ಪುಟ ಹನ್ನೊಂದು
ಹರ್ಷನ ರಸಮಂಜರಿ ಆಗಾಗ್ಗೆ ನಡೆಯುತ್ತಲೇ ಇತ್ತು. ವರದಿಗಾರರಾಗಿದ್ದರಿಂದ ಬೆಳಗ್ಗೆ ೧೧. ೩೦ ವರೆಗೆ ಆರಾಮ್. ಪೊಲೀಸ್ ಕಮೀಷನರ್ ಕಚೇರಿಯ “ಮೀಡಿಯಾ ಸೆಂಟರ್’ನಿಂದಲೇ ನಮ್ಮ ನಿತ್ಯದ ಕೆಲಸ ಆರಂಭ. ಒಂದುವೇಳೆ ಏನಾದರೂ ಬೆಳಗ್ಗೆ ಬೆಳಗ್ಗೆಯೇ ದೊಡ್ಡ ಅಪಘಾತ-ಆಕಸ್ಮಿಕಗಳು ನಡೆದರೆ ಅಲ್ಲಿಗೆ ದೌಡಾಯಿಸಬೇಕು. ಘಟನಾ ಸ್ಥಳಕ್ಕೆ ಭೇಟಿ ನೀಡದೇ ಬರೆಯುವವರು ಇವತ್ತಿಗೂ ನಮ್ಮ ಪತ್ರಿಕೋದ್ಯಮದಲ್ಲಿ ಇದ್ದಾರೆ.
ಅವರಂಥವರಲ್ಲಿ ಎರಡು ವಿಧ. ಘಟನಾ ಸ್ಥಳಕ್ಕೆ ಹೋಗದೇ ಅವರಿವರತ್ತಿರ ಕಾಡಿಬೇಡಿ ಪಡೆದು, ಕೊಟ್ಟಷ್ಟೇ ಸಾಕೆಂಬ ಧೋರಣೆಯಲ್ಲಿ ಸುದ್ದಿ ಕೊಟ್ಟು ಕೈ ತೊಳೆದುಕೊಳ್ಳುವವರು ಒಂದು ಬಗೆಯವರು. ಮತ್ತೊಂದು ಬಗೆ ತೀರಾ ಭಿನ್ನ. ಅಸಲಿಗಿಂತ ಅಪಾಯಕಾರಿ. ಘಟನಾ ಸ್ಥಳಕ್ಕೆ ಹೋದವರಿಂದಲೇ ಮಾಹಿತಿ ಪಡೆದು, ತಾವೇ ಘಟನಾ ಸ್ಥಳದಿಂದ ನೇರ (ಲೈವ್) ವರದಿ ಮಾಡುತ್ತಿದ್ದೇವೆ ಎನ್ನುವಂತೆ ಕಲ್ಪಿಸಿಕೊಂಡು ಬರೆಯುವವರಿದ್ದಾರೆ. ಇವರಿಂದ ಅಸಲಿಗೇ ಅಪಾಯ.
ಎಷ್ಟೋ ಬಾರಿ ಇಂಥ ಪ್ರಸಂಗ ನಡೆದದ್ದಿದೆ. ನಮ್ಮಿಂದ ಮಾಹಿತಿ ಪಡೆದು ಬರೆದವನ ಸುದ್ದಿಯನ್ನೇ ನೋಡಿ ನಮ್ಮ ಸೀನಿಯರ್ರು “ನೋಡ್ರಿ. ಈ ಸುದ್ದಿ ಎಷ್ಟು ಚೆನ್ನಾಗಿದೆ’ ಎಂದ ಪ್ರಸಂಗಗಳೂ ಇವೆ. ಆದರೆ ನಮಗೇನೋ ಒಂದು ಖುಷಿ. ಘಟನಾ ಸ್ಥಳಕ್ಕೆ ಹೋದರೆ ಬೇರೇನೋ ಮಾಹಿತಿ ಸಿಗಬಹುದು, ಯಾರಾದರೂ ಸಂಪರ್ಕಕ್ಕೆ ಸಿಗಬಹುದೆಂಬ ಹುರುಪಿನಿಂದಲೇ ತೆರಳುತ್ತಿದ್ದೆವು. ಆದರೆ ನಮ್ಮ ಮನೆಯಲ್ಲಿ ನಾಲ್ಕೈದು ಮಂದಿ ವರದಿಗಾರರಿದ್ದರಿಂದ, ಅದರಲ್ಲೂ ಎಲ್ಲರೂ ಬೇರೆ ಬೇರೆ ಪತ್ರಿಕೆಯಲ್ಲಿದ್ದರಿಂದ ಹಂಚಿಕೊಳ್ಳುವುದು ಸರ್ವೇ ಸಾಮಾನ್ಯವಾಗಿತ್ತು. ಯಾರಾದರೂ ಇಬ್ಬರು ಘಟನಾ ಸ್ಥಳಕ್ಕೆ ತೆರಳಿದರೆ, ಮನೆಯಲ್ಲಿ ಅವರ ಕೆಲಸವನ್ನು ಉಳಿದವರು ಮಾಡುತ್ತಿದ್ದೆವು. ಒಟ್ಟಿನಲ್ಲಿ ಸಂತೋಷದಿಂದಲೇ ಇರುತ್ತಿದ್ದೆವು ಅನ್ನಿ. ಹೀಗೆ ಸಂತೋಷದಿಂದ ಇರುವಾಗಲೇ ಹರ್ಷ ಇದ್ದಕ್ಕಿದ್ದಂತೆ ಹುರಿದುಂಬಿ ಹಾಡುತ್ತಿದ್ದ. ಕುಣಿಯುತ್ತಿದ್ದ. ನಮ್ಮಲ್ಲೂ ಕೆಲವರು ಹೆಜ್ಜೆ ಹಾಕುತ್ತಿದ್ದೆವು. ಇನ್ನೂ ಕೆಲವರು ಚಪ್ಪಾಳೆ ತಟ್ಟುತ್ತಾ ಖುಷಿ ಪಡುತ್ತಿದ್ದೆವು.
ಏನೋ ಆ ಹಾಡೆಂದರೆ ಅವನಿಗೆ ಬಹಳ ಇಷ್ಟ. ಅದೇಕೋ ಗೊತ್ತಿಲ್ಲ. ಅವನನ್ನೇ ಕೇಳಿ ಹೇಳಬೇಕು. ಹಾಗೆಂದು ಹರ್ಷ ಗಾಯಕನಲ್ಲ ; ಒಳ್ಳೆ ಹುಡುಗ. ನಿಜವಾಗಲೂ ಹೂವಿನ ಮನಸ್ಸಿನವನು. ಅವನ ಹೆಸರಿನಂತೆಯೇ ಹರ್ಷವಾಗಿರಲು ಅವನೊಬ್ಬನೇ ಪ್ರಯತ್ನಿಸುತ್ತಿರಲಿಲ್ಲ. ಉಳಿದೆಲ್ಲರೂ ಹರ್ಷ ಚಿತ್ತರಾಗಿರಬೇಕೆಂದು ಬಯಸುತ್ತಿದ್ದವ. ಸುಮ್ಮನೆ ಅವನನ್ನು ಸ್ತುತಿ ಮಾಡಲು ಹೇಳುತ್ತಿಲ್ಲ. ಆದರೆ ಖುಷಿಯಿಂದ ಹೇಳುತ್ತಿದ್ದೇನೆ. ಅವನು ಒಳ್ಳೆಯ ಗೆಳೆಯ.
ಇಂಥವನೊಳಗೆ “ಹರ್ಷ’ ತುಂಬುತ್ತಿದ್ದ “ಅನಂತದಿಂ..ದಿಗಂತದಿಂ..ನೋಡು ನೋಡು ನೋಡೆ ಗೋಪುರ, ಮುಗಿಲಿನೆತ್ತರ…” ಗೀತೆ ಬಗ್ಗೆಯೇ ಮಜಾ ಇದೆ. ಆಗ ಯಾಕೆ ಈ ಗೀತೆ ಇಷ್ಟ ಎಂದು ಕೇಳಿರಲಿಲ್ಲ. ಮೊನ್ನೆ ಊರಿಗೆ ಹೋದಾಗ ಕೇಳಿದೆ. ವಿವರಿಸಿದ.
ಕುದುರೆಮುಖದಲ್ಲಿ ಓದ್ತಾ ಇದ್ದಾಗ ಶಾಲೇಲಿ ಸ್ಪರ್ಧೆ ಹಾಡು ಹೇಳೋಕೆ. ಇವನ ಸಂಗೀತ ಟೀಚರ್ರು ಎರಡು ಗೀತೆಗಳನ್ನು ಹೇಳಿಕೊಟ್ಟಿದ್ದರಂತೆ. ಒಂದು “ಘಲ್ಲು ಘಲ್ಲುನೆತಾ..ಗೆಜ್ಜೆ..’ ಹಾಗೂ “ಅನಂತದಿಂ…ದಿಗಂತದಿಂ’. ಸ್ಪರ್ಧೆಯಲ್ಲಿ ಮೊದಲು ಘಲ್ಲು ಘಲ್ಲುನೆತಾ ಹಾಡು ಹೇಳಿದನಂತೆ. ಸ್ಪರ್ಧೆಯಲ್ಲಿ ಗೆಲ್ಲಲಿಲ್ಲ. ಮತ್ತೊಂದು ವರ್ಷದಲ್ಲಿ “ಅನಂತದಿಂ…ದಿಗಂತದಿಂ’ ಗೀತೆಯನ್ನು ಭಾವಪೂರ್ಣವಾಗಿ (ವಿತ್ ಆಕ್ಷನ್ಸ್) ಹಾಡಿದನಂತೆ. ತಗೊಳ್ಳಿ…ಬಹುಮಾನ ಬಂದುಬಿಟ್ಟಿತಂತೆ. ಅಂದಿನಿಂದ ಇವನ ಗೀತೆಯಾಗಿ ಬಿಟ್ಟಿತು, ಅದು.
ನೀವೂ ಒಮ್ಮೆ ಅವನ ಆ ಹಾಡನ್ನು ಕೇಳಬೇಕು. ಒಳ್ಳೆ ಎಂಜಾಯ್ ಮಾಡ್ತೀರೀ. ಚಿಕ್ಕವನಿದ್ದಾಗ ಸ್ವಲ್ಪ ಕಾಲಿಗೆ ಪೆಟ್ಟು ಬಿದ್ದಿದ್ದರೂ ಈತನಿಗೆ ಈ ಹಾಡು ಬಾಯಲ್ಲಿ ಬಂತೆಂದರೆ ಕುಣಿಯಲು ತೊಡಗುತ್ತಾನೆ. “ಹುಷಾರ್, ಮಾರಾಯ…ಕಾಲು’ ಎಂದರೂ “ಇರಲಿ..ಬಿಡಿ ’ ಎಂದು ದನಿ ಏರಿಸುತ್ತಾನೆ.  ಆ ದನಿ “ಅನಂತವಾಗಿ’ ದಿಗಂತದವರೆಗೂ ಮುಟ್ಟುವಂತೆ. ಹೀಗೆ ಬ್ರಹ್ಮಚಾರಿಗಳೆಲ್ಲರೂ ಪ್ರತಿಭಾವಂತರೇ. ಮುಂದಿನ ಅಧ್ಯಾಯಗಳಲ್ಲಿ ಉಳಿದವರ ಪ್ರತಿಭೆಯೂ ಬೆಳಕಿಗೆ ಬರಲಿದೆ, ಹುಷಾರ್, ಕಣ್ಣಿಗೆ ಕೋರೈಸಬಹುದು…ಹ್ಹ…ಹ್ಹ…ಹ್ಹ….!