ನಾವು ನೋಡುವ ದಿನ ನಿಗದಿಯಾಗಿದೆ. ಜತೆಗೆ ಸ್ಥಳವೂ ಸಹ. ಇನ್ನು ಉಳಿದಿರುವುದು ನೀವು ಹೊರಡಲು ನಿರ್ಧರಿಸಬೇಕಷ್ಟೇ.
ಕಳೆದ ನನ್ನ ಬರಹದಲ್ಲಿ ತಿಳಿಸಿದಂತೆಯೇ ನಮ್ಮ ಫಿಲ್ಮ್ ಫೆಸ್ಟಿವಲ್ ಜ. ೩ ಮತ್ತು ೪ ರಂದು ನಿಗದಿಯಾಗಿದೆ. ಸ್ಥಳ ಎಲ್ಲರಿಗೂ ಇಷ್ಟವಾಗುವ ಕುಪ್ಪಳ್ಳಿ.
ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯ ಕವಿಶೈಲ ರಾಷ್ಟ್ರಕವಿ ಕುವೆಂಪು ಹುಟ್ಟಿದ ಸ್ಥಳ. ಅಲ್ಲಿರುವ ಪ್ರಕೃತಿ ಅನನ್ಯ ; ಅದ್ಭುತ. ಕುವೆಂಪು ನಡೆದಾಡಿದ ಪರಿಸರ. ಅಲ್ಲಿ ಕುವೆಂಪು ಟ್ರಸ್ಟ್ ಕಟ್ಟಿದ ಹೇಮಾಂಗಣವಿದೆ. ಅಲ್ಲಿ ನಮ್ಮ ಚಿತ್ರೋತ್ಸವ ನಡೆಸಬೇಕೆಂದಿದ್ದೇವೆ.
ಮೂವತ್ತರಿಂದ ನಲವತ್ತು ಮಂದಿ ಸೇರಿಕೊಳ್ಳೋಣ ಎಂದಿದ್ದೇವೆ. ಪುಟ್ಟದಾದ ಚಿತ್ರೋತ್ಸವವಿದು.
ಕನ್ನಡ ಒಳಗೊಂಡಂತೆ ಸುಮಾರು ಎಂಟು ಚಲನಚಿತ್ರಗಳು ಪ್ರದರ್ಶಿತವಾಗಲಿವೆ. ಬಹಳ ವಿಭಿನ್ನವಾದ ಮತ್ತು ಹಿಡಿಸುವಂಥ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಬರೀ ಚಿತ್ರ ನೋಡುವುದಲ್ಲ. ಅದರ ಬಗ್ಗೆ ಚರ್ಚೆ ಇರುತ್ತದೆ. ಅಂದರೆ ಇಲ್ಲಿ ಯಾರೋ ಒಬ್ಬರು ನಿಂತು ಚರ್ಚೆಯನ್ನು ತಮ್ಮ ಕಡೆಗೆ ಬೇಕಾದ ಹಾಗೆ ಅಥವಾ ತಮಗೆ ತೋಚಿದ ಕಡೆಗೆ ಸಾಗುವಂತೆ ಮಾಡುವ ಜಾದೂಗಾರರಿರುವುದಿಲ್ಲ. ನಮ್ಮ ಚಿತ್ರೋತ್ಸವ “ಚಿತ್ರ ನೋಡುವ ಬಗೆಯನ್ನೇ, ಅರ್ಥ ಮಾಡಿಕೊಳ್ಳುವ ನೆಲೆಯನ್ನೇ’ ಕಂಡುಕೊಳ್ಳುವುದಕ್ಕಾಗಿ.
ನಮಗೆ ಚಿತ್ರ ಹೊಸ ಮಾಧ್ಯಮ. ಅದನ್ನು ಅರ್ಥ ಮಾಡಿಕೊಳ್ಳುವ ನೆಲೆ ಬಹಳ ಪರಿಚಿತವಿಲ್ಲ. ಅದರಲ್ಲೂ ಸಂಕೇತಗಳು, ಗೂಢಾರ್ಥಗಳು ಅಥವಾ ಹಲವು ನೆಲೆಗಳಲ್ಲಿ ಅರ್ಥೈಸಬಹುದಾದ ಸಾಧ್ಯತೆ ಇರುವ, ಚಿತ್ರದ ಕಥೆ ನೋಡಿದಂತೆ ಬೆಳೆಯುವ ಮಾದರಿ ತಿಳಿದುಕೊಳ್ಳಬೇಕಿದೆ. ಅಂಥದೊಂದು ಪ್ರಯತ್ನ ಈ ಚಿತ್ರೋತ್ಸವ.
ಇಲ್ಲಿ ಒಂದೆರಡು ದಿಗ್ದರ್ಶಕರನ್ನು ಕರೆಸಲು ಪ್ರಯತ್ನಿಸಲಾಗುತ್ತಿದೆ. ಅದೂ ಅಷ್ಟೇ. ಅವರೂ ನಮ್ಮೊಂದಿಗೆ ನಾವು ತೋರಿಸುವ ಚಿತ್ರಗಳನ್ನು ನೋಡಿ ಅವರು ಅರ್ಥ ಮಾಡಿಕೊಂಡ ಬಗೆಯನ್ನು ಹೇಳಬೇಕು. ಅದಕ್ಕೆ ನಮಗೆ ಅರ್ಥವಾಗಿದ್ದನ್ನು ಹೇಳುತ್ತೇವೆ. ಆಗ ಪರಸ್ಪರ ಕೊಡು-ಕೊಳ್ಳುವಿಕೆ ಮೂಲಕ ನಮಗೆ ಚಿತ್ರ ಅರ್ಥವಾಗಬಹುದು, ನಾವೂ ಬೆಳೆಯಬಹುದು. ಇದು ನಮ್ಮ ಅಂದಾಜು. ನಾವು ಕರೆಯುವ ಅತಿಥಿಗಳಲ್ಲೂ ಅದನ್ನೇ ಬಿನ್ನವಿಸಿಕೊಳ್ಳುತ್ತಿದ್ದೇವೆ.
ಹೀಗೆ ಒಂದು ಚಿತ್ರೋತ್ಸವ ಏರ್ಪಡಿಸಬೇಕೆಂಬುದು ಕೊಡಚಾದ್ರಿಯಲ್ಲಿ ಕಂಡ ಕನಸು. ಈಗ ನೆರವೇರುತ್ತಿದೆ. ವಾದಿರಾಜ್ ಮತ್ತಿತರ ಗೆಳೆಯರು ಇದಕ್ಕೆ ಸಹಕಾರ ನೀಡಿದ್ದಾರೆ. ಬನ್ನಿ, ಎಲ್ಲರೂ ಸೇರಿ ಒಂದಿಷ್ಟು ಚಿತ್ರಗಳನ್ನು ನೋಡೋಣ, ಅರಿಯೋಣ, ನಲಿಯೋಣ.
ಅಂದ ಹಾಗೆ ಚಿತ್ರಗಳ ಮೊದಲ ಪಟ್ಟಿ ಸಿದ್ಧವಾಗಿದೆ. ಎರಡನೇ ಪಟ್ಟಿ ಸಿದ್ಧತೆಗೆ ಚಾಲನೆ ನೀಡಲಾಗಿದೆ. ಸದ್ಯವೇ ಅಂತಿಮಪಟ್ಟಿ ಸಿದ್ಧಗೊಳ್ಳಬಹುದು. ನೀವು ನೋಡಿದ ಒಳ್ಳೆ ಚಿತ್ರಗಳಿದ್ದರೆ ಹೇಳಿ.
ನಾವಡ