ಮೊನ್ನೆ ಮುಗಿದ ಮಳೆಗಾಲದ ಒಂದು ರಾತ್ರಿಯ ಕೆಲವು ಕ್ಷಣ.
ಊರ ದೀಪಗಳೆಲ್ಲಾ ಹೊತ್ತಿ ಕೊಂಡಿದ್ದವು. ಆದರೂ ಕತ್ತಲೆ ಕಳೆದಿರಲಿಲ್ಲ. ಅಲ್ಲಲ್ಲಿ ಚಂದ್ರನ ಬೆಳಂದಿಂಗಳು ಮಾಡಿಗೆ ಹೊದಿಸಿದ ತೆಂಗಿನಗರಿ (ಮಡ್ಲೆಡೆ)ಗಳ ತೂತುಗಳಿಂದ ಬಿದ್ದಂತೆ ಕತ್ತಲೆಯೂ ಅಲ್ಲಲ್ಲಿ ಹೊಳೆಯುತ್ತಿತ್ತು. ಅಷ್ಟು ಬೆಳಕಿನ ಮಧ್ಯೆ ಕತ್ತಲೆ ಹೊಳೆದಿದ್ದನ್ನು ಕಂಡದ್ದು ಅಂದೇ.
ಹತ್ತಿರದ ಪೇಟೆ ಬದಿಯಿಂದ ಮನೆಗೆ ನಡೆದು ಬರುತ್ತಿದ್ದೆ. ಚಿಕ್ಕದಾದ ದಾರಿ. ಪಕ್ಕದಲ್ಲಿ ಹರಿಯುತ್ತಿದ್ದ ತೋಡು. ಮಳೆ ಹನಿ ಬೀಳುತ್ತಿದ್ದುದು ಕತ್ತಲೆಯಲ್ಲಿ ಕಾಣುತ್ತಿರಲಿಲ್ಲ. ಯಾಕೋ, ನನಗೂ ತಿಳಿದಿಲ್ಲ. ನನ್ನ ಹೆಜ್ಜೆಗಳು ಭಾರವಾಗುತ್ತಿದ್ದವು. ಆಕಾಶದ ಕಡೆ ಬೆನ್ನು ಮಾಡಿದ್ದ ಛತ್ರಿಯೂ ಹೆಜ್ಜೆ ತಪ್ಪುತ್ತಿತ್ತು. ಆದರೂ ತ್ರಾಸಪಟ್ಟು ನಡೆಯುತ್ತಿದ್ದೆ.
***
ಈ ಮಳೆಗಾಲ ಬಂತೆಂದರೆ ಮನಸ್ಸು ಖಾಲಿಯಾಗಿ ಬಿಡುತ್ತದೆ ನನ್ನದು. ಕಳೆದ ಮಳೆಗಾಲದ ರಾತ್ರಿ ನನ್ನೊಳಗೆ ಸದಾ ರಾವಣನಂತೆ ಕುಣಿಯುತ್ತದೆ. ಎಲ್ಲ ಕಳೆದುಕೊಂಡದ್ದನ್ನು ನೆನಪಿಸಿಬಿಡುತ್ತದೆ. ಬದುಕಿನ ದೋಣಿ ಕಡಲಿನಲಿ ಸಿಕ್ಕು ಮುಳುಗಿದ್ದು ಜ್ಞಾಪಕಕ್ಕೆ ಬಂದು ಕತ್ತಲೆ ಆವರಿಸಿಕೊಳ್ಳುತ್ತದೆ. ಬಹಳ ಬೇಸರದ ಸಂಗತಿ, ಆ ರಾತ್ರಿಗಳಲ್ಲಿ ಚಂದಿರನೂ ಇಲ್ಲ, ಅವನ ಬೆಳಂದಿಗಳೂ ಇಲ್ಲ…ಆ ಕತ್ತಲೆ ಇಂದಿನಂತೆ ಹೊಳೆಯುವುದಿಲ್ಲ !
ಬರೀ ಕಳೆದುಕೊಂಡದ್ದು ಏನು ? ಮನೆ…ಮಠ….ಪೇಟೆ…ಸಂಸಾರ…ಒಂದೇ ಎರಡೇ…ಎಲ್ಲವೂ ಹೋಗಿದ್ದರೆ ನಾನು ಬದುಕಿ ಬಿಡುತ್ತಿದ್ದೆ. ಮತ್ತೆ ಗಳಿಸಿಕೊಳ್ಳುವ ಹುಮ್ಮಸ್ಸು ಅಂದು ಇತ್ತು. ಆದರೆ….ಕಣ್ಣು ತೇವವಾಗುತ್ತದೆ, ಆ ಕ್ಷಣ ಹೇಳಲು ಹೋದರೆ ಗಂಟಲು ಉಬ್ಬಿ ಬರುತ್ತದೆ…ಹೊರಗೆ ಮಳೆಯ ಸದ್ದು ಜೋರಾದದ್ದು ಕೇಳುತ್ತದೆ. ಮಳೆಯ ಸೌಂದರ್ಯದೊಳಗಿನ ಭೀಕರತೆ ನೆನಪಾಗಿ ಕಣ್ಣು ಮುಚ್ಚಿಕೊಂಡು ಬಿಡುತ್ತೇನೆ. ದುರಂತವೆಂದರೆ ಅಲ್ಲಿಯೂ…ಕಣ್ಣು ಮುಚ್ಚಿದಾಗಲೂ ಅದೇ ಎದುರಿಗೆ ಬರುತ್ತದೆ. ನಿಜ, ಕಣ್ಮುಚ್ಚಿಕೊಂಡು ಅದನ್ನು ಎದುರಿಸುವುದಕ್ಕಿಂತ ಕಣ್ಣು ತೆರೆದೇ ವಾಸಿ ಎನಿಸಿದೆ. ಹಾಗಾಗಿ ಈಗೀಗ ಕಣ್ತೆರೆದೇ ಇರುವುದನ್ನು ಅಭ್ಯಾಸ ಮಾಡಿದ್ದೇನೆ.
ನನ್ನನ್ನು ಕೈ ಹಿಡಿದು ನಡೆಸಿದವ…ಅವನು ನನ್ನೊಳಗೆ ಎಲ್ಲವನ್ನೂ ತುಂಬಿದ್ದ. ನನ್ನೊಳಗಿನ ಶೂನ್ಯಕ್ಕೂ ಭಾವ ತುಂಬಿ ಹೊಸ ಹೆಸರಿಟ್ಟಿದ್ದ. ಎಲ್ಲವೂ ಸುಸೂತ್ರವಾಗಿ ನಡೆದಿತ್ತು. ಆ ಮಳೆಗಾಲ ಮುಗಿದ ಮೇಲೆ ನನ್ನ ಕೈ ಹಿಡಿಯುವವನಿದ್ದ. ಊರಿಗೆಲ್ಲಾ ಹೊಸ ಸಿಂಗಾರ ಬಂದಿತ್ತು. ಎರಡು ದಿನಗಳಲ್ಲಿ ಮಳೆ ಮುಗಿಯುವುದರಲ್ಲಿತ್ತು. ಮನೆಯಲ್ಲಿ ಮುಹೂರ್ತ ಹುಡುಕಿದ್ದರು. ಕೇವಲ ಎರಡೇ ದಿನ…ಮಳೆ ಮುಗಿದ ಮೇಲೆ ಗೆಜ್ಜೆ ಕಟ್ಟಿಕೊಳ್ಳುತ್ತಿದ್ದೆ. ನನ್ನ ಬದುಕಿಗೆ ಸಂಭ್ರಮದ ನಾದ ಬರುತ್ತಿತ್ತು. ಮಳೆಯ ಹಾಡನ್ನು ಮರೆಯುತ್ತಿರಲಿಲ್ಲ.
****
ಮನೆಯಲ್ಲಿ ಪೂಜೆಗೆ ಕುಳಿತಿದ್ದ ಅಪ್ಪ ದೇವರಿಗೆ ಆರತಿ ಎತ್ತುತ್ತಿದ್ದ. ಮಕ್ಕಳೆಲ್ಲಾ ನಾವು ಸಾಲಾಗಿ ಕೈ ಮುಗಿದು ನಿಂತಿದ್ದೆವು. ತಮ್ಮ ಜಾಗಟೆ ಬಾರಿಸುತ್ತಿದ್ದ. ಕ್ಷಣ ಕ್ಷಣಕ್ಕೂ ಆ ನಾದದಲ್ಲಿ ಏರಿಳಿತವಾಗುತ್ತಿತ್ತು. ಒಮ್ಮೆ ಜೋರಾಗಿ ಪೆಟ್ಟು ಬಿದ್ದರೆ, ಮತ್ತೊಮ್ಮೆ ಕೈ ಸೋತು ಹೋದವನ ಹಾಗೆ ಮೆಲ್ಲಗೆ ಬಡಿಯುತ್ತಿದ್ದ. ಜಾರುವ ಜಾಗಟೆಯನ್ನು ಸರಿಯಾಗಿ ಹಿಡಿದ ಕ್ಷಣ ಶಬ್ದ ಕಿವಿಗೆ ಅಪ್ಪಳಿಸುತ್ತಿತ್ತು. ಆಗ ಅಪ್ಪ ಒಮ್ಮೆ ಹಿಂತಿರುಗಿ ನೋಡುತ್ತಿದ್ದರು. ನನ್ನಪ್ಪನಿಗೆ ನಾದದಲ್ಲಿ ಲಯವಿರಬೇಕು…ಹೀಗೆ ಒಮ್ಮೆಲೆ ಏರುವುದು, ಇಳಿಯುವುದು ಇಷ್ಟವಿಲ್ಲ. ಎಲ್ಲ ಮುಗಿದು ಕೊನೆಯ ಆರತಿ ಬರುವಾಗ ತಮ್ಮನ ಕೈ ಸೋತಿತ್ತು. ನಾನು ಪಡೆದು, ಜಾಗಟೆ ಬಾರಿಸತೊಡಗಿದೆ. ಆರಂಭ…ಶಬ್ದ ಜೋರಾಗಿತ್ತು. ಅಪ್ಪನ ಆರತಿ ಮುಗಿಯುವ ಕೊನೆ ಕ್ಷಣ ನನ್ನ ಹೊಡೆತವೂ ಜೋರಾಯಿತು. ಬಾರಿಸುವುದನ್ನು ನಿಲ್ಲಿಸುವ ಕೊನೆ ಹೊಡೆತ ಲಯಬದ್ಧವಾಗಿಯೇ ಇತ್ತು. ಅಪ್ಪ ಆರತಿ ಮುಗಿಸಿ, ನಮಸ್ಕಾರ ಹಾಕಿದರು. ನಾವೂ ನಮಸ್ಕಾರ ಮಾಡಿದೆವು. ಪ್ರಸಾದ ಪಡೆದು ಬಾಗಿಲಿಗೆ ಬರುವಷ್ಟರಲ್ಲಿ ಮಳೆಯ ಜಾಗಟೆ ಜೋರಾಗಿತ್ತು.
****
ಬಾಗಿಲನ್ನು ಸರಿಸಿ ಒಳಗೆ ಪಡಸಾಲೆಯಲ್ಲಿ ಕುಳಿತುಕೊಂಡೆ. ಹೊರಗೆ ಮತ್ತಷ್ಟು ಜೋರಾಯಿತು ಮಳೆ. ಮುಗಿಯುವ ಮೊದಲು ಹೀಗೆ…ಜೋರಾಗಿ ಎಂದುಕೊಂಡು ಸುಮ್ಮನಾದೆ. ನಿದ್ರೆಯ ಜೊಂಪು ಆವರಿಸತೊಡಗಿತು. ಅಮ್ಮ ಅಡುಗೆ ಮನೆಯಲ್ಲಿ ಎಲೆ ಹಾಕಿ ಊಟಕ್ಕೆ ಕರೆದ ಸದ್ದು ಅಸ್ಪಷ್ಟವಾಗಿ ಕೇಳಿತು. ಎಚ್ಚೆತ್ತುಕೊಳ್ಳುವಷ್ಟರಲ್ಲಿ ಬಂದ ತಮ್ಮ…ಎದ್ದೇಳೇ..ಅಮ್ಮ ಅಷ್ಟೊತ್ತಿಂದ ಕರೀತಿದ್ದಾಳೆ…ಕೇಳಿಸಲ್ವೇನು? ಇಷ್ಟೊತ್ತಿಗೇ ನಿದ್ದೆ ಎಂದವನೇ ಬಿರುಗಾಳಿ ಹೋದಂತೆ ಹೋದ. ನಾನೂ ಹಿಂಬಾಲಿಸಿದೆ. ಉದ್ದಿನ ಗೊಜ್ಜು ಮಾಡಿದ್ಲು ಅಮ್ಮ. ಬೆಂಗಳೂರಿನಿಂದ ಬಂದ ಅಣ್ಣನಿಗೆ ಇದೆಲ್ಲಾ ಇಷ್ಟ. ಅವನು ಇರುವವರೆಗೆ ನಮ್ಮ ಮನೆಯಲ್ಲಿ ಸಮಾರಾಧನೆಯೇ. ಉದ್ದಿನ ಗೊಜ್ಜಿಗೆ ಸಂಡಿಗೆ ಮೆಣಸೂ ಉರಿದದ್ದು ಇತ್ತು. ಹೊರಗೆ ಮಳೆ…ಒಳಗೆ ಸಂಡಿಗೆ ಮೆಣಸು..ಮಕ್ಕಳು ಜಾಸ್ತಿ ಖಾರ ತಿನ್ನಬಾರದು ಎಂಬ ಉಪದೇಶ ಸದಾ ಇದ್ದದ್ದೇ. ಅದಕ್ಕೇ ಅಪ್ಪ ಊಟ ಮುಗಿಸುವವರೆಗೂ ಕಾಯುತ್ತಿದ್ದೆ. ಮೆಲ್ಲಗೆ…ಮೆಲ್ಲಗೆ…ತಿನ್ನುತ್ತಿದ್ದೆ.
ಅಪ್ಪನದ್ದು ಒಂದು ಒಳ್ಳೆ ಅಭ್ಯಾಸ. ಊಟ ಬಹಳ ಬೇಗ. ನಾವು ಒಂದು ಸುತ್ತು ಮುಗಿಸುವಾಗ ಅಪ್ಪನದ್ದು ಮೂರೂ ಸುತ್ತು ಮುಗಿದು, ತೋಟದಲ್ಲಿರುತ್ತಿದ್ದ. ಅಲ್ಲಿಯೇ ಕೈ ತೊಳೆದುಕೊಂಡು ಒಂದು ಸುತ್ತು ಹಾಕಿ ಬರುವುದು ಅವನ ಅಭ್ಯಾಸ. ಅಪ್ಪ ಎದ್ದು ಕೈ ತೊಳೆಯಲು ಹೊರಡುತ್ತಿದ್ದಂತೆ ಸಂಡಿಗೆ ಮೆಣಸಿನ ತಟ್ಟೆ ಎಳೆದುಕೊಂಡೆ. ಅಮ್ಮ..ಕಡಿಮೆ ತಿನ್ನೇ..ರಾತ್ರಿ ಹೊಟ್ಟೆ ಉರಿಯುತ್ತೇ ಅಂತೀ ಎಂದಳು. ಸರಿ ಎಂದುಕೊಂಡು ನನಗೆ ಎಷ್ಟು ಬೇಕೋ ಅಷ್ಟು ತಿಂದೆ. ಹೊರಗಿನ ಮಳೆಯ ತೇವಕ್ಕೆ ಈ ಊಟ ಒಳ್ಳೆ ಸಾಥ್ ಎನಿಸಿತು. ಊಟ ಮುಗಿಸಿ ಮಲಗಲು ಸಿದ್ಧತೆ ನಡೆಸಿದಾಗ ಅಣ್ಣ ಬಂದ. “ಏನೇ…ಎಲ್ಲವೂ ಸರಿಯಿದೆಯೇ?’ ಎಂದು ಕೇಳಿದವನ ಪ್ರಶ್ನೆಯಲ್ಲಿ ಎಷ್ಟೆಲ್ಲಾ ಅರ್ಥವಿತ್ತು. ಅದಕ್ಕೆ ಸರಿಯಾಗಿ ನಾನೂ ಅಷ್ಟೇ ಅರ್ಥದ “ಪರವಾಗಿಲ್ಲ’ ಎಂದು ಉತ್ತರಿಸಿದೆ.
ಅಣ್ಣ ಅವನಷ್ಟಕ್ಕೇ ಏನೋ ಅಂದುಕೊಂಡು ಟಿವಿ ಮುಂದೆ ಪೀಠಸ್ಥನಾದ. ಹೊಸದಾಗಿ ಬಂದಿದ್ದ ಮ್ಯಾಗಜೈನ್ ತೆಗೆದುಕೊಂಡು ಮಲಗುವ ಕೋಣೆಗೆ ಹೋದೆ. ಎಲ್ಲ ನಿಶ್ಶಬ್ದವಾಗಿತ್ತು, ಆದರೆ ಮಳೆಯ ಸದ್ದು ಅಡಗಿರಲಿಲ್ಲ. ಬೇಗ ಮಳೆ ನಿಂತರೆ ಸಾಕು ಎಂದುಕೊಂಡು ಓದುತ್ತಾ ನಿದ್ರೆಗೆ ಹೋದೆ. ರಾತ್ರಿಯೂ ಬಹಳ ದೀರ್ಘ ಎನಿಸಿತು…
*********
ಬೆಳಗ್ಗೆ ಏಳುವಷ್ಟರಲ್ಲಿ ಅಪ್ಪ ತಲೆಗೆ ಕೈ ಹಿಡಿದು ಕುಳಿತಿದ್ದ, ಅಮ್ಮನೂ ಸಹ. ಅಣ್ಣನ ಮುಖದಲ್ಲೂ ಕಳೆಯಿರಲಿಲ್ಲ. ಯಾರನ್ನಾದರೂ ಮಾತನಾಡಿಸಿದರೂ ಮಾತನಾಡಿಯೆರೆಂಬ ನಂಬಿಕೆ ಇರಲಿಲ್ಲ. ಅವಳೂ ಪಕ್ಕದಲ್ಲಿ ಬಂದು ನಿಂತಳು, ತುಟಿ ಬಿಚ್ಚಲಿಲ್ಲ. ನೀರವ ಮೌನದಲ್ಲಿ ಇಡೀ ಮನೆ….ಅವನ ಅಪ್ಪ ಬಂದದ್ದು, ಎಲ್ಲವನ್ನೂ ಹೇಳಿದ್ದು. ಮೌನಕ್ಕೆ ಕೊನೆ ಮೊಳೆ ಹೊಡೆದಂತೆ ಮಾತು ಅಲ್ಲಿ ಹೊರಡಲೇ ಇಲ್ಲ…
ಮತ್ತೆ ಪ್ರತಿ ವರ್ಷವೂ ಮಳೆ ಸುರಿಯುತ್ತದೆ. ಹೀಗೇ ಭಯ ತರುವ ರೀತಿಯಲ್ಲಿ…ನನ್ನ ಕನಸು ಕೊಚ್ಚಿ ಹೋದ ದಿನ, ಕ್ಷಣವೆಲ್ಲಾ ನೆನಪಾಗಿ ಹೆಜ್ಜೆ ಅದುರುತ್ತದೆ. ಕಣ್ಣ ಮುಂದಿನ ನೋಟವೆಲ್ಲಾ ಮಬ್ಬಾಗಿ ಏನೂ ತೋರುವುದಿಲ್ಲ. ದಾರಿ ತೋರಿದತ್ತ ಸಾಗುತ್ತೇನೆ.
****
ಹೊರಗೆ ಮಳೆ ಮತ್ತೆ ಜೋರಾಯಿತು. ತ್ರಾಸದ ಹೆಜ್ಜೆಗಳಿಂದ ಮನೆಯೊಳಗೆ ಕಾಲಿಟ್ಟೆ. ಒಳಗೂ ಕತ್ತಲಿತ್ತು. ಈ ಹಾಳು ಮಳೆ ಬಂದರೆ ಸಾಕು, ಕೆಇಬಿಯವರಿಗೆ ಖುಷಿ. ಕರೆಂಟು ತೆಗೆದು ಬಿಡ್ತಾರೆ ಎಂದು ಗೊಣಗಲಾರಂಭಿಸಿದೆ. ಅಡುಗೆ ಮನೆಯಲ್ಲಿದ್ದ ಅಮ್ಮ, “ಅಲ್ಲೇ ಇರು…ದೀಪ ತರ್‍ತೀದೀನಿ’ ಎಂದರು. ಆದರೂ ತಡೆಯದೇ ಮೊಬೈಲ್ ಬೆಳಕಿನಲ್ಲಿ ಅಡುಗೆ ಮನೆಯವರೆಗೂ ಹಾದು ಬಂದೆ. ದೇವರ ಎದುರು ಪುಟ್ಟದೊಂದು ದೀಪ ತನ್ನ ಮೂಲೆಯಷ್ಟನ್ನೇ ಬೆಳಗಿಕೊಂಡಿತ್ತು. ಮತ್ತೊಂದು ದೀಪ ಹೊತ್ತಿಸಿಕೊಳ್ಳುತ್ತಿದ್ದ ಅಮ್ಮನ ನೆರಳು ಅದಕೆ ಅಡ್ಡವಾಗಿತ್ತು.
ಅಮ್ಮ ದೀಪ ಹಿಡಿದು ಪಡಸಾಲೆಗೆ ಬಂದಳು. ನಾನೂ ಹಿಂಬಾಲಿಸಿ ಬಂದು ಮೂಲೆಯಲ್ಲಿ ಕುಳಿತುಕೊಂಡೆ. ದೀಪವನ್ನೇ ದಿಟ್ಟಿಸಿದೆ. ಅದರೊಳಗಿನ ಕಾಂತಿ ನನ್ನೊಳಗೂ ತುಂಬಿಕೊಂಡಿತು ; ಮನಸ್ಸು ಉಲ್ಲಸಿತವಾಯಿತು. ನನ್ನೊಳಗೂ ಬೆಳಕು ಹೊತ್ತಿಕೊಂಡಂತೆ ಭಾಸವಾಯಿತು. ಅಷ್ಟರೊಳಗೆ ನಮ್ಮ ಪರಿಶ್ರಮವನ್ನೆಲ್ಲಾ ಹಾಳುಗೆಡುವಂತೆ ಲೈಟ್ ಹೊತ್ತಿಕೊಂಡವು. ಒಮ್ಮೆಲೆ ಚಿಮ್ಮಿದ ಬೆಳಕಿನಲ್ಲಿ ಕಣ್ಣು ತೆರೆಯಲಾಗಲಿಲ್ಲ. ಮಳೆಯ ಸದ್ದು ಮಾತ್ರ ಅಡಗಿರಲಿಲ್ಲ. ಆಗಾಗ್ಗೆ ಬರುತ್ತಿದ್ದ ಮಿಂಚುಗಳು ಮಳೆಯ ಹನಿಗಳಿಗೆ ದಾರಿ ತೋರಿಸುತ್ತಿದ್ದವು. ಪಕ್ಕದ ತೋಡಿನಲ್ಲೂ ನೀರಿನ ಸದ್ದು ಜೋರಾಗಿತ್ತು. ನಾನು ನನ್ನೊಳಗೆ ಬೆಳಕು ತುಂಬಿಕೊಂಡು ಕಣ್ಣುಮುಚ್ಚಿಕೊಂಡೆ. ಒಳಗೆ ಕತ್ತಲೆ ಇರಲಿಲ್ಲ.
***