ಹೆಸರು ನಂಜಮ್ಮ. ಸುಮಾರು ಎಂಬತ್ತರ ಪ್ರಾಯ. ಸುಕ್ಕು ಗಟ್ಟಿದ ಮುಖ. ಒಳಗೆ ಹೆಪ್ಪುಗಟ್ಟಿದ ದುಃಖ. ಅದರ ಮಧ್ಯೆಯೂ ತೆಳ್ಳಗೆ ಬೆಳ್ಳಿಗೆರೆಯ ಹಾಗೆ ತೇಲಿ ಬರುವ ಪುಟ್ಟದೊಂದು ನಗೆ. ಅದು ಮುಖದ ಅಂದವನ್ನೇ ಬದಲಿಸುವಷ್ಟು ಸಾಮರ್ಥ್ಯವುಳ್ಳದ್ದು.

ಕೆ.ಆರ್. ಮಾರುಕಟ್ಟೆಯ ಒಳಗೆ ಪ್ರವೇಶಿಸುವಾಗಲೇ ಅವಳು ಎಲ್ಲರನ್ನೂ ಎದುರುಗೊಳ್ಳುತ್ತಾಳೆ. ತನ್ನೆದುರಿಗಿದ್ದ ಸಂಪಿಗೆ ರಾಶಿಯನ್ನು ಕಾಣುತ್ತಲೇ ಜೀವನ ಸವೆಸುತ್ತಾಳೆ. ಕೆಂಡಸಂಪಿಗೆಯಂತೆ ಎದುರಿಗೆ ಬಂದ ಗಿರಾಕಿಯ ಕಂಡು ನಗುತ್ತಾಳೆ. ಐದು ರೂ. ಗೆ ಏಳರಿಂದ ಎಂಟು, ಹತ್ತು ರೂ. ಗೆ ಈ ಲೆಕ್ಕಕ್ಕಿಂತ ಇನ್ನೂ ಕೊಂಚ ಹೆಚ್ಚು. ಇದು ಅವಳ ಗಣಿತ.

ಸಂಪಿಗೆಯನ್ನೇ ನಂಬಿಕೊಂಡು ಬದುಕುತ್ತಿರುವುದು ಇಂದು-ನಿನ್ನೆಯಲ್ಲ. ಸುಮಾರು ನಲ್ವತ್ತು ವರ್ಷಗಳಿಂದ. ಹೋದವರ ಬಳಿಯೆಲ್ಲಾ ತನ್ನ “ಕಂಪಿ’ನ ಕಥೆ ಹೇಳಿಕೊಳ್ಳುವುದಿಲ್ಲ. ಅವಳಿಗೆ ಮಗಳಿದ್ದಾಳೆ, ಮಗನೂ ಇದ್ದಾನೆ. ಮೊಮ್ಮಕ್ಕಳೂ ಕಣ್ಣ ತುಂಬಿಕೊಂಡಿವೆ. ಅಜ್ಜಿ ತನ್ನ ಉದುರದ ಕೂದಲಿನ ತುರುಬು ಕಟ್ಟಿಕೊಂಡು ಬೆನ್ನು ಸೆಟೆಸಿಕೊಂಡು ಕುಳಿತಿರುತ್ತಾಳೆ. ಸಂಪಿಗೆಯ ಕೆಂಪೇ-ಕಂಪೇ ನಿಮ್ಮನ್ನು ಅಲ್ಲಿಗೆ ಕರೆದೊಯ್ಯಬೇಕು. ಅಂದ ಹಾಗೆ ಇವಳು ಬಿಟ್ಟರೆ ಸಂಪಿಗೆ ಮಾರುವವರು ಅಲ್ಲಿಲ್ಲ.

ಅವಳ ಎದುರಿರುವ ಕೆಂಪಗಿನ ರಾಶಿಯನ್ನೇ ನೋಡಬೇಕು ; ಖುಷಿಯಾಗುತ್ತದೆ. ಅವಳೊಳಗಿನ ದುಃಖವನ್ನು ಕೇಳಿ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ. ಇನ್ನೇನು ಕೆಳಗೆ ಹನಿಯಾಗಿ ಉದುರೀತು ಎನ್ನುವಾಗ ಆಕೆಯೇ “ಹೇಳಿ ಸ್ವಾಮಿ, ಎಷ್ಟು ರೂಪಾಯಿಗೆ ಹೂ. ಬೇಕು ?’ ಎಂದು ಕೇಳುತ್ತಾಳೆ. ಅಷ್ಟರಲ್ಲಿ ಕಣ್ಣಂಚಿನಲ್ಲಿ ಬಂದ ಹನಿ ಆಚೆ ಹೋಗಿ ನಿಲ್ಲುತ್ತದೆ.
“ನಮ್ಮ ಯಜಮಾನರ ಕಾಲದಿಂದಲೂ ಇದೇ ಹೂ ಮಾರೋದು. ಹಿಂದೆ ಮೈಸೂರಿನಲ್ಲೆಲ್ಲಾ ಸಂಪಿಗೆ ಹೂಗಳ ರಾಶಿಯೇ ಹೆಚ್ಚು. ಈಗ ಕಡಿಮೆಯಾಗ್ತಿದೆ. ಈಗೀಗ ಹೂ ಸಿಗೋದೂ ಕಡಿಮೆಯೇ. ಎಲ್ಲರೂ ಪರಿಮಳದ ಕಾರ್ಖಾನೆಗೆ ಒಯ್ಯುತ್ತಾರೆ. ಹೀಗೆ ಮಾರೋಕ್ಕೆ ಕೊಡೋಲ್ಲ’ ಎಂದಳು ಆ ಅಮ್ಮ.

ಅಲ್ಲಮ್ಮಾ, ಹೀಗೆ ಒಂದೇ ಹೂ ಮಾರಿ ಬೋರ್ ಬರೋದಿಲ್ವೇ? ಎಂದು ಕೇಳಿದೆ. “ಅದೇನೋ ಅಪ್ಪಾ, ನಮಗೆ ಬದುಕೋಕೆ ಗೊತ್ತಿರೋದು ಒಂದೇ ದಾರಿ. ಸಂಪಿಗೆ ಹೂ ಮಾರೋದು. ಬೇರೆ ಹೂವು ಯಾಕೋ ಹಿಡಿಸಾಕಿಲ್ಲ’ ಎಂದಳು ಅಜ್ಜಿ ನಗು ನಗುತ್ತಲೇ. ಮಕ್ಕಳು-ಮೊಮ್ಮಕ್ಕಳು-ಸಂಸಾರದ ಕಥೆ ಕೇಳಿದೆ. “ಮಗಳಿದ್ದಾಳೆ. ಅವಳೂ ಹೂ ಮಾರ್‍ತಾಳೆ. ಅದರಲ್ಲೂ ಸಂಪಿಗೆ ಹೂಗಳನ್ನೇ’ ಎಂದಳು. ನಾನೂ ಈ ಹೂವಿನ ಮೋಹಕ್ಕೆ ಒಳಗಾಗಿದ್ದಕ್ಕೂ ಒಂದು ನೆವವಿದೆ.

ಭದ್ರಾವತಿಯಲ್ಲಿ ಓದುತ್ತಿರುವಾಗ ಗಾಂಧಿ ಪಾರ್ಕ್‌ನಲ್ಲಿ ಬರೀ ಸಂಪಿಗೆ ಮರಗಳೇ. ಶಾಲೆ ಬಿಟ್ಟ ಕೂಡಲೇ ಪಾರ್ಕ್‌ನ್ನು ಹೊಕ್ಕುತ್ತಿದ್ದ ನಾವು ಹತ್ತುತ್ತಿದ್ದುದು ಸಂಪಿಗೆ ಮರಗಳನ್ನು. ಒಂದೊಂದಾಗಿ ಮೊಗ್ಗನ್ನೇ ಕೊಯ್ದು ಜೇಬಿಗಿಳಿಸುತ್ತಿದ್ದೆವು. ಎಷ್ಟೋ ಬಾರಿ ರಸ್ತೇಲಿ ಹೋಗುತ್ತಿದ್ದ ದಾರಿಹೋಕರೆ ಈ ಮರದ ಮಾಲೀಕರಾಗಿ ಬಿಡುತ್ತಿದ್ದರು. “ಇಳೀರಲೇ…’ ಎಂದು ಗದರಿಸುತ್ತಿದ್ದರು. ನಾವು ಓಡಿ ಹೋಗುತ್ತಿದ್ದರೂ, ಮತ್ತೆ ಕೊಂಚ ಸಮಯದ ನಂತರ ಹತ್ತುತ್ತಿದ್ದುದು ಮರವನ್ನೇ.

ಅದರ ಎಸಳನ್ನು ಪುಸ್ತಕದಲ್ಲಿಟ್ಟುಕೊಂಡು ನಾಲ್ಕೈದು ದಿನ ಬಿಟ್ಟು ಕೆಂಪಗಾದದ್ದನ್ನು ಕಾಣುವ ತವಕ ನಮಗೆ. ಅಕ್ಕನಿಗೂ ತಂದು ಕೊಡುತ್ತಿದ್ದೆ ಮೊಗ್ಗುಗಳನ್ನು. ಒಮ್ಮೆಯಂತೂ ನನ್ನ ಮಾಸ್ಟರ್ ನೋಡಿ ಕ್ಲಾಸ್‌ನಲ್ಲಿ “ಕ್ಲಾಸ್’ ತೆಗೆದುಕೊಂಡಿದ್ದರು.
ಹೀಗೆ ನಂಜಮ್ಮ ಆ ಎಲ್ಲ ನೆನಪನ್ನೂ ನನ್ನ ಮುಂದೆ ತಂದು ಸುರಿದಳು. ಅಂದಿನಿಂದ ವಾರಕ್ಕೆ ಮೂರು ಬಾರಿ ಮಾರುಕಟ್ಟೆಗೆ ಹೋದಾಗ ಅವಳ ಮುಂದೆ ನಿಲ್ಲುತ್ತೇನೆ. ಪರಿಮಳ ನನ್ನನ್ನು ಆವರಿಸುತ್ತದೆ. ಆಕೆ ಆಯಾಚಿತವಾಗಿ ಐದು ರೂ. ಗಳಿಗೆ ಹೂವನ್ನು ಕಟ್ಟಿ ಕೊಡುತ್ತಾಳೆ.

ನಾನು ಅದರೊಂದಿಗೆ ಹೊರಡುತ್ತೇನೆ. ಆ ಹೂವಿನ ಪರಿಮಳ ನನ್ನನ್ನೇ ಹಿಂಬಾಲಿಸುತ್ತದೆ. ಜತೆಗೆ ಆ ಸಂಪಿಗೆಯ ಪುಟ್ಟ ಸಂಸಾರದ ದುಃಖ, ಶ್ರಮ, ಬದುಕಲೇಬೇಕೆಂಬ ಜೀವನಪ್ರೀತಿ, ಅದಮ್ಯ ಉತ್ಸಾಹ ಸಹ.