ಪ್ರವೀಣ್ ಬಣಗಿ
ಚಿತ್ರ : ಪ್ರವೀಣ್ ಬಣಗಿ

ನಾವೆಲ್ಲರೂ ಊರಿಲ್ಲದವರಾಗುತ್ತಿದ್ದೇವೆ…!
ಇತ್ತೀಚೆಗೆ ಹೀಗೇ ಅನಿಸುತ್ತಿದೆ. ನಾವೆಲ್ಲ ಊರಿಲ್ಲದವರಾಗುತ್ತಿರುವ ಘಳಿಗೆಯಿದು. ಇದ್ದದ್ದನ್ನೆಲ್ಲಾ ಮಾರಿ ಎಲ್ಲರೂ ಅಂದುಕೊಂಡ ಊರಿಗೇ ಸ್ಥಳಾಂತರ ಹೊಂದಿ, ನಮ್ಮೂರಿನ ಇರವನ್ನೇ ಮರೆಯುತ್ತಿದ್ದೇವೆ. ಸುಮಾರು ಮೂವತ್ತು ವರ್ಷಗಳ ಹಿಂದೆ ಇಂಥದೊಂದು ಘಳಿಗೆ ನನ್ನ ಎದುರಾಗಿತ್ತು. ಆಗ ನನಗೂ ಬುದ್ಧಿ ಇರಲಿಲ್ಲ. ಚಿಕ್ಕ ಮಗು. ನನ್ನಮ್ಮ ಅಪ್ಪ ತೋರಿಸಿದ ಹಾದಿಯಲ್ಲಿ ತಲೆ ತಗ್ಗಿಸಿಕೊಂಡು ಬಗಲಲ್ಲಿ ನನ್ನನ್ನು ಎತ್ತಿಕೊಂಡು ಹೊರಟು ಬಂದಳು. ಅವಳ ಹಿಂದೆ ನನ್ನಣ್ಣಂದಿರು, ಅಕ್ಕಂದಿರು ಹಿಂಬಾಲಿಸಿದರು.
ಎಲ್ಲರೂ ಸೇರಿ ನನ್ನ ಊರಲ್ಲದ ಊರಿನಲ್ಲಿ ತಳವೂರಿ ಬೆಳೆದೆವು. ನನ್ನೂರೂ ಇದೆ ಎಂಬುದು ತಿಳಿಯುವವರೆಗೆ ಅದೇ ಊರಾಗಿತ್ತು. ಆದರೆ ಕಳ್ಳು-ಬಳ್ಳಿ ಸಂಬಂಧಗಳನ್ನೆಲ್ಲಾ ಮತ್ತೆಲ್ಲೋ ಹರಡಿಕೊಂಡಿದೆ ಎಂದು ಗೊತ್ತಾದಾಗ ಅತ್ತ ವಾಲಿದ ಮನಸ್ಸು ಇನ್ನೂ ಇತ್ತ ಬಂದಿಲ್ಲ.
ಒಮ್ಮೊಮ್ಮೆ ನಾವು ಬೆಳೆದ ಊರನ್ನೇ ನಮ್ಮೂರು ಎನ್ನದೇ ಹುಟ್ಟಿದ ಊರು-ಸಂಬಂಧಗಳ ಊರು-ಪೂರ್ವಜರ ತಾಣವೇ ನಮ್ಮದು ಎನ್ನುವುದು ಆತ್ಮವಂಚನೆ ಅಲ್ಲವೇ? ಎಂದೆನಿಸುವುದುಂಟು. ಆದರೆ ಅದಕ್ಕೆ ಹಲವು ಸಮರ್ಥನೆಗಳಿವೆ.
ನಾನು ಬೆಂಗಳೂರಿಗೆ ಬಂದು ಠಿಕಾಣಿ ಹೂಡಿದಾಗ ಮೊದಲು ವಿಷಾದ ಹುಟ್ಟಿಕೊಂಡಿದ್ದು ಅಂಥದೊಂದು ನಗರದಲ್ಲೇ ಹುಟ್ಟಿ ಬೆಳೆದವರ ಬಗ್ಗೆ. ನನ್ನ ಗೆಳತಿಯೊಬ್ಬಳಿದ್ದಳು ; ಅಲ್ಲಿಯವಳೇ. ನನು ಪ್ರತಿ ಬಾರಿ ಹಬ್ಬಕ್ಕೆ ಊರಿಗೆ ಹೋದಾಗ ಅಥವಾ ಮನಸ್ಸಿಗೆ ಬೇಸರವಾದರೆ ಊರಿಗೆ ಹೋಗುತ್ತೇನೆ ಎಂದಾಗಲೆಲ್ಲಾ ಬೇಸರ ಪಟ್ಟುಕೊಳ್ಳುತ್ತಿದ್ದಳು.
“ನಿನ್ನದು ಅದೃಷ್ಟ. ಬೇಸರವಾದರೆ ಹೋಗಲಿಕ್ಕೆ ಅಂತ ಒಂದು ಊರಿದೆ. ನನಗೇನೂ ಇಲ್ಲ. ನನ್ನಜ್ಜಿ ಮನೆಯೂ ಇಲ್ಲೇ, ಪಕ್ಕದ ಕೇರಿ. ನನ್ನ ಚಿಕ್ಕಪ್ಪನ ಮನೆಯೂ ಇಲ್ಲೇ, ಮತ್ತೊಂದು ಕೇರಿ,ಬಡಾವಣೆ’ ಎನ್ನುತ್ತಿದ್ದಳು. ಆಗಲೆಲ್ಲಾ ಇನ್ನೂ ನಗರವಾಗದ, ದೂರದ ನನ್ನೂರಿನ ಬಗ್ಗೆ ಹೆಮ್ಮೆ ಮೂಡುತ್ತಿತ್ತು.
ಪ್ರಿಯಾ ಅವರ “ಅಕ್ಷರ ಹೂ’ ಬ್ಲಾಗ್‌ನ ಲೇಖನ “ಅಪ್ಪ ತೋಟ ಮಾರ್‍ತಾರಂತೆ’ ಓದಿದಾಗ ಇಂಥದೇ ಒಂದು ವಿಷಾದ ನನ್ನ ಒಳ ಹೊಕ್ಕಿತು. ಮಕ್ಕಳೆಲ್ಲಾ ಹೈಮಾಸ್ಕ್ ದೀಪದ ಕೆಳಗೆ ಬದುಕು ನಡೆಸುತ್ತಿರುವಾಗ ಸುತ್ತಲೆಲ್ಲಾ ಕತ್ತಲೆ ತುಂಬಿಕೊಂಡು ಮನೆಯೊಳಗಷ್ಟೇ ಬೆಳಕು ತುಂಬಿಕೊಂಡ ಹಳ್ಳಿಗಳನ್ನು, ನಮ್ಮೂರುಗಳನ್ನು ಬಿಟ್ಟು ಬರುವ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ.  ಅದು ಬದುಕಿನ ಅನಿವಾರ್‍ಯತೆ ಆಗುತ್ತಿರುವುದು ವಿಷಾದದ ತೀವ್ರತೆಯನ್ನು ಹೆಚ್ಚಿಸುತ್ತಿದೆ.
ಒಂದೆಡೆ ಅಭಿವೃದ್ಧಿಯ ಪಿಪಾಸುತನ, ವೈವಿಧ್ಯಮಯ ನೆಲೆಗಳನ್ನೆಲ್ಲಾ ಏಕರೂಪಿ ನಗರವನ್ನಾಗಿಸುತ್ತಿದೆ. ಅಲ್ಲಿನ ವಿಭಿನ್ನತೆ, ಅದರೊಳಗಿನ ಬಾಂಧವ್ಯ, ಸಂಸ್ಕೃತಿ ಎಲ್ಲವೂ ನಾಶವಾಗಿ, ನಗರದೊಳಗಿನ ಮಾದರಿಗಳು ನಿರ್ಮಾಣವಾಗುತ್ತಿವೆ. ಹಳ್ಳಿಗಳು ಯಾರಿಗೂ ಬೇಕಿಲ್ಲ ಎನ್ನುವುದಕ್ಕಿಂತ ಉಳಿಸಿಕೊಳ್ಳುವ ಶಕ್ತಿ ಕುಂದುತ್ತಾ ಇದೆ. ಅದಕ್ಕೆ ಕಾರಣವೂ ಇದೆ. ಬೆಳಕೇ ನಮಗೆ ಮಾದರಿಯಾಗುತ್ತಿರುವಾಗ ಕತ್ತಲೆ ಯಾರಿಗೂ ಬೇಡ. ಆಧುನಿಕತೆಯ ಸಂಭ್ರಮದೊಳಗೆ ಕರಗಿ ಹೋಗುತ್ತಿರುವುದೂ ಅರಿವಾಗುತ್ತಿಲ್ಲ. ಸಣ್ಣ ಮಕ್ಕಳಿದ್ದಾಗ ಸಮುದ್ರ ತೀರಕ್ಕೆ ಹೋಗಿ ಆಟವಾಡುತ್ತಿದ್ದುದು ನೆನಪಿಗೆ ಬಂತು. ಮುಷ್ಟಿಯಲ್ಲಿ ತುಂಬಿಕೊಂಡ ಮರಳು (ಹೊಯ್ಗೆ) ಜಾರಿ ಹೋಗುವುದೇ ವಿಚಿತ್ರ ಎನಿಸುತ್ತಿತ್ತು. ಅರೆಕ್ಷಣದಲ್ಲಿ ಮರಳಿನ ಕಣವೇ ಇರುತ್ತಿರಲಿಲ್ಲ. ಆಗ ಅಚ್ಚರಿ ಎನಿಸಿದ್ದು ಈಗ ನಿಜ ಎನಿಸತೊಡಗಿದೆ. ನಾವೂ ಸಹ ಹಾಗೆಯೇ ಕರಗುತ್ತಿದ್ದೇವೆ !
ವಿಶ್ವವೇ ಒಂದು ಕುಟುಂಬವಾಗುತ್ತಿದೆ ಎಂಬುದು ಆದರ್ಶ ಎನಿಸುವ ಭ್ರಮೆ ಹುಟ್ಟಿಸಿದೆ. ಅದರೊಳಗೆ ನಾವೀಗ ಇದ್ದೇವೆ. ವಿಶ್ವವೇ ಒಂದು ಕುಟುಂಬವಾಗಬಹುದೇನೋ? ಆದರೆ ಕುಟುಂಬದೊಳಗಿನ ಬಂಧ-ಸಂಬಂಧಗಳ ತೀವ್ರತೆಯನ್ನು ಇದು ಕಟ್ಟಿಕೊಡಲಾರದು.
ಏನೇ ಹೇಳಿ, ನಮ್ಮೂರು ಎಂಬುದೊಂದು ಇರಬೇಕು. ಬೇಸರವಾದಾಗ ನಾವಿರುವ ಊರಿನ ಬಸ್ಸು ನಿಲ್ದಾಣಕ್ಕೋ, ರೈಲು ನಿಲ್ದಾಣಕ್ಕೋ ಹೋಗಿ ನಿಂತು ಕೊಂಚ ಹೊತ್ತು ಕಾದು ಬಸ್ಸಲ್ಲಿ ನಿದ್ರೆ ಮಾಡಿಕೊಂಡು ಬೆಳಗ್ಗೆ ಇಳಿದು ನಮ್ಮೂರಿನ ದಾರಿ ಹಿಡಿಯುವ ಸಂಭ್ರಮ ಕೊಡುವ ಖುಷಿಯೇ ಬೇರೆ. ನನ್ನ ಮಗ ಅಂಥ ಸೊಗಸನ್ನು ಕಣ್ತುಂಬಿಕೊಳ್ಳುತ್ತಿದ್ದಾನೆಂಬುದೇ ನನಗೊಂದು ಸದ್ಯದ ಸಮಾಧಾನ. 
ಅದಕ್ಕೇ ಹೇಳಿದ್ದು, ವಿಷಾದದ ದ್ವೀಪದಲ್ಲಿದ್ದೇವೆ. ನೀರು ಯಾವಾಗಲಾದರೂ ಆಪೋಶನ ತೆಗೆದುಕೊಳ್ಳಬಹುದು. ಅಲ್ಲಿಯವರೆಗೆ ಕುರುಡು ಕಣ್ಣಿನ ದೃಷ್ಟಿಯಲ್ಲಿ ಕಂಡಷ್ಟು ದೂರ ಹೆಜ್ಜೆ ಇಡಬೇಕು, ಮತ್ತೆ ಕತ್ತಲೆ ಆವರಿಸಿಕೊಂಡರೆ ಕರಗಿ ಹೋಗುವುದು ಇದ್ದೇ ಇದೆ.
ಕತ್ತಲೆ ದೀಪದ ಕುಡಿಯನ್ನು ಕಂಡು ಹೇಳಿತಂತೆ. “ನೋಡು, ನನ್ನ ಆಕಾರದ ಎದುರು ನಿನ್ನದೇನೂ ಇಲ್ಲ. ನಾನು ಮನಸ್ಸು ಮಾಡಿದರೆ ನಿನ್ನನ್ನು ನುಂಗಿ ಬಿಡುವೆ’. ಅದಕ್ಕೆ ದೀಪ ತಾಳ್ಮೆ ಕಳೆದುಕೊಳ್ಳಲಿಲ್ಲ. “ಇರಬಹುದು. ಆದರೆ ನೀನು ನುಂಗುವವರೆಗೂ ನಾನು ಬೆಳಗುತ್ತೇನೆ, ಸಾಕಲ್ಲ’ ಎಂದಿತಂತೆ. ಆ ಆತ್ಮವಿಶ್ವಾಸದ ಬೆಳಕು ನಮ್ಮೊಳಗೆ ಹೊತ್ತಿಕೊಂಡರೆ ಮತ್ತಷ್ಟು ದಿನ ನಮ್ಮೂರುಗಳನ್ನು ಉಳಿಸಿಕೊಳ್ಳಬಹುದೇನೋ…? ಬನ್ನಿ, ಹೋಗುವಾ ನಮ್ಮೂರಿಗೆ…ಮರಳಿ ನಮ್ಮಯ ಗೂಡಿಗೆ..