ಅವಿಭಾಗೀಕೃತ

ಮುಂಬಯಿಗನ ಒಡಲದನಿ

ಇದು ಮುಂಬಯಿಯ ಪ್ರಕಾಶ್ ಬಜಾಜ್ ಎಂಬವರು ಪತ್ರಿಕೆಗೆ ಬರೆದ ಬಹಿರಂಗ ಪತ್ರ. ನನ್ನ ಇಮೇಲ್ ಸಂದೇಶಕ್ಕೆ ಬಂತು. ಮುಂಬಯಿಯಲ್ಲಿ ಬದುಕುತ್ತಿರುವ ಜನ ಸಾಮಾನ್ಯರ ಒಡಲದನಿ ಎನಿಸಿತು. ಅದಕ್ಕೇ ಅದರ ಸಾರವನ್ನಷ್ಟೇ ಅನುವಾದಿಸಿದ್ದೇನೆ.

ಪ್ರಧಾನ ಮಂತ್ರಿಗೆ ನಮಸ್ಕಾರ
“ನಾನು ಮುಂಬಯಿಯ ಟಿಪಿಕಲ್ ಇಲಿ ಮರಿ. ಲೋಕಲ್ ಟ್ರೈನ್‌ನ ನೂರು ಮಂದಿ ಹಿಡಿಯುವ ಬೋಗಿಯಲ್ಲಿ ನಿತ್ಯವೂ ಸಂಚರಿಸುವ ೫೦೦ ಕ್ಕೂ ಹೆಚ್ಚು ಇಲಿಮರಿಗಳಲ್ಲಿ ನಾನೂ ಒಬ್ಬ. ಕೊನೇ ಪಕ್ಷ ಇಲಿಮರಿ ಅತ್ತಿಂದಿತ್ತ ಚಲಿಸಬಹುದು. ನಮ್ಮಿಂದ ಅದು ಸಾಧ್ಯವೇ ಇಲ್ಲ’.

ಇಂದು ನಿಮ್ಮ ಭಾಷಣವನ್ನು ಕೇಳಿದೆ. “ನಮ್ಮ ದೇಶಕ್ಕೆ ಯಾರಿಂದಲೂ ಧಕ್ಕೆ ತರಲು ಸಾಧ್ಯವಿಲ್ಲ’ ಎಂದು ಘೋಷಿಸಿದಿರಿ. ನಿಮಗೆ ಒಂದು ಮಾತನ್ನು ನೆನಪಿಗೆ ತರಲು ಇಚ್ಛಿಸುತ್ತೇನೆ. ಮುಂಬಯಿಯಲ್ಲಿ ಸರಣಿ ಬಾಂಬ್ ಸ್ಫೋಟ ಘಟಿಸಿ ೧೪ ವರ್ಷಗಳು ಕಳೆದಿವೆ ; ನಮ್ಮ ವನವಾಸ ಇನ್ನೂ ತಪ್ಪಿಲ್ಲ. ದಾವೂದ್ ಇಬ್ರಾಹಿಂ ಇದರ ಪ್ರಮುಖ ಆರೋಪಿ ಎಂದು ಜಗಜ್ಜಾಹೀರಾಗಿದೆ. ಆದರೆ ಇಂದಿಗೂ ಅವನನ್ನು ಬಂಧಿಸಿಲ್ಲ. ನಮ್ಮ ಎಲ್ಲ ಬಾಲಿವುಡ್ ನಟರು, ನಿರ್ದೇಶಕರು, ಬಿಲ್ಡರ್‍ಸ್, ನಮ್ಮ ಗುಟ್ಕಾ ದೊರೆಗಳೆಲ್ಲಾ ಅವನನ್ನು ಖುಲ್ಲಾಖುಲ್ಲಾ ಆಗಿ ಭೇಟಿ ಮಾಡಿ ಬರುತ್ತಾರೆ. ಆದರೆ ನಮ್ಮ ಸರಕಾರದ ಕೈಗೆ ಸಿಗುತ್ತಿಲ್ಲ. ಕಾರಣ ಅತ್ಯಂತ ಸರಳ-ಎಲ್ಲ ನಿಮ್ಮ ಮಂತ್ರಿಗಳು ಅವನೊಂದಿಗಿದ್ದಾರೆ. ಒಂದುವೇಳೆ ಅವನನ್ನು ಹಿಡಿಯಲು ಹೋದರೆ ಎಲ್ಲರ ಬಣ್ಣವೂ ಬಯಲಾಗಬಹುದು. ಆದ್ದರಿಂದ ನಿಮ್ಮ “ನಮ್ಮ ದೇಶಕ್ಕೆ ಯಾರಿಂದಲೂ ಧಕ್ಕೆ ತರಲು ಸಾಧ್ಯವಿಲ್ಲ’ ಎನ್ನುವುದು ಈ ಬಡಪಾಯಿಗಳ ಬದುಕಿನ ಬಗೆಗಿನ ಅಪಹಾಸ್ಯದ ಪರಮಾವಧಿ.

ಆಗಿದ್ದಷ್ಟೇ ಸಾಕು. ಮೊನ್ನೆ ಹನ್ನೆರಡು ಮಂದಿ ಹುಡುಗರು ನಡೆಸಿದ ದಾಳಿಯನ್ನು ಕಂಡಾಗ ಭಯವಾಗುತ್ತದೆ. ಹೀಗೆ ಪರಿಸ್ಥಿತಿ ಮುಂದುವರಿದರೆ ಭಯೋತ್ಪಾದಕರು ವೈಮಾನಿಕ ದಾಳಿಯನ್ನೂ ನಡೆಸಿ ನಮ್ಮ ಅಣು ರಿಯಾಕ್ಟರ್‌ಗಳನ್ನು ಸ್ಫೋಟಿಸಿ ಮತ್ತೊಂದು ಹಿರೋಶಿಮಾವನ್ನು ಸೃಷ್ಟಿಸಬಹುದು ಎಂಬ ಭಯ ಕಾಡತೊಡಗಿದೆ.

ನಮ್ಮ ಹೆಮ್ಮೆಯ ಗೃಹ ಸಚಿವರು ರಾಜೀನಾಮೆ ನೀಡಿದರು. ಇಂಥ ವಿದೂಷಕನನ್ನು ಹೊರಗೆ ಹಾಕಲು ಯಾಕಿಷ್ಟು ಸಮಯ ತೆಗೆದುಕೊಂಡಿರಿ ? ಗಾಂಧಿ ಕುಟುಂಬಕ್ಕೆ ನಿಷ್ಠ ಎನ್ನುವ ಒಂದೇ ಕಾರಣವೇ ತಾನೇ ನಿಮ್ಮನ್ನು ಕಟ್ಟಿ ಹಾಕಿದ್ದು. ಹಾಗಾದರೆ ನಿಮಗೆ ಮುಗ್ಧ ಜನರ ರಕ್ತಕ್ಕಿಂತಲೂ ಗಾಂಧಿ ಕುಟುಂಬಕ್ಕಿರುವ ನಿಷ್ಠತೆಯೇ ನಿಮಗೆ ಮುಖ್ಯವಲ್ಲವೇ?

ನಾನು ಹುಟ್ಟಿದ್ದು, ಬೆಳೆದಿದ್ದು ಮುಂಬಯಿಯಲ್ಲೇ. ಐವತ್ತೆಂಟು ವರ್ಷಗಳಿಂದ ಇದೇ ನನ್ನ ಉಸಿರು ಕೂಡ. ದಯವಿಟ್ಟು ನನ್ನ ಮಾತನ್ನು ನಂಬಿ, “ಮಹಾರಾಷ್ಟ್ರ ಭ್ರಷ್ಟಾಚಾರದಲ್ಲಿ ಬಿಹಾರವನ್ನೂ ಮೀರಿಸಿದೆ’. ಶರದ್ ಪವಾರ್, ಛಗನ್ ಭುಜಬಲ್, ನಾರಾಯಣ್ ರಾಣೆ, ಬಾಳಾ ಠಾಕ್ರೆ, ಗೋಪಿನಾಥ ಮುಂಡೆ, ರಾಜ್ ಠಾಕ್ರೆ, ವಿಲಾಸರಾವ್ ದೇಶಮುಖ್-ಒಬ್ಬೊಬ್ಬ ರಾಜಕಾರಣಿಯನ್ನೂ ನೋಡಿ, ಅದರ ವ್ಯಾಪ್ತಿ ತಿಳಿಯುತ್ತದೆ. ದೇಶಮುಖ್ ನಾನು ಕಂಡಂತ ಅತ್ಯಂತ ಕಳಪೆ ಗುಣಮಟ್ಟದ ಮುಖ್ಯಮಂತ್ರಿ. ಅವರ ತಿಳಿದಿರುವ ಒಂದೇ ಒಂದು ವ್ಯವಹಾರವೆಂದರೆ ಕಾಂಗ್ರೆಸ್ ಹೈಕಮಾಂಡ್‌ಗೆ ಆರ್ಥಿಕ ಕೊರತೆಯಾಗದಂತೆ ನೋಡಿಕೊಳ್ಳುವುದಷ್ಟೆ. ಮುಂದಿನ ಚುನಾವಣೆಗೆ ಬೇಕಾಗುವ ಹಣವನ್ನು ಹೊಂದಿಸಲೆಂದೇ ಇವರು ಮುಖ್ಯಮಂತ್ರಿ.

ಇತ್ತೀಚೆಗಷ್ಟೇ ನನ್ನ ಮುಂಬಯಿಯಲ್ಲಿ ಒಂದು ಮನೆಯನ್ನು ಖರೀದಿಸಲು ಮುಂದಾದೆ. ನಾನು ಎರಡು ಡಜನ್‌ನಷ್ಟು ಬಿಲ್ಡರ್‍ಸ್‌ಗಳನ್ನು ಭೇಟಿಯಾದೆ. ಎಲ್ಲರೂ ಶೇ. ೩೦ ರಷ್ಟು ಹಣವನ್ನು ಅನಧಿಕೃತವಾಗಿ ನೀಡಿ ಎಂದರು. ಅಂದರೆ ಕಪ್ಪು ಹಣ. ಅದಕ್ಕೆ ಲೆಕ್ಕವೂ ಇಲ್ಲ,ಜಮಾವೂ ಇಲ್ಲ. ಇದು ಬಹಿರಂಗವಾಗಿ ಕಾಣುವಂಥದ್ದು. ಈ ಅವ್ಯವಹಾರ ನನ್ನಂಥ ಸಾಮಾನ್ಯ ಮನುಷ್ಯನಿಂದ ಹಿಡಿದು ನಿಮ್ಮ ಸರಕಾರದ ಸಿಬಿಐ, ಗುಪ್ತಚರ ದಳಕ್ಕೆ ತಿಳಿಯದ್ದೇನೂ ಅಲ್ಲ. ಹಾಗಾದರೆ ಹೀಗೆ ಸಂಗ್ರಹಿಸಿದ ಕಪ್ಪು ಹಣವೆಲ್ಲಾ ಎಲ್ಲಿಗೆ ಹೋಗುತ್ತದೆ ? ದಯವಿಟ್ಟು ಹೇಳಿ. ಭೂಗತ ಜಗತ್ತಿನ ಗೂಂಡಾಗಳಿಗೆ ತಾನೇ ? ನಮ್ಮ ಈ ರಾಜಕಾರಣಿಗಳು ಅವರ ಸಹಾಯ ಪಡೆದು ನಮ್ಮಂಥ ಜನ ಸಾಮಾನ್ಯರ ಮನೆಗಳನ್ನು ಬಲಾತ್ಕಾರವಾಗಿ ಎತ್ತಂಗಡಿ ಮಾಡಿಸುತ್ತಾರೆ. ಅಂಥ ಘಟನೆಯ ಸಂತ್ರಸ್ತರಲ್ಲಿ ನಾನೂ ಒಬ್ಬ. ದಯವಿಟ್ಟು ನಿಮಗೆ ಸಮಯವಿದ್ದರೆ ನನ್ನಲ್ಲಿಗೆ ಬನ್ನಿ, ಎಲ್ಲವನ್ನೂ ಹೇಳುತ್ತೇನೆ.

ಇದು ಮೂರ್ಖರ, ಕಳ್ಳರ ಆವಾಸಸ್ಥಾನವಾಗಿದೆ. ಈ ಪತ್ರವನ್ನು ಬರೆಯಲು ಒಂದಿನಿತೂ ನಾನು ಹೆದರಿಲ್ಲ. ಎಂಥಾ ವಿಪರ್ಯಾಸವೆಂದರೆ, ಒಂದೆಡೆ ನಾವು ಚಂದ್ರನನ್ನು ಮುಟ್ಟುತ್ತಿದ್ದೇವೆ. ಮತ್ತೊಂದೆಡೆ ಬದುಕಿನ ಅಮೃತವನ್ನೇ ನಿಮ್ಮ ಈ ರಾಜಕಾರಣಿಗಳು ವಿಷವನ್ನಾಗಿಸಿದ್ದಾರೆ. ನೋಡಿ, ನಾನು ಇಲ್ಲಿ ಎಲ್ಲವೂ. ಒಬ್ಬ ಹಿಂದೂ, ಮುಸ್ಲಿಂ, ಕ್ರೈಸ್ತ, ಎಸ್‌ಸಿ,ಎಸ್‌ಟಿ, ಕೆನೆಪದರದ ಎಸ್‌ಸಿ, ಎಸ್‌ಟಿ…ಹೀಗೆ ಎಲ್ಲವೂ. ಆದರೆ ಭಾರತೀಯನಲ್ಲ. ನಿಮ್ಮ ರಾಜಕಾರಣಿಗಳ ಕೂಟ ಭಾರತದ ಪ್ರತಿ ಭಾಗದಲ್ಲೂ ಅತ್ಯಾಚಾರ ಎಸಗಿದ್ದೀರಿ. ನಿಮ್ಮ ಒಂದೇ ಒಂದು ನೀತಿ ಎಂದರೆ ಒಡೆದು ಆಳು ಎಂಬುದಷ್ಟೇ.
ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅಂಥ ಬುದ್ಧಿವಂತ, ನಿಷ್ಟಾವಂತ ಮಹಾನುಭಾವನನ್ನು ಉಳಿಸಿಕೊಳ್ಳಲು ನೀವೆಲ್ಲರೂ ಮನಸ್ಸು ಮಾಡಲಿಲ್ಲ. ನೀವು ಮತ್ತು ವಿರೋಧ ಪಕ್ಷ ಕೈ ಜೋಡಿಸಿದ್ದು ಕೇವಲ ನಿಮ್ಮ ಸ್ವಾರ್ಥಕ್ಕೆ, ಪ್ರತಿಷ್ಠೆಗೆ. ನಿಮ್ಮ ಮಧ್ಯೆ ಒಬ್ಬ ಒಳ್ಳೆ ಮನುಷ್ಯ ಬದುಕುವಂತಿಲ್ಲವಲ್ಲವೇ?
ಪ್ರೀತಿಯ ಪ್ರಧಾನ ಮಂತ್ರಿಗಳೇ, ನೀವು ಒಬ್ಬ ಪ್ರತಿಭಾವಂತರು, ಸಾಕಷ್ಟು ತಿಳಿದುಕೊಂಡವರು. ದಯವಿಟ್ಟು ಇನ್ನಾದರೂ ಎದ್ದೇಳಿ. ನೀವು ಒಬ್ಬ ಸರದಾರ್ ಆಗಿ (ವೀರರ ಮನೆತನದವರಾಗಿ), ಈ ಸ್ವಾರ್ಥ ರಾಜಕಾರಣಿಗಳ ನಿಜಬಣ್ಣವನ್ನು ಬಯಲು ಮಾಡಿ. ಎಲ್ಲ ಭಾರತೀಯರ ಖಾತೆಯ ವಿವರಗಳನ್ನು ನೀಡುವಂತೆ ಸ್ವಿಸ್‌ಬ್ಯಾಂಕ್‌ನನ್ನು ಕೋರಿ. ಅವೆಲ್ಲವನ್ನೂ ಬಹಿರಂಗಗೊಳಿಸಿ. ಸಿಬಿಐಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಿ. ಕಪ್ಪು ಕುರಿಗಳನ್ನು ಪತ್ತೆ ಹಚ್ಚಲಿ. ಇಂಥ ಕ್ರಮ ಕೆಲವು ರಾಜಕೀಯ ಏರುಪೇರುಗಳಿಗೆ ಕಾರಣವಾಗಬಹುದು. ಆದರೆ, ಈ ನಿತ್ಯ ನಡೆಯುವ ಸಾವಿನ ನೃತ್ಯ ನಿಲ್ಲಬಹುದು. ಮುಕ್ತವಾಗಿ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡಲು ಒಂದಿಷ್ಟು “ಸ್ಥಳ’ ಕಲ್ಪಿಸಿಕೊಡಿ. ಇರಲಿ ಕಾನೂನು. ಅದರ ಕ್ಷೇಮವನ್ನು ಎಲ್ಲರೂ ನೋಡಿಕೊಳ್ಳುತ್ತಾರೆ. ಆ ಬಗ್ಗೆ ಆತಂಕ ಬೇಡ.

ಆಯ್ಕೆ ನಿಮ್ಮ ಮುಂದಿದೆ. ಹೇಳಿ, ಒಬ್ಬನಿಂದ ಇಡೀ ದೇಶ ಮುನ್ನಡೆಯಬೇಕೋ ? ನೂರು ಕೋಟಿ ಭಾರತೀಯರು ಮುನ್ನಡೆಸಬೇಕೋ?

Advertisements

2 thoughts on “ಮುಂಬಯಿಗನ ಒಡಲದನಿ

  1. ತುಂಬಾ ಒಳ್ಳೆ ಬರಹ. ಸಮಸ್ತ ಭಾರತೀಯರ ದನಿ ಪ್ರಕಾಶ್ ಬಜಾಜ್ ಅವರ ಪತ್ರದಲ್ಲಿ ಧ್ವನಿಸಿದೆ. ನಮ್ಮಲ್ಲಿನ ಕೊಳಕು ವ್ಯವಸ್ಥೆಯನ್ನು ಸರಿಪಡಿಸಲು ರಾಜಕಾರಣಿಗಳನ್ನು ಕಾಯುತ್ತಾ ಕೂರೋದು ನಮ್ಮ ಮೂರ್ಖತನವಾದೀತು. ನೂರು ಕೋಟಿ ಭಾರತೀಯರು ಎದ್ದು ನಿಂತು ವ್ಯವಸ್ಥೆಯ ವಿರುದ್ಧ ಬಂಡೇಳಬೇಕು..ಆದರೆ ನಾವು-ನೀವು ಹೇಳಬಹುದು..ನೂರು ಕೋಟಿ ಭಾರತೀಯರೂ ಮಾಡುತ್ತಾರೆಯೇ? ಪಾಕಿಸ್ತಾನದಲ್ಲಿ ಗೃಹ ಬಂಧನದಲ್ಲಿರಿಸಿದ ಅಜರ್ ನನ್ನ ಹಸ್ತಾಂತರಿಸಿ ಎನ್ನುವ ಭಾರತ, ಇಲ್ಲಿ ಈಗಾಗಲೇ ಸಿಕ್ಕಿಬಿದ್ದವರನ್ನು ಶಿಕ್ಷಿಸಲಿ. ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ‘ಪ್ರಜೆ’ಗಳ ಮಾತಿಗೆ ಬೆಲೆಯಿಲ್ಲಿದೆ?
    -ಚಿತ್ರಾ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s