ಹಲವು

ಸಾಹಿತ್ಯವೈದ್ಯರಿಗೆ ಪ್ರಶಸ್ತಿ

vaidya-12ನಾಡಿನ ಲೇಖಕ ಶ್ರೀನಿವಾಸ ವೈದ್ಯರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.
ವೈದ್ಯರು ನಿಜವಾಗಲೂ ಡಾಕ್ಟರಲ್ಲ. ಆದರೆ ಹತಾಶೆಗೊಂಡ ಮನಸ್ಸಿಗೆ ತಮ್ಮ ಲಲಿತ ಶೈಲಿಯ ಬರಹಗಳಿಂದ ಚಿಕಿತ್ಸೆ ನೀಡಿದವರು. ೭೨ ವಯಸ್ಸಿನ ಅವರೀಗ ಬದುಕಿನ ಉತ್ತರಾಯಣದಲ್ಲಿರುವವರು. ಅವರೇ ಹೇಳುವಂತೆ ‘ನಾನೀಗ ಬದುಕಿನ ಉತ್ತರಾಯಣದಲ್ಲಿರುವುದು ನಿಜ. ಆದರೆ ಬರವಣಿಗೆಯ ಹುಚ್ಚು ನೋಡಿದರೆ ಇದು ಆರಂಭ’.

ಇದುವರೆಗೆ ಐದು ಕೃತಿಗಳನ್ನು ಬರೆದಿರುವ ಅವರು, ಆರಂಭವೇನೋ ಹಾಸ್ಯದ ನೆಲೆಯಲ್ಲೇ, ಈಗ ನಡೆಯುತ್ತಿರುವುದು ಗಂಭೀರ ಸಾಹಿತ್ಯದತ್ತ. ರಾ. ಶಿ. ಅವರ ‘ಅಪರಂಜಿ’ ಪತ್ರಿಕೆಯಲ್ಲಿ ಸಾಕಷ್ಟು ಹಾಸ್ಯ ಬರಹಗಳನ್ನು ಬರೆದವರು.

‘ತಲೆಗೊಂದು ತರ ತರ’, ‘ರುಚಿಗೆ ಹುಳಿಯೊಗರು’ ಅವರ ಹಾಸ್ಯ ಬರಹಗಳು. ನಂತರ ‘ಸುಖರಾಯನ ಮನಸು’, ‘ಹಳ್ಳ ಬಂತು ಹಳ್ಳ’ ಹಾಗೂ ‘ಅಗ್ನಿಕಾರ್‍ಯ’ ಗಂಭೀರ ನೆಲೆಯತ್ತ ಹೊರಳಿರುವ ಬರವಣಿಗೆಗಳು. ‘ಹಳ್ಳ ಬಂತು ಹಳ್ಳ’ ಕಾದಂಬರಿಗೆ ಒಲಿದಿರುವುದು ಅಕಾಡೆಮಿ ಪ್ರಶಸ್ತಿ.

‘ನೀವಂದು ಕೊಂಡಂತೆ ಹಳ್ಳ ಬಂತು ಹಳ್ಳ ಕಾದಂಬರಿ ಹಾಸ್ಯದಲ್ಲ ; ಗಂಭೀರದ್ದು. ಬರವಣಿಗೆಯಲ್ಲಿ ಸಂತಸ ಇರಬೇಕು ಎನ್ನುವುದಾದರೆ ಅಂಥದೊಂದು ಗುಣ ನನ್ನ ಈ ಕೃತಿಯಲ್ಲಿದೆ. ಅದನ್ನೇ ನೀವು ಹಾಸ್ಯ ಎಂದುಕೊಳ್ಳಬಹುದು. ಆದರೆ ಈ ಕೃತಿ ಕೊನೆಯಲ್ಲಿ ಉಳಿಸಿ ಬಿಡಬಹುದಾದ ಪರಿಣಾಮ ಗಂಭೀರವೇ’ ಎನ್ನುತ್ತಾರೆ ವೈದ್ಯರು.

‘ಹಾಸ್ಯದ ಅಭಿವ್ಯಕ್ತಿಗೆ ಸಾಕಷ್ಟು ಮಿತಿಯಿದೆ. ಅದು ಊಟಕ್ಕೆ ಉಪ್ಪಿನಕಾಯಿ ಇದ್ದಂತೆ. ಎಂದಿಗೂ ಅದರಿಂದಲೇ ಹೊಟ್ಟೆ ತುಂಬದು. ಎ.ಎನ್. ಮೂರ್ತಿರಾವ್, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರೆಲ್ಲಾ ಹಾಸ್ಯದಿಂದಲೇ ಆರಂಭಿಸಿದರು. ಆದರೆ ನಂತರ ಮುಖ ಮಾಡಿದ್ದು ಗಂಭೀರ ಬರವಣಿಗೆ. ನನ್ನನ್ನು ಅತಿಯಾಗಿ ಪ್ರಭಾವಿಸಿರುವುದು ಮೂರ್ತಿರಾಯರ ಹಗಲುಗನಸು, ಗೊರೂರರ ನಮ್ಮ ಊರಿನ ರಸಿಕರು ಇತ್ಯಾದಿ ಕೃತಿಗಳು. ಇದು ನಿಮಗೆ ನೋಡಲು ಹಾಸ್ಯ ಬರಹ ಎನಿಸಬಹುದು. ಆದರೆ ಅದರೊಳಗಿನ ಹೂರಣದ ಪರಿಣಾಮ ತೀರಾ ಗಾಢವಾದವು. ಹಾಗೆಯೇ ಹಾಸ್ಯಕ್ಕೇ ಸೀಮಿತಗೊಂಡವರು ಅಲ್ಲಿಯೇ ನಿಲ್ತಾರೆ. ಅದರಿಂದ ಮೀರಿ ಬೆಳೆಯಬೇಕಾದದ್ದು ಅವಶ್ಯ. ಇದರರ್ಥ ಹಾಸ್ಯ ಬರವಣಿಗೆ ಏನೂ ಅಲ್ಲದ್ದು ಎಂದು ಹೇಳುತ್ತಿಲ್ಲ’ ಎಂದು ಸ್ಪಷ್ಟಪಡಿಸುವುದನ್ನು ಮರೆಯಲಿಲ್ಲ.

ಗಂಭೀರ ಸಾಹಿತ್ಯಕ್ಕೆ ಒಂದು ಹದವಾದ ಸಿದ್ಧತೆ ಬೇಕು ಅಂತಾರಲ್ಲ, ಹಾಸ್ಯಕ್ಕೆ ಬೇಡವೇ ಎಂದು ಕೇಳಿದರೆ, ‘ಹೇಗೆ ಹಾಗೆ ಹೇಳ್ತೀರಿ. ಹಾಸ್ಯಕ್ಕೂ ಬೇಕು. ಅದರಲ್ಲೂ ಗಂಭೀರ ಹಾಸ್ಯ, ಹನಿ ಹಾಸ್ಯ ಎಂದಿವೆ. ಜೋಕ್ ಕ್ಷಣಿಕವಾಗಿ ಮುದ ನೀಡಬಹುದು. ಮನುಷ್ಯನನ್ನು ನಗಿಸುವುದೇ ಎರಡರ ಉದ್ದೇಶ ಸಹ. ಆದರೆ ಶ್ರೇಷ್ಟ ಮಟ್ಟದ ಸಾಹಿತ್ಯವೆಂದರೆ ಮನಸ್ಸಿನೊಳಗೆ ಸದಾ ರಿಂಗಣಿಸುವಂಥದ್ದು. ಅದಕ್ಕೆ ಹಾಸ್ಯ, ಗಂಭೀರ ಎಂಬ ಹಣೆಪಟ್ಟಿಯಿಲ್ಲ. ಕೊನೆಯೊಳಗೆ ಉಳಿಸಿಬಿಡಬಹುದಾದ ಪರಿಣಾಮ, ಬೀರಬಹುದಾದ ಪ್ರಭಾವದ ಸಾಮರ್ಥ್ಯ ಗಂಭೀರ ಹಾಸ್ಯಕ್ಕಿದೆ. ಹಾಗೆಂದ ಮಾತ್ರಕ್ಕೆ ಆ ಕ್ಷಣಕ್ಕೆ ಮುದ ನೀಡುವುದು ತಪ್ಪಲ್ಲ’ ಎಂದರು.

ಧಾರವಾಡದಿಂದ ಹೊರಟು ಮುಂಬಯಿ, ದಿಲ್ಲಿ, ಚೆನ್ನೈ, ಗೋವಾ, ಮಂಗಳೂರು ಮುಂತಾದ ನಗರಗಳಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದವರು. ನಿವೃತ್ತಿಗೆ ಮುನ್ನ ಬೆಂಗಳೂರಿನಲ್ಲಿ ದುಡಿದರು. ಈಗ ‘ಸಂವಾದ’ ಎಂಬ ಟ್ರಸ್ಟ್ ಕಟ್ಟಿಕೊಂಡು ಸಾಹಿತ್ಯ-ಸಂಸ್ಕೃತಿ ಸೇವೆಯಲ್ಲಿ ತೊಡಗಿದ್ದಾರೆ.
‘ನನಗೆ ಈಗ ನಾಯಕ-ಖಳನಾಯಕ ಎಂಬ ಪಾತ್ರಗಳನ್ನು ಸಂರಚಿಸುವುದರಲ್ಲಿ ಖುಷಿಯಿಲ್ಲ’ ಎನ್ನುವ ಅವರಿಗೆ ಎದುರಾದ ಮತ್ತೊಂದು ಪ್ರಶ್ನೆ ಎಂದರೆ  ‘ಹಾಸ್ಯದ ಹಿಂದೆ ನೋವು ಇದ್ದದ್ದೇ. ಹಾಸ್ಯ ಬರಹಗಾರರ ಬದುಕೂ ಬಹಳ ಸಂಕಷ್ಟದ್ದೇ’ ಎನ್ನುವುದು ನಿಜವೇ?

‘ನನ್ನ ಬದುಕಿನಲ್ಲಿ ಕಷ್ಟ ಇತ್ತು. ಆದರೆ ಅಷ್ಟಲ್ಲ. ಉತ್ತರ ಕರ್ನಾಟಕದ ನಮ್ಮಲ್ಲಿ ದಕ್ಷಿಣ ಮಹಾರಾಷ್ಟ್ರದವರ ಬದುಕಿನ ಛಾಯೆ ಕಂಡು ಬರುವುದು ಸಹಜವೇ. ಆ ಜನ ಎಷ್ಟೇ ಕಷ್ಟವಿದ್ದರೂ, ಬಡತನವಿದ್ದರೂ ಸಂತಸವಾಗಿ ಇರುವುದನ್ನು ಕಲಿತಿದ್ದಾರೆ. ಹೆಚ್ಚು ನಗ್ತಾ ಇರುತ್ತಾರೆ. ಅದೇ ಗುಣ ನನ್ನೊಳಗೂ ಬಂದಿರಬಹುದು’ ಎನ್ನುವುದು ಅವರ ಉತ್ತರ.

‘ನಗೆಹನಿಯೊಂದರ ಎಳೆ ಹಿಡಿದು ಅರ್ಧ ಪುಟ ಬರೆಯಬಹುದು. ಆದರೆ ಸೃಜನಶೀಲತೆಯ ಮಟ್ಟವನ್ನು ನಮ್ಮೊಳಗೆ ವೃದ್ಧಿಸಿಕೊಳ್ಳದಿದ್ದರೆ ಅದು ಬರವಣಿಗೆಯಾಗದು. ಜತೆಗೆ ಅಭಿರುಚಿಯ ಹೊಣೆಯೂ ಮಹತ್ವದ್ದು. ನನಗೂ ಸೃಜನಶೀಲತೆಯ ಕುಸುರಿಯ ಹುಚ್ಚು  ಹಿಡಿದಿದೆ. ಅದೆಲ್ಲಿಗೆ ಕೊಂಡೊಯ್ಯುತ್ತದೋ ಗೊತ್ತಿಲ್ಲ’ ಎಂದು ಹೆದರಿಸಿದರು (ತಮಾಷೆಗೆ).

ಸಾಕಷ್ಟು ಮಹಾನಗರಗಳಲ್ಲಿ ದುಡಿದಿರೋ ನಿಮಗೆ ಅಲ್ಲಿನ ಪ್ರತಿಮೆಗಳು ಪ್ರಭಾವಿಸಲಿಲ್ಲವೇ ಎಂಬ ಪ್ರಶ್ನೆಗೆ ಅವರು ನೀಡಿದ ಉತ್ತರ ಚೆನ್ನಾಗಿತ್ತು. ‘ಬಾಲ್ಯದ ನೆನಪುಗಳು ಹಸಿ ಗೋಡೆಗೆ ಸಿಗಿಸಿದ ಹರಳುಗಳಂತೆ ಗಟ್ಟಿಯಾಗಿ ನೆಲೆಯೂರಿರುತ್ತವೆ. ಆದರೆ ಮಹಾನಗರಗಳಲ್ಲಿ ದುಡಿಯುವಾಗ ಅಲ್ಲಿನ ಒತ್ತಡ, ಯಾಂತ್ರಿಕ ಬದುಕಿನ ಶೈಲಿ, ವಾಣಿಜ್ಯ ನೆಲೆ ಎಲ್ಲವೂ ನಮ್ಮೊಳಗೆ ಗಟ್ಟಿಯಾಗಿ ಉಳಿದುಕೊಳ್ಳುವುದು ಕಷ್ಟ. ಹಳ್ಳಿ ಬದುಕಿನ ಸ್ವತಂತ್ರತೆಯೂ ಅಲ್ಲಿರಲಾರದು. ನನಗೆ ನಿಜವಾಗಲೂ, ಈ ನಗರಗಳು ಕೊನೆ ಕೊನೆಗೆ ನನ್ನೊಳಗೆ ಭಯವನ್ನು ಹುಟ್ಟಿಸಿದವು. ಹಳ್ಳಿಯಲ್ಲಿರುವಾಗ ಸ್ವಲ್ಪ ಹೊಟ್ಟೆಕಿಚ್ಚು, ಸಂತಸ ಹೀಗೆ ಎಲ್ಲ ಗುಣಗಳೂ ಇರುತ್ತವೆ. ಮಹಾನಗರಗಳ ಬದುಕಿನಲ್ಲಿ ಇದ್ಯಾವುದೂ ಕಾಣಿಸದ ಮುಖ ಹೀನ, ಯಾಂತ್ರಿಕ ನಡೆಗೆ ಹೊಂದಿಕೊಳ್ಳುತ್ತೇವೆ.ದುರದೃಷ್ಟವೆಂದರೆ ಹಾಗಿದ್ದು ಕೊನೆಗೆ ಹಳ್ಳಿಯಲ್ಲಿ ಬದುಕಬೇಕೆಂದರೆ ರೌರವ ನರಕ ಎನಿಸುವುದು ಸಹಜ. ಒಂದುವೇಳೆ ಹಳ್ಳಿಯ ಮಂದಿ ಒಂದು ವ್ಯಕ್ತಿತ್ವ ಕೊಡುತ್ತೇವೆ ಎಂದರೂ ಪಡೆಯಲು ಸಾಧ್ಯವಾಗದಂಥ ಮಾನಸಿಕ ಸ್ಥಿತಿ ನಮ್ಮದಾಗಿರುತ್ತದೆ. ಹಾಗಾಗಿ ಹಳ್ಳಿಯ ನೆನಪೇ ನನಗೆ ಹೆಚ್ಚು’ ಎಂದರು.
ಪತ್ರಿಕೆಯೊಂದಿಗೆ ಮಾತು ಮುಗಿಸುವ ಮುನ್ನ, ‘ಹೊಸದೇನೂ ಹೊಳೆದಿಲ್ಲ. ತಲೆ ಖಾಲಿಯಾಗಿದೆ. ಹೊಳೆದರೆ ಬರೆಯುತ್ತೇನೆ. ಇಲ್ಲವಾದರೆ…’ ಸುಮ್ಮನಿರುತ್ತೇನೆ ಎಂದೇನೋ ಹೇಳಲಿಲ್ಲ. (ವಿಜಯ ಕರ್ನಾಟಕಕ್ಕೆ ಸಂದರ್ಶನ ಮಾಡಿದ್ದು)

Advertisements

One thought on “ಸಾಹಿತ್ಯವೈದ್ಯರಿಗೆ ಪ್ರಶಸ್ತಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s