ಅಧ್ಯಾಯ ಒಂಬತ್ತು

ಚುನಾವಣೆ ಸೇರಿದಂತೆ ಹತ್ತು ಹಲವು “ಬ್ಯುಸಿ’ ನಡುವೆ ಕಳೆದು ಹೋಗಿದ್ದೆ. ಆಗಾಗ್ಗೆ ಬೇರೆ ಬರಹಗಳನ್ನು ಹಾಕುತ್ತಿದ್ದರೂ ಧಾರಾವಾಹಿ ಮುಂದುವರಿಸಲು ಆಗಿರಲಿಲ್ಲ. ಇನ್ನು ಮುಂದೆ ವಾರಕ್ಕೊಮ್ಮೆ ಧಾರಾವಾಹಿ ಅಪ್‌ಟುಡೇಟ್ ಮಾಡುವ “ಶಪಥ’ ಮಾಡಿದ್ದೇನೆ. ನೋಡಬೇಕು…
ಅಂದ ಹಾಗೆ ಈ “ಸ್ಕೂಪ್’ ಪ್ರಕರಣ ನಮ್ಮೊಳಗೆ ತುಂಬಿದ ಆತ್ಮವಿಶ್ವಾಸ ಅಪಾರ. ಅಷ್ಟೇ ಅಲ್ಲ. ನಮ್ಮ ನಡುವಿನ ಬಂಧವನ್ನೂ ಇನ್ನಷ್ಟು ಬಿಗಿಯಿತು. ಹೊಸ ಕನಸು ಅರಳಿಕೊಂಡಿದ್ದ ಬಗೆಯೂ ಹಾಗೆಯೇ. ಎಲ್ಲರೂ ಒಟ್ಟಿಗಿದ್ದರೆ ಚೆಂದವಾದೀತೆಂಬ ಅನಿಸಿಕೆಯೂ ನಮ್ಮದಾಗಿತ್ತು. ಸಿಗದಾಳನೊಡನೆ ಕುಳಿತು ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದೆವು. ಹಲಸೂರಿನ ಆ ಮನೆಯನ್ನು ಸೇರುವುದೆಂದು ನಿರ್ಧರಿಸಿದೆವು. ಹರ್ಷ ಮತ್ತು ನವೀನರ ಪ್ರಸ್ತಾಪವನ್ನು ಒಪ್ಪಿದೆವು. ಸರಿ, ದಿನ ನೆನಪಿಲ್ಲ. ಆ ಮನೆಗೆ ಪ್ರವೇಶ ಮಾಡಿದೆವು. ಅಲ್ಲಿಗೆ ತ್ಯಾಗರಾಜನಗರದ ಸಂಬಂಧ ಕಡಿದುಕೊಂಡಿತು. ಸಿಗದಾಳನ ಗೆಳೆಯರು ಕೆಲವರು ಅಲ್ಲಿದ್ದದ್ದರಿಂದ ಅವನೇನೋ ಹೋಗಿ ಬರುತ್ತಿದ್ದ. ನಾನಂತೂ ತೀರಾ ಕಡಿಮೆ.
ಹಲಸೂರಿನ ಜೋಗುಪಾಳ್ಯದ ಒಂದು ರಸ್ತೆ. ಮನೆಯನ್ನು ಹುಡುಕಲು ಬಹಳ ಸಲೀಸು. ಜೋಗುಪಾಳ್ಯದ ಕಡೆ ತಿರುಗಿ ಕೊಂಚ ಮುಂದಕ್ಕೆ ಹೋಗಿ ಎರಡನೇ ರಸ್ತೆಯಲ್ಲಿ ಬಲಕ್ಕೆ ತಿರುಗಿದರೆ ಮತ್ತೆ ಬಲಕ್ಕೆ ಮೊದಲ ಮನೆಯೇ ನಮ್ಮ ಮನೆ. ಎದುರಿಗೆ ಮಲಯಾಳಿಗಳ ಮನೆಯೊಂದಿತ್ತು. ತಮಾಷೆಯೆಂದರೆ ಅದರಲ್ಲಿದ್ದವರೂ ನನ್ನ ಹಳೆಯ ಗೆಳೆಯರು. ನಂತರ ಒಂದು ಶಾಲೆ.
ಮೊದಲೇ ಹೇಳಿದಂತೆ ಆ ಮನೆಯಲ್ಲಿ ಬದುಕುತ್ತಿದ್ದವರು ಎರಡು ಬಗೆಯ ಜನರು. ವರದಿಗಾರರಾಗಿದ್ದ ನಾವು ನಿಶಾಚರರು. ಉಳಿದವರು ಪರವಾಗಿಲ್ಲ, ಬಿಡಿ. ನಾನು, ನವೀನ, ಹರ್ಷ ಬರುತ್ತಿದ್ದುದೇ ರಾತ್ರಿ ೧೨ ರ ಮೇಲೆಯೇ.
ಆಗಲೇ ಹೇಳಿದಂತೆ ಶಿಸ್ತು ಇರಲಿಲ್ಲ ಎಂದು ತಿಳಿಯುವ ಅಗತ್ಯವಿಲ್ಲ. ನಾವು ಅಲ್ಲಲ್ಲಿ ಶಿಸ್ತಿನ ಬೆಂಚುಗಳನ್ನು ಹಾಕಿದ್ದೆವು, ಕುಳಿತುಕೊಳ್ಳುವುದು ಕಡಿಮೆ ಎನ್ನಿ.
ಮನೆಗೊಂದು ವೇಳಾಪಟ್ಟಿಯಿತ್ತು. ಅಡುಗೆಮನೆಯಲ್ಲಿ ಯಾವ್ಯಾವ ದಿನ ಬೆಳಗ್ಗೆ ಏನೇನು ತಿಂಡಿ ಎನ್ನುವ ಮೆನು ಪಟ್ಟಿಯನ್ನೂ ತೂಗು ಹಾಕಿದ್ದೆವು. ಅದರಂತೆಯೇ ತಿಂಡಿಯ ತಯಾರಿ. ಬೆಳಗ್ಗೆ ಒಂಬತ್ತಕ್ಕೆ ಕಚೇರಿಗೆ ಹೊರಡುವವರಿದ್ದರಿಂದ ಅವರಿಗೆ ನಾನು, ಹರ್ಷ, ನವೀನ ಸೇರಿ ತಿಂಡಿ ಮಾಡಿಕೊಡಬೇಕು. ಬೆಳಗ್ಗೆ ತಿಂಡಿ ಹೋದವರು ರಾತ್ರಿ ನಾವು ಬರುವಾಗ ನಮಗೆ ಊಟ ಸಿದ್ಧಪಡಿಸಿರುತ್ತಾರೆ. ಇಂಥದೊಂದು ಕರಾರು.
ಪಾತ್ರೆ ತೊಳೆಯುವ, ಕಸ ಗುಡಿಸುವವ ಹೊಣೆ ಬೇರೆ ಬೇರೆಯವರಿಗೆ ನೀಡಲಾಗಿತ್ತು. ಇಷ್ಟೆಲ್ಲಾ ಆದ ಮೇಲೂ ಮನೆಯಲ್ಲಿ ಪಾತ್ರೆ ತೊಳೆಯುವುದಕ್ಕಾಗಲೀ, ಬಟ್ಟೆ ಒಗೆಯುವುದಕ್ಕಾಗಲೀ ಮನೆಯಾಳನ್ನು ಇಟ್ಟುಕೊಂಡಿರಲಿಲ್ಲ. ವಾಷಿಂಗ್ ಮೆಷಿನ್ ಬಂದೇ ಇರಲಿಲ್ಲ ಬಿಡಿ. ನಾನು ಸ್ವಲ್ಪ ಹಿರಿಯ. ಅಂದರೆ ಒಂದೆರಡು ವರ್ಷವಿರಬಹುದು. ಅದಕ್ಕೇ ಸ್ವಲ್ಪ ಹೆಚ್ಚಿನ ಗೌರವ ಸಿಗುತ್ತಿತ್ತು. ಏನೋ…ಮನೆಯ ನಿಭಾಯಿಸುವಿಕೆಯ ಹೊಣೆ ವಹಿಸಿದ್ದರು. ಹಾಗೆಯೇ ಸಿಗದಾಳ್ ಲೆಕ್ಕಗಾರ. ಹಾಗಾಗಿ ಮನೆಯ ಲೆಕ್ಕವನ್ನೆಲ್ಲಾ ಲೆಕ್ಕ ಮಾಡಿ ಹಂಚುವುದು ಅವನ ಕೆಲಸವಾಗಿತ್ತು.
ಪ್ರತಿ ತಿಂಗಳ ಮೊದಲ ವಾರದಲ್ಲಿ ನಮ್ಮ ಪಾವತಿ ಪಟ್ಟಿ ಸಿದ್ಧವಾಗುತ್ತಿತ್ತು. ಮನೆ ಬಾಡಿಗೆ, ದಿನಸಿ ಸಾಮಾನು…ಇತ್ಯಾದಿ ವೆಚ್ಚವನ್ನು ಯಾರಿಗೆ ಮೊದಲು ಸಂಬಳ ಬರುತ್ತಿತ್ತೋ ಅವರು ಕೊಡುತ್ತಿದ್ದರು. ನಂತರ ಊರಿನವರು ತಮ್ಮ ತಮ್ಮ ಪಾಲನ್ನು ಸಂಬಳ ಬಂದ ಕೂಡಲೇ ಕೊಡಬೇಕಿತ್ತು. ಒಮ್ಮೊಮ್ಮೆ ಈ ಶಿಸ್ತನ್ನು ಉಲ್ಲಂಘಿಸಿ ಕೊಟ್ಟರಾಯಿತು ಎಂದು ನಿಲುವು ತಳೆದದ್ದೂ ಇದೆ. ಆಗ ಮೊದಲು ಕೊಟ್ಟವ ಕೋಡಂಗಿಯಂತಾಗಿ ಮುಂದಿನ ಬಾರಿ ಜಪ್ಪಯ್ಯ ಎಂದರೂ ಕೊಡಲಾರೆ ಎಂಬ ನಿಲುವಿಗೂ ಬಂದದ್ದಿದೆ. ಎಲ್ಲಿಯೂ ಹಗ್ಗ ಹರಿದು ಹೋಗದಂತೆ ಸೂಕ್ಷ್ಮತೆ, ನಾಜೂಕುತನ ಪ್ರದರ್ಶಿಸಲಾಗಿತ್ತು. ಅದಕ್ಕೇ ಏನೋ ? ಮೂರು ವರ್ಷ ಒಟ್ಟಿಗೆ ಬದುಕಿದೆವು. ಆಮೇಲೆ ನಮ್ಮ ನಮ್ಮ ವಯಸ್ಸಿನ ಅಗತ್ಯ (ಮದುವೆ) ಬಂಧವನ್ನು ಮುರಿಯುತ್ತಾ ಬಂದಿತೇ ಹೊರತು ಇನ್ಯಾವ ಲೆಕ್ಕಾಚಾರಗಳೂ ಅಲ್ಲ.
ಸೋಮವಾರ ಪೊಂಗಲ್, ಮಂಗಳವಾರ ಚಪಾತಿ, ಬುಧವಾರ ಹೀಗೆಯೇ ಪುಳಿಯೋಗರೆ ಅಥವಾ ಚಿತ್ರಾನ್ನ, ಗುರುವಾರ ಬಿಸಿಬೇಳೆಬಾತ್, ಶುಕ್ರವಾರ ವಾಂಗೀಬಾತ್, ಶನಿವಾರ ಉಪ್ಪಿಟ್ಟು, ಭಾನುವಾರ ಮಾತ್ರ ವಿಶೇಷ ತಿಂಡಿ. ಒಮ್ಮೊಮ್ಮೆ ನಮ್ಮ ನೀರು ದೋಸೆ ಸ್ಥಾನ ಪಡೆಯುತ್ತಿತ್ತು. ಸಾಲುಗಟ್ಟಿ ತಿನ್ನುತ್ತಿದ್ದರು. ಮೊದಲು ಬಂದವರಿಗೆ ಮೊದಲು ಆದ್ಯತೆ ಎನ್ನುವುದಕ್ಕಿಂತಲೂ ಮೊದಲು ಬಂದವರಿಗೆ ಹೆಚ್ಚು ಎಂಬಂತಾಗುತ್ತಿತ್ತು.
ನನಗೆ ಸ್ವಲ್ಪ ಅಡುಗೆ ಬರುತ್ತಿದ್ದುದ್ದರಿಂದ ತಿಂಡಿಯ ನೇತೃತ್ವ ವಹಿಸುತ್ತಿದ್ದೆ. ಹರ್ಷ, ನವೀನ ಎಲ್ಲರೂ ಸಹಕರಿಸುತ್ತಿದ್ದರು. ನಾನು ಮಾಡುತ್ತಿದ್ದ ವಾಂಗೀಬಾತ್‌ಗೆ ಮಾತ್ರ ಯಾಕೋ ಡಿಮ್ಯಾಂಡೇ ಇರುತ್ತಿರಲಿಲ್ಲ. ಮುಖ ಕಪ್ಪಿಟ್ಟುಕೊಂಡೇ ಕೆಲವರು ತಿನ್ನುತ್ತಿದ್ದರು. ಇನ್ನು ಕೆಲವರಿಗೆ ಚೆನ್ನಾಗಿಲ್ಲದಿದ್ದರೂ ಅನಿವಾರ್ಯ ಕರ್ಮ. ಇನ್ನೂ ಕೆಲವರಂತೂ ಬೆಳಗ್ಗೆ ಬೇಗನೆ ಮನೆ ಬಿಡುತ್ತಿದ್ದುದುಂಟು.
ಉಪ್ಪಿಟ್ಟು ಮಾಡಿದಾಗಲೂ ಸ್ವಲ್ಪ ಬೇಸರವೇ. ಪೊಂಗಲ್, ಪುಳಿಯೋಗರೆ ಎಲ್ಲಾ ಓಕೆ. ಇನ್ನು ರಾತ್ರಿಯ ಮೆನು ಕೇಳಬೇಡಿ. ಮಾರುಕಟ್ಟೆ ಆಧರಿಸಿ ನಿರ್ಧಾರವಾಗುತ್ತಿತ್ತು. ಅದರ ಹೊಣೆ ಸಿಗದಾಳ್‌ಗೆ, ಯೋಗೀಶ್, ಅರುಣ್ ಅವರೆಲ್ಲಾ ಸಹಕಾರಿಗಳು.
ಈ ಅರ್ಥದಲ್ಲಿ ಹೇಳುವುದಾದರೆ ನಾವೆಲ್ಲಾ ಒಂದರ್ಥದಲ್ಲಿ “ಸಹಕಾರಿ”ಗಳು (ಕೋಆಪರೇಟಿವ್ಸ್) !