕೊಪ್ಪದ ಸುಧೀರ್ ಕುಮಾರ್, ತೀರ್ಥಹಳ್ಳಿಯ ಮಧುಕರ್ ಮಯ್ಯ ಮತ್ತು ಗೆಳೆಯರು ಕೈಗೊಳ್ಳುತ್ತಿದ್ದಾರೆ. ಅದನ್ನು ಮರೆಯುವಂತಿಲ್ಲ. ಇವರೆಲ್ಲರಿಗೂ ಧನ್ಯವಾದಗಳು.

ಉಪನ್ಯಾಸಕ್ಕಿಂತಲೂ ಚಿತ್ರಗಳನ್ನು ನೋಡುತ್ತಾ, ಚರ್ಚಿಸುತ್ತಾ, ಅದರ ವಿಭಿನ್ನ ಆಯಾಮಗಳನ್ನು ತಿಳಿಯುತ್ತಲೇ ಸಿನಿಮಾವನ್ನು ಅರ್ಥ ಮಾಡಿಕೊಳ್ಳಬಹುದು ಮತ್ತು ಮಾಡಿಕೊಳ್ಳಬೇಕೆಂಬ ನಂಬಿಕೆ ನಮ್ಮದು. ಅದಕ್ಕಾಗಿ ಈ ಪ್ರಯತ್ನ. ಇದೊಂದು ರೀತಿಯಲ್ಲಿ ಕಲಿಕೆಯೇ ಎಂಬುದು ನಮ್ಮ ನಂಬಿಕೆ.

ಒಂದಷ್ಟು ಮಾಹಿತಿ ಎಂದರೆ, ಎಂಟು ಚಿತ್ರಗಳ ಚರ್ಚೆಯ ನಿರ್ವಹಣೆಯನ್ನು ಎಂಟು ಮಂದಿ ಕೈಗೊಳ್ಳುತ್ತಾರೆ. ಪ್ರತಿ ಚಿತ್ರಕ್ಕೂ ಅರ್ಧ ಗಂಟೆಯಿಂದ ಒಂದು ಗಂಟೆವರೆಗೆ (ಚರ್ಚೆಯ ಓಘ ಆಧರಿಸಿ) ಚರ್ಚೆಗೆ ಅವಕಾಶವಿರುತ್ತದೆ. ಎಂಟು ವಿಭಿನ್ನವಾದ ಚಿತ್ರಗಳನ್ನು ಆಯ್ಕೆ ಮಾಡಿದ್ದು, ಅವೆಲ್ಲವೂ ಭಿನ್ನ ಭಿನ್ನ ನೆಲೆಯವೂ ಸಹ, ಭಾಷೆಯವೂ ಸಹ.

ವೇದಿಕೆ ಸಿದ್ಧಗೊಳ್ಳುತ್ತಿದೆ. ನೀವಿನ್ನು ಹೊರಡಬೇಕು. ಚಳಿ ಸಾಕಷ್ಟಿದೆಯಂತೆ (ಪಟ್ಟಣದಲ್ಲೇ ಸಾಕಷ್ಟು ಚಳಿ, ಇನ್ನು ಅರಣ್ಯದಲ್ಲಿ !) ಹೊದೆಯಲು ಎಷ್ಟಿದ್ದರೂ ಸಾಲದು. ಹೊರಡಲು ಸಿದ್ಧರಾಗಿ, ನಾವಂತೂ ನಿಮ್ಮನ್ನು ಅಲ್ಲಿ ನಿರೀಕ್ಷಿಸುತ್ತೇವೆ. ಚಿತ್ರ ಮೂಡುವ ಹೊತ್ತಿನಲ್ಲಿ ನೀವಲ್ಲಿರಿ.