ಚಿತ್ರ ಕುಲುಮೆಯ ಪ್ರವೀಣ್ ಬಣಗಿ
ಚಿತ್ರ : ಚಿತ್ರ ಕುಲುಮೆಯ ಪ್ರವೀಣ್ ಬಣಗಿ

ಬೆಳಕು…
ಬೆರಗು… !
ಮೆರುಗು… !
ಬೆಳಕೆಂಬ ಬೆರಗಿನ ಬಗ್ಗೆ ಕಾವ್ಯ ಬರೆಯಲು ಹೊರಟರೇ ಹೀಗೆ ಪದಗಳು ಸಾಲು ದೀಪಾವಳಿ ಸಂಭ್ರಮ ತುಂಬಿಕೊಂಡ ಮನೆಯ ಅಂಗಳದಲ್ಲಿ ಜೋಡಿಸಿ ಸಾಲಾಗಿ ಇಟ್ಟ ದೀಪಗಳಂತೆ ಮೆರವಣಿಗೆ ಹೊರಡುತ್ತವೆ. ಬೆಳಕಿಗೆ ಆ ಮೆರವಣಿಗೆಯ ವೈಭವವಿದೆ. ಕಣ್ತುಂಬಿಕೊಳ್ಳುತ್ತಾ ಕುಳಿತರೆ ಮನದೊಳಗಿನ ಕತ್ತಲೆಗೆ ಹಣತೆ ಹಚ್ಚಿಟ್ಟಂತೆಯೇ.
ಬೆಳಕೆಂದರೆ ಸಂಭ್ರಮ. ನಮ್ಮೊಳಗು-ಹೊರಗನ್ನು ಆವರಿಸಿಕೊಳ್ಳುವಂಥದ್ದು. ಕತ್ತಲೆಯಿಂದ ಬೆಳಕಿನೆಡೆಗೆ ಎನ್ನುವ ಮಾತಿದೆ. ಅದರಂತೆಯೇ ದೀಪ ಹಚ್ಚಿ ಬರಿಯ ಮನೆಯ ಒಳ-ಹೊರಗನ್ನು ಬೆಳಗಿಕೊಳ್ಳುವುದಿಲ್ಲ. ನಮ್ಮೊಳಗೂ ಬೆಳಗಿಕೊಳ್ಳುತ್ತೇವೆ.  ಅಧ್ಯಾತ್ಮದಲ್ಲಿ ನಮ್ಮೊಳಗೆ ಬೆಳಗಿಕೊಳ್ಳುವುದೆಂದರೆ ಆತ್ಮಾವಲೋಕನಕ್ಕೆ ಅವಕಾಶ ಕಲ್ಪಿಸಿಕೊಳ್ಳುವುದು. ಅಲ್ಲಿಗೆ ಅಲ್ಲೂ ಸಹ ಜ್ಯೋತಿ ಬೆಳಗುವುದು. ಅಂದರೆ ಮತ್ತೆ ಬೆಳಕು.
ಅದಕ್ಕೇ ಇರಬೇಕು. ದೀಪಾವಳಿಯೊಂದಿಗೆ ದೀಪಗಳನ್ನು ಗಂಟು ಹಾಕಿರುವುದು. ದೀಪಗಳ ಕಾಂತಿಯಲ್ಲೇ ಬದುಕಿನ ದೀಪದ ಉತ್ಸಾಹದ ಬತ್ತಿಗೆ ಸಂತೋಷದ ಕಾಂತಿ ಹಚ್ಚಿಕೊಂಡು ಕಂಗೊಳಿಸುವುದು. ದೀಪಾವಳಿ ಬರಿದೇ ಉಂಡು ಕಳೆಯುವ ಹಬ್ಬವಲ್ಲ. ಮತ್ತೊಂದು ದೀಪಾವಳಿ ಬರುವವರೆಗೂ ಸಂಭ್ರಮವನ್ನು  ಮನಸ್ಸಿನ ಉಗ್ರಾಣದೊಳಗೆ ತುಂಬಿಕೊಳ್ಳುವ ಕ್ಷಣ.
ಮನೆಯಲ್ಲಿ ಎಲ್ಲರೂ ಇದ್ದರೆ ಭವ್ಯ ಬೆಳಕು ಹೊತ್ತಿಕೊಂಡಂತೆಯೇ. ಹಾಗಾಗಿಯೇ ಈ ಹಬ್ಬಕ್ಕೆಂದರೆ ಮಗ ಇರಲಿ, ಅಳಿಯ ಇರಲಿ, ಸೊಸೆ ಇರಲಿ, ಮಗಳಿರಲಿ- ಎಲ್ಲರೂ ಮನೆಗೆ ಬಂದು ಸೇರುತ್ತಾರೆ. ನಮ್ಮಲ್ಲಿ ಕುಟುಂಬ ಪರಿಕಲ್ಪನೆಯಲ್ಲಿ ಹೀಗೆ ಎಲ್ಲರೂ ಕೂಡಿ-ಆಡಿ ನಲಿದರೆ ಪೂರ್ಣಚಿತ್ರ. ಅಲ್ಲಿ ಮತ್ತೆ ನೋಡಿ ಇರೋದು ಇಷ್ಟೇ…ಬೆಳಕು…ಮೆರುಗು…ಸಂಭ್ರಮ…ಬೆರಗು !
ಕೃಷ್ಣ ಹದಿನಾರು ಸಾವಿರ ನಾರಿಯರನ್ನು ಕೂಡಿಟ್ಟಿದ್ದ ನರಕಾಸುರನ ಕೊಂದು ಎಲ್ಲರ ಕಷ್ಟವನ್ನು ನಾಶ ಮಾಡಿದ ದಿನ ದೀಪಾವಳಿ. ನರಕ ಚತುರ್ದಶಿಯಂದು ಬೆಳಗ್ಗೆ ಅಭ್ಯಂಜನ ಮಾಡುವ ಸಂಪ್ರದಾಯವೂ ಇದರ ಹಿನ್ನೆಲೆಯಲ್ಲೇ ಬಂದದ್ದು. ಎಷ್ಟೊಂದು ವಿಚಿತ್ರ. ಅಲ್ಲೂ ಸಹ ನರಕಾಸುರನ ಕತ್ತಲೆಯ ಕೋಣೆಯಲ್ಲಿ ಕೃಷ್ಣ  ದೀಪ ಬೆಳಗಿದ. ಅದರ ಬೆಳಕಲ್ಲಿ ಎಲ್ಲರೂ ಬೆರಗಾಗಿ ಹೋದರು. ನರಕಾಸುರ ಹತನಾದ. ಹದಿನಾರು ಸಾವಿರ ನಾರಿಯರ ಬಾಳಲ್ಲಿ ಬೆಳಕು ತುಂಬಿಕೊಂಡಿತು.
ಸಾಲ ಮಾಡಿಯಾದರೂ ಒಬ್ಬಟ್ಟು ತಿನ್ನು ಎಂಬ ಗಾದೆಯಿದೆ. ಅದನ್ನು ಬಹಳ ಸ್ಥೂಲವಾಗಿ ನೋಡಿದರೆ ಅಲ್ಲೂ ಕಾಣ ಸಿಗುವುದು ಸಂಭ್ರಮದ ಮಾತೇ. ಜೀವನದಲ್ಲಿ ಗೇಯುವುದು ಇದ್ದದ್ದೇ. ಸಾಲ ಮಾಡಿದರೂ ಪರವಾಗಿಲ್ಲ, ಒಬ್ಬಟ್ಟು ತಿನ್ನುವ ಕ್ಷಣದ ಸಂಭ್ರಮವನ್ನು ಕಳೆದುಕೊಳ್ಳಬೇಡ ಎಂಬ ಗೂಢಾರ್ಥ. ಇಂದು ನಾವೆಲ್ಲಾ ಹಬ್ಬದ ಹೆಸರಿನಲ್ಲಿ ಮಾಡುತ್ತಿರುವುದು ಅದನ್ನೇ.
ಎಷ್ಟೇ ಬೆಲೆ ಏರಿಕೆ ಇರಲಿ, ಯಾವುದೇ ಕಷ್ಟವಿರಲಿ. ಹಬ್ಬದ ದಿನದಂದು ಖುಷಿ ಪಟ್ಟೇ ಪಡುತ್ತೇವೆ. ಅದಕ್ಕೆ ಚೌಕಾಸಿ ಮಾಡುವುದಿಲ್ಲ. ವಾಸ್ತವವಾಗಿ ಇಂಥ ನಮ್ಮ ಅಭ್ಯಾಸವೇ ನಮ್ಮೆಲ್ಲರ ಬದುಕಿನಲ್ಲೂ ಕಾಂತಿ ಉಳಿಸಿರುವುದು, ಬೆಳಕು ತುಂಬಿರುವುದು.
ಮತ್ತೊಂದು ದೀಪಾವಳಿ ಮನೆ ಬಾಗಿಲಿಗೇ ಬಂದಿದೆ. ಇನ್ನೆರಡು ದಿನದಲ್ಲಿ ಒಳಗೆ ಕೂರಿಸಿ ಆದರಿಸಬೇಕು. ದೀಪಾವಳಿ ತಂದಿರುವ ದಿವ್ಯ ದೀಪದಲ್ಲಿ ನಮ್ಮ ಮನೆ-ಮನಗಳ ದೀಪಗಳನ್ನು ಹಚ್ಚಿಕೊಳ್ಳಬೇಕು. ಆ ಬೆಳಕಿನಲ್ಲಿ ನಾವು ನಮ್ಮ ಸಂಬಂಧಗಳನ್ನು ಕಂಡುಕೊಳ್ಳಬೇಕು, ಅರ್ಥ ಮಾಡಿಕೊಳ್ಳಬೇಕು. ಮಧುರ ಬಾಂಧವ್ಯದ ಎಣ್ಣೆ ಸುರಿದು ನಂದಾದೀಪವಾಗುವಂತೆ ಮಾಡಿಕೊಳ್ಳಬೇಕು. ಅಂಥ ಕ್ಷಣ ಎದುರಾಗಿದೆ. ಬನ್ನಿ ಎಲ್ಲರೂ ದೀಪ ಹಚ್ಚೋಣ, ಹಚ್ಚಿಕೊಳ್ಳೋಣ, ಬೆಳಗೋಣ…ನಮ್ಮೊಳಗೂ ಬೆಳಗಿಕೊಳ್ಳೋಣ.