ಸಾವಿಗೆ ಕಾಯವುದು ಎಂದರೆ …!?
ಬಹಳ ಕಷ್ಟ. ಅದರಲ್ಲೂ ಬದುಕಬೇಕೆಂದು ಬಯಸಿದವ ಸಾವನ್ನು ನಿರೀಕ್ಷಿಸುತ್ತಾ ಕುಳಿತುಕೊಳ್ಳುವುದು ರಣಹಿಂಸೆ. ಈಗ ಆ ರಣಹಿಂಸೆಯನ್ನು ಅನುಭವಿಸಬೇಕಾದವ ಶ್ರದ್ಧಾನಂದ. ಇವನ ಬಗ್ಗೆ ಎಲ್ಲರಿಗೂ ತಿಳಿದಿರಬೇಕು. ಆದರೂ ಕೊಂಚ ಮಾಹಿತಿ.
೧೯೯೧ ರ ಏಪ್ರಿಲ್ ೨೮ ರಂದು ತನ್ನ ಪತ್ನಿ ಬೇಗಂ ಶಕೀರಾ ನಮಾಜಿ ಅವರನ್ನು ಕೊಂದಿದ್ದ. ಇವನ ನಿಜವಾದ ಹೆಸರು ಮುರಳಿ ಮನೋಹರ್ ಮಿಶ್ರಾ. ಬೆಂಗಳೂರಿನ ರಿಚ್ಮಂಡ್ ರಸ್ತೆಯ ತನ್ನ ಬಂಗಲೆಯ ಕಾಂಪೌಂಡ್ ಮೂಲೆಯೊಂದರಲ್ಲಿ ಹೆಣವನ್ನು ಹೂತ. ಸರಿ, ಎಲ್ಲದರಂತೆ ಮುಚ್ಚಿ ಹೋಗಿತ್ತು. ನಂತರ ಶ್ರದ್ಧಾನಂದನನ್ನೇ ಸೆರೆ ಹಿಡಿದಾಗ ನಿಜ ಬಯಲಿಗೆ ಬಂತು. ೧೯೯೪ ರ ಏಪ್ರಿಲ್ ೩೦ ರಂದು ಬಂಧಿತನಾದ. ೨೦೦೫ ರಲ್ಲಿ ಹೈಕೋರ್ಟ್ ಆತನಿಗೆ ಮರಣ ದಂಡನೆ ವಿಧಿಸಿತು. ಮೇ ೨೧ ರಂದು ಆತ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಹೋದ. ಅದೀಗ ಜು. ೨೨ ರಂದು ತೀರ್ಪು ನೀಡಿದೆ. ಅದರಂತೆ ಸಾವು ಬರುವವರೆಗೂ ಜೈಲಿನಲ್ಲಿಯೇ ಕಾಯಬೇಕು !

ಅಂದಹಾಗೆ ಚಿಕ್ಕ ಮಾಹಿತಿಯೆಂದರೆ ಪ್ರಸಿದ್ಧ ಆಡಳಿತಗಾರ ಮಿರ್ಜಾ ಇಸ್ಮಾಯಿಲ್‌ನ ಮೊಮ್ಮಗಳು ಈ ಶಕೀರಾ. ಈ ಪ್ರಕರಣ ಇಡೀ ರಾಜ್ಯವೇನು ? ದೇಶದಲ್ಲೇ ಕುತೂಹಲ ಹುಟ್ಟಿಸಿತ್ತು. ಸುಪ್ರೀಂಕೋರ್ಟ್‌ನ ತೀರ್ಪು ಬಂದ ಕೂಡಲೇ ಶ್ರದ್ಧಾನಂದ ಸ್ವಾಮಿ ಪ್ರತಿಕ್ರಿಯಿಸಿದ್ದು-“ಬಹುಶಃ ಪತ್ನಿಯನ್ನು ಕೊಂದದ್ದಕ್ಕೆ ಮರಣ ದಂಡನೆ ವಿಧಿಸಿದ ಉದಾಹರಣೆಗಳಿಲ್ಲ. ಹಾಗಾಗಿ ಸುಪ್ರೀಂಕೋರ್ಟ್ ಮತ್ತಷ್ಟು ಶಿಕ್ಷೆಯನ್ನು ಕಡಿಮೆಗೊಳಿಸಬಹುದು’ ಎಂದಿದ್ದ. ಅಷ್ಟೇ ಅಲ್ಲ. “ನನ್ನ ಆರೋಗ್ಯ ಎಷ್ಟು ವರ್ಷಗಳಿಗೆ ಸಹಕರಿಸೀತು ಎಂದು ನನಗೆ ತಿಳಿದಿಲ್ಲ. ಅದಾಗ್ಯೂ ಕೋರ್ಟ್ ಸಾಯುವವರೆಗೂ ಜೈಲಿನಲ್ಲಿರಬೇಕೆಂದರೆ ಏನೂ ಮಾಡುವಂತಿಲ್ಲ’ ಎಂದಿದ್ದ.

ನಾನು ಬೆಂಗಳೂರಿನಲ್ಲಿ ಅಪರಾಧ ವರದಿಗಾರನಾಗಿದ್ದಾಗ ಒಮ್ಮೆ ಜೈಲಿಗೆ ಭೇಟಿ ಕೊಟ್ಟಿದ್ದೆ. ಅದು ನನ್ನ ಮೊದಲ ಆರಿಯ ಜೈಲು ಭೇಟಿ. ನಮಗೂ ಒಳಗೆ ಬಿಡುವಾಗ ಪುಸ್ತಕದಲ್ಲಿ ಬರೆಸಿಕೊಂಡರು, ನಮಗೂ ಚೀಟಿ ಕೊಟ್ಟರು. ಸುಮ್ಮನೆ ಉದ್ದಕ್ಕೂ ಹೆಣದಂತೆ ಮಲಗಿದ್ದ ಜೈಲನ್ನು ನೋಡಿಕೊಂಡು ಬಂದೆ. ಎಲ್ಲ ನೋಡಿ ಜೈಲರ್ ಕಚೇರಿಗೆ ಬರುವಾಗ ಎದುರು ಬಿಳಿ ಅಂಗಿ, ಬಿಳಿ ಪಂಚೆ ಉಟ್ಟುಕೊಂಡು, ತಲೆ ಕೂದಲನ್ನು ಕತ್ತರಿಸಿಕೊಂಡ ವ್ಯಕ್ತಿಯೊಬ್ಬ ಕಂಡ. “ನಮಸ್ಕಾರ ಸಾರ್…’ ಎಂದು ಜೈಲರ್‌ಗೆ ಕೈ ಮುಗಿಯುತ್ತಿದ್ದ. ಕೈದಿಯೇನೋ ನಿಜ, ಆದರೆ ಇಷ್ಟೊಂದು ಸ್ವಾತಂತ್ರ್ಯನೇ ಎಂದೆನಿಸಿತ್ತು. ತಕ್ಷಣವೇ ಕಚೇರಿಯ ಒಳಗೆ ಹೋದ ಬಳಿಕ “ಅವನೇರಿ ಶ್ರದ್ಧಾನಂದ ಸ್ವಾಮಿ’ ಎಂದಿದ್ದರು. ಪ್ರಕರಣವೆಲ್ಲಾ ನೆನಪಿಗೆ ಬಂದಿತ್ತು.

ಎಷ್ಟು ವಿಚಿತ್ರ ನೋಡಿ. ಮರಣ ದಂಡನೆ ಕ್ರೂರವೋ ? ಸಾವನ್ನು ಕಾಯುತ್ತಾ ಕೂರುವುದು ಕ್ರೂರವೋ? ಒಮ್ಮೆ ಹೀಗನ್ನಿಸುತ್ತದೆ. ಬದುಕಬೇಕೆಂದು ಹಪಹಪಿಸುವವನಿಗೆ ಮರಣ ದಂಡನೆ ಕ್ರೂರವೆನಿಸಬಹುದು. ಅದೇ ಸಾಯಬೇಕೆಂದು ಬಯಸುವವನಿಗೆ ಅದೇ ಮರಣ ದಂಡನೆ ವರವೆನಿಸಬಹುದು. ಆದರೆ ಅದೆರಡೂ ಅಲ್ಲದ, ಕಾಯಿಲೆಗಳಿಂದ ಬಳಲುತ್ತಿರುವ ಶ್ರದ್ಧಾನಂದನಿಗೆ ಯಾವುದು ಕ್ರೂರವೋ ? ಗೊತ್ತಿಲ್ಲ.

ಮಾನವೀಯ ನೆಲೆಯಲ್ಲಿ ಚರ್ಚಿಸಬೇಕಾದರೆ ಇದು ಜಿಜ್ಞಾಸೆಯಂಥ ಪ್ರಶ್ನೆ. ಜೀವ ಇರುವವರೆಗೂ ತಾನು ಅಪರಾಧಿ, ಕೊಲೆಗಾರ ಎಂದು ನಿಂದನೆಗೆ ಗುರಿಯಾಗುತ್ತಲೇ ಬದುಕನ್ನು ಸವೆಸಬೇಕು. ಅಂದರೆ ಆನಂದವಾಗಿರಬಹುದಾದ ಕಾಲವೂ ಕೈ ತಪ್ಪುವುದು ನಿಶ್ಚಿತ. ಅದು ಬದುಕನ್ನು ಮತ್ತಷ್ಟು ರೌರವಗೊಳಿಸಿ ಸಾವನ್ನೇ ಎದುರುನೋಡುವ ಅನಿವಾರ್ಯತೆಯನ್ನು ಸೃಷ್ಟಿಸಬಲ್ಲದು. ಇಂಥ ಸಂದರ್ಭದಲ್ಲಿ ಮರಣ ದಂಡನೆಯೇ ಪರಮ ಸುಖ ಎಂದೆನಿಸುವುದಿಲ್ಲವೇ?

ಹಾಗೆಯೇ, ಯಾರು ಏನಾದರೂ ಹೇಳಲಿ. ಆಯುಷ್ಯ ಮುಗಿಯುವವರೆಗೆ ಬದುಕುತ್ತೇನೆ ಎಂದು ನಿರ್ಧರಿಸಿದವನಿಗೆ ಮರಣ ದಂಡನೆಯಂಥ ತೂಗು ಕತ್ತಿ ತಪ್ಪುವುದು ಖುಷಿ ತರಬಹುದು. ಆದರೆ ಜೈಲಿನ ಪರಿಸರ ಅಂಥ ಸಂತೋಷಕ್ಕೆ ಎಡೆ ಮಾಡಿಕೊಡುತ್ತದೆಯೇ ಎಂಬುದೂ ಪ್ರಶ್ನಾರ್ಥಕವೇ.

ಅದಕ್ಕಿಂತಲೂ ಮುಖ್ಯವಾಗಿ ಯಾವ ಹೊಸ ಕ್ಷಣಗಳೂ ಇಲ್ಲದೇ ಬದುಕನ್ನು ಸವೆಸುವುದು ಅತ್ಯಂತ ಕಷ್ಟ. ಬದುಕಿನಲ್ಲಿ ಹೊಸ ನಿರೀಕ್ಷೆಗಳಿರಬೇಕು. ಅದಕ್ಕಾಗಿ ಕಾಯುತ್ತಿದ್ದೇನೆ ಎನ್ನುವ ನಂಬಿಕೆ ಬದುಕನ್ನು ಎಷ್ಟೋ ಬಾರಿ ಚಿರಂತನವಾಗಿಸುತ್ತದೆ. ಅಂಥ ನಂಬಿಕೆಯೇ ಇರದ ಬದುಕು ದುರ್ಭರವೇ, ಸಂಶಯವಿಲ್ಲ.

ಮರಣ ದಂಡನೆ ಯಾರಿಗೂ ನೀಡಬಾರದು ಎಂದೂ ಒಮ್ಮೊಮ್ಮೆ ಎನಿಸುತ್ತದೆ. ಮತ್ತೊಮ್ಮೆ ಹೀಗೆ ಹೆಚ್ಚುತ್ತಿರುವ ಅಪರಾಧಗಳನ್ನು ಕಂಡರೆ ಇಂಥದೊಂದು ಶಿಕ್ಷೆ ನೀಡುವುದು ಉಚಿತವೇ ಎಂದೂ ಅನಿಸುತ್ತದೆ. “ಭಯ’ದಿಂದ ಸಮಾಜ ಉದ್ಧಾರವಾಗಬಹುದೆಂಬ ಆಲೋಚನೆ ಇದಕ್ಕೆ ಕಾರಣ. ಇನ್ನೊಮ್ಮೆ “ಮನ ಪರಿವರ್ತನೆಯೇ ಸಮಾಜದ ಉದ್ಧಾರಕ್ಕೆ ಬುನಾದಿ’ ಎಂಬ ಅಹಿಂಸೆಯ ಮಾತನ್ನು ಕೇಳಿದಾಗ ಹೌದಲ್ಲವೇ ಎನಿಸುವುದುಂಟು. ಆದರೆ ಶ್ರದ್ಧಾನಂದನ ಸ್ಥಿತಿ ಕಂಡಾಗ ಏನು ಹೇಳುವುದಿದೆ ? ಅವನು ಬದುಕಬೇಕೆಂದು ಹಪಹಪಿಸುತ್ತಿರಬಹುದು, ಆದರೆ ಆರೋಗ್ಯ ಸಹಕರಿಸುತ್ತಿಲ್ಲ. ಗಲ್ಲನ್ನು ತಪ್ಪಿಸಿಕೊಳ್ಳಲು ಸುಪ್ರೀಂಕೋರ್ಟ್‌ಗೆ ಮೊರೆ ಹೋದ. ಕೋರ್ಟ್ ತೂಗಿ-ಅಳೆದು ಶಿಕ್ಷೆಯನ್ನು ಕಡಿಮೆಗೊಳಿಸಿದೆ. ಈಗಾಗಲೇ ಜೀವಾವಧಿ (೧೪ ವರ್ಷ) ಶಿಕ್ಷೆ ಅನುಭವಿಸಿರುವ ಶ್ರದ್ಧಾನಂದ ಮತ್ತೆ ಶಿಕ್ಷೆ ಅನುಭವಿಸಬೇಕು, ಬದುಕು ಇರುವವರೆಗೆ, ಬದುಕಿರುವವರೆಗೆ…

ಈಗ ನಿಜವಾಗಲೂ ನನಗೆ ಅನಿಸುವುದು ಅದೇ, ಮರಣ ದಂಡನೆಯೇ ಚೆನ್ನಿತ್ತೇನೋ. ಕಾರಣವಿಷ್ಟೇ. ಬದುಕುವ ಪ್ರತಿ ಕ್ಷಣವೂ ಸಾವಿಗಾಗಿ ಅಡವಿಡುವುದಿದೆಯಲ್ಲ, ಅದು ಬದುಕಿನ ಅತ್ಯಂತ ದುಸ್ತರ ಅವಸ್ಥೆ. ಸಾಯುವುದಕ್ಕಾಗಿಯೇ ಬದುಕುವುದು ಸಾಧ್ಯವೇ ಇಲ್ಲದ ಮಾತು. ಆದರೆ ಶ್ರದ್ಧಾನಂದ ಸಾಯುವುದಕ್ಕಾಗಿ ಬದುಕುತ್ತಿದ್ದಾನೆ. ಸಾವಿಗೆ ಕಾಯುತ್ತಿದ್ದಾನೆ.
ಈ ಲೇಖನ ತೀರ್ಪಿನ ವ್ಯಾಖ್ಯಾನವೂ ಅಲ್ಲ, ವಿಶ್ಲೇಷಣೆಯೂ ಅಲ್ಲ. ನನ್ನೊಳಗೆ ಮೂಡಿಬಂದ ಆಲೋಚನೆಗಳ ಅನಾವರಣವಷ್ಟೇ.