ಭಾರತರತ್ನ ಪುರಸ್ಕಾರ ನಮ್ಮ ಭೀಮಸೇನ್ ಜೋಷಿಯವರಿಗೆ ಬಂದಿದೆ. ನದಿ ಹರಿಯುವ ಹಾಗೆ ಹಾಡುವ ಭೀಮಸೇನ್ ಜೋಷಿಯವರೊಂದಿಗಿನ ದಿನಗಳ ಬಗ್ಗೆ ಪ್ರಸಿದ್ಧ ತಬಲಾ ವಾದಕ ರವೀಂದ್ರ ಯಾವಗಲ್ ರೊಂದಿಗೆ ಮಾತನಾಡಿದ್ದನ್ನು ವಿಜಯ ಕರ್ನಾಟಕದ ಸಾಪ್ತಾಹಿಕ “ಭೀಮಸೇನ ವಿಜಯ’ ಕ್ಕೆ ಬರೆದಿದ್ದೆ. ಅದನ್ನೇ ಇಲ್ಲಿ ಹಾಕಿದ್ದೇನೆ. 6-bjhoshi-13

ಮಾತನ್ನು ಹೀಗೆಯೇ ಆರಂಭಿಸುವ ಪ್ರಸಿದ್ಧ ತಬಲಾ ವಾದಕ ಪಂಡಿತ್ ರವೀಂದ್ರ ಯಾವಗಲ್, ಈ ಕನಸು ಈಡೇರಿಸಿದವರಿಗೆ ಧನ್ಯವಾದಗಳನ್ನು ಹೇಳಲು ಮರೆಯುವುದಿಲ್ಲ.
ಅವರೊಂದಿಗೆ ನುಡಿಸುವುದೇ ಒಂದು ಕನಸು ಕಂಡ ಹಾಗೆ. ನಿಜವಾಗಿ ನಮ್ಮ ಆ ವಯಸ್ಸಿನಲ್ಲಿ ಆ ಕನಸೂ ಕಾಣುವ ಸ್ಥಿತಿಯಲ್ಲೂ ನಾವಿರಲಿಲ್ಲ. ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರ್ ಅವರೊಂದಿಗೆ ನುಡಿಸುವುದೆಂದರೆ ಕನಸು.
ಬಿಎಸ್ಸಿ ಪ್ರಥಮ ವರ್ಷ. ೧೯೭೭  ಇರಬಹುದು. ನನಗಾಗ ೧೯ ವರ್ಷ. ಮೈಸೂರಿನ ಅರಮನೆ ದರಬಾರ್ ಹಾಲ್‌ನಲ್ಲಿ ಅವರ ಕಛೇರಿಗೆ ಸಾಥ್ ನೀಡುವ ಅವಕಾಶ. ಡೆಕ್ಕನ್ ಎಕ್ಸ್‌ಪ್ರೆಸ್ ನಲ್ಲಿ ಮುಂಬಯಿಯಿಂದ ಬಂದರು. ಶ್ರೀಪತಿ ಪಾಡಿಗಾರ್ ಮತ್ತು ನಾನು ಹುಬ್ಬಳ್ಳಿಯಿಂದ ಅದೇ ರೈಲುಗಳಿಗೆ ಸೇರಿಕೊಂಡೆವು. ಹಾಸನದ ಬಳಿ ಕಾಫಿಗೆ ವಿರಾಮ. ಕಾಫಿ ಶಾಪ್‌ಗೆ ಇಳಿದ ಜನರ ಮಧ್ಯೆ ಸಿಂಹದಂತೆ ಕಾಣುತ್ತಿದ್ದ ಆಜಾನುಬಾಹು ಕೆಳಗಿಳಿದು ಬಂದು ಕಾಫಿ ಕುಡಿದರು.
ನಾನು ಚಿಕ್ಕವನು. ಆದರೆ ಅವರಂಥ ದೊಡ್ಡ ವ್ಯಕ್ತಿಯಿಂದ ಶಹಭಾಷ್ ಗಿರಿ ಪಡೆಯಬೇಕೆಂಬ ಹುಚ್ಚಿಂದ  ಚೆನ್ನಾಗಿ ಬಾರಿಸಿದೆ. ನನಗೂ   ಖುಷಿಯಾಯಿತು. ‘ನಾನು ಸರಿಯಾಗಿ ನುಡಿಸಿದನೇ? ’ಎಂದು ಕೇಳುವಷ್ಟು ಸಲುಗೆ ಅವರಲ್ಲಿ ಇರಲಿಲ್ಲ ; ಏನು ಹೇಳಿಬಿಡ್ತಾರೋ ಎಂಬ ಭಯ ಬೇರೆ. ಆದರೆ ಅವರ ಅಭಿಪ್ರಾಯ ಕೇಳಬೇಕಿತ್ತು. ನನ್ನ ಬೆಳವಣಿಗೆ ದೃಷ್ಟಿಯಿಂದಲೂ. ಅದಕ್ಕೆ ಮಾಧು ಮಾಮ (ಪಂ. ಮಾಧವಗುಡಿಯವರು ಅವರ ಪಟ್ಟ ಶಿಷ್ಯರು)ರಲ್ಲಿ ನಾನು ಬಾರಿಸಿದ್ದರ ಬಗ್ಗೆ ಏನೆಂದರು ಎಂದು ಕೇಳಿದೆ. ಆಗ ಉತ್ತರಿಸಲಿಲ್ಲ. ನಂತರ ಮಾಧವಗುಡಿಯವರು ಭೀಮಸೇನ್ ಜೋಷಿಯವರು ನನ್ನ ಸಾಥ್ ಬಗ್ಗೆ ಪ್ರಸ್ತಾಪಿಸಿದರು.
ಅದರ ಮರುದಿನವೇ ಮಂಗಳೂರಿನ ಶಕ್ತಿನಗರದಲ್ಲಿ ಕಾರ್ಯಕ್ರಮವಿತ್ತು. ಮತ್ತೆ ಸಾಥ್ ನೀಡಿದೆ. ಆಗ ಮಾಧವಗುಡಿಯವರು ‘ಬಹಳ ಚೆನ್ನಾಗಿ ಬಾರಿಸ್ತಾನೆ. ಆದರೆ ನನ್ನ ನೋಡಿ ಬಾರಿಸೋದಿಕ್ಕೆ ಹೇಳು’ ಎಂದು ಸೂಚಿಸಿದರು.
ಭೀಮಸೇನ್ ಎಂಬ ಅವರ ಆತ್ಮಕತೆಯಲ್ಲಿ ನನ್ನ ಹೆಸರೂ ಇದೆ. ಅದೇ ನನ್ನ ಭಾಗ್ಯ. ಡಾ. ಎಂ. ಬಾಲಮುರಳಿಕೃಷ್ಣ ಮತ್ತು ಭೀಮಸೇನ್ ಜೋಷಿಯವರ ಯುಗಳ ಗಾಯನಕ್ಕೂ ಸಾಥ್ ನೀಡಿದ್ದೆ. ಎಂದಿಗೂ ಜೋಡಿ ನುಡಿಸುವವರನ್ನು ಹೆದರಿಸುವ ವ್ಯಕ್ತಿಯಲ್ಲ. ಅದೇ ಖುಷಿ.
‘ನಂತರ ಬೇಕಾದಷ್ಟು ಕಛೇರಿ ನುಡಿಸಿದ್ದೇನೆ. ಆದರೂ ಸಲುಗೆ ಬೆಳೆದಿಲ್ಲ. ನನ್ನ ಜಾಯಮಾನವದು. ದೊಡ್ಡವರ ಕೂಡ ಸಲುಗೆ ಬೆಳೆಸೋದಿಲ್ಲ. ಮಾಧವಗುಡಿಯವರು ಒಂದು ಮಾತು ಹೇಳುತ್ತಿದ್ದರು. ಅದು ಅಕ್ಷರಶಃ ಸತ್ಯ. ದೊಡ್ಡವರು ಬೆಂಕಿ ಇದ್ದಂತಿರ್‍ತಾರೆ. ಅಂದರೆ ಪ್ರಖರತೆ ಹೆಚ್ಚು. ಹತ್ತಿರ ಹೋದರೆ ಸುಟ್ಟು ಬಿಡ್ತಾರೆ. ನಮ್ಮ ಗುರುಗಳು ಅದನ್ನು ಕಲಿಸಿದ್ದಾರೆ. ಭೀಮಸೇನ್ ಜೋಷಿಯವರಂಥ ಮಹಾನುಭಾವರನ್ನು ಕಂಡರೆ ನಮಗೆ ಅಪಾರ ಭಕ್ತಿ. ಅವರಿಗೆ ನಮ್ಮ ಮೇಲೆ ಪ್ರೀತಿ. ಅಂಥ ಸಂಬಂಧವೇ ನಮ್ಮದು’.
ಬೆಂಗಳೂರಿನಲ್ಲಿ ರಾಜಗೋಪಾಲ ಕಲ್ಲೂರಕರ್ ಅವರ ಸಂಗೀತಶಾಲೆ ಸಹಾಯಾರ್ಥ ಭೀಮಸೇನ್ ಜೋಷಿಯವರನ್ನು ಕರೆಸಲಾಗಿತ್ತು. ಆಗ ನನ್ನನ್ನು  ತಬಲಾ ನುಡಿಸುವಂತೆ ಕೋರಿದ್ದರು. ಆದರೆ ನನಗೆ ಸಂಗೀತಗಾರ್ತಿ ಎನ್. ರಾಜಂ ಅವರೊಂದಿಗೆ ಕಛೇರಿ ನಿಗದಿಯಾಗಿತ್ತು. ಹಾಗಾಗಿ ಸಾಥ್ ನೀಡಲಿಲ್ಲ. ಮಾರನೆ ದಿನ ಬೆಳಗ್ಗೆ ಅವರು ಉಳಿದುಕೊಂಡಿದ್ದ ಹೋಟೆಲ್ ಗೆ ಮಾತನಾಡಿಸಲು ಹೋದೆ. ಆಗ ಅವರು ನನ್ನನ್ನು ಕಂಡು ‘ರೀ..ಬನ್ನಿರಿ ಬೆಂಗಳೂರು ತಿರಕವಾ (ಅಹಮ್ಮದ್ ಜಾನ್ ತಿರುಕವ ಎಂಬವರು ತಬಲಾಕ್ಕೆ ಕೀರ್ತಿ ತಂದುಕೊಟ್ಟವರು, ಅವರು ದಂತಕಥೆ) ಎಂದು ಕರೆದರು. ಅವರ ಕಛೇರಿಗೆ ನುಡಿಸಲಿಕ್ಕೆ ಹೋಗಲಿಲ್ಲವೆಂದು ಅಸಮಾಧಾನವೋ, ಪ್ರೀತಿಯೋ, ವ್ಯಂಗ್ಯವೋ’ ಅರ್ಥವಾಗಲಿಲ್ಲ. ನಾನಂತೂ ಆಶೀರ್ವಾದವೆಂದೇ ಸ್ವೀಕರಿಸಿದ್ದೇನೆ.
ಆರಂಭದಲ್ಲಿ ನಾನು ಅವರಿಗೆ ಅಪರಿಚಿತ. ಈಗ ಪರಿಚಿತನಾಗಿದ್ದರೂ ಅವರ ಒಳವರ್ತುಲದೊಳಗೆ ಹೋಗಿಲ್ಲ. ಅದಕ್ಕೆ ನನ್ನ ಸಂಸ್ಕಾರವೂ ಕಾರಣವಾಗಿರಬಹುದು. ತಬಲಾ ಸಾಥ್ ನೀಡಿದಾಗಲೆಲ್ಲಾ ಚೆನ್ನಾಗಿಯೇ ಪ್ರೋತ್ಸಾಹಿಸಿ ಸಹಕರಿಸಿದ್ದಾರೆ. ಅದೂ ಸಹ ಹರ್ಷದ ಸಂಗತಿ. ವೇದಿಕೆಯಲ್ಲಿ ಎಂದಿಗೂ ನಮಗೆ ಅಸಮಾಧಾನವಾಗಲೀ, ಅವಮಾನವಾಗಲೀ ಮಾಡಿದವರಲ್ಲ.
ಅವರಿಗೆ ಒಂದೇ ವರ್ಷ ಮೂರು ಆಪರೇಶನ್ ಆಯಿತು. ನಂತರ ಅವರ ಅಭ್ಯಾಸ ರೀತಿಯೇ ಬದಲಾಯಿತು. ಅದಕ್ಕೆ ಕಾರಣವೇನೋ ಗೊತ್ತಿಲ್ಲ. ಪುಟ್ಟಪರ್ತಿಯಂಥ ಕಡೆ ಅವರೊಂದಿಗೆ ಹೋಗಿದ್ದೆ. ಯಾವ್ಯಾವ ಭಜನೆ ಹಾಡಬೇಕು ಎಂದು ತಾಲೀಮು ಮಾಡುತ್ತಿದ್ದರು. ಎಂಬತ್ತು ವರ್ಷದಲ್ಲೂ ಅವರು ಸಂಗೀತದ ಬಗ್ಗೆ ಗಂಭೀರತೆಯನ್ನು ಕಳೆದುಕೊಂಡವರಲ್ಲ. ಪ್ರಸಿದ್ಧರಾಗಿದ್ದರೂ ‘ನಾನು ಏನೇ ಹಾಡಿದ್ದರೂ ಜನ ಕೇಳುತ್ತಾರೆಂಬ ದಾರ್ಷ್ಟ್ಯ ಅವರಿಗೆ ಬಂದಿರಲಿಲ್ಲ’.
ಪುಣೆಯಲ್ಲಿದ್ದರೂ ಅವರೆಂದೂ ಕನ್ನಡದ ಬೇರುಗಳನ್ನು ಬಿಟ್ಟವರಲ್ಲ. ಕನ್ನಡ-ಕನ್ನಡ ದೇಶವನ್ನ್ನು ಮರೆತವರೂ ಅಲ್ಲ. ನಮ್ಮ ಬಳಿ ಎಂದಿಗೂ ಮರಾಠಿಯಲ್ಲಾಗಲೀ, ಬೇರೆ ಭಾಷೆಯಲ್ಲಾಗಲೀ ಮಾತನಾಡಿದವರಲ್ಲ. ಕನ್ನಡದಲ್ಲೇ ವ್ಯವಹಾರ. ಇದು ಬರೀ ಭಾಷೆಯ ಮೋಹವಲ್ಲ. ಇಲ್ಲಿನ ಆಹಾರ-ವಿಚಾರ ಎಲ್ಲವೂ ಇಷ್ಟವೇ.
ಧಾರವಾಡದ ಬದಿಗೆ ಬಂದಾಗಲೆಲ್ಲಾ ಅವರು ಇಷ್ಟಪಡುತ್ತಿದ್ದುದು ಬಕರಿ-ಎಣೆಗಾಯಿ ಪಲ್ಯ ಮತ್ತು ಚಟ್ನಿ ಪುಡಿ. ಅದನ್ನು ತಮಗೆ ಬೇಕಾದವರ ಬಳಿಯಲ್ಲಿ ಮಾಡಿಸಿಕೊಂಡು ತಿನ್ನುತ್ತಿದ್ದರು. ಒಟ್ಟೂ ಅವರಿಗೆ ಉಮೇದು (ಞಟಟb) ಬರಬೇಕು.
ನನಗೀಗಲೂ ನೆನಪಿದೆ. ನನ್ನ ಗುರುಗಳ (ಪಂಡಿತ್ ಶೇಷಗಿರಿ ಹಾನಗಲ್) ಮನೆಗೆ ಬಂದು ತಮಗೆ ಬೇಕಾದುದನ್ನು ಮಾಡಿಸಿಕೊಂಡು ತಿನ್ನುತ್ತಿದ್ದರು. ಅದಕ್ಕೆ ರಾತ್ರಿ-ಹಗಲು ಎಂಬ ಭೇದವಿರಲಿಲ್ಲ .
ಕನ್ನಡದ ಬೇರುಗಳನ್ನು ಮರೆತಿಲ್ಲ ಎಂಬುದಕ್ಕೆ ಅವರ ಬಾಲ್ಯದ ಗೆಳೆಯರೊಂದಿಗಿನ ಒಡನಾಟವೇ ಉದಾಹರಣೆ. ಕುಂದಗೋಳದಲ್ಲಿ ಗುಂಡುರಾವ್ ಅಗ್ನಿಹೋತ್ರಿ (ಹಾಗೆ ನೆನಪು) ಎಂದಿದ್ದಾರೆ. ಗುಂಡಣ್ಣ ಅಂತಾ ಕರೀತಾ ಇದ್ದಂತೆ ನೆನಪು. ಅವರು ಬಂದರೆ ಮುಗಿಯಿತು. ಮಾತಿನ ನದಿಯೇ ಹರಿದ ಹಾಗೆ.
ಗುಂಡಣ್ಣ ಜೋಷಿಯವರ ಕಾರ್ಯಕ್ರಮಕ್ಕೆ ಹಾಜರಾದರೆ ಮುಂದಿನ ಸಾಲಿನಲ್ಲಿಯೇ ಕುಳಿತುಕೊಂಡಿರಬೇಕು. ಕಾರ್ಯಕ್ರಮ ಸಂಯೋಜಕರಿಗೂ ಮೊದಲೇ ಹೇಳಿ ಬಿಡುತ್ತಿದ್ದರು. ಬಹಳ ಒಳ್ಳೆಯ ವ್ಯಕ್ತಿ. ಸಿಟ್ಟು ಇದ್ದದ್ದೇ. ಆದರೆ ಅದನ್ನು ಬಹಿರಂಗ ಪ್ರದರ್ಶನಕ್ಕೆ ಬಿಟ್ಟ ಪ್ರಸಂಗಗಳು ತೀರಾ ಕಡಿಮೆ. ಹತ್ತಾರು ಕಹಿ ಅನುಭವಗಳಿಂದಲೇ ಗಟ್ಟಿಯಾಗುತ್ತಾ ಬಂದ  ಮಹಾನುಭಾವನಿಗೆ ಭಾರತರತ್ನ ಬಂದದ್ದು ಖುಷಿ ಕೊಟ್ಟಿದೆ. ಅವರೊಂದಿಗೆ ನುಡಿಸಿದ್ದು ಯೋಗಾಯೋಗವಷ್ಟೇ.