ಉತ್ತರ ಭಾಗದಲ್ಲಿ ‘ಫರಮಾಯಿಶ್’ ಎಂಬ ಪದವಿದೆ. ನಮಗೆ ಇಷ್ಟವಾದದ್ದು ಎಂಬುದು ಅದರರ್ಥ. ಕುನ್ನಕುಡಿ ಪ್ರತಿಯೊಬ್ಬರ ಇಷ್ಟವನ್ನೂ ಪೂರೈಸಲೆಂದೇ ವೇದಿಕೆ ಏರುತ್ತಿದ್ದರು. ಅದಾಗದೇ ಕೆಳಗಿಳಿಯುತ್ತಿರಲಿಲ್ಲ. ಹೀಗೆ ಶಾಸ್ತ್ರೀಯದ ಮಧ್ಯೆ ಸಿನಿಮಾ ನುಸು ಳುವುದು ಸಂಪ್ರದಾಯಸ್ಥರಿಗೆ ರುಚಿಸುವುದಿಲ್ಲ. ಅದರಲ್ಲೂ ಚೆನ್ನೈನಲ್ಲಂತೂ ಇಂಥವರು ತುಸು ಹೆಚ್ಚು. ಟೀಕೆ ಬಂದದ್ದು ಸಹಜವೇ. 

ಕುನ್ನಕುಡಿ ಎಂದರೆ ಸಂಭ್ರಮದ ಮೆರವಣಿಗೆ. ಮೆರವಣಿಗೆ ಎಂದರೆ ಕುಣಿಯುವ ಹುಮ್ಮಸ್ಸು ತರುವಂಥದ್ದು. ಅಂಥ ಮೆರವಣಿಗೆಯೂ ಕುಣಿಯುತ್ತಾ ಹೋದಂತೆ ಕುನ್ನಕುಡಿ ಆರ್. ವೈದ್ಯನಾಥನ್ ಅವರ ಪಿಟೀಲು ವಾದನ. ಅವರ ಸಂಗೀತ ಕೇಳಿದಾಗಲೆಲ್ಲಾ ಅಂಥದೊಂದು ಭಾವ ತುಂಬಿಕೊಳ್ಳುತ್ತದೆ.
ಪಿಟೀಲಿನ ಮೋಹ ಇಲ್ಲದವರಿಗೆ ಅದು ಒಂದು ಬಗೆಯ ಕೀರಲು ದನಿ. ಆದರೆ ಕೀರಲು ದನಿಗೆ ಜೀವ ತುಂಬಿ, ಭಾವ ಸುರಿದು ಜೇನಹೊಳೆಯಂತೆ ಹರಿಸುವ ಬಗೆ ಕೆಲವರಿಗೆ ಮಾತ್ರ ಗೊತ್ತು. ಹಿಂದೂಸ್ತಾನಿ ಶಾಸ್ತ್ರೀಯ ಶೈಲಿಯಲ್ಲೂ ಎನ್. ರಾಜಂ ಅವರ ಸಂಗೀತ ಕೇಳುವಾಗಲೂ ಇದೇ ಭಾವ ಆವರಿಸುತ್ತದೆ. ಅವರ ಪಿಟೀಲಿನ ದನಿ ಒಡಲು ತುಂಬಿ ಬರುವಂತೆ. ಹಾಡು ಸಹ ಹಾಗೆಯೇ ಹಾಡಬೇಕು, ಬರಿಯ ಕಂಠದಿಂದಲ್ಲ. ಒಡಲಿನಿಂದ ಉಕ್ಕಿ ಹರಿಯಬೇಕು; ಸಂತೋಷ, ಸಂಭ್ರಮದ ಧಾರೆಯ ಹಾಗೆ.
ಕುನ್ನಕುಡಿಯವರ ಶಾಸ್ತ್ರೀಯ ಸಂಗತಿ-ಸಂಭ್ರಮದ ಬಗ್ಗೆ ಹೇಳಬೇಕಿಲ್ಲ. ೧೨ನೇ ವಯಸ್ಸಿನಲ್ಲೇ ಅರೈಕುಡಿಯಂಥ ದಿಗ್ಗಜರಿಗೆ ಪಿಟೀಲು ಸಾಥ್ ನೀಡಿ ಸೈ ಎನಿಸಿಕೊಂಡವರು. ಸಿಕ್ಕ ಅವಕಾಶಗಳನ್ನೆಲ್ಲ  ಬಳಸಿಕೊಳ್ಳುತ್ತಾ ಬೆಳೆದವರು ಕುನ್ನಕುಡಿ.
ಪಿಟೀಲು ವಾದ್ಯಕ್ಕೆ ‘ಸ್ವತಂತ್ರ ಅಸ್ತಿತ್ವ’ ತಂದುಕೊಟ್ಟವರು. ಅಷ್ಟೆಯಾ? ಎಂದು ಕೇಳಿದರೆ ಅಲ್ಲ ಎಂಬುದೇ ಸಮರ್ಪಕ ಉತ್ತರ. ಪಿಟೀಲನ್ನು ತನಗೆ ಬೇಕಾದಂತೆ ದುಡಿಸಿಕೊಂಡದ್ದು ಕುನ್ನಕುಡಿ. ಯಾವಾಗಲೂ ಅಷ್ಟೇ. ಸಾಧನಕ್ಕೆ ತಕ್ಕಂತೆ ನಾವು ದುಡಿವುದು ಸಾಮಾನ್ಯ. ಆ ಸಾಧನವನ್ನೇ ತಮಗೆ ಬೇಕಾದಂತೆ ದುಡಿಸಿಕೊಳ್ಳುವುದು ಕುನ್ನಕುಡಿಯಂಥ ಪ್ರತಿಭೆಯ ಲಕ್ಷಣ.
ಪಿಟೀಲನ್ನು ಮಂತ್ರದಂಡದ ಹಾಗೆ ಬಳಸಿಕೊಂಡು ಅದರಲ್ಲಿ ನುಡಿಸದ ಸ್ವರವಿಲ್ಲ. ಅವರ ಕಛೇರಿ ಎಂದರೆ ಸೋಲೊ ಎನಿಸುವುದೇ ಇಲ್ಲ. ನಮ್ಮೂರಿನ ಜಾತ್ರೆಯಲ್ಲಿ ತೇರು ಮೆರ ವಣಿಗೆ ಹೊರಟಂತೆ ಅವರ ಕಛೇರಿ. ಎಲ್ಲ ಬಗೆಯ ಜಾನಪದ ಸಂಪತ್ತಿನಿಂದ ಒಟ್ಟಾಗಿ ಕಂಗೊಳಿಸುವ ತೇರಿನ ಒಟ್ಟಂದವೇ ಅದ್ಭುತ ಸೊಗಸು.
ಅಂಥ ಸೊಗಸುಗಾರಿಕೆ ಕುನ್ನಕುಡಿಯವರಲ್ಲಿತ್ತು. ಗುಂಪಿ ನಲ್ಲಿ ಎಲ್ಲ ಬಗೆಯವರೂ ಇರುತ್ತಾರೆ. ಒಬ್ಬನಿಗೆ ಇಂಥದ್ದೇ ರುಚಿ, ಮತ್ತೊಬ್ಬನಿಗೆ ಮತ್ತೊಂದು ರುಚಿ, ಇವರೆಲ್ಲರ ಮಧ್ಯೆ ಇರುವ ಮಗದೊಬ್ಬನಿಗೆ ಬೇರೊಂದು ಖುಷಿ. ಕೇವಲ ಒಬ್ಬನನ್ನು ಮಾತ್ರ ಸಂತಸಗೊಳಿಸಿದರೆ ಸಾಲದು.  ಗುಂಪಿನ ಎಲ್ಲರಲ್ಲೂ ಆ ಒಬ್ಬನ ಖುಷಿಯನ್ನೇ ತುಂಬಬೇಕು. ಆ ಕೆಲಸ ಕುನ್ನಕುಡಿಯವರಿಂದ ಸಾಧ್ಯವಾಗುತ್ತಿತ್ತು.
ಸುಮಾರು ೩ ವರ್ಷಗಳ ಹಿಂದೆ ಚಾಮರಾಜಪೇಟೆ ರಾಮನವಮಿ ಸಂಗೀತೋತ್ಸವದಲ್ಲಿ ಕುನ್ನಕುಡಿ ಬಂದಿದ್ದರು. ಸಂಜೆ ೬.೩೦ರ ಮೇಲೆ ಅವರ ಕಛೇರಿ ಆರಂಭ. ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುವ ಶಾಸ್ತ್ರೀಯ ಸಂಗೀತದ ಉದ್ಧಾಮ ರಿಗೆಲ್ಲಾ ಕುನ್ನಕುಡಿಯವರ ಬಗ್ಗೆ ಒಂದು ಬಗೆಯ ಅಸಹನೆ ಯಿದೆ. ‘ಅವರು ಆರ್ಕೆಸ್ಟ್ರಾ ಸಂಗೀತಕ್ಕೆ ಲಾಯಕ್ಕು. ಶಾಸ್ತ್ರೀಯ ಸಂಗೀತದಲ್ಲಿ ಸಂಪ್ರದಾಯ ಮುರಿಯುವುದು ಸಲ್ಲದು. ಆದರೆ ಕುನ್ನಕುಡಿ ಸದಾ ಅದನ್ನು ಮಾಡುತ್ತಾರೆ’ ಎಂಬ ಟೀಕೆಗಳೂ ಇತ್ತು. ಸಾಕಷ್ಟು ವ್ಯಕ್ತವಾಗಿತ್ತೂ ಸಹ.
ಅದಕ್ಕೆ ಅವರ ಚೆಲ್ಲುತನ (ಸಂಗೀತ ನುಡಿಸುವಾಗ ಅವರ ಭಾವಭಂಗಿ, ಮುಖದ ಅಭಿವ್ಯಕ್ತಿ). ಈ ಮಾತು ನೇತ್ಯಾ ತ್ಮಕವಾಗಿ ಬಳಸುತ್ತಿಲ್ಲ. ಅವರ ಭಂಗಿ, ಬಳಸುವ ದಿರಸು. ಇಷ್ಟಕ್ಕೇ ಟೀಕೆ ಮುಗಿಯುವುದಿಲ್ಲ. ಶಾಸ್ತ್ರೀಯ ಸಂಗೀತದಂಥ ಮಧುರಸಕ್ಕೆ ಸಿನಿಮಾ ಸಂಗೀತ, ಲಘು ಸಂಗೀತದಂಥವನ್ನು ಸೇರಿಸಿ ಕಛೇರಿಯ ಸವಿಯನ್ನೇ ಹಾಳು ಮಾಡುತ್ತಾರೆಂಬ ಟೀಕೆಯೂ ಬಂದಿತ್ತು. ಅದಕ್ಕೆ ಕುನ್ನಕುಡಿ ಗಮನಕೊಡಲಿಲ್ಲ. ಮೆಚ್ಚುವ ಜನ ನನ್ನ ಪರವಾಗಿರುತ್ತಾರೆಂಬ ಅಗಾಧ ನಂಬಿಕೆಯೇ ಅವರನ್ನು ಸದಾ ಕಾದದ್ದು. ಸಂಗೀತದಲ್ಲಿ ಗಂಭೀರತೆ ಇದ್ದದ್ದೇ ಅವರನ್ನು ಈ ಟೀಕೆ ಗಳಿಂದೆಲ್ಲಾ ಬಚಾವು ಮಾಡಿತು.
ಅವರ ಸಂಗೀತ ಕಛೇರಿಯಲ್ಲಿ ಅಂಥದೊಂದು ನಿಯಮವನ್ನು ಬೇಕೆಂದೇ ರೂಪಿಸಿಕೊಂಡಿದ್ದರು. ಮೊದಲ ೨ ಗಂಟೆ ಮುಂದಿನ ಸಾಲಿನ ಮಂದಿಗೆ. ಉಳಿದ ಒಂದು ಗಂಟೆ ಹಿಂದಿರುವ, ಸುತ್ತಲೂ ಇರುವ ಉಳಿದೆಲ್ಲರಿಗೆ. ಅಂದರೆ ಈ ಮಂದಿ ಲಘು ಸಂಗೀತ, ಸಿನಿಮಾ ಸಂಗೀತವೆನ್ನುವುದ ಕ್ಕಿಂತಲೂ ಕುನ್ನಕುಡಿಯವರ ಪಿಟೀಲಿನ ನಾದ ಕೇಳಬೇಕೆಂದು ಬಂದವರು. ಉಳಿದವರು ಕುನ್ನಕುಡಿ ಶೈಲಿಯಲ್ಲಿ ಕೃತಿಯನ್ನು ಕೇಳಿ ಸವಿಯಲು ಬಂದವರು. ಹಾಗಾಗಿ ಎರಡರ ನಡು ವೆಯೂ ಸಮತೋಲನ ಕಾದುಕೊಂಡು ಎರಡೂ ವರ್ಗವನ್ನು ಖುಷಿಗೊಳಿಸುತ್ತಿದ್ದರು. ನನಗೆ ಬಹಳ ಬಾರಿ ಅನ್ನಿಸುವುದು ಇದು. ಪ್ರಯೋಗಾತ್ಮಕ ನಿಲುವು, ಸೃಜನಶೀಲತೆ ಒಂದು ಪ್ರತಿಭೆಯೊಂದಿಗೆ ಸಮ್ಮಿಳಿತಗೊಂಡರೆ, ಅದೂ ಹದವಾಗಿದ್ದರೆ ಇಂಥ ಪ್ರಯತ್ನಗಳು ಸಾಧ್ಯವಾಗಬಹುದೇ ಹೊರತು ಯಾವುದೇ ಪ್ರಮಾಣ ಕಡಿಮೆ ಇದ್ದರೂ ಸಾಧ್ಯವಿಲ್ಲ.
ಆ ಚಾಮರಾಜಪೇಟೆ ರಾಮನವಮಿ ಸಂಗೀತೋತ್ಸವದಲ್ಲಿ ‘ರಘುವಂಶ’ದಿಂದ ಹಿಡಿದು ಎಲ್ಲ ಉತ್ತಮ ಕೃತಿಗಳನ್ನು ನುಡಿಸಿದರು. ಜನರಿಂದ ಚಪ್ಪಾಳೆಯನ್ನೂ ಗಿಟ್ಟಿಸಿಕೊಂಡರು. ಸುಮಾರು ರಾತ್ರಿ ೯ ಗಂಟೆ. ನನ್ನ ಅಂದಾಜಿನ ಪ್ರಕಾರ ೨ ದಿನದ ಹಿಂದೆ ಬಿಡುಗಡೆಯಾದ ಹಿಂದಿ ಚಲನಚಿತ್ರದ ಹಾಡು ‘ಜರಾ…ಜರಾ…’ ಎಂಬ ಗೀತೆ ಜನಪ್ರಿಯವಾಗಿತ್ತು. ನಿಮಗೆ ಏನನಿಸುವುದೋ? ಆ ಕಛೇರಿಯಲ್ಲಿ ಒಂಬತ್ತು ಗಂಟೆಯ ನಂತರದ ಕ್ಷಣ ಕುನ್ನಕುಡಿ ‘ಯಾವ ಗೀತೆ ನುಡಿಸಬೇಕು’ ಎಂದು ಕೇಳಿದ್ದು ‘ಜರಾ…ಜರಾ…’ ನುಡಿಸಿಯೇ. ಸುತ್ತಲಿದ್ದವರೆಲ್ಲಾ ಹುಬ್ಬು ಹಾರಿಸಿ ತಲೆ ಅಲ್ಲಾಡಿಸಿದಾಗ ಸ್ವತಃ ಕುನ್ನುಕುಡಿಯವರೂ ಹುಬ್ಬು ಹಾರಿಸಿ ನುಡಿಸಿಯೇಬಿಟ್ಟರು. ‘ಜರಾ…ಜರಾ…’ ಮಧುರವಾಗಿ ತೊರೆಯಂತೆ ಹರಿದು ಬಂದು ವ್ಯಾಪಿಸಿಕೊಂಡು ಬಿಟ್ಟಿತು. ಅದಾದ ಮೇಲೆ ಇಂಥ ಹತ್ತಾರು ಹಾಡುಗಳು ಆ ಪಿಟೀಲಿನ ನಾದದಲ್ಲಿ ಹೊಮ್ಮಿ ಬಂದವು. 
ಸಿನಿಮಾ ಕ್ಷೇತ್ರದಲ್ಲೂ ಒಂದಷ್ಟು ಪ್ರಯೋಗ ನಡೆಸಿ ಬಂದವರು ಅವರು. ‘ತೋಡಿ’ ಚಿತ್ರದ ಪ್ರಯೋಗಶೀಲತೆ ಹುಮ್ಮಸ್ಸು ಮೂಡಿಸಿದ್ದೂ ನಿಜ. ಪಕ್ಕವಾದ್ಯವಾಗಿ ನುಡಿಸಿ ನುಡಿಸೀ ಸಾಕೆಂದು ಅನಿಸಿದಾಗ ‘ನಾನು ಇನ್ನು ಮುಂದೆ ಪಕ್ಕವಾದ್ಯವಾಗಲಾರೆ’ ಎಂದು ಘೋಷಿಸಿದಾಗ ಎಲ್ಲರೂ ನಕ್ಕು ಬಿಟ್ಟಿದ್ದರು. ‘ಇವನೇನು ಮಹಾ?’ ಎಂದವರು ಹಲವರು. ಗಾಯನಕ್ಕೆ ಉಳಿದೆಲ್ಲವೂ ಪೂರಕವೇ ಹೊರತು ಅದೇ ಪ್ರಧಾನವಲ್ಲ ಎಂದ ಸಂಪ್ರದಾಯಸ್ಥರೂ ಇದ್ದರು. ಆದರೆ ಕುನ್ನಕುಡಿಗಿದ್ದ ಆತ್ಮವಿಶ್ವಾಸ ಕೊನೆವರೆಗೂ ಕಾಯಿತು.
ಪಿಟೀಲಿಗೇ ಒಂದು ಘನತೆ ತಂದುಕೊಟ್ಟು ಪ್ರಧಾನ ವೇದಿಕೆಗೆ ಕರೆತಂದ ಕೀರ್ತಿ ಇವರಿಗೂ ಸಲ್ಲುತ್ತದೆ. ಪಿಟೀಲು ಚೌಡಯ್ಯನಂಥವರು ಪಿಟೀಲಿನ ಘನತೆ ಹೆಚ್ಚಿಸುವಲ್ಲಿ ಶ್ರೇಷ್ಠ ಕಾರ್‍ಯ ಕೈಗೊಂಡಿದ್ದಾರೆ. ಹಾಗೆಯೇ ಪಿಟೀಲಿಗೆ ಜನಪ್ರಿಯತೆ ಶಿಖರಕ್ಕೆ ಕೊಂಡೊಯ್ದವರು ಕುನ್ನಕುಡಿ.
ರಸಾನುಭವದಿಂದಲೇ ಸಂಗೀತವನ್ನು ಪ್ರಸ್ತುತಪಡಿಸುತ್ತಾ, ತನ್ನ ಸಹ ವಾದಕರೊಂದಿಗೆ ಸ್ಪರ್ಧೆಗಿಳಿಯುವ ಮಾದರಿಯಲ್ಲಿ ನುಡಿಸುತ್ತಿದ್ದುದು ಹೆಗ್ಗಳಿಕೆ. ಸಾಮಾನ್ಯವಾಗಿ ಪ್ರಮುಖ ಕಲಾ ವಿದ ಮತ್ತು ಪಕ್ಕವಾದ್ಯದವರ ಮಧ್ಯೆ ಒಂದು ನಿರ್ದಿಷ್ಟ ಅಂತರ (ಡಿಸ್ಟೆನ್ಸ್) ಇದ್ದದ್ದೇ. ಎಷ್ಟೋ ಬಾರಿ ಆ ಅಂತರವೂ ಒಂದು ಕಛೇರಿ ಹೆಚ್ಚು ಸೃಜನಶೀಲವಾಗುವುದರಲ್ಲಿ ಅಡ್ಡಿ ಯಾಗುವ ಸಂಭವವೂ ಇದೆ. ನನಗೆ ತೋಚಿದಂತೆ ಕುನ್ನಕುಡಿ ಇಂಥ ಅಂತರವನ್ನು ಬಹಳ ಕಡಿಮೆಗೊಳಿಸಿಕೊಂಡಿದ್ದರು.
ಪಕ್ಕವಾದ್ಯದವರ ನಡುವೆ ಹೆಜ್ಜೆ ಹಾಕುವ ಹಾಗೆಯೇ ಪಿಟೀಲು ನುಡಿಸುತ್ತಿದ್ದರು. ಈ ಮಾತು ಕೊಂಚ ಹೆಚ್ಚು ಅಥವಾ ಕುನ್ನಕುಡಿಯವರ ವಿಜೃಂಭಣೆ ಎನಿಸಿದರೂ ಪರ ವಾಗಿಲ್ಲ. ಆದರೂ ಈ ಮಾತು ಸತ್ಯ. ಜತೆಗೆ ಹೆಚ್ಚು ಪಕ್ಕ ವಾದ್ಯಗಳನ್ನು ಬಳಸಿಕೊಂಡು ತನ್ನ ನಾದಕ್ಕೆ ಗೆಜ್ಜೆ ಕಟ್ಟಲು ಪ್ರಯತ್ನಿಸುತ್ತಿದ್ದುದು ಅವರ ಶೈಲಿಯೂ ಆಗಿತ್ತೆನ್ನಿ.
ಹಣೆಯ ತುಂಬುವಂತೆ ಬಾಗಿದ ಕಾಮನಬಿಲ್ಲಿನ ಆಕಾರದ ವಿಭೂತಿ, ಅದರ ಮಧ್ಯೆ ದೊಡ್ಡದೊಂದು ಕುಂಕುಮ ಅವರ ಇನ್ನೊಂದು ಆಕರ್ಷಣೆ. ಜತೆಗೆ ಬಳಸುತ್ತಿದ್ದುದು ಸದಾ ಕಡು ಬಣ್ಣಗಳು. ಕೆಂಪು, ಹಳದಿ ಇತ್ಯಾದಿ. ಅದು ಅವರನ್ನು ಮತ್ತಷ್ಟು ಹುಚ್ಚೆಬ್ಬಿಸುತ್ತಿತ್ತೇನೋ? ಗೊತ್ತಿಲ್ಲ. ಯಾಕೋ, ಕುನ್ನಕುಡಿ ಯೆಂದರೆ ಹೀಗೇ ಇರುತ್ತಾರೆ, ಹೀಗೇ ಇರಬೇಕು ಎಂದು ನಿರ್ಧರಿಸುವ ಮಟ್ಟಿಗೆ ಈ ಅಂಶಗಳು ಪಾತ್ರ ವಹಿಸಿದ್ದವು.
ಕಳೆದ ಬಾರಿಯ ದಸರಾಕ್ಕೆ ಬಂದು ಪಿಟೀಲು ನುಡಿಸಿದ ಕುನ್ನಕುಡಿ, “ಶಿವಪ್ಪ ಕಾಯೋ ತಂದೆ’ ನುಡಿಸಿ ಸಂಗೀತ ರಸಿಕರನ್ನು ತಣಿಸಿದ್ದರು. ಬಹುಶಃ ಈ ದಸರಾಕ್ಕೆ ಬಂದಿದ್ದರೆ “ಮುಂಗಾರು ಮಳೆ’ ಇತ್ಯಾದಿ ಚಿತ್ರಗಳ ಗೀತೆಗಳನ್ನೂ ನುಡಿಸಿ ತಣಿಸುತ್ತಿದ್ದರೇನೋ? ತಮ್ಮ ಪಿಟೀಲಿನಿಂದಲೇ ಸಭಿಕರನ್ನು ಮಾತನಾಡಿಸುತ್ತಾ, ಕಛೇರಿಗೆ ಅಂದವನ್ನು ತುಂಬಿಕೊಳ್ಳುತ್ತಿದ್ದ ಅವರ ಬಗೆ ಅನನ್ಯ.
ಹಲವು ಸಂದರ್ಭಗಳಲ್ಲಿ ಒಂದು ಸೊಬಗನ್ನು, ಸೊಗಸನ್ನು ಕಟ್ಟಿಕೊಡುವಲ್ಲಿ ಪದಗಳು ಸೋಲುತ್ತವೆ. ಅಂದರೆ  ಅನುಭವಿಸುವ ಮಟ್ಟಿನ ರಸಧಾರೆ ಪದಗಳಲ್ಲಿ ತುಂಬಿ ಕೊಳ್ಳುವುದಿಲ್ಲ. ಅದು ಅವುಗಳ ಮಿತಿಯೂ ಇರಬಹುದು. ಕುನ್ನಕುಡಿಯವರನ್ನು ಅನುಭವಿಸಿಯೇ ಕಾಣಬೇಕೆಂಬ ಸತ್ಯದ ಮಧ್ಯೆ ನಾನು ಕಾಣಲು ಹೋದ ಅಂಥದೊಂದು ಪ್ರತಿಕೃತಿಯ ಸ್ಥೂಲ ರೂಪದ ಕೆಲವೇ ರೇಖೆಗಳು (ಔಟ್‌ಲೈನ್). ನಮ್ಮ ಅನುಭವ ಮಾತ್ರ ಆ ಚಿತ್ರವನ್ನು ಪೂರ್ಣಗೊಳಿಸಬಲ್ಲದು. (ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟ)