ಕಟ್ಟಾ-ಮೀಠಾ

ತಿರಸ್ಕರಿಸುವುದನ್ನು ಕಲಿಯೋಣ

candle-1ನಾವು ಸಂದೀಪನ ತಂದೆಗೆ ಭೇಷ್ ಹೇಳಬೇಕು !
ಹಾಗೆಯೇ ಹೇಮಂತ ಕರ್ಕರೆಯ ಕುಟುಂಬಕ್ಕೂ ಸಹ. ರಾಜಕಾರಣಿಗಳ ಭಿಕ್ಷೆ ನೀಡುವ ತಂತ್ರವನ್ನು ಅತ್ಯಂತ ದಾರ್ಷ್ಟ್ಯದಿಂದ ತಿರಸ್ಕರಿಸಿದ ವೀರರ ಕುಟುಂಬಕ್ಕೆ ನಾವೆಲ್ಲರೂ ವಂದಿಸಬೇಕು.

ಕೇರಳದ ಮುಖ್ಯಮಂತ್ರಿ ಅಚ್ಯುತಾನಂದನ್, ಯಾರಿಗೋ ಉಪಕಾರಕ್ಕೆ ಎನ್ನುವಂತೆ ಸಂದೀಪನ ಮನೆಗೆ ಬಂದು ಸಾಂತ್ವನ ಹೇಳಲು ಬಂದಿದ್ದು ಮತ್ತೆ ರಾಜಕೀಯ ಉದ್ದೇಶಕ್ಕಾಗಿಯೇ ಹೊರತು ಮತ್ತೇನೂ ಅಲ್ಲ. ಅದಕ್ಕೆ ಸಂದೀಪನ ತಂದೆ “ನನ್ನ ಮಗ ಇಡೀ ದೇಶದವನು, ಒಂದು ರಾಜ್ಯದವನಲ್ಲ’ ಎಂದು ಹೇಳಿದ ಮಾತು ಕೇಳಿ ನನ್ನ ಹೃದಯ ತುಂಬಿ ಬಂದಿತು. ಟಿ. ವಿ. ಯಲ್ಲಿ ಆ ದೃಶ್ಯ ಕಂಡು ಮನಸ್ಸಿನಲ್ಲೇ ವಂದನೆ ಹೇಳಿದೆ.

ಒಂದು ರಾಜ್ಯದ ಮುಖ್ಯಮಂತ್ರಿಯನ್ನು ಹೀಗೆ ಅವಮಾನಿಸಿ ಕಳುಹಿಸಬಹುದೇ ಎಂಬ ಮಾತು ಸಹಜವಾಗಿಯೇ ಬರಬಹುದು. ಆದರೆ ಸಾವಿನಲ್ಲೂ ರಾಜಕಾರಣವನ್ನು ಮಾಡುವವರನ್ನು ತಿರಸ್ಕರಿಸಬೇಕಾದುದನ್ನು ಸಂದೀಪನ ತಂದೆ ನಮಗೆ ಕಲಿಸಿಕೊಟ್ಟಿದ್ದಾರೆ.

ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮುಂಬಯಿ ಸ್ಫೋಟದಲ್ಲಿ ಸತ್ತ ಪೊಲೀಸರ ಕುಟುಂಬಕ್ಕೆ ಅಂದೇ ಒಂದು ಕೋಟಿ ರೂ. ಘೋಷಿಸಿದರು. ಅದನ್ನೂ ಹೇಮಂತ ಕರ್ಕರೆ ಕುಟುಂಬ ತಿರಸ್ಕರಿಸಿತು. ಇದು ನಿಜವಾಗಲೂ ರಾಜಕಾರಣಿಗಳಿಗೆ ಕಲಿಸುತ್ತಿರುವ ಸೂಕ್ತ ಪಾಠ. ನಮ್ಮ ರಾಜಕಾರಣಿಗಳಿಗೆ ಇದು ಅರ್ಥವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಇದು ಸಾಕಷ್ಟು ಇರಿಸು ಮುರಿಸನ್ನಂತೂ ಮಾಡಿದೆ.

ಅಲ್ಲದೇ, ಸಂದೀಪನ ಮನೆಯಿಂದ ವಾಪಸು ತೆರಳಿದ ಅಚ್ಯುತಾನಂದನ್, “ಸಂದೀಪನ ಮನೆಯಲ್ಲದಿದ್ದರೆ ನಾಯಿಯೂ ಹೋಗುತ್ತಿರಲಿಲ್ಲ’ ಎಂದು ಹೇಳಿಕೆ ನೀಡಿದ್ದು ಮಾತ್ರ ಅಕ್ಷಮ್ಯ. ಜನರು ಸಂಘಟಿತರಾಗುತ್ತಿದ್ದಾರೆಂಬುದಕ್ಕೆ ಹಾಗೂ ರಾಜಕಾರಣಿಗಳ ತಂತ್ರವನ್ನು ಅರ್ಥೈಸುತ್ತಿಕೊಳ್ಳುತ್ತಿದ್ದಾರೆಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ದೇಶಾದ್ಯಂತ ಈ ಮಾತಿಗೆ ತೀವ್ರ ಆಕ್ರೋಶ ವ್ಯಕ್ತವಾಯಿತು. ತಮಾಷೆ ಎಂದರೆ, ಸದಾ “ದೊಡ್ಡವರ’ ಹಿತದತ್ತಲೇ ಗಮನಹರಿಸುವ ಮುಂಚೂಣಿಯಲ್ಲಿರುವ ಟಿ. ವಿ.ಗಳಲ್ಲಿ ಈ ಸುದ್ದಿ ಪರವಾದ ಯಾವ ಆಂದೋಲನವೂ ನಡೆಯಲಿಲ್ಲ. ಆದರೆ ಆಂಗ್ಲದ ಬೇರೆ ಟಿ. ವಿ. ಯೊಂದು ಮಾತ್ರ “ಈ ಹೇಳಿಕೆಯನ್ನೇ’ ಪ್ರಧಾನವಾಗಿರಿಸಿಕೊಂಡು ಜನಮತ ಸಂಗ್ರಹಿಸತೊಡಗಿತು. ಉಳಿದ ಮುದ್ರಣ ಮಾಧ್ಯಮಗಳೂ ಇದನ್ನು ಗಂಭೀರವಾಗಿ ತೆಗೆದುಕೊಂಡರು. ಹಾಗಾಗಿ ದೇಶಾದ್ಯಂತ ಪ್ರತಿಭಟನೆ ನಡೆಸಿದರು.

ಲೋಕಸಭಾ ಚುನಾವಣೆಯಲ್ಲಿ ಈ ಹೇಳಿಕೆ ಬೀರಬಹುದಾದ ಪರಿಣಾಮ ಅರಿತ ಪ್ರಕಾಶ್ ಕಾರಟ್, ತಮ್ಮ ಅಚ್ಯುತಾನಂದನ್ ಹೇಳಿಕೆಗೆ ಕ್ಷಮೆ ಕೇಳಿದರು. ಎಲ್ಲ ಮುಗಿದು ಬುಧವಾರ ಅಚ್ಯುತಾನಂದನ್ ಸಹ ವಿಷಾದ ವ್ಯಕ್ತಪಡಿಸಿದ್ದಾರೆ. ಇದು ಜನ ಜಾಗೃತಿಗೊಂಡ ಫಲವೇ ಹೊರತು ಮತ್ತೇನೂ ಅಲ್ಲ.

ಅದಕ್ಕೇ, ನಾವು ರಾಜಕಾರಣಿಗಳನ್ನು ತಿರಸ್ಕರಿಸುವುದನ್ನು ಕಲಿಯಬೇಕು. ಉಪೇಕ್ಷೆ ಮಾಡಬೇಕು. “ನೀನಿಲ್ಲದಿದ್ದರೂ ಬದುಕಬಲ್ಲೆವು, ವ್ಯವಸ್ಥೆ ಬದುಕುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಡಬೇಕು. ಮನುಷ್ಯನ ಮೂಲ ನೆಲೆಯೇ ಅದು. ಒಂದು ವ್ಯವಸ್ಥೆಯಲ್ಲಿ ತನ್ನ ಪ್ರಸ್ತುತತೆ ಇಲ್ಲವೆಂದು ಅವನಿಗೆ ಅನಿಸಿದರೆ ಚಡಪಡಿಸುತ್ತಾನೆ. ಆಕ್ರೋಶಗೊಳ್ಳುತ್ತಾನೆ, ಸಿಡಿಯುತ್ತಾನೆ. ಕಬ್ಬಿಣ ಬಿಸಿಯಾದಾಗಲೇ ಬಡಿಯಬೇಕು. ಹಾಗೆಯೇ ರಾಜಕಾರಣಿಗಳು ಅಸಹನೆಗೊಳ್ಳುವಂತೆ ಮಾಡಿ ಬಡಿಯಬೇಕು’.

ಅಂಥ ಅಸಹನೀಯಗೊಳಿಸುವ ಕಾಲಕ್ಕೆ ಈಗ ನಾಂದಿ. ನಾವೀಗ ಮೊದಲು ಓಟಿನ ಹಿಂದೆ ಬೀಳುವ ರಾಜಕಾರಣಿಗಳ, ಅಧಿಕಾರ ಹಪಾಹಪಿಯ ಜನಗಳನ್ನು ತಿರಸ್ಕರಿಸುವುದನ್ನು ಕಲಿಯೋಣ, ತಿರಸ್ಕರಿಸೋಣ. ಮುಂಬಯಿನಲ್ಲಿ ನಡೆದಂಥ ಘಟನೆಯಲ್ಲಿ ನಮ್ಮ ಹಿತವನ್ನು ಮರೆಯುವ ಜನಕ್ಕೆ ಈ ರೀತಿಯಿಂದಲೂ ಪಾಠ ಕಲಿಸಬಹುದು. ಅದು ಒಂದು ರೀತಿಯಲ್ಲಿ ಹುತಾತ್ಮರಿಗೂ ಸಲ್ಲಿಸುವ ನಮನ.

Advertisements

9 thoughts on “ತಿರಸ್ಕರಿಸುವುದನ್ನು ಕಲಿಯೋಣ

 1. ಹೇಮಂತ್ ಕಾರ್ಕರೆ ಪತ್ನಿಯ ಪರಿಹಾರ ತಿರಸ್ಕಾರ ನಿಜಕ್ಕೂ ಮೋದಿ ಮತ್ತು ಅಂತಹ ರಾಜಕಾರಣಿಗಳಿಗೆ ಬುದ್ಧಿ ಕಲಿಿಸುವಂತಹದು. ಆದರೆ ಅಚ್ಯುತಾನಂದನ್ ವಿಚಾರ ಬೇರೆಯೇ, ಎರಡನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ತಪ್ಪೆಂದು ನನಗನಿಸುತ್ತದೆ.

  ಅಚ್ಯುತಾನಂದನ್ ತಾನಾಗಿ ತಾನೇ ಸುಮ್ಮನೆ ಕೂತು ಆ ಕಮೆಂಟ್ ಮಾಡಲಿಲ್ಲ. ನೀವು ಹೇಳಿದ ಅದೇ ಮಾಧ್ಯಮದವರು ಹಿಂದಿನ ದಿನ ಮೇಜರ್ ತಂದೆ ತನ್ನ ಮನೆಗೆ ಸೇರಿಸಿಕೊಳ್ಳದೆ ಮಾಡಿದ ಅವಮಾನಕ್ಕೆ ಪ್ರತಿಕ್ರಿಯೆ ಕೇಳಿದಾಗ ಅಚ್ಯುತಾನಂದನ್ ಆರೀತಿ ಹೇಳಿದರು. ಆರೀತಿ ಹೇಳಿದ್ದು ಖಂಡಿತಾ ತಪ್ಪೇ, ಸುಮ್ಮನಿದ್ದರೆ ಸರಿಹೋಗಿರುತ್ತಿತ್ತು. ಆದರೆ, ಇದರಲ್ಲಿ ಬೆಂಕಿಯ ಕಿಡಿಗಿಂತ ಮಾಧ್ಯಮಗಳು ಎಬ್ಬಿಸಿದ ಹೊಗೆಯ ಪಾತ್ರ ಹೆಚ್ಚಿತ್ತು ಅಂತ ನನ್ನ ಅನಿಸಿಕೆ. ಅಚ್ಯುತಾನಂದನ್ ತನ್ನ ಮನೆಗೆ ಬರುವುದನ್ನು ಮೇಜರ್ ನಿರಾಕರಿಸಿದಾಗ ಮಾಧ್ಯಮಗಳಲ್ಲಿ ಅದು ಯಾಕಿರಬಹುದು ಅಂತ ಕುತೂಹಲವಿತ್ತು, ಆದರೆ ಅಚ್ಯುತಾನಂದನ್ ಮಾತನಾಡಿ ಎಲ್ಲವನ್ನೂ ಹಾಳುಮಾಡಿಕೊಂಡರು. ಇವತ್ತಿಗೂ ಅವರು ಯಾಕೆ ಕೇರಳದ ಮುಖ್ಯಮಂತ್ರಿಯನ್ನು ತಮ್ಮ ಮನೆಗೆ ಬಿಟ್ಟುಕೊಳ್ಳಲಿಲ್ಲ ಅನ್ನುವುದು ಗೊತ್ತಾಗಿಲ್ಲ. ಅದೇ ಮೇಜರ್ ಬೇರೆಲ್ಲ ರಾಜಕಾರಣಿಗಳನ್ನು ತಮ್ಮ ಮನೆಗೆ ಬಿಟ್ಟುಕೊಂಡಿದ್ದರು, ವಿವಿಧ ಬಿಜೆಪಿ ನಾಯಕರು ಸಂದೀಪ್ ಅಂತಿಮ ದರ್ಶನಕ್ಕಾಗಿ ಬಂದಿದ್ದರು. ಅವರವರ ನಡುವಿನ ಜಗಳವನ್ನು ದೊಡ್ಡದು ಮಾಡಿದ್ದು times now ಎಂಬ ಚಾನೆಲ್ ಬಿಟ್ಟು ಬೇರಿನ್ಯಾರಲ್ಲ.

  ಮಾಧ್ಯಮಗಳು ಮಾಡಿದ ಈರೀತಿಯ ಎಡವಟ್ಟು ಒಂದೆರಡಲ್ಲ. ಭಾರತ ಪಾಕಿಸ್ತಾನದ ಜತೆ ಮೋಸ್ಚ್ ವಾಂಟೆಡ್ ಲಿಸ್ಟ್ ಕೊಟ್ಟು ವಶಕ್ಕೆ ಒಪ್ಪಿಸುವಂತೆ ಕೇಳಲಿದೆ ಅಂತ ತಿಳಿದಿದ್ದೇ ತಡ, ಭಾರತದ ಚಾನೆಲ್ಲುಗಳು ಪಾಕಿಸ್ತಾನಿ ಅಧಿಕಾರಿಗಳ ಫೋನ್ ಇನ್ ತಗೊಂಡು ಅವರ ಪ್ರತಿಕ್ರಿಯೆ ಕೇಳಿದವು. ಅವರು ಜಾಗರೂಕತೆಯಿಂದಲೇ ಪ್ರತಿಕ್ರಿಯಿಸಿದರೆ, ಅದನ್ನೂ mis-interpret ಮಾಡಿದವು. ಕೊನೆಗೆ ಪ್ರಣಬ್ ಮುಖರ್ಜಿಯ ಪ್ರತಿಕ್ರಿಯೆ ಕೇಳಹೊರಟರೆ, ಪ್ರಣಬ್ ಮೌನವಹಿಸಿದರು. ಪ್ರಣಬ್ ಮಾಡಿದ ಹಾಗೆ ನಮ್ಮ ರಾಜಕಾರಣಿಗಳು ಮಾಧ್ಯಮಗಳೆದುರು ಹೇಗೆ ವರ್ತಿಸಬೇಕು, ಹೇಗೆ ಮಾತಾಡಬೇಕು ಎಂಬುದನ್ನು ಇನ್ನಷ್ಟೇ ಕಲಿಯಬೇಕಿದೆ.

 2. ರಾಜಕಾರಣಿಗಳು ನಡೆಸಿದ ಸಮಾವೇಶಕ್ಕೆ ಸಹಸ್ರಾರು ಜನ ಹೋಗಿ ಇಡೀ ಬೆಂಗಳೂರು ಟ್ರಾಫಿಕ್ ಜಾಮ್ ನಲ್ಲಿ ಕಂಗೆಡುವ ಹಾಗಾಯಿತಲ್ಲ. ಜನರಿಗೆ ಬುದ್ಧಿ ಬಂದಿದೆ ಎನ್ನುವುದಕ್ಕಾಗುತ್ತದೆಯೇ?

 3. ನಾವಡರೇ,
  “ಹಾಗೆಯೇ ರಾಜಕಾರಣಿಗಳು ಅಸಹನೆಗೊಳ್ಳುವಂತೆ ಮಾಡಿ ಬಡಿಯಬೇಕು”…..ನಿಜ…..ಮೂರೂ ಬಿಟ್ಟೋರೇ ರಾಜಕೀಯಕ್ಕೆ ಇಳಿಯೋದು ಅ೦ತ ಆಡು ಮಾತಿದೆ.ಅವರಿಗೆ ದುಡ್ಡು ಮಾಡುವುದು ಹಾಗೂ ಕಾಲ ತಳ್ಳುವುದೊ೦ದೇ ಬೇಕು.ಬರೀ ಸ೦ಬಳವನ್ನೇ ನೆಚ್ಚಿಕೊ೦ಡು ರಾಜಕೀಯ ಮಾಡುವ ರಾಜಕಾರಣಿ ಇ೦ದಿಗೂ ಇದ್ದರೆ ಜನ ಅವರ ಪಾದ ಪೂಜೆ ಮಾಡಿಯಾರು.

  ಶಾರ್ಪ್ ಶೂಟರ್ ಅಭಿನವ ಬಿ೦ದ್ರಾಗೆ ಒ೦ದು ಚಿನ್ನದ ಮೆಡಲ್ ಗೆದ್ದಿದ್ದಕಾಗಿ ಸರ್ಕಾರ ಕೊಟ್ಟಿದ್ದು ಅದು ಇದೂ ಸೇರಿ ಐದು ಕೋಟಿಗೂ ಅಧಿಕ,ಆದರೆ ಇನ್ನೋಬ್ಬ ಶಾರ್ಪ್ ಶೂಟರ್ ಮೊನ್ನೆ ಯ ಆತ೦ಕ ಹತ್ಯಕಾ೦ಡದಲ್ಲಿ ದೇಶಕ್ಕ್ಕಾಗಿ ಕಾದಾಡಿ ಮಡಿದರೆ ಬರೀ ಐದೇ ಲಕ್ಷ…. ಗೆದ್ದರೆ? ಸ೦ಬಳವೇ ಸರಿಯಾಗಿ ಸಿಗುತ್ತಿಲ್ಲ,ಇನ್ನು ಬೋನಸ್ ಬಗ್ಗೆ ಮಾತಾಡಿದ್ರೆ ಹೆ೦ಗೆ.
  ನಮ್ಮ ವ್ಯವಸ್ಥೆಗೆ ಹಿಡಿದಿರುವ ಶಾಪ.ಶಾಪ ವಿಮೋಚನೆಯಾಗುವುದು ಯವಾಗ?.ಪ್ರತಿಯೊಬ್ಬ ನಾಗರೀಕನ ತಪಸ್ಸು ಫಲಿಸಿದಾಗ……ಆ ಸುದಿನ ಬೇಗ ಬರಲಿ…..ದೇಶ ಕಾಯುವವರು ಎದೆಯುಬ್ಬಿಸಿ ನೆಡೆಯುವ೦ತಾಗಲಿ.

  ನಿಮ್ಮ ಕಳಕಳಿಗೆ ನಮ್ಮ ಸ್ಪ೦ದನವಿದೆ.

  ನಿಮ್ಮ ಅನುಮತಿಯಿಲ್ಲದೆ ಶ್ರದ್ದಾ೦ಜಲಿ ಭಾವಚಿತ್ರವನ್ನ ನನ್ನ ಬ್ಲಾಗಿಗೆ ಹೊತ್ತೊಯ್ದಿದ್ದೇನೆ.ಕ್ಷಮೆಯಿರಲಿ.

  ಚೆ೦ಡೆಮದ್ದಳೆ ಆಫ್ರಿಕಾದಲ್ಲಿನ ನಮಗೂ ಕೇಳಿಸುತ್ತಿದೆ.

  -ಶ್ರೀಧರ್
  ಮ್ವಾ೦ಜಾ
  ತಾ೦ಜಾನಿಯ.

 4. ಹೇಮಾ ಅವರೇ,
  ನೀವು ಹೇಳಿದ್ದು ನಿಜ. ಅದು ಈ ಲೇಖನಕ್ಕೆ ಪ್ರಸ್ತುತವಲ್ಲವೇನೋ ಎಂದು ಪ್ರಸ್ತಾಪಿಸಲಿಲ್ಲ. ನೀವು ಹೇಳಿದ ಹಾಗೆ ನಾವು ಇಂಥ ಮುಸಲ್ಮಾನ ಬಾಂಧವರನ್ನು ಗೌರವಿಸಬೇಕು. ಭಯೋತ್ಪಾದಕರು ಯಾರ ಬಂಧುವೂ ಆಗಬಾರದು ಎಂಬುದೇ ನನ್ನ ಕಾಳಜಿ.
  ಕನ್ನಂತರೇ,
  ಇಲ್ಲವಾದರೆ ನಮಗೆ ಬುದ್ಧಿ ಬರೋದೇ ಇಲ್ಲ.
  ಲಕ್ಷ್ಮೀ,
  ಇದುವರೆಗೆ ನಾವು ಯೆಸ್ ಎನ್ನುತ್ತಲೇ ಬಂದಿದ್ದೇವೆ. ಇನ್ನಾದರೂ ನೋ ಎನ್ನಬೇಕು.
  ಶ್ರೀ ಅವರೇ,
  ನನಗೆ ಅನ್ನಿಸುವುದು ಒಂದು. ಮಾಧ್ಯಮಗಳು ಅತಿರಂಜಕವಾಗಿ ನಡೆದುಕೊಳ್ಳುತ್ತವೆ. ವಿವಾದವನ್ನು ಹೆಚ್ಚಿಸುತ್ತವೆ ಎನ್ನುವುದು ಹಳೆಯ ಸಂಗತಿ. ಜತೆಗೆ ಪ್ರತಿಯೊಂದಕ್ಕೂ ನೀವು ಮಾಧ್ಯಮವನ್ನೇ ಗುರಿಯಾಗಿಸಿಕೊಂಡು ನೋಡುವಂತೆ ನನಗನ್ನಿಸುತ್ತದೆ. ಈ ಪ್ರಕರಣದಲ್ಲಿ ಅಚ್ಯುತಾನಂದನ್ ಸುಮ್ಮನೆ ಹೇಳಲಿಲ್ಲ : ಮಾಧ್ಯಮದವರು ಕೇಳಿದ್ದಕ್ಕೆ ಹೇಳಿದರು ಎನ್ನುತ್ತೀರಿ. ತಮಾಷೆಯೆಂದರೆ, ವಾಸ್ತವವಾಗಿ ಚರ್ಚೆಯಾಗಬೇಕಾದದ್ದು ಮಾತಿನ ಬಗ್ಗೆ ಅಲ್ಲ ; ಅವರ ಮನಃಸ್ಥಿತಿ, ಮನಸ್ಸಿನ ಬಗ್ಗೆ. ಅಂಥದೊಂದು ಹೇಳಿಕೆ ಅವರ ಮನಸ್ಸಿನಲ್ಲಿ ಮೂಡಿತ್ತು ಎಂದಾಯಿತಲ್ಲ. ಮಾಧ್ಯಮದವರೇನೂ “ಸಂದೀಪನಲ್ಲದಿದ್ದರೆ ನಾಯಿಯಾದರೂ ಹೋಗುತ್ತಿತ್ತೇ?’ ಎಂದು ಕೇಳಿ ಅಚ್ಯುತಾನಂದನ್ ಅವರಿಂದ “ಇಲ್ಲ. ನಾಯಿಯೂ ಹೋಗುತ್ತಿರಲಿಲ್ಲ’ ಎಂದು ಉತ್ತರ ಪಡೆಯಲಿಲ್ಲವಲ್ಲ.
  ಕಂಡವರೆಲ್ಲಾ ಮನೆಗೆ ಬಂದು ಹೋದ ಮೇಲೆ “ಹೋಗಬೇಕಲ್ಲಾ ಎಂದುಕೊಂಡು ಬಂದವರ ಕಂಡರೆ ಹಾಗೆ ಎನಿಸಬಹುದು ಅಲ್ಲವೇ ? ಮೊನ್ನೆಯವರೆಗೆ ಕೇರಳಿಗನೆಂದು ತಿಳಿಯದವ ಇದ್ದಕ್ಕಿದ್ದಂತೆ ಬೆಳಗ್ಗೆ ಕೇರಳಿಗನೆಂದು ಅಂದುಕೊಂಡು ಬಂದುಬಿಟ್ಟರೆ ? ಇದರಲ್ಲಿ ರಾಜಕಾರಣ ಹುಡುಕುವುದರಲ್ಲಿ ಅರ್ಥವಿಲ್ಲ.
  ನನಗನ್ನಿಸುವುದು ಒಂದೇ. ಎಲ್ಲವನ್ನೂ ಒಂದೆ ನೆಲೆಯಿಂದ ನೋಡಿದರೆ ಹೀಗನ್ನಿಸುತ್ತದೇನೋ? ಮಾಧ್ಯಮಗಳಿಂದ ಒಳ್ಳೆಯದೂ ಆಗಿದೆ, ಕೆಲವೊಮ್ಮೆ ಕೆಟ್ಟದ್ದೂ ಆಗಿದೆ. ಆದರೆ ಆಗುವ ಎಲ್ಲವೂ ಮಾಧ್ಯಮಗಳಿಂದಲೇ ಎನ್ನುವುದನ್ನು ನಾನು ಒಪ್ಪಲಾರೆ. ಅದರಲ್ಲೂ ನಮ್ಮ ರಾಜಕಾರಣಿಗಳ ನಾಲಿಗೆಯಂತೂ ಬೇಕಾದ ಹಾಗೆ ತಿರುಗುವುದರಿಂದ “ಆ ಹೇಳಿಕೆ ನೀಡಿದವರೇ ಮರುದಿನ ಮಾಧ್ಯಮಗಳು ನನ್ನ ಮಾತನ್ನು ತಿರುಚಿದವು ಎಂದವರು ಅಚ್ಯುತಾನಂದನ್. “ಸಂದೀಪನ ಮನೆಯಲ್ಲದಿದ್ದರೆ ನಾಯಿಯೂ ಹೋಗುತ್ತಿರಲಿಲ್ಲ’ ಎನ್ನುವುದು ಎಷ್ಟೇ ತಿರುಚಿದರೂ ಆಗುವ ಅರ್ಥ ಒಂದೇ ಎನ್ನುವುದು ನನ್ನ ಅನಿಸಿಕೆ. ಮಾಧ್ಯಮಗಳಿಗೆ ರಾಜಕಾರಣಿಗಳ ಹೇಳಿಕೆ ವರದಿ ಮಾಡುವುದನ್ನು ಕಲಿಸಿಕೊಡಬೇಕು ಅಷ್ಠೇ.
  ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ.
  ಹರೀಶ್,
  ಆ ಜನ ಇದ್ದೇ ಇರುತ್ತಾರೆ. ಒಂದಂತೂ ನಿಜ. ಆ ಜನರಿಗೂ ಬುದ್ಧಿ ಬಂದಿದೆ. ಕಾರಣ, ಅವರು ಎಲ್ಲ ಪಕ್ಷದ ಸಮಾವೇಶಕ್ಕೂ ಹೋಗುತ್ತಾರಲ್ಲ !
  ಅಹರ್ನಿಶಿಯವರೇ,
  ಆ ದಿನ ಬರುತ್ತದೆ. ಅಂಥದೊಂದು ದೀಪದ ಬೆಳಕಿನ ಭರವಸೆಯಲ್ಲೇ ಕತ್ತಲೆಯನ್ನು ದಾಟಬೇಕು. ಅಂದ ಹಾಗೆ ನನ್ನ “ಕಪ್ಪು ಪಟ್ಟಿ’ ಬಳಸಿದ್ದಕ್ಕೆ ಏನೂ ಬೇಸರವಿಲ್ಲ. ಬರೀ ಕಪ್ಪು ಪಟ್ಟಿ ಹಾಕಿದರೆ ಏನೆಂದು ತಿಳಿಯದು ಎಂದುಕೊಂಡು ಹಾಗೆ ರೂಪಿಸಿದೆ. ನಿಮ್ಮಲ್ಲೂ ಬಳಸಿದ್ದಕ್ಕೆ ಧನ್ಯವಾದ. ಇನ್ನಷ್ಟು ಮಂದಿಗೆ ಕೊಡಿ, ಖುಷಿಯಾಗುತ್ತದೆ.
  ನಾವಡ

 5. ನಾವಡ ಸರ್,

  ನಮಸ್ತೆ.. ವರ್ಷಗಳ ಹಿಂದೆಯೇ ನಿಮ್ಮಿಂದ ಬಹಳಷ್ಟು ಕಲಿತವಳು ನಾನು. ನಿಮ್ಮ ಕೈ ಕೆಳಗೆ ಕೆಲಸವನ್ನೂ ಮಾಡಿದ ಶಮ, ನಂದಿಬೆಟ್ಟ. ವಿಜಯ ಕರ್ನಾಟಕಕ್ಕೆ ಇಂಟರ್ನ್ ಶಿಪ್ ಅಂತ ಬಂದಾಗ ಪೆದ್ದುಪೇದ್ದಾಗಿ ಭಯವನ್ನೇ ತುಂಬಿಕೊಂಡು ಬಂದ ನಮ್ಮನ್ನು ಮನೆಯ ಹಿರಿಯರಾಗಿ ಆದರಿಸಿದ್ದಿರಿ. ಆ ಋಣ ದೊಡ್ಡದು. ಬರವಣಿಗೆ ಬಿಟ್ಟು ಸುಮಾರು ವರ್ಷಗಳೇ ಆದವು. ಆದರೆ ಹಾಗಿರಲು ಆಗಲ್ಲ ಅಂತ ನಿಧಾನವಾಗಿ ಅರ್ಥ ಆಗ್ತಾ ಇದೆ. ಸುಮ್ಮನೆ ಬ್ಲಾಗುಗಳನ್ನು ನೋಡುತ್ತಾ ಇದ್ದಾಗ ಚೆಂಡೆ ಮದ್ದಲೆ ಸದ್ದು ಕೇಳಿಸಿತು.. ಕುತೂಹಲಕ್ಕೆ ಕಿವಿಯಾನಿಸಿದೆ.. ನೋಡಿದರೆ ನಿಮ್ಮ ಬ್ಲಾಗ್. ಅವತ್ತಿನ ಥರವೇ ಇವತ್ತಿಗೂ ನಮ್ಮಂಥವರು ಹೊಟ್ಟೆ ಉರಿ ಪಡುವಂತೆ ಬರೆಯುತ್ತಿದ್ದೀರಿ.. ನೀವು ಹಾಗೇ ಬರೀರಿ.. ನಾವು ಹೀಗೆ ಓದುತ್ತಲೇ ಇರುತ್ತೇವೆ.
  ಬರ್ಲಾ ಸರ್..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s