ನೆನಪು ಹಳೆಯದಾಯಿತು…
ಇಬ್ಬರೂ ಕೂಡಿ ಇಟ್ಟ ಹೆಜ್ಜೆಗೂ
ವಯಸ್ಸಾಯಿತು
ಬರುವ ಮುಂದಿನ ಗಾಳಿಗೆ
ಇದರ ಆಯಸ್ಸು ತೀರಬಹುದು

ಹೊಸ ಗುರುತು ಮೂಡಿಸುವ
ಹುಮ್ಮಸ್ಸು ಇಬ್ಬರಲ್ಲೂ ಉಳಿದಿಲ್ಲ
ಹಳೆಯದ್ದರ ಜಾಡು ಹಿಡಿದು
ಹೊರಟಿದ್ದೇವೆ, ಏನೂ ಸಿಗುತ್ತಿಲ್ಲ
ನಾವು ಬದುಕಿದ್ದೇವೆ ಎಂಬುದಕ್ಕೆ
ಪ್ರಮಾಣಪತ್ರಗಳ ಬಿಟ್ಟರೆ
ಬೇರೇನೋ ಉಳಿದಿಲ್ಲ

ಇಬ್ಬರೂ ಕಲೆತು ಹರಟಿದ
ಕಲ್ಲು ಬೆಂಚುಗಳು ಜೀರ್ಣಗೊಂಡಿವೆ
ಸದಾ ಗುರಾಯಿಸುತ್ತಿದ್ದ ಕಾವಲುಗಾರನದ್ದೂ
ಹೊಸ ಪೀಳಿಗೆ, ಅಪರಿಚಿತ

ಉಸುಕಿನ ಮೇಲೆ
ನಡೆದೂ ನಡೆದೂ ಅಭ್ಯಾಸ
ಇತಿಹಾಸ ಸೃಷ್ಟಿಸುವ ಹಠವೂ ಇರಲಿಲ್ಲ
ಇಬ್ಬರೂ ಕೊಟ್ಟದ್ದು-ಪಡೆದದ್ದಕ್ಕೆ
ಸಾಕ್ಷ್ಯ ಉಳಿದಿಲ್ಲ
ಒಲವು ಸಾಕ್ಷ್ಯವಾಗುವುದಿಲ್ಲ
ಎಣ್ಣೆ ಮುಗಿಯುವವರೆಗೆ
ದೀಪ ಆರುವುದಿಲ್ಲ

ಮತ್ತಷ್ಟು ದೂರ ನಡೆಯಬಲ್ಲೆವು
ಅಲ್ಲಿಯವರೆಗೆ…
ಮೂಡಿದರೆ ನಾಲ್ಕಾರು ಹೆಜ್ಜೆ
ಮತ್ತೆ ಗಾಳಿ ಬೀಸುವವರೆಗೆ