ಬಂದ ಪತ್ರದಲ್ಲಿ ಮೂರೇ ಪದಗಳಿದ್ದವು. “ಎಲ್ಲರಿಗೂ ನಮಸ್ಕಾರ, ವಂದೇ’. ಪತ್ರ ತೆರೆದವನ ಮನಸ್ಸು ವ್ಯಾಕುಲಗೊಂಡಿತು; ತೀರಾ. ಏನೂ ಹೇಳಲು ತೋಚಲಿಲ್ಲ. ಸುಮ್ಮನೆ ಗೋಡೆಯನ್ನು ನೋಡುತ್ತಾ ಕುಳಿತ.

ಗೋಡೆಯ ಎದುರು ನಾಲ್ಕೈದು ಚಿತ್ರಗಳಿದ್ದವು. ಯಾವುದಕ್ಕೂ ಬಣ್ಣ ಬಳಿದಿರಲಿಲ್ಲ. ಗೋಡೆಯ ಬಣ್ಣವನ್ನೂ ಹೊದ್ದುಕೊಂಡಿರಲಿಲ್ಲ. ಒಂದು ಮನುಷ್ಯನ ಚಿತ್ರ. ಥೇಟ್ ಅವನನ್ನೇ ಹೋಲುವಂಥದ್ದು. ಕಾಲುಗಳು ತೀರಾ ತೆಳ್ಳಗೆ, ಕೈಗಳೂ ಭಿನ್ನವಾಗಿರಲಿಲ್ಲ. ಮುಖ ಮಾತ್ರ ದಪ್ಪ. ಅದರ ಮಧ್ಯೆ ಕಣ್ಣಿಗೆ ದೃಷ್ಟಿಯೇ ಇರಲಿಲ್ಲ. ಹೀಗೆ ಏನೇನೋ ಆಗಿ ಅವನನ್ನೇ ನೆನಪಿಸುತ್ತಿತ್ತು. ಅದನ್ನು ಕಂಡು ಎಷ್ಟು ಬಾರಿ ಆತ ನಕ್ಕಿದ್ದನೋ ? ಅವನಿಗೂ ಲೆಕ್ಕವಿರಲಿಲ್ಲ.
ಪ್ರತಿ ಚೌತಿಗೆ ಬಣ್ಣ ಬಳಿಯಬೇಕೆಂದು ಯೋಜನೆ ರೂಪಿಸುತ್ತಿದ್ದ. ಆದರೆ ಮನಸ್ಸು ಬರುತ್ತಿರಲಿಲ್ಲ. ಇದು ಹದಿನೈದು ವರ್ಷದ ಕಸರತ್ತು. ಈಗ ಗೋಡೆಯೂ ಆ ಚಿತ್ರದ ಗೆರೆಗಳ ಬಣ್ಣಕ್ಕೆ ತಿರುಗಿದೆ. ಇವತ್ತಿಗೂ ಅವನಿಗೆ ತಿಳಿದಿಲ್ಲ. ಆ ಚಿತ್ರಗಳ ಮೇಲಿನ ಮೋಹದ ಬಗ್ಗೆ.

ಆ ನಿಜವನ್ನು ಒಪ್ಪಿಕೊಳ್ಳುತ್ತಾನೆ. ಅದಕ್ಕೆ ಮುಜುಗರ ಪಡುವುದಿಲ್ಲ. ಅವನೊಳಗಿನ ಬದುಕಿನ ನಂದಾದೀಪಕ್ಕೆ ಆಗಾಗ್ಗೆ ಉತ್ಸಾಹದ ಎಣ್ಣೆ ಸುರಿದಿದೆ. ಬಹುಶಃ ಆ ಕಾಂತಿಯೊಳಗೆ ಮನೆಯೂ ಕಂಗೊಳಿಸುತ್ತಿತ್ತು, ಬಣ್ಣದ ಚಿಂತೆ ಕಾಡಿರಲಿಲ್ಲ.

ಮತ್ತೊಂದು ಚಿತ್ರದ ಬಗ್ಗೆ ಹೇಳಬೇಕು. ಚಿಕ್ಕದೊಂದು ಮನೆ, ಅದರಲ್ಲಿ ಒಂದು ಡೈನಿಂಗ್ ಟೇಬಲ್. ಅಲ್ಲಿ ನಾಲ್ಕು ಆಸನ. ಅದರಲ್ಲಿ ಕುಳಿತವರು ಇವನೂ ಸೇರಿದಂತೆ ನಾಲ್ಕು ಮಂದಿ. ಊಟದ ತಟ್ಟೆ ಸಿದ್ಧವಿದೆ. ಊಟ ಬಡಿಸುವವಳು ಕಾಣೆಯಾಗಿದ್ದಾಳೆ. ಅವಳು ಬರುವವರೆಗೂ ಇವರು ಊಟ ಮಾಡುವಂತಿಲ್ಲ !

ಅದರ ಪಕ್ಕದ ಚಿತ್ರ ಇನ್ನೂ ಪೂರ್ಣಗೊಂಡಿರಲಿಲ್ಲ. ಅಷ್ಟರಲ್ಲಿ ಅವಳು ದೊಡ್ಡವಳಾಗಿದ್ದಳು. ನಂತರ ಚಿತ್ರ ಬರೆಯುವುದನ್ನೇ ನಿಲ್ಲಿಸಿದ್ದಳು. ಈಗ ಅವೆಲ್ಲವೂ ಪೂರ್ಣಗೊಂಡಿದ್ದರೆ ಹೇಗೆಂದು ಕಲ್ಪಿಸಿಕೊಳ್ಳತೊಡಗಿದ. ಹನಿಯಲ್ಲಿ ಕಣ್ಣು ತುಂಬಿ ಹೋಯಿತು. ತೇವವಾದ ಅನುಭವ ಹೃದಯಕ್ಕೂ ಅರ್ಥವಾಯಿತು. ಹೃದಯವೂ ಕಣ್ಣ ತುಂಬಿಸಿಕೊಂಡಿದ್ದು ತೋರುವುದಿಲ್ಲ !

ದೂರದ ಗಡಿಯಲ್ಲಿ ದೇಶ ಕಾಯುತ್ತಿದ್ದ ಅವಳ ಗಂಡನ ಬೆಂಬಲಕ್ಕೆ ನಿಂತವಳು. ಮೊನ್ನೆಯಷ್ಟೇ ಶತ್ರುವಿನ ಗುಂಡಿಗೆ ಇವನು ಪ್ರಾಣ ತೆತ್ತ. ಶವ ಮನೆಗೆ ಬಂತು. ಅದನ್ನು ಕಂಡವಳ ಮನಸ್ಸು ಕಲ್ಲಾಗಿ ಹೋಯಿತು. ಶತ್ರುವಿನ ಗುಂಡಿಗೆ ಅವನ ದೇಹ ಛಿದ್ರವಾದ ಸ್ಥಿತಿ ಕಂಡು ಮಾತು ಹೊರಡಲಿಲ್ಲ. ಬಹಳ ಪ್ರೀತಿಸಿ ಪಡೆದವನನ್ನು ಉಳಿಸಿಕೊಳ್ಳಲಾಗದ್ದಕ್ಕೆ ಮರುಗಿದಳು. ಮುಂದೇನು ?

ಚಿತ್ರ ಪೂರ್ಣಗೊಳಿಸಲು ಮನೆಗೆ ಹೋಗಬೇಕೇ ? ಒಂದುವೇಳೆ ಅರ್ಧಕ್ಕೆ ನಿಲ್ಲಿಸಿದ ಚಿತ್ರಗಳನ್ನು ಪೂರ್ಣಗೊಳಿಸಲು ಸಾಧ್ಯವೇ ? ಅಪ್ಪ ಯಾರಿಗಾಗಿ ದಿನಾ ಕಾಯುತ್ತಿರಬಹುದು ? ಇನ್ನೂ ಬಂದಿರಲಾರದ ಅಮ್ಮನಿಗಾಗಿಯೇ ? ಅವನ ನಿರೀಕ್ಷೆಯ ಭಾವಚಿತ್ರದೊಳಗೆ ನಾನೂ ಪಾತ್ರವಾಗಬೇಕೇ ? -ಹೀಗೆ ಪ್ರಶ್ನೆಗಳು ಅವಳನ್ನು ಬಿಡಲಿಲ್ಲ.

ತನ್ನ ಗಂಡನ ಶವವನ್ನು ತಂದಿದ್ದ ಅವನ ಮಿತ್ರರು ಕೈಗೆ ಕೊಟ್ಟು ಹೋದ ಪತ್ರವನ್ನು ತೆಗೆದಳು. “ಎಲ್ಲರಿಗೂ ನಮಸ್ಕಾರ, ವಂದೇ’ ಎಂದಿತ್ತು. ಏನೂ ತೋಚಲಿಲ್ಲ. ಅದರ ಕೆಳಗೆ ತನ್ನದೂ ಷರಾ ಬರೆದು ಪೋಸ್ಟ್ ಮಾಡಿದಳು.  ಗೋಡೆಗೆ ಈತ ಮತ್ತೆ ಬಣ್ಣ ಬಳಿಸಲೇ ಇಲ್ಲ!