ದಸರೆಯ ಸಂಭ್ರಮ ಮುಗಿಯಿತು.
ಸುಮಾರು ಹದಿನೈದು ದಿನಗಳಿಂದ ಬ್ಲಾಗಿನತ್ತ ತಲೆಯೇ ಹಾಕಿರಲಿಲ್ಲ. ನಮ್ಮೂರಿನಲ್ಲಿ ದಸರೆಯ ಸಂಭ್ರಮ ಎಲ್ಲರನ್ನೂ-ಎಲ್ಲವನ್ನೂ ಆವರಿಸಿತ್ತು. ಅದರಲ್ಲೂ ಸುದ್ದಿಜೀವಿಯಾದ ನನಗೆ ಹಾಗೆ ಆವರಿಸಿಕೊಂಡ ಸಂಭ್ರಮವನ್ನು ಮೊಗೆ ಮೊಗೆದು ಎಲ್ಲರಿಗೂ ನೀಡಬೇಕಾದ ಹೊಣೆಗಾರಿಕೆಯಿತ್ತು. ನನ್ನ ಸಹೋದ್ಯೋಗಿಗಳು ಅಂಥದೊಂದು ಕಾರ್‍ಯವನ್ನು ಅತ್ಯಂತ ಉಲ್ಲಸಿತವಾಗಿ ಮಾಡಿದರು. ಬಹಳ ವಿಭಿನ್ನವಾಗಿ ದಸರೆಯ ಸಂಭ್ರಮವನ್ನು ನಮ್ಮ ಬೊಗಸೆಯಲ್ಲಿ ಹಿಡಿದು ಕೊಟ್ಟೆವು ಎನ್ನಲಡ್ಡಿಯಿಲ್ಲ.
ಇದು ನನಗೆ ಎರಡನೇ ದಸರೆ. ಕಳೆದ ದಸರೆಯಷ್ಟೊತ್ತಿಗೆ  ಇದೇ ಜಂಬೂಸವಾರಿಯ ಊರಿನಲ್ಲಿದ್ದೆ. ದಸರೆಯನ್ನು ಬಹಳ ವಿಶಿಷ್ಟವಾಗಿ ನೋಡುವ ಪ್ರಯತ್ನ  ಮಾಡಿದೆವು. ಅದೆಲ್ಲವೂ ನಮ್ಮ ಕಾರ್‍ಯಶೈಲಿಯಲ್ಲೂ ಪ್ರತಿಫಲಿಸಿತು. ಆದರೆ ನನಗೂ ದಸರೆ ಹೊಸದು. ಊರೆಲ್ಲಾ, ಜಗತ್ತೇ ಹೇಳಿಕೊಳ್ಳುವಂಥ ಜಂಬೂಸವಾರಿ ಅಂದೆಂಥದ್ದು ಎಂಬ ಸಹಜ ಕುತೂಹಲವಿತ್ತು. ನಮ್ಮೂರಿನ ಉತ್ಸವದಲ್ಲೂ ಇಂಥ ಸಂಭ್ರಮ, ಕುತೂಹಲ ಇದ್ದೇ ಇರುತ್ತದೆ. ಸಾಲಿಗ್ರಾಮದ ಹಬ್ಬ ಈ ವರ್ಷ ಯಾವ ರೀತಿಯಲ್ಲಿ ಇರಬಹುದು ಎಂಬ ಸಹಜ ಕುತೂಹಲ ನಮ್ಮನ್ನು ಎಂದಿಗೂ ಬಿಟ್ಟಿರದು.
ಅಂಥ ಕುತೂಹಲ ದಸರೆಯ ಬಗ್ಗೆ ಇದ್ದದ್ದು ಸಹಜ. ಊರಿಗೆ ಬಂದ ಹೊಸತು. ನನ್ನ ಪತ್ನಿಗೂ ಈ ಊರು ಹೊಸದು. ಹತ್ತಿಪ್ಪತ್ತು ವರ್ಷ ನಿರಂತರವಾಗಿ ನೋಡಿದವರೂ ಮತ್ತೆ ದಸರೆ ಬಗ್ಗೆ ಮಾತನಾಡುತ್ತಾರೆ. ಹಾಗಾದರೆ ಅಷ್ಟೊಂದು ಸಂಭ್ರಮ ಅದರಲ್ಲಿದೆಯೇ ಎಂಬ ಪ್ರಶ್ನೆ ಎದ್ದಿತ್ತು.
ಎಂದಿನಂತೆ ಸರಕಾರ ತೋರುವ ನಿರ್ಲಕ್ಷ್ಯ, ತರಾತುರಿಯಲ್ಲಿ ನಡೆಸುವ ಸಿದ್ಧತೆ, ನಾನಾ ಗೊಂದಲ, ಅದರಲ್ಲಿ ಊರ ಹಬ್ಬದಲ್ಲಿ ಲಾಭ ಮಾಡಿಕೊಳ್ಳಲೆಂದೇ ಇರುವ ಕೆಲ ವ್ಯಾಪಾರಿಗಳಂತೆ ನೂರಾರು ಅಧಿಕಾರಿಗಳು, ಗುತ್ತಿಗೆದಾರರು, ಜನಪ್ರತಿನಿಧಿಗಳು…ಅದರ ಮಧ್ಯೆ ಪತ್ರಿಕೆಯಲ್ಲಿ ಬರುವ ಟೀಕೆ…ಎಲ್ಲದರ ನಡುವೆ ಒಂದಷ್ಟು ಜನ ಸುಮ್ಮನೆ ಬಂದು ಜಂಬೂ ಸವಾರಿ ನೋಡಿ, ದಸರೆಯ ಕಾರ್‍ಯಕ್ರಮಗಳನ್ನು ಕೇಳಿ ಸುಮ್ಮನೆ ತಣ್ಣಗೆ ಕುಳಿತರೆನ್ನಿ.
ಕಳೆದ ದಸರೆಯಲ್ಲಿ ಜಂಬೂ ಸವಾರಿ ನೋಡುವ ಉತ್ಸಾಹವಿತ್ತು. ಆದರೆ ವಿಐಪಿ ಪಾಸ್‌ಗಳನ್ನು ಕೇಳಿ ಅಲೆಯುವ ಅಭ್ಯಾಸವಾಗಲೀ, ಹಲ್ಲು ಗಿಂಜುವ ಉತ್ಸಾಹವಾಗಲೀ ಇದ್ದಿಲ್ಲ. ಸರಿ, ಹಾಗೆಯೇ ಸಿಕ್ಕರೆ ಹೋಗುವುದು ಎಂದೆನಿಸಿತು. ನನಗೇನೋ ಮಾಧ್ಯಮದ ಪಾಸ್ ಸಿಕ್ಕಿತು. ಆದರೆ ನನ್ನ ಕುಟುಂಬಕ್ಕಿರಲಿಲ್ಲ. ಆದರೆ ಜಂಬೂ ಸವಾರಿಯ ಮೆರವಣಿಗೆಗೆ ಇನ್ನು ಅರ್ಧ ಗಂಟೆ ಇದೆ ಎನ್ನುವಾಗ ವಾರ್ತಾ ಇಲಾಖೆಯಿಂದ ಕುಟುಂಬಕ್ಕೆಂದು ಎರಡು ಪಾಸ್ ಬಂತು. ನನ್ನ ಮಗ ಋತುಪರ್ಣ “ಎಲ್ಲಿಗಾದರೂ ಕರೆದು ಕೊಂಡು ಹೋಗು’ ಎಂದು ಹಠ ಹಿಡಿದಿದ್ದ. ಕೂಡಲೇ ಮನೆಗೆ ಫೋನ್ ಮಾಡಿ ಪುರಭವನದ ಬಳಿ ಬರುವಂತೆ ಹೇಳಿ ಒಟ್ಟೂ ಕೂಡಿಕೊಂಡೆವು. ನನ್ನ ಪತ್ನಿ, ಮಗ ಮತ್ತು ಅಮ್ಮ ಜಂಬೂ ಸವಾರಿಯನ್ನು ಒಟ್ಟಿಗೆ ನೋಡಿದೆವು. ಜನ ಜಂಗುಳಿ ಕಂಡು ವಿಚಿತ್ರ ಎನಿಸಿದ್ದು ನಿಜ.
ಸವಾರಿಯ ದಿನದಂದು ಮೈಸೂರಿನ ಬಹುತೇಕ ರಸ್ತೆಗಳೆಲ್ಲಾ ಲಕ್ವಾ ಹೊಡೆದಂತೆ ಬಿದ್ದುಕೊಳ್ಳುತ್ತವೆ. ನರಪಿಳ್ಳೆಯೂ ಇರುವುದಿಲ್ಲ. ಎಲ್ಲರೂ ಮೆರವಣಿಗೆ ಹಾದು ಹೋಗುವ ರಸ್ತೆಯಲ್ಲೇ ಕಟಾಂಜನದೊಳಗೆ ವಿರಾಜಿಸಿರುತ್ತಾರೆ. ಎಲ್ಲಾ ಮುಗಿದ ಮೇಲೆ ನಮಗೆ ಬಹಳ ವಿಶೇಷ ಎನಿಸುವ ನೆನಪು ಉಳಿದಿರಲಿಲ್ಲ.
ಈ ಬಾರಿ ಜಂಬೂ ಸವಾರಿಯನ್ನು ಸಂಪೂರ್ಣವಾಗಿ ನೋಡಲೆಂದು ಬಹಳಷ್ಟು ಬೇಗನೇ ಹೋಗಿ ಪತ್ರಕರ್ತರಿಗೆ ಮೀಸಲಿಟ್ಟ ಆಸನಗಳಲ್ಲಿ ಕುಳಿತೆ. ಜೋರು ಬಿಸಿಲು, ಸೂರ್‍ಯನೂ ಪೈಪೋಟಿಗಿಳಿದಿದ್ದ. ನಂದಿಪೂಜೆ ಇತ್ಯಾದಿ ಮುಗಿಸಿ ಬಂದ ಮುಖ್ಯಮಂತ್ರಿಯವರು ಪುಟ್ಟ ವೇದಿಕೆಯಲ್ಲಿ ನಿಂತು ತನ್ನೆದುರು ಬಂದ ಚಾಮುಂಡಿಯಿದ್ದ ಅಂಬಾರಿ ಹೊತ್ತ ಬಲರಾಮನಿಗೆ ಹೂ ಚೆಲ್ಲಿದರು (ಹೂ ಬಲರಾಮನನ್ನು ಮುಟ್ಟಲಿಲ್ಲ). ಸರಿ, ಮೆರವಣಿಗೆ ಹೊರಟಿತು. ಅದರ ಹಿಂದೆ ಒಂದೊಂದೇ ಸ್ತಬ್ಧಚಿತ್ರ, ಅದರ ಮಧ್ಯೆ ನಮ್ಮ ಜಾನಪದ ಕಂಪನ್ನ ಸಾರುವ ತಂಡಗಳು…ಇಷ್ಟೆಲ್ಲಾ ಸೇರಿದರೆ ಸರಿ ಸುಮಾರು ಒಂದೂವರೆ ಕಿ. ಮೀ ನಷ್ಟು ಉದ್ದದ ಮೆರವಣಿಗೆ. ಇವಿಷ್ಟೇ ಜಂಬೂ ಸವಾರಿ.
ಅಂಬಾರಿ ಹೊತ್ತ ಆನೆ, ಆ ಮೆರವಣಿಗೆಗೊಂದು ಸಂಪ್ರದಾಯ, ಅದನ್ನು ನಂಬಿಕೊಂಡು ಬಂದ ಜನ ಸಮುದಾಯ- ಎಲ್ಲವೂ ದಸರೆಗೆ ವಿಖ್ಯಾತಿ ತಂದುಕೊಟ್ಟಿದೆ. ಅದರಲ್ಲಂತೂ ಸರಕಾರಿ ಇಲಾಖೆಗಳ ಅನಾಸಕ್ತಿಯಿಂದ ಕಂಗೊಳಿಸಬೇಕಿದ್ದ ಸ್ತಬ್ಧಚಿತ್ರಗಳೂ ಅಂದ ಕಳೆದುಕೊಳ್ಳುತ್ತಿವೆ. ಆದರೂ ಜಂಬೂ ಸವಾರಿಯಲ್ಲಿ ಉಳಿದಿರುವುದೇನು ?
ಬಲರಾಮ ಹೊತ್ತ ಅಂಬಾರಿಯಲ್ಲಿ ಇದ್ದ ಚಾಮುಂಡಿ ಕಂಡರೆ ಸಾಕು, ಧನ್ಯರಾಗಿ ಜನ ಸರಿದು ಹೋಗಿ ಬಿಡುತ್ತಾರೆ. ಅಲ್ಲಿಯವರೆಗೂ ಗಂಟೆಗಟ್ಟಲೆ ಕಾಯುವುದೂ ಸಂಪ್ರದಾಯವೆನಿಸಿದೆ. ಅದಷ್ಟೇ ಜಂಬೂ ಸವಾರಿಯ ಅಂದವನ್ನು, ಸೊಗಸನ್ನು ಹಾಗೂ ಜನಪ್ರಿಯತೆಯನ್ನು ಉಳಿಸಿದೆ ಎಂದರೆ ತಪ್ಪಿಲ್ಲ.
ನಮ್ಮೂರಿನಲ್ಲಿ ದೊಡ್ಡದೊಂದು ಜಾತ್ರೆ ನಡೆದಂತೆಯೇ ಜಂಬೂ ಸವಾರಿ. ಆದರೆ ಅಲ್ಲಿ ಆನೆ ಇರುವುದಿಲ್ಲ, ಅಂಬಾರಿಯೂ ಇಲ್ಲ,  ರಥದಲ್ಲಿ ನಮ್ಮೂರ ಮಹಾಲಿಂಗೇಶ್ವರನೋ, ನರಸಿಂಹನೋ ಕುಳಿತಿರುತ್ತಾನೆ…ಜನರು ಮಾತ್ರ ಅಲ್ಲೂ ಹಾಜರು. ನಮ್ಮೂರ ತೇರಿದ್ದ ಹಾಗೆ.