ನಾಡಿನ ಹಿರಿಯ ವಿದ್ವಾಂಸ ಪ್ರೊ. ಎಲ್. ಬಸವರಾಜು ಅವರು ಚಿತ್ರದುರ್ಗದಲ್ಲಿ ಜ. ೨೯ ರಿಂದ ಫೆ. ೧ ರವರೆಗೆ ನಡೆಯುವ ೭೫ ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ೯೦ ವರ್ಷದ ವಿದ್ವಾಂಸರಿಗೆ ಸಂದುತ್ತಿರುವ ಗೌರವ. ಆ ಲೆಕ್ಕದಲ್ಲಿ ನೋಡುವುದಾದರೆ ಬಹಳ ವರ್ಷಗಳ ನಂತರ ಹಿರಿತನ, ಪ್ರತಿಭೆ, ಸೇವೆ ಎಲ್ಲವೂ ಒಟ್ಟಿಗೆ ಪರಿಗಣಿತವಾಗಿ ಆಯ್ಕೆಯಾದ ಹೆಸರು. ಈ ಮಾತಿನ ಅರ್ಥ ಈ ಹಿಂದೆ ಆಯ್ಕೆಯಾದವರು ಸರಿ ಇರಲಿಲ್ಲವೆಂದಾಗಲೀ, ಅಥವಾ ಈ ಬಾರಿ ಚರ್ಚೆಗೆ ಬಂದ ಹೆಸರುಗಳಲ್ಲಿ ಬೇರೆ ಯಾರೂ ಇರಲಿಲ್ಲವೆಂದಾಗಲೀ ಅರ್ಥವಲ್ಲ.
ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಬಸವರಾಜು ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ಅವರ ಮನೆಗೆ ಪತ್ರಿಕೆಯ ಪರವಾಗಿ ಹೋಗಿದ್ದೆ. ಪಡಸಾಲೆಯಲ್ಲಿ ತಮ್ಮೆದುರು ನಾಲ್ಕು ಕುರ್ಚಿ ಇಟ್ಟುಕೊಂಡು, ಬಿಳಿ ದಿರಿಸು ಧರಿಸಿ, ಗಡ್ಡ ಬಿಟ್ಟುಕೊಂಡು ಕುಳಿತು ಸಂತನಂತೆಯೇ ಮಾತನಾಡುತ್ತಿದ್ದರು ಬಸವರಾಜು ಅವರು.
ಎಲ್. ಬಸವರಾಜು ನಮ್ಮ ಮಧ್ಯೆ ಇರುವ ಅತ್ಯುತ್ತಮ ವಿದ್ವಾಂಸರು. ಹಳಗನ್ನಡವನ್ನು ಮೋಹಿಸುತ್ತಲೇ, ಆಧುನಿಕ ನೆಲೆಯಲ್ಲಿ ಅದಕ್ಕೊಂದು ರೂಪ ನೀಡಬಹುದೇ ಎಂದು ಪ್ರಯತ್ನಿಸಿದವರು. ಜತೆಗೆ ಒಂದು ಸಾಹಿತ್ಯ ಕೃತಿಯನ್ನು ಮತ್ತೊಂದು ಬಗೆಯಲ್ಲೂ ನೋಡಬಹುದೇ ಎಂದು ಪ್ರಯೋಗಕ್ಕೆ ತೊಡಗಿದವರು. ಈ ಮಾತಿಗೆ ದೇವನೂರು ಮಹಾದೇವರ “ಕುಸುಮ ಬಾಲೆ’ಯನ್ನು ಮತ್ತೆ ರೂಪಿಸಿದ್ದು.
ಸಾಹಿತ್ಯ ಸೇರಿದಂತೆ ಎಲ್ಲ ನೆಲೆಗಳಲ್ಲೂ ಪ್ರಯೋಗ ಶೀಲತೆ ನಿರಂತರವಾಗಿರಬೇಕು. ಒಂದಷ್ಟು ಮಂದಿ ಪ್ರಶಸ್ತಿ-ಪುರಸ್ಕಾರ-ಸಮ್ಮೇಳನ ಅಧ್ಯಕ್ಷ ಗೌರವ- ಇನ್ನಿತರೆ ಅಲಂಕಾರ ಸಂಭೂತರಾಗಿ ಪ್ರಯೋಗಶೀಲತೆಯನ್ನೇ ನಿಲ್ಲಿಸಿ, ಹಳತರಲ್ಲೇ ಬದುಕು ನೂಕುತ್ತಿರುವಾಗ ಮತ್ತೊಂದಿಷ್ಟು ಮಂದಿ ಪ್ರಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಬಹುಶಃ ಆ ಗುಣವೇ ಇಂದಿಗೂ ಅವರನ್ನು ಬದುಕಿಸಿರುವಂಥದ್ದು.
ಪ್ರೊ. ಎಲ್. ಬಸವರಾಜು ಅಂಥವರಲ್ಲಿ ಒಬ್ಬರು. ಪ್ರೊ. ಜಿ. ವೆಂಕಟಸುಬ್ಬಯ್ಯ, ಡಾ. ಟಿ. ವಿ. ವೆಂಕಟಾಚಲಶಾಸ್ತ್ರಿಗಳಂಥವರು ಇದೇ ಸಾಲಿನಲ್ಲಿ ಬರುವವರು.

ಆಯ್ಕೆ ಸಂದರ್ಭದಲ್ಲಿ ಇನ್ನಷ್ಟು ಹೆಸರು ಚರ್ಚೆಗೆ ಬಂದಿತಂತೇ ಎಂದು ಕೇಳಿದ ಪ್ರಶ್ನೆಗೆ, “ಚರ್ಚೆಯಾಗಲಿ, ಅದರಲ್ಲೇನು ತಪ್ಪು ?’ ಎಂದು ಆ ಪ್ರಶ್ನೆಯನ್ನೇ ಮೊಟಕುಗೊಳಿಸಿಬಿಟ್ಟರು. ನಂತರ ಹರಿದದ್ದು ಲಹರಿಯೇ. ತಡೆಯುವ ಧೈರ್ಯ ಯಾರಿಗೂ ಇರಲಿಲ್ಲ. ಹಾಗೆ ಹರಿದ ಲಹರಿಯಲ್ಲಿ ಪ್ರಸ್ತುತ ಸಂದರ್ಭದ ಬೆಳವಣಿಗೆ, ಆ ಬಗೆಗಿನ ತಲ್ಲಣ, ಒಳ್ಳೆಯದ್ದರ ಬಗ್ಗೆ ಸಂತಸ-ಎಲ್ಲವೂ ದರ್ಶನವಾಯಿತು.  ಬಿಸಿ ಬಿಸಿ ಮಾತುಗಳಿಗೆ ತಣ್ಣನೆಯ ಹಾಸ್ಯ ಬೆರಸಿ ಅದರ ತೀವ್ರತೆಯನ್ನು ತಗ್ಗಿಸಿ ಬಿಡುವುದು ಅವರಿಗೆ ಕರಗತವಾದ ಕಲೆ ಎಂಬುದು ಕೆಲ ಮಾತುಗಳಲ್ಲೇ ವ್ಯಕ್ತವಾಯಿತು. ಆ ಲಹರಿ ಸುಮ್ಮನೆ ಇಲ್ಲಿ ದಾಖಲಿಸಿದ್ದೇನೆ.
“ಯಾವುದಕ್ಕೂ ನಾವು ವಿವೇಕ ತಂದುಕೊಳ್ಳಬೇಕು. ಅದಿಲ್ಲದೇ ಹೋದರೆ ಏನಾಗುತ್ತೆ ಅಂದ್ರೆ, ಈಗ ನಮ್ಮ ದೇಶ ಇದೆಯಲ್ಲ, ಹಾಗಾಗುತ್ತೇವೆ. ಏನ್ರೀ ತಿನ್ನಲಿಕ್ಕೆ ಅನ್ನ ಇಲ್ಲ, ಕುಡಿಯಲಿಕೆಕ ನೀರಿಲ್ಲ. ವಿದ್ಯೆ ಇಲ್ಲ..ಇದ್ರ ಮಧ್ಯೆ ಜಾತೀಯತೆ..ಛೇ..ಬೇಸರ ಆಗುತ್ತೆ. ಬಸವಣ್ಣ ಜಾತೀಯತೆ ನಿರ್ಮೂಲನೆಗೆ ಶ್ರಮಪಟ್ಟ. ಅವನು ಹೋದ ಮೇಲೆ ಜಾತೀಯತೆ ಮತ್ತೆ ನಮ್ಮಲ್ಲೇ ಬಂದಿತು. ಏನೂ ಮಾಡೋಕ್ಕಾಗೋಲ್ಲ..’
ನಿಮಗೆ ಅಧ್ಯಕ್ಷ ಸ್ಥಾನ ಗೌರವ ಸಿಕ್ಕಿದೆಯಲ್ಲಾ… ಎಂಬ ಪ್ರಶ್ನೆ ಕೇಳಿದ್ದೇ ತಡ…”ನೋಡಿ, ಇಂಥ ಮಾತಿನಿಂದ ನಮಗೆ ಸ್ವಲ್ಪ ಮಾನ ಬರುತ್ತೆ. ಯಾವಾಗಲೂ ನಾವ್ಯಾರೂ ನಮಗೆ ಮಾನ ಬರೋ ಮಾತು ಕೇಳಿದರೆ ಖುಷಿಯೇ. ಬೇಡ ಎನ್ನೋದಿಲ್ಲ, ಬರೀ ಥ್ಯಾಂಕ್ಸ್ ಹೇಳ್ತೀವಿ. ಅಲ್ವೇ..’ ಎಂದು ನಕ್ಕರು.
ಯಾವ ಪ್ರಾಂತ್ಯದಲ್ಲಾದರೂ ಜನ ಒಟ್ಟಿಗೇ ಇದ್ದಾರೇನ್ರಿ ? ಕಾಂಗ್ರೆಸ್-ಬಿಜೆಪಿ ಹೆಂಗೆ ಕಚ್ಚಾಡ್ತಿದೆ. ಜೆಡಿಎಸ್ ಏನು ಸುಮ್ಮನಿದೆಯ? ಏನ್ರೀ, ರಾಜಕೀಯ ಅಂದ್ರೆ ಪರಸ್ಪರ ದ್ವೇಷ-ಕುಯುಕ್ತಿ ಇಷ್ಟೇನಾ ?ಗೊತ್ತಾಗ್ತಾ ಇಲ್ಲಾರೀ. ಎಲ್ಲರಿಗೂ ಇದು ತಪ್ಪು ಅಂತಾ ಗೊತ್ತಿದೆ. ಆದರೂ ಒಪ್ತಾ ಇಲ್ಲ, ನಿಲ್ಲಿಸ್ತಾ ಇಲ್ಲ..’.
ಇವತ್ತಿನ ಬೆಳವಣಿಗೆ ಬಗ್ಗೆ ಬೇಸರವಾಗುತ್ತೆ. ಕುಡಿಯುವ ನೀರನ್ನು ಪೂರೈಸೋದು ಖಾಸಗಿಯವರಿಗೆ ಕೊಟ್ಟಿದ್ದಾರೆ (ಕೆಲ ದಿನಗಳ ಹಿಂದೆ ಮೈಸೂರು ನಗರದ ಕುಡಿಯುವ ನೀರಿನ ನಿರ್ವಹಣೆಯನ್ನು ಖಾಸಗಿ ಕಂಪನಿಗೆ ವಹಿಸಲಾಗಿತ್ತು), ಅನ್ನವನ್ನೂ ಮಾರ್ತಾರೆ. ದಕ್ಷಿಣ ಕನ್ನಡದ ದೇವಸ್ಥಾನದಲ್ಲಿ ಬಂದವರಿಗೆಲ್ಲಾ ಸಾಲಾಗಿ ಪಂಕ್ತಿಯಲ್ಲಿ ಕೂರಿಸಿ ಊಟ ಆಗ್ತಾರೆ..ನೋಡೋಕೆ ಎಷ್ಟು ಚೆಂದ…ಬಿಳಿ ಬಿಳಿ ಅನ್ನ…ಅದಕ್ಕೆ ಸಾರು…ಇವನ್ನೆಲ್ಲಾ ಮಾರೋದಿಕ್ಕೆ ತೊಡಗಿದ್ರೆ ಹೇಗೆ? ಅದೇ ಹೇಳಿದ್ದನ್ನೆಲ್ಲಾ…ಈ ಬೆಳವಣಿಗೆ ಕಂಡು ಬೇಸರವಾಗೋದು ನಿಜ. ಆದ್ರೆ, ಬಹಳ ನೊಂದುಕೊಳ್ಳೋದಿಲ್ಲರೀ, ಸತ್ತು ಹೋಗೋವಷ್ಟು. ತನ್ನ ಗಂಡ ಕುಡುಕ ಅಂತಾಲೇ ಕೊರಗಿ ಕೊರಗಿ ಸತ್ತು ಹೋಗುವ ಕುಡುಕನ ಹೆಂಡತಿಯಷ್ಟು ಯೋಚಿಸ್ತಾ ಇಲ್ಲ. ಹಾಗಂತ ಮನಸ್ಸು ಖೇದಕ್ಕೊಳಗಾಗುವುದು ಸತ್ಯ’.
ಅಧ್ಯಕ್ಷ ಪದವಿ ಬಂದಿದೆಯಲ್ಲಾ…”ಇದನ್ನು ಕೇಳಿ ಪಡೆದದ್ದಲ್ಲ. ಜತೆಗೆ ಇದೇನು ಮುಖ್ಯಮಂತ್ರಿ ಪದವಿಯೇ ? ಸಾಮ್ರಾಜ್ಯವೇ? ಗೌರವ ಬಂದಿದೆ. ಒಂದು ರೊಚ್ಚಿನಿಂದ ಬದುಕಿದ್ದಕ್ಕೆ ಸಿಕ್ಕ ಗೌರವ ಅಂತೀನಿ, ನೀವೇನಂತೀರಾ?’
ಕನ್ನಡದ ಉದ್ಧಾರದ ಪ್ರಶ್ನೆ ಎಲ್ಲರದ್ದು. ಸಾಹಿತ್ಯ ಪರಿಷತ್, ಸರಕಾರ ಎಲ್ಲವೂ ಮಾಡಬೇಕು. ಕಸಾಪ ಚಳವಳಿಕಾರರನ್ನೂ ಒಳಗೊಳ್ಳಬೇಕು. ನೆಲ-ಜಲಕ್ಕೆ ಹೋರಾಡೋರು ಹೊರಗೇ ಇರ್ತಾರೆ. ಹೋರಾಟದಲ್ಲಿ ಪಾಲ್ಗೊಳ್ಳದೇ ಇರೋ ನಮ್ಮ ಸಾಹಿತಿಗಳು ಮನೆಯೊಳಗೇ ಇರ್ತಾರೆ. ಅದು ಸರಿಯಲ್ಲ. ವಿದ್ವಾಂಸರನ್ನು ಕಲೆ ಹಾಕಿ ಚರ್ಚಿಸಿದಂತೆಯೇ ಚಳವಳಿಕಾರರನ್ನೂ ಒಳಗೊಂಡು ಚರ್ಚಿಸಬೇಕು. ಆ ಮೂಲಕ ಶಾಸನಬದ್ಧ ಸ್ಥಾನ ನೀಡೋದು ಸರಿ. ಧರ್ಮಕ್ಕೆ, ರಾಜಕೀಯಕ್ಕೆ, ಸಮಾಜಕ್ಕೆ ಸ್ವಯಂ ಸೇವಕರಿರುವಂತೆ ಸಾಹಿತ್ಯಕ್ಕೂ ಬೇಕು’.
ಇನ್ನೊಂದು ಮಾತು-ಚಳವಳಿಗಾರರೂ ಸಹ ಮನುಷ್ಯರ ಸೂಕ್ಷ್ಮ ಸ್ವಭಾವವನ್ನು ಗಾಯಗೊಳಿಸಬಾರದು. ಭಾಷಾಭಿಮಾನ, ದೇಶಾಭಿಮಾನ ಎಲ್ಲವೂ -ಮಾನ ಮರ್ಯಾದೆ ಬಿಟ್ಟು ಕೂಗಾಡಬಾರದು. ಅದೂ ನಿಜವೇ…ನಮಗೆ ಮೊದಲು ಷರಟಿನ ತೋಳನ್ನು ಮೇಲೆತ್ತಿಯೇ ಅಭ್ಯಾಸವಲ್ಲವೇ (ಇದು ನಮ್ಮೊಳಗಿನ ಅಹಂಕಾರ ಕುರಿತಾಗಿ ಹೇಳಿದ್ದು)..”ಎಂದು ನಕ್ಕಾಗ ಥೇಟ್ ಸಂತನಂತೆಯೇ.

ಯಾರನ್ನು ನಾವು ಕೊಲ್ಲಬೇಕು ಅಂದುಕೊಳ್ಳುತ್ತೇವೆಯೋ ಆಗ ನಮ್ಮ ಇಡೀ ವಂಶವೇ ನಿರ್ವಂಶವಾಗುತ್ತದೆ. ಮಹಾಭಾರತ ನಡಿಯಿತು. ಕೊನೆಗೆ ಉಳಿದದ್ದು ಏನ್ರೀ ? ಪಾಂಡವರೂ ಉಣ್ಣಲಿಲ್ಲ, ಕೌರವರೂ ಸಹ ಅಷ್ಟೇ. ಅವರ ಮಕ್ಕಳೆಲ್ಲಾ ಎಲ್ಲಿ ಹೋದರು ? ಅಲ್ವೇ ?..’
ಸಾಹಿತ್ಯ ಎಲ್ಲವನ್ನೂ ಪ್ರಭಾವಿಸಬೇಕು ನಿಜ. ಅದು ಹಾಗೆ ಆಗ್ತಾ ಇಲ್ಲ. ಜೈಲಿಗೆ ಹೋದವ ತಾನು ಏಕೆ ಕೊಲೆ ಮಾಡಿದೆ ಎಂದು ಹೊರಬಂದ ಮೇಲೆ ಕಾದಂಬರಿ ಬರೀತಾನೆ. ಈಗ ನಮ್ಮಲ್ಲಿರೋದು ಇಂಥವೇ. ಕೈದಿ ಬರೆದದ್ದು ಅಂಥ ಜನ ಸ್ವಲ್ಪ ಪುಸ್ತಕ ಕೊಳ್ಳಬಹುದು. ಆದರೆ ಅದು ಪ್ರಭಾವಿಸುತ್ತೆ ಎನ್ನೋ ಕಾರಣಕ್ಕಲ್ಲ. ಹಾಗಾಗಿ ಸಂಪೂರ್ಣ ಪ್ರಭಾವಿಸುವಂಥ ಸಾಹಿತ್ಯ ಬರೆಯೋ ಜನ ನಮ್ಮಲ್ಲಿ ಇಲ್ಲ.
“ಹುಷಾರಪ್ಪ…ಇವ್ರು (ಎದುರಿಗಿದ್ದ ಪತ್ರಕರ್ತರನ್ನು ಕಂಡು) ಬೇಟೆ ನಾಯಿಗಳು. ಏನಯ್ಯಾ…ಓಡ್ತೀಯ. ನಿನಗಿಂತ ಜೋರಾಗಿ ಓಡ್ತೀವಿ ಅಂತ ಬೇಟೆ ಆಡ್ತಾವೆ’ ಎಂದು ನಗುತ್ತಾ ಹೇಳಿ…ಮುಂದಿನ ಪ್ರಶ್ನೆ ಕೇಳಿ ಅಂದ್ರು.
ಏನಾದರೂ ರಚನಾತ್ಮಕವಾಗಿ ಹೇಳಬೇಕೆಂದಿದ್ದೇನೆ. ನೋಡೋಣ…ಜಗತ್ತಿನಲ್ಲಿ ಎಷ್ಟೊಂದು ಮಂದಿ ಹೇಳಿದ್ರು. ಋಷಿಗಳು ಹೇಳಿದರು. ಬುದ್ಧ ಹೇಳಿದ, ೨೪ ಮಂದಿ ತೀರ್ಥಂಕರರು ಹೇಳಿದ್ರು, ಕ್ರೈಸ್ತ ಹೇಳಿದ, ಮಹಮ್ಮದ್ ಪೈಗಂಬರ್ ಹೇಳಿದರು, ಬಸವಣ್ಣ ಹೇಳಿದ..ಗಾಂಧಿ ಬಂದ, ಅಂಬೇಡ್ಕರ್ ಬಂದ….ಹೀಗೇ…
ಕುವೆಂಪು ವಿಶ್ವ ಮಾನವ ಸಂದೇಶವನ್ನು ಕೊಟ್ಟರು.  ಆ ಕಾಲದಲ್ಲಿ ಕೇಳಿದ್ದಷ್ಟೇ ಬಂತು. ಒಂದಿಷ್ಟು ಮಂದಿ ಮೌನಕ್ಕಿದ್ದರು, ಮತ್ತಷ್ಟು ಮಂದಿ ಮಾತೇ ಆಡಲಿಲ್ಲ. ಈಗಲೂ ಜಾತೀಯತೆ ದೂರಾಗಿಲ್ಲ.
ಶಾಪ ಕೊಡದೇ ಇರುವ ಸಂತ ಸಂತನೇ ಅಲ್ಲಾರಿ. ಎಂದಿಗೂ ಋಷಿ ಸಂಕುಚಿತವಾಗಿರಲಿಲ್ಲ. ನಂತರ ಬ್ರಾಹ್ಮಣರಾಗಿ ಬಂದವರು ಹಾಗೆ ದುರಾಗ್ರಹದಿಂದ ಮಾಡಿದರು. ಹಾಗಾಗಿ ಜಾತೀಯತೆ ಎಲ್ಲೆಲ್ಲೂ ಇದೆ. ನಮ್ಮ ಜಾತಿಯಲ್ಲೂ ಸಹ.
“ಗಂಟೆ ಹೊಡೆಯೋವನಿಗೆ ಗೌರವ ಇಲ್ಲಾರೀ. ಗಂಟೆ ಹೊಡೆಯುವನಂತೆ ಹೇಳಿದವನಿಗೆ ಸಿಕ್ಕಾಪಟ್ಟೆ ಗೌರವ. ತಮಾಷೆ ನೋಡಿ, ನಾನು ಪೂಜಾರಿ. ದೇವರನ್ನೇ ಪೂಜಿಸ್ತೇನೆ. ಆದರೂ ಗೌರವ ಕಡಿಮೆಯೇ. ಪೂಜೆ ಮಾಡಲು ಸೂಚಿಸಿದವನಿಗೇ ಗೌರವ…’
ಕಾಲ ಕೆಡ್ತಾ ಇದೆ. ಸಾಹಿತ್ಯವೂ ಸಹ. ಅಸಂತೃಪ್ತರ ಕಾಲ….ಎಂದವರು ಮತ್ತಷ್ಟು ಮಾತನಾಡಿದರು. ಸ್ವಲ್ಪವೂ ಸುಸ್ತಾಗಿರಲಿಲ್ಲ. ಅಷ್ಟರಲ್ಲಿ ಮತ್ತಷ್ಟು ಮಂದಿ ಕ್ಯಾಮೆರಾ ಕ್ಲಿಕ್ಕಿಸಿದರು. ಅದನ್ನು ಕಂಡು “ನನ್ನ ಬಗ್ಗೆ ತಪ್ಪಾಗಿ ತಿಳ್ಕೊಳ್ಳಬೇಡಿ. ಬೆಳಗ್ಗೆಯಿಂದ ಇಷ್ಟು ಮಂದಿ ಫೋಟೊ ತೆಗೆದರು. ಗಡ್ಡ ಬೋಳಿಸಲೇ ಇಲ್ಲಾ. ನನ್ನ ಹೆಂಡತಿ ಗಡ್ಡ ಬೋಳಿಸಿ ಅಂದ್ಲು. ಆದ್ರೆ ಗಾಯವಾಗಿದೆ ಎಂದು ಹೇಳಿ ತೆಪ್ಪಗಾದೆ. ನಿಜಕ್ಕೂ…ಹೀಗೆ ಇರ್‍ಲಿ ಅನ್ನೋದು ನನ್ನ ಭಾವನೆ. ಅದಕ್ಕೆ ಆ ನೆವ ಕೊಟ್ಟೆ’ ಎಂದು ಹೇಳಿ ಜೋರಾಗಿ ನಕ್ಕು ಕೈ ಕುಲುಕಿದರು. ನಿಜವಾಗಲೂ ಖುಷಿ ಕೊಟ್ಟ ಭೇಟಿಯದು.
ಈ ಲೇಖನ ಸಿಕ್ಕಾಪಟ್ಟೆ ಜಾಸ್ತಿ ಎನಿಸಬಹುದು. ದಯವಿಟ್ಟು ಕ್ಷಮಿಸಿ. ಹರಿಯುವ ಲಹರಿಯನ್ನು ಕಡಿಯುವ ಧೈರ್ಯ ಬರಲಿಲ್ಲ.

ಬಸವರಾಜು 1919 ರಲ್ಲಿ ಕೋಲಾರದ ಇಡಗೂರಿನಲ್ಲಿ ಜನನ. ಪಂಪನ ಆದಿ ಪುರಾಣ,ವಿಕ್ರಮಾರ್ಜುನ ವಿಜಯಂ ಕೃತಿಗಳ ಸಂಪಾದನೆ. ಅಲ್ಲಮ, ಬಸವಣ್ಣ,ಅಕ್ಕಮಹಾದೇವಿ, ದೇವರ ದಾಸಿಮಯ್ಯರ ವಚನ ಸಂಪಾದನೆ, ಹಳಗನ್ನಡದ ಹಲವು ಕೃತಿಗಳ ಸಂಪಾದನೆ, ಕತ್ತಲೆ ರಾಕ್ಷಸರ ಬೆಳಕು-ವೈಚಾರಿಕ ಲೇಖನಗಳ ಗುಚ್ಛ, ಠಾಣಾಂತರ ಕವನ ಸಂಕಲನ, ಈಗ ಡೊಂಕು ಬಾಲದ ನಾಯಕರೇ ಕವನ ಸಂಕಲನ ಸಿದ್ಧವಾಗಿದೆ. ಪಂಪನ ಕುರಿತೇ ಮತ್ತಷ್ಟು ಅಧ್ಯಯನದಲ್ಲಿ ತೊಡಗಿದ್ದಾರೆ. ರಾಜ್ಯೋತ್ಸವ, ಕೇಂದ್ರ-ರಾಜ್ಯ ಸಾಹಿತ್ಯಅಕಾಡೆಮಿ,
ಬಸವ ಪುರಸ್ಕಾರ, ಗೋವಿಂದ ಪೈ ಪ್ರಶಸ್ತಿ, ಮೈಸೂರು ವಿವಿ ಗೌರವ ಡಾಕ್ಟರೇಟ್- ಸಂದ ಗೌರವಗಳಲ್ಲಿ ಕೆಲವು. l-basavarj-family-members1