ಮತ್ತೆ ಒಂದು ಚಿತ್ರದ ಬಗ್ಗೆ ಹೇಳಬೇಕೆಂದಿದ್ದೆ. ಬೇಡ ಎನಿಸಿ ಪಾತ್ರದ ಬಗ್ಗೆ ಹೇಳುತ್ತಿದ್ದೇನೆ. ನನ್ನೊಳಗೆ ಕಾಡಿದ ಪಾತ್ರ ಹಲವಿವೆ. ಆದರೆ ನನ್ನೊಳಗೆ ಅಚ್ಚೊತ್ತಿದ್ದದ್ದು ಕೆಲವೇ ಕೆಲವು. ಅದರಲ್ಲೂ “ದೇವರ ಮಕ್ಕಳು’ ಚಿತ್ರದಲ್ಲಿ ಭಿಕ್ಷೆಯ ತಟ್ಟೆ ಹಿಡಿದು ಬರುವ ಪುಟ್ಟ ಹುಡುಗನ ಪಾತ್ರ ಇಂದಿಗೂ ನನ್ನನ್ನು ಬಿಟ್ಟಿಲ್ಲ. ಅದು ಏಕೋ ನನಗೂ ಗೊತ್ತಿಲ್ಲ. ರಸ್ತೆಯಲ್ಲಿ ನಡೆಯುವಾಗಲೆಲ್ಲಾ ಬಿಂಬಗಳಂತೆ ಕಾಡುತ್ತಾನೆ. ಸತ್ಯವಾಗಲೂ ಆ ಪಾತ್ರ ನಿರ್ವಹಿಸಿದ ಹುಡುಗನಾಗಲೀ, ಅವನ ವಿವರವಾಗಲೀ ತಿಳಿದುಕೊಂಡೂ ಇಲ್ಲ.

ಇತ್ತೀಚೆಗೆ ಗೆಳೆಯ ಪ್ರವೀಣನ ಜತೆಗೆ ಡಿವಿಡಿ ಅಂಗಡಿಗೆ ಹೋದಾಗ ಅಲ್ಲಿ “ದೇವರ ಮಕ್ಕಳು’ ವಿಸಿಡಿ ಸಿಕ್ಕಿತು. ಕೊಂಡು ತಂದು ಮತ್ತೆ ನೋಡಿದೆ. ಆ ಚಿತ್ರವಿಡೀ ನೋಡಿದ ಮೇಲೂ ಕಾಡಿದ್ದು ಆ ಸನ್ನಿವೇಶ ಮತ್ತು ಆ ಹುಡುಗ. ಸರಿಯಾಗಿ ನೆನಪಿಲ್ಲ. ನಾಲ್ಕನೇ ಕ್ಲಾಸು. ಮನೆಯಲ್ಲಿ ಫಿಲ್ಮ್ ನೋಡಲು ಬಿಡುತ್ತಿರಲಿಲ್ಲ. ಕನ್ನಡ ಫಿಲ್ಮ್ ನೋಡಬೇಕೆಂದರೆ ದೆಹಲಿಯ ದೂರದರ್ಶನದವರು ಸರದಿಯ ಮೇಲೆ ನಾಲ್ಕು ತಿಂಗಳಿಗೊಮ್ಮೆ ಹಾಕುವುದನ್ನೇ ಕಾಯಬೇಕು. ಅದರಲ್ಲೂ ನಮ್ಮ ಮನೆಯಲ್ಲಿ ಟಿ. ವಿ. ಇರಲಿಲ್ಲ. ನಮ್ಮ ಕೇರಿಯ ಕೊನೇ ಮನೆಗೆ ಹೋಗಬೇಕೆಂದರೆ ದೊಡ್ಡಮ್ಮನ ಪರ್ಮಿಷನ್ ಬೇಕಿತ್ತು. ಅವಳು ಕೊಡುತ್ತಿದ್ದಳು, ಆಮೇಲೆ ಅಪ್ಪನಲ್ಲಿ “ಬರೀ ಟಿ. ವಿ. ನೋಡುತ್ತಾನೆ’ ಎನ್ನುತ್ತಿದ್ದಳು. ಅದೇನೇ ಇರಲಿ, ಹಾಕಿದ ಚಿತ್ರಗಳನ್ನೇ ಮತ್ತೆ ಹಾಕುತ್ತಿದ್ದಾಗಲೂ ಬೋರ್ ಆಗುತ್ತಿರಲಿಲ್ಲ. ನನ್ನ ನೆನಪಿನಂತೆ “ಋಷ್ಯಶೃಂಗ’ ಚಿತ್ರ ನಾಲ್ಕು ಸಾರಿ ಬಂದಿರಬೇಕು.

ಗಣಪತಿ ಹಬ್ಬದ ಸಂಭ್ರಮ. ಈ ಹಬ್ಬ ಬಂತೆಂದರೆ ನಮಗೆ ಸಿನಿಮಾ ಭೋಜನ. ಕನಿಷ್ಠ ಎರಡು ಸಿನಿಮಾ ಗ್ಯಾರಂಟಿ. ಅದರಲ್ಲೂ ರಾಜ್‌ಕುಮಾರದ್ದೇ ಹೆಚ್ಚು. ರಾತ್ರಿ ೧೦ ರ ಮೇಲೆ ರಸ್ತೆಗೇ ಅಡ್ಡಲಾಗಿ ಸ್ಕ್ರೀನ್ ಕಟ್ಟಿ, ಸಿನಿಮಾ ತೋರಿಸುತ್ತಿದ್ದರು. ನಾವೆಲ್ಲಾ ಮನೆಯಿಂದ ರಗ್ಗು ತಂದು ಹೊದ್ದುಕೊಂಡು ರಸ್ತೆಯಲ್ಲೇ ಕುಳಿತು ಸಿನಿಮಾ ನೋಡುತ್ತಿದ್ದೆವು. ಮುಗಿಯುವಾಗ ಬೆಳಗಿನ ಜಾವ ಎರಡು ಗಂಟೆ. ಯಕ್ಷಗಾನ ಪ್ರಸಂಗ (ಆಟ) ನೋಡಿಕೊಂಡು ಮಧ್ಯೆ ಒಂದು ಚಹಾ ಕುಡಿಯಲು ಹೋಗುವಾಗಿನ ಮನಸ್ಥಿತಿಯೇ ನಮ್ಮದಾಗಿರುತ್ತಿತ್ತು. ಆದರೆ ಚಹಾ ಕೊಡಿಸುವವರಿಲ್ಲ ಎನ್ನಿ.

ಸರಿ, “ದೇವರ ಮಕ್ಕಳು’ ಚಿತ್ರ ಶುರುವಾಯಿತು. ಕಣ್ಣಿಗೆ ನಿದ್ದೆ ಹತ್ತುವ ಕಾಲವಷ್ಟೇ ಅದು. ಕಷ್ಟಪಟ್ಟು ತಡೆದುಕೊಂಡು ನೋಡುತ್ತಿದ್ದೆ. ಅಷ್ಟರಲ್ಲಿ ಬಂದದ್ದು ಆ ಹಾಡು ಮತ್ತು ಸನ್ನಿವೇಶ. “ದೇವರ ಮಕ್ಕಳು ನಾವೆಲ್ಲಾ…ತಿರುಕ..ಧನಿಕ ಬೇರಿಲ್ಲ..ಓ ಅಯ್ಯಾ.. ಅಮ್ಮಯ್ಯ..ಧರ್ಮವೇ ತಾಯಿ ತಂದೆ, ಕಾಸೊಂದ ನೀಡು ಶಿವನೇ…ನಿನ್ನಂತ ದಾತರೇ…’ ಹೀಗೆ ಪದ್ಯ ಸಾಗುತ್ತದೆ. ನಿಮ್ಮಂತ ದಾತರಾದವರೇ ಇಲ್ಲವೆಂದರೆ ನಾವು ಹೋಗುವುದಾದರೂ ಎಲ್ಲಿಗೆ ಎಂದು ಕೇಳುವ ಆ ಹುಡುಗನ ದೀನದನಿ ನನ್ನ ಕಣ್ಣಲ್ಲಿ ಹನಿ ತರಿಸಿತು. ಆಗಿನ ನೆನಪು ಅಚ್ಚೊತ್ತಿದಂತಿದೆ. ಆ ಪಾತ್ರದಲ್ಲಿ ನಾನು ಇದ್ದಂತಾಗಿ “ದೇವರೇ, ಇಂಥ ಸ್ಥಿತಿ ಕೊಡಬೇಡಪ್ಪಾ’ ಎಂದು ಕೇಳಿಕೊಂಡಿದ್ದೆ.

ಅಂದಿನಿಂದ ಇಂದಿನವರೆಗೂ ಎಲ್ಲೇ ಆಗಲೀ, ಚಿಕ್ಕ ಮಕ್ಕಳು ಭಿಕ್ಷೆ ಬೇಡಲು ಬಂದಾಗಲೆಲ್ಲಾ ಆ ದೃಶ್ಯ ಕಣ್ಣೆದುರು ನಿಲ್ಲುತ್ತದೆ. ಆ ದೊಡ್ಡ ಸ್ಕ್ರೀನ್, ಅದರಲ್ಲಿ ಆ ಹಾಡು, ಆ ಹುಡುಗ ಎಲ್ಲದರ “ನೆಗೆಟಿವ್’ ಬಿಚ್ಚಿಕೊಳ್ಳತೊಡಗುತ್ತವೆ. “ನಾವು ಮಕ್ಕಳಿಗೆ ಒಮ್ಮೆ ಭಿಕ್ಷೆ ಹಾಕಿದರೆ ಅದೇ ಅವರಿಗೆ ಅಭ್ಯಾಸ ಆಗುತ್ತದೆ’ ಎಂಬ ಬೌದ್ಧಿಕ ವಾದವೂ ನನ್ನ ಮುಂದೆ ಮಂಕಾಗಿ ತೋರಿ ಕೈಯಲ್ಲಿದ್ದದ್ದನ್ನು ಕೊಡುತ್ತೇನೆ. ಒಮ್ಮೊಮ್ಮೆ ಆ ವಾದ ಸರಿಯೆಂದೆನಿಸಿ ದುಡ್ಡು ಹಾಕದೇ “ಹೋಗು…ಓದು’ ಎಂದು ಹೇಳಿದ್ದೂ ಇದೆ. ಆದರೆ ಅವನ ದೀನದನಿ, ನಿರೀಕ್ಷೆಯ ಕಣ್ಣು-ಮನಸ್ಸು ಎಲ್ಲವೂ ನನ್ನ ನೆನಪಿನ ಅಧ್ಯಾಯವನ್ನು ಒದ್ದೆ ಮಾಡುತ್ತಲೇ ಇರುತ್ತವೆ. ಒದ್ದೆಯಾದ ನೆನಪುಗಳನ್ನು ಜತನದಿಂದ ಕಾಪಾಡುವ ಎಚ್ಚರವನ್ನೂ ಹೇಳುತ್ತವೆ.

ನನ್ನೊಳಗಿನ ಅರಿವನ್ನು ತೋರಿಸುವ ಪುಟ್ಟದೊಂದು ಮೋಂಬತ್ತಿಯಂತೆ ಬೆಳಗುತ್ತಿರುತ್ತದೆ ಆ ಹಾಡು. “ದೇವರು ಮಕ್ಕಳು ನಾವೆಲ್ಲಾ..’