ಹಿಂದೊಮ್ಮೆ ಹೇಳಿದ ನೆನಪು. ನನಗೆ ಮೆರವಣಿಗೆ ಎಂದರೆ ಎಂಥದೋ ಖುಷಿ. ಮೆರವಣಿಗೆ ಇಂಥದ್ದೇ ಇರಬೇಕೆಂದೇನೂ ಇಲ್ಲ. ಚಿಕ್ಕವನಿದ್ದಾಗಲಂತೂ ಹೊರಗೆ ಬಾಜಾಭಜಂತ್ರಿ ಸದ್ದು ಕೇಳಿದರೆ ಥಟ್ಟನೆ ರಸ್ತೆಗೆ ಹಾಜರು. ಹೊರಗೆ ಪಡಸಾಲೆಯಲ್ಲಿ ಅಪ್ಪ ಕುಳಿತಿದ್ದರೆ ಸ್ವಲ್ಪ ಮೆಲ್ಲಗೆ ಸದ್ದಾಗದಂತೆ ನಡೆಯಲು ಹೋಗಿ, ಸಿಕ್ಕಿಬಿದ್ದು ಬೈಸಿಕೊಂಡ ದಿನಗಳು ಇದ್ದೇ ಇವೆ ; ಎಲ್ಲರಲ್ಲೂ ಇರುವಂತೆ ನನ್ನಲ್ಲೂ. ಹೊರಗೆ ಡೋಲಿನ ಶಬ್ದ ಕೇಳಿದರೆ ಮಗನೊಂದಿಗೆ ಓಡುತ್ತೇನೆ. ಏನೇ ಹೇಳಿ, ಮೆರವಣಿಗೆಯಲ್ಲಿ ಒಂದು ಸಂಭ್ರಮವಿದೆ.
ನಮ್ಮಪ್ಪನಿಗೆ ಕೆಟ್ಟ ಕೋಪ ಇತ್ತು. ಇದೂ ಸಹ ಆಗಿನವರ ಎಲ್ಲರ ಅಪ್ಪನಿಗೂ ಇದ್ದದ್ದೇ. ತಮಾಷೆ ಅಂದ್ರೆ ಹಿಂದೆ ಕೋಪ ಇಲ್ಲದ ಅಪ್ಪಂದಿರೇ ಇರಲಿಲ್ವೇನೋ? ಅಮ್ಮ ಎಂದಿನಂತೆ ಸಮಾಧಾನ ಮಾಡೋಳು. ಈ ಮಧ್ಯೆ ಒಂದು ಗಣೇಶನ ಹಬ್ಬ. ಊರಿನ ದೊಡ್ಡ ಗಣಪತಿಗೆ ಎಲ್ಲರೂ ಜೈ ಅನ್ನೋರೇ. ಬರೀ ಜಯವೇನು ? ಹತ್ತಿರದ ಶಾಲೆಗೆ ರಜೆ ಅವತ್ತು.
ಬೆಳಗ್ಗೆ ೧೧ ಕ್ಕೆ ಗಣಪತಿಯನ್ನ ಎತ್ತೋರು. ಅದಕ್ಕೆ ಅರ್ಧ ಗಂಟೆ ಮೊದ್ಲು ಗಣಪತಿ ಇರೋ ಸ್ಥಳದಿಂದ ಅರ್ಧ ಕಿ. ಮೀ ದೂರದಲ್ಲಿ ಡೊಳ್ಳು ಕುಣಿತದವ್ರು ಕುಣಿಯೋಕೆ ಶುರು ಮಾಡ್ತಾ ಇದ್ರು. ಅದಕ್ಕೆ ಗೆಜ್ಜೆ ಕಟ್ಟುವ ಹಾಗೆ ಕಂಸಾಳೆಯ ಗುಂಪು ಮತ್ತೊಂದು ಬದಿ. ಅವರಿಗೆ ಮುಂಚೂಣಿಯಲ್ಲಿರುವಂತೆ ನಂದಿಕೋಲು ಹಿಡಿದವ. ಅವ್ರ ಮಧ್ಯೆ ತಟ್ಟೀರಾಯಂದಿರು, ನಾಚಾವಾಲಿಗಳು. ಇಲ್ಲಿಗೇ ಮುಗಿಯುವುದಿಲ್ಲ ಮೆರವಣಿಗೆಯ ಕಥೆ.
ಗಣಪತಿಯನ್ನು ಎತ್ತಿ ಟ್ರ್ಯಾಕ್ಟರ್‌ನಲ್ಲಿ ಇಡೋ ಹೊತ್ತಿಗೆ ದೇಶದಲ್ಲಿರೋ ಜನಪದ ಕಲೆಗಳೆಲ್ಲಾ ಅಲ್ಲಿ ಅವತರಿಸುತ್ತಿತ್ತು. ಸ್ವಲ್ಪ ಸ್ವಲ್ಪ ನೆತ್ತಿಗೇರಿಸಿ (ಮದ್ಯಪಾನಿಗಳು)ಕೊಂಡವರ ಪ್ರದರ್ಶನ ಬೇರೆ. ನಾಚಾವಾಲಿಗಳ ಹಿಂದೆಯೇ ಸುತ್ತುತ್ತಾ ಕೈ ಮೀರೀತು ಎನ್ನುವಾಗ ಎಲ್ಲೋ ಇದ್ದ ಪೊಲೀಸ್ನೋರು ಬಂದು ರಟ್ಟೆ ಹಿಡಿದು ಸರಿ ಮಾಡೋರು. ಅಲ್ಲಿಗೆ ಪರಿಸ್ಥಿತಿ ತಹಬದಿಗೆ.
ಅದೇನೋ? ಅಂದು ಗಣಪತಿ ಹಾದು ಹೋಗುವ ರಸ್ತೆಯೆಲ್ಲಾ ನೀರು ತೊಳೆದು ಶುದ್ಧಗೊಳಿಸಲಾಗುತ್ತಿತ್ತು. ರಂಗೋಲಿಯನ್ನೂ ಹಾಕುತ್ತಿದ್ದರು. ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆಲ್ಲಾ ಅಲ್ಲಲ್ಲಿ ನೀರು ಮಜ್ಜಿಗೆ-ಪಾನಕದ ಸೇವೆಯೂ ಆಗುತ್ತಿತ್ತು. ಸುಮಾರು ನಾಲ್ಕು ಕಿ. ಮೀ ಕ್ರಮಿಸಿ ನೀರಿಗೆ ಬೀಳಬೇಕು, ಆ ಗಣಪತಿ. ಬೆಳಗ್ಗೆ ೧೧ ಕ್ಕೆ ಮೆರವಣಿಗೆ ಶುರುವಾದರೆ ಮುಗಿಯುವಾಗ ಸಂಜೆ ೬.
ಆ ದಿನ ಅಪ್ಪನಿಗೇ ಹೊಸ ಹುಮ್ಮಸ್ಸು ಬಂದಿತ್ತು. ಪಕ್ಕದ ಮನೆಯವರನ್ನು ಗೊತ್ತು ಮಾಡಿ ಮೆರವಣಿಗೆಗೆ ಕಳುಹಿಸಿದರೆನ್ನಿ. ಪೂರ್ತಿ ಮುಗಿಸಿ ಬರುವ ಉತ್ಸಾಹ ನನ್ನದು. ಅವರಿಗೂ ಕಡಿಮೆ ಏನೂ ಇರಲಿಲ್ಲ. ಇಬ್ಬರೂ ಆ ಸರ್ಕಲ್ಲಿನಲ್ಲಿ ಬಂದಾಗ ಮೆರವಣಿಗೆಗೆ ಸೇರಿಕೊಂಡೆವು. ಮೆರವಣಿಗೆಯಲ್ಲಿ ಸಾಗುತ್ತಿದ್ದಾಗ, ನಾನು ಯಾವಾದರೊಂದು ತಂಡದ ಜತೆಗಿದ್ದು ಬಿಡುತ್ತಿದ್ದೆ. “ತಂಡವನ್ನು ನೋಡೋ ಜನ ನನ್ನನ್ನೂ ನೋಡ್ತಾರೆ’ ಎಂಬ ಸಂಭ್ರಮ ನನ್ನೊಳಗೆ. ಯಾರೋ ನೋಡಿ ನಕ್ಕರೆ, ನಾನೂ ನಗುತ್ತಿದ್ದೆ. ನನ್ನದು ಅವರ ನಗುವಿಗೆ ರಿಯಾಕ್ಷನ್ನು.
ದೂರದಲ್ಲಿ ಒಂದು ಗುಂಪು ಪಟಾಕಿ ಇಟ್ಟು ಹೊಡೆಯುತ್ತಿತ್ತು. ಅದು ಹೊತ್ತಿ ಡಬ್ ಎಂದ ಮೇಲೆ ನಾನು ಹೋಗಿ ಉಳಿದದ್ದನ್ನು ಹೆಕ್ಕುತ್ತಿದ್ದೆ. ಪರಿಸರ ಮಾಲಿನ್ಯ, ಘಾಟು ಏನೇ ಇರಬಹುದು (ಅವೆಲ್ಲಾ ಇತ್ತೀಚಿನ ಪ್ರಜ್ಞೆ). ಆಗ ಪಟಾಕಿಯ ಘಾಟೆಂದರೆ ಖುಷಿಯೇ. ಗಂಟಲೊಳಗೆ ಇಳಿದ ಘಾಟು ಹುಟ್ಟಿಸಿದ್ದು ಸಂಕಟವನ್ನು ಸುಮ್ಮನೇ ಆನಂದವೆಂಬಂತೆ ಅನುಭವಿಸುತ್ತಿದ್ದೆ. ಒಂದಷ್ಟು ದೂರ ಸಾಗಿದ ಮೇಲೆ ಮೆರವಣಿಗೆ ಅಂದ ಕಳೆದುಕೊಳ್ಳುತ್ತಿತ್ತು.
ಬ್ಯಾಂಡ್‌ನವರು ಆಗ ತಾನೇ ಜನಪ್ರಿಯಗೊಂಡ ಹಾಡುಗಳನ್ನು ಬಾರಿಸುತ್ತಿದ್ದರು.  ಹಾಗೂ-ಹೀಗೂ ಮುಗಿಸಿ ಊರಿನ ದೊಡ್ಡ ಸರ್ಕಲ್ ದಾಟಿ ಮಸೀದಿಯ ಬಳಿ ಬರುವಾಗ ಒಳಗೊಳಗೇ ಆತಂಕ. ಅಲ್ಲಿ ಏನಾದರೂ ಗಲಾಟೆ ಆದರೆ ? ಏನು ಮಾಡುವುದು ?
ಆ ದಿನ ಹಾಗೆಯೇ ಆಯಿತು. ಮಸೀದಿ ಬಳಿ ಬರುತ್ತಿದ್ದಂತೆ ದೊಡ್ಡ ಗದ್ದಲ ಎಬ್ಬಿತು. ಯಾರೋ ಗಣಪತಿಯತ್ತ ಏನನ್ನೋ ಎಸೆದರೆಂದು ವದಂತಿ ಹಬ್ಬಿತು. ಕೆಲವರು ಚಪ್ಪಲಿ ಎಂದರು, ಮತ್ತೆ ಕೆಲವರು “ಕಲ್ಲು’ ಅಂದರು. ಇವುಗಳ ಮಧ್ಯೆ “ಮೆರವಣಿಗೆಯಲ್ಲಿದ್ದವರೇ ಕಲ್ಲು ಎಸೆದದ್ದು’ ಎಂದರು. ಅಷ್ಟರಲ್ಲಿ ಓಡುತ್ತಿರುವ ಸದ್ದು. ಪೊಲೀಸರೋ, ಸಿಕ್ಕ ಕಡೆಯೆಲ್ಲಾ ಲಾಠಿ ಬೀಸುತ್ತಿದ್ದರು. ಓಣಿಯತ್ತ ಓಡಿ ಎಲ್ಲೆಲ್ಲೋ ದಾರಿ ಹಿಡಿದು ಮನೆ ಸೇರುವಾಗ ಕತ್ತಲೆಯಾಗಿತ್ತು. ಬರೀ ಕತ್ತಲೆಯಾಗಿರಲಿಲ್ಲ ; ಮನೆಯಲ್ಲೂ ಆವರಿಸಿತ್ತು.
ನಾನು ಒಳಗೆ ಬಂದ ಕೂಡಲೇ ಮೂಲೆಯಲ್ಲಿ ದೊಡ್ಡಮ್ಮ ಕೋಲು ಹಿಡಿದು ನಿಂತಿದ್ದಳು. ನಾನು ವಿವರಿಸೋ ಮೊದಲೇ “ನಿನಗೆ ಯಾರು ಅಲ್ಲಿಯವರೆಗೂ ಹೋಗಲಿಕ್ಕೆ ಹೇಳಿದ್ದು ? ಏನಾದ್ರೂ ಆಗಿದ್ರೆ ಏನ್ ಮಾಡ್ತಿದ್ದೆ ? ಸಾಯಿಬರಾ, ಹಿಂದೂಗಳಾ ಅಂತಾ ನೋಡೋದಿಲ್ಲಾ. ಸಿಕ್ಕವರಿಗೆಲ್ಲಾ ಹೊಡೀತಾರೆ, ಆ ಜನ. ನಿನಗೆ ಬುದ್ಧಿ ಇಲ್ವಾ?’ ಎಂದು ಬಡಬಡಿಸಿದಳು. ಅಪ್ಪ ಕಳುಹಿಸಿದ್ದು ಎಂದು ವಿವರಿಸಲೂ ಅವಕಾಶ ಕೊಡಲಿಲ್ಲ. ಪಕ್ಕದ್ಮನೆಯಲ್ಲಿ ಸುರೇಶನಿಗೆ ಹೊಡೆತ ಬೀಳುತ್ತಿತ್ತು. ಅವರಪ್ಪ ಪೊಲೀಸ್. ಹಾಗಾಗಿ ಮನೆಯಲ್ಲಿ ರಿಹರ್ಸಲ್ ನಡೆಯುತ್ತಿತ್ತೇನೋ?
ಬೆಳಗ್ಗೆ ಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ದೊಡ್ಡಮ್ಮನೇ ಹೇಳಿದಳು. “ರಾತ್ರಿ ಗಣಪತಿ ಅನಾಥವಾಗಿದ್ದನಂತೆ. ಪೊಲೀಸರೇ ವಿಸರ್ಜನೆ ಮಾಡಿದರಂತೆ.  ಹತ್ತು ಮಂದಿಗೆ ಇರಿದಿದ್ದಾರಂತೆ. ಅದರಲ್ಲಿ ಅವರೂ ಇದ್ದಾರೆ, ಇವರೂ ಇದ್ದಾರಂತೆ. ಮತ್ತೆ ಗಲಾಟೆ ನಡೆಯಬಹುದೂಂತ ಸೆಕ್ಷನ್ ಹಾಕಿದ್ದಾರಂತೆ. ನಾಲ್ಕು ಮಂದಿಗಿಂತ ಹೆಚ್ಚು ಮಂದಿ ಗುಂಪಾಗಿ ಹೋದರೆ ಪೊಲೀಸರು ಲಾಠಿ ಬೀಸುತ್ತಾರಂತೆ…’ ಎಲ್ಲ ಕೇಳಿ, ವಿಚಿತ್ರ ಎನಿಸಿತು. ಮೆರವಣಿಗೆಯ ರಂಗು ನನ್ನೊಳಗೇ ಕುಣಿಯುತ್ತಿತ್ತು, ಗದ್ದಲದ ನೆನಪು ಅಪಸ್ವರವಾಗಿ ಕಾಡುತ್ತಿತ್ತು. ಮಾತನಾಡಲಿಲ್ಲ, ದೊಡ್ಡಮ್ಮ ಗೋಧಿ ಹೆಕ್ಕುತ್ತಿದ್ದಳು. ನಾನು ಆ ಕಸಕಡ್ಡಿಯನ್ನು ಒಟ್ಟು ಮಾಡುತ್ತಾ ಕುಳಿತೆ ಮಧ್ಯಾಹ್ನ ಹನ್ನೆರಡು ಆಗುವವರೆಗೂ…!