ಕನ್ನಡಕ್ಕೆ ತಡವಾಗಿಯಾದರೂ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಕೇಂದ್ರ ಸರಕಾರ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕನ್ನಡ ಮತ್ತು ತೆಲುಗಿಗೆ ಶಾಸ್ತ್ರೀಯ ಸ್ಥಾನಮಾನ ಘೋಷಿಸಿದೆ. ೨೦೦೫ ರಿಂದಲೂ ನಿರಂತರವಾಗಿ ನಡೆದ ಹೋರಾಟಕ್ಕೆ ಸಿಕ್ಕ ಜಯವಿದು ಎನ್ನುವುದರಲ್ಲಿ ಸಂದೇಹವಿಲ್ಲ. ಈ ದಿಸೆಯಲ್ಲಿ ಲಭ್ಯವಿದ್ದ ಮಾಹಿತಿಯನ್ನು ಇಲ್ಲಿ ನೀಡಿದ್ದೇನೆ.
ಶಾಸ್ತ್ರೀಯ ಭಾಷೆ- ಏನು ಪ್ರಯೋಜನ ?
 – ಶಾಸ್ತ್ರೀಯ ಭಾಷೆಯ  ಕುರಿತಂತೆ  ಕೆಲಸ ಮಾಡಿದ  ಇಬ್ಬರು  ಶ್ರೇಷ್ಠ  ವಿದ್ವಾಂಸರಿಗೆ  ಪ್ರತಿವರ್ಷ  ಅಂತಾರಾಷ್ಟ್ರೀಯ  ಪ್ರಶಸ್ತಿ
– ಭಾಷೆಯ ಅಧ್ಯಯನಕ್ಕೆ  ಉನ್ನತ  ಅಧ್ಯಯನ  ಕೇಂದ್ರ  ಸ್ಥಾಪನೆ
– ಕೇಂದ್ರೀಯ  ವಿವಿಗಳಲ್ಲಿ  ಅಧ್ಯಯನ  ಪೀಠಗಳ  ಆರಂಭ
  – ಕನ್ನಡ ಭಾಷೆಯನ್ನು ಕರ್ನಾಟಕ ಮತ್ತು ಹೊರರಾಜ್ಯಗಳಲ್ಲಿ ಅಭಿವೃದ್ಧಿ ಪಡಿಸುವುದು, ಪ್ರಚಾರ ಮಾಡುವುದು ಮತ್ತು ಸಂರಕ್ಷಿಸಲು ಕೇಂದ್ರದಿಂದ ಆರ್ಥಿಕ ನೆರವು.
*
ಯಾವುದು ಶಾಸ್ತ್ರೀಯ ಭಾಷೆ ?
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಭಾಷಾ ವಿದ್ವಾಂಸ ಜಾರ್ಜ್ ಎಲ್.  ಹಾರ್ಟ್ ಎಂಬುವವರು ಶಾಸ್ತ್ರೀಯ ಭಾಷೆಗೆ ಈ ಕೆಳಕಂಡ ಚಹರೆಗಳನ್ನು ಗುರುತಿಸುತ್ತಾರೆ.
– ಭಾಷೆಯ ದಾಖಲಾದ ಇತಿಹಾಸ ಒಂದು ಸಾವಿರ ವರ್ಷಕ್ಕೂ ಪುರಾತನವಾಗಿರಬೇಕು(ತಮಿಳಿಗರ ಒತ್ತಾಯಕ್ಕೆ ಮಣಿದು ಈಗ ಒಂದೂವರೆ ಸಾವಿರ ವರ್ಷ ಎಂದು ಬದಲಿಸಲಾಗಿದೆ)
– ಪುರಾತನ ಸಾಹಿತ್ಯ ತಲೆ ತಲೆಮಾರುಗಳ ಜನರಿಂದ ಅತ್ಯಂತ ಮೌಲಿಕ ಪರಂಪರೆಯೆಂದು ಪರಿಗಣಿತವಾಗಿರಬೇಕು.
– ಸಾಹಿತ್ಯ ಪರಂಪರೆ ಸ್ವೋಪಜ್ಞವಾಗಿದ್ದು, ಬೇರೆ ಭಾಷೆ- ಸಮುದಾಯದಿಂದ ಸ್ವೀಕಾರವಾಗಿರಬಾರದು.
– ಕ್ಲಾಸಿಕಲ್ ಭಾಷೆ ಮತ್ತು ಅದರ ಸಾಹಿತ್ಯ , ಪ್ರಸ್ತುತ ಭಾಷೆ- ಸಾಹಿತ್ಯಕ್ಕಿಂತ ಭಿನ್ನವಾಗಿರಬೇಕು.
*
ಶಾಸ್ತ್ರೀಯ ಸ್ಥಾನ-ಮಾನ  ಪಡೆಯುವುದು  ಮೃತ ಭಾಷೆಯಷ್ಟೆ ?
–  ಲ್ಯಾಟಿನ್ ಮತ್ತು ಸಂಸ್ಕೃತ ಭಾಷೆಗೆ ಯುನೆಸ್ಕೊ ಕ್ಲಾಸಿಕಲ್ ಭಾಷೆ ಸ್ಥಾನಮಾನ ನೀಡಿರುವುದರಿಂದ   ಮೃತ ಭಾಷೆಗೆ(ಬಳಕೆಯಲ್ಲಿ ಇಲ್ಲದ) ಮಾತ್ರ  ರೀತಿಯ ಸ್ಥಾನ-ಮಾನ ಸಿಗುತ್ತದೆ ಎಂಬ ಭಾವನೆ ಇದು.
ಆದರೆ  ಇದು ಸರಿಯಲ್ಲ ಎಂದು ಅನೇಕ ಭಾಷಾ ತಜ್ಞರು ಹೇಳಿದ್ದಾರೆ.  ಪುರಾತನ ಕಾಲದಲ್ಲಿ ಬಳಕೆಯಲ್ಲಿದ್ದು, ಚಿರಂತನವಾಗಿ  ಕಾಲ-ಕಾಲಕ್ಕೆ ಪರಿವರ್ತನೆಯಾಗುತ್ತಿರುವ ಹಾಗೂ ದೊಡ್ಡ ಸಮುದಾಯ ಬಳಸುತ್ತಿರುವ ಭಾಷೆಗೂ ಕ್ಲಾಸಿಕಲ್ ಸ್ಥಾನ ನೀಡಬಹುದು. 
ಕನ್ನಡದ ಇತಿಹಾಸ
ದಕ್ಷಿಣ ಭಾರತದ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿಯೇ ಕನ್ನಡ ಪ್ರಾಚೀನ-ನವೀನ. ಅದಕ್ಕೇ ೧೮೬೮ರಿಂದ ಇಂಗ್ಲಿಷ್ ಸರಕಾರದ ದಾಖಲೆಗಳು ‘ಕ್ಲಾಸಿಕಲ್ ಲಾಂಗ್ವೇಜ್’ ಎಂದು ಕರೆದು, ದಾಖಲಿಸಿ ‘ಅಭಿಜಾತ’ ಎಂದಿದ್ದಾರೆ.
೩ನೇ ಶತಮಾನಕ್ಕೆ ಮುಂಚೆಯೇ ಅಂದಿನ ದಾಖಲೆಗಳೆನಿಸಿದ ತಮಿಳು ಶಾನಸಗಳಲ್ಲಿ ಕನ್ನಡ ಭಾಷೆಯ ಅಸ್ತಿತ್ವ ಲಭ್ಯ. ಇದಲ್ಲದೆ ಕನ್ನಡದ ಮೊತ್ತಮೊದಲ ಶಾಸನ ಎಂದು ಹಲ್ಮಿಡಿ ಶಾಸನವನ್ನು ಗುರುತಿಸಲಾಗಿದೆ. ಅದರ ಕಾಲ ಕ್ರಿ.ಶ. ೪೫೦. ಮೊದಲ ಗದ್ಯ ಸಾಹಿತ್ಯ ವಡ್ಡಾರಾಧನೆ ಕ್ರಿ.ಶ. ೮೦೦, ಮೊದಲ ಲಕ್ಷಣ ಗ್ರಂಥ ಕವಿರಾಜ ಮಾರ್ಗ ಕ್ರಿ.ಶ. ೮೫೦ ಲಭ್ಯ.
ಕನ್ನಡ ಭಾಷೆಯ ಪುರಾತನಕ್ಕೆ ಇತರ ಪುರಾವೆ:
ಪಾಣಿನಿಯ ಅಷ್ಟಾಧ್ಯಾಯಿ, ಅಶೋಕನ ಶಾಸನ, ಪ್ರಾಕೃತ ಶಾಸನ, ಗ್ರೀಕ್ ಇತಿಹಾಸಕಾರ ಟಾಲೆಮಿಯ ಪಾಪಿರಸ್, ಗ್ರೀಕ್ ಕಾಮಿಡಿ ಅಕ್ಸಿರಿಂಕಸ್ ಪಾಪೈರಿ, ಪ್ರಾಕೃತದಲ್ಲಿನ ಮಳವಳ್ಳಿಯ ಶಾಸನ, ಹಾಲರಾಜನ ಗಾಥಾ ಸಪ್ತಶತಿ, ಪಲ್ಲವರ ಹಡಗಲಿಯ ಶಾಸನ, ತಮಿಳಿನ ಶಿಲಪ್ಪದಿಕಾರಮ್‌ನ ‘ಕರುನಾಡಗರ್’ ಇವೆಲ್ಲ ಕನ್ನಡ ಭಾಷೆಯ ‘ಅಭಿಜಾತ ಸ್ಥಾನ’ ವನ್ನು ಸಾಬೀತು ಮಾಡಲು ಪೂರಕ ಮಹತ್ವದ ದಾಖಲೆಗಳು.
ಕನ್ನಡ ಕ್ರಿ.ಪೂ.೬ ರಿಂದಲೇ ತನ್ನ ಅಸ್ತಿತ್ವವನ್ನು ಗುರುತಿಸಿದೆ. ಶ್ರೀ ಸಾಮಾನ್ಯರೇ ಕ್ರಿ.ಪೂ. ೩-೪ ರಲ್ಲಿಯೇ ಆಡು ಭಾಷೆಯಾಗಿ ಕನ್ನಡವನ್ನು ಬಳಸುತ್ತಿದ್ದರು. ಸಂಸ್ಕೃತ ಮತ್ತು ಪ್ರಾಕೃತದಿಂದಲೇ ಮೊತ್ತ ಮೊದಲಿಗೆ ಕನ್ನಡ ಭಾಷೆ ಪ್ರಭಾವ ಹೊಂದಿದೆ. ಅದೇ ರೀತಿ ತಮಿಳಿಗೂ ಕನ್ನಡದ್ದೇ ಪ್ರಭಾವ.
ರಾಜಕೀಯವಾಗಿ ಆಡಳಿತಾತ್ಮಕವಾಗಿ ಕನ್ನಡ ೫೦೦ ವರ್ಷಗಳಿಂದ ಸ್ಥಾನ ಗಳಿಸಿಕೊಟ್ಟಿದೆ. ಆಗ ಬನವಾಸಿ ಕದಂಬರ ಕಾಲವೂ ಆಗಿತ್ತು. ಬದಾಮಿ ಚಾಲುಕ್ಯರದೂ ಆಗಿದ್ದು-ರಾಜ್ಯ ಭಾಷೆಯೂ ಆಗಿತ್ತು ಎಂದು ಸಂಶೋಧಕ ಡಾ.ಹಂಪನಾ ದಾಖಲಿಸಿದ್ದಾರೆ.
ಇದುವರೆಗೆ ತಮಿಳಿನಲ್ಲಿ ಆಗಿರುವುದೇನು ?
* ಅಕ್ಟೋಬರ್ ೧೨, ೨೦೦೪ ರಂದು ತಮಿಳು ಶಾಸ್ತ್ರೀಯ ಭಾಷೆಯಾಗಿ ಘೋಷಣೆ
 * ಅಂದೇ ಕೇಂದ್ರ ಸರಕಾರದ ಅಧಿಸೂಚನೆಯಡಿ ತಮಿಳು ಭಾಷಾ ಸಂಶೋಧನಾ ಕೇಂದ್ರ (ಸಿಇಸಿಟಿ) ಅಸ್ತಿತ್ವಕ್ಕೆ
* ತಮಿಳು ಭಾಷಾ ಅಭಿವೃದ್ಧಿ ಮಂಡಳಿ ಕಾರ್‍ಯಾರಂಭ
* ಹತ್ತು ಪ್ರಮುಖ ಯೋಜನೆಗಳ ಕಾರ್‍ಯಾರಂಭ
ತಮಿಳು ಪ್ರಾಚೀನ ಕೃತಿಗಳ ಮರು ಮುದ್ರಣ
ಪ್ರಾಚೀನ ತಮಿಳು ಕೃತಿಗಳ ಅನುವಾದ
ತಮಿಳಿನ ಚಾರಿತ್ರಿಕ ವ್ಯಾಕರಣದ ಸಂಶೋಧನೆ
ತಮಿಳಿನ ಪ್ರಾಚೀನತೆ -ಅಂತರ್ ಶಿಸ್ತೀಯ ಅಧ್ಯಯನ
ಆಡುನುಡಿಯಾಗಿ ತಮಿಳಿನ ಉಚ್ಚಾರಣಾ ವಿಧಿ ವಿಧಾನದ ಸಂಶೋಧನೆ
ಭಾಷಾವಾರು ವಲಯವಾಗಿ ಭಾರತ-ಅಧ್ಯಯನ (ತಮಿಳು ಮತ್ತು ಇತರೆ ದ್ರಾವಿಡ ಭಾಷೆಗಳೊಂದಿಗಿನ ಸಂಬಂಧದ ತೌಲನಿಕ ಅಧ್ಯಯನ)
೭. ಪ್ರಾಚೀನ ತಮಿಳು ಅಧ್ಯಯನಕ್ಕೆ ಡಿಜಿಟಲ್ ಗ್ರಂಥಾಲಯ ಸೌಲಭ್ಯ
೮. ತಮಿಳು ಕಲಿಕೆಗೆ ಆನ್‌ಲೈನ್ ವ್ಯವಸ್ಥೆ
೯. ಪ್ರಾಚೀನ ತಮಿಳು ಕೃತಿಗಳ ಸಮಗ್ರ ಅಭಿವೃದ್ಧಿ
೧೦. ಶಾಸ್ತ್ರೀಯ ತಮಿಳು ಕುರಿತು ದೃಶ್ಯ ದಾಖಲೆಗಳ ಸಂಗ್ರಹ (ತಮಿಳು ವ್ಯಾಕರಣ, ಸಾಹಿತ್ಯ, ವಾಸ್ತುಶಿಲ್ಪ, ಕಲೆ, ವಿಜ್ಞಾನ-ತಂತ್ರಜ್ಞಾನ ಇತ್ಯಾದಿ)- ಇವು ಸಂಗ್ರಹಿತ ಮಾಹಿತಿ