ಅವಳು ಹಿಡಿದ
ಛತ್ರಿಯ
ರಂಧ್ರಗಳಲ್ಲಿ
ತೂರಿ ಬರುತ್ತಿದ್ದ
ಕಾಮನಬಿಲ್ಲು
ನೆಲದ ಮೇಲೆ
ಹರಡಿಕೊಳ್ಳುತ್ತಿತ್ತು
ಬಣ್ಣವಿರಲಿಲ್ಲ
***
ಚಿಕ್ಕದೊಂದು ಪತ್ರದಲ್ಲಿ
ನನ್ನ ಹೆಸರು ಬರೆದು
ಕೆಳಗೆ ನಿನ್ನ ಪ್ರೀತಿಯ
ಎಂದು ಮೊಹರು ಒತ್ತಿ
ಎಲ್ಲೋ ಕಳೆದು ಹೋದ ಹೊತ್ತು

ಆಲಿಕಲ್ಲು, ಕರಗಿ ನೀರಾಗಲಿ
ಮತ್ತೆ ಮಳೆ ಬರಲಿ
****
ಕಣಿವೆಯಲ್ಲಿ
ನಡೆಯುತ್ತಿದ್ದೆ
ಗಾಢಾಂಧ ಕತ್ತಲು

ನನ್ನೊಳಗೂ ಇಲ್ಲದಂಥ
ದಿವ್ಯ ಮೌನ
ನಾನು ಹುಡುಕುತ್ತಿದ್ದುದು
ಸಿಕ್ಕಿತು ಎಂದು ತುಂಬಿಕೊಳ್ಳಲು
ಬೊಗಸೆ ಹಿಡಿದೆ
ಸಿಕ್ಕಿದ ಸಂಭ್ರಮದಲ್ಲಿ

ಬೆರಳುಗಳ ಮಧ್ಯೆ
ನುಸುಳಿದ್ದು ತಿಳಿಯಲಿಲ್ಲ

ಅಷ್ಟರವರೆಗೂ ಸುಮ್ಮನಿದ್ದ ಕತ್ತಲು
ಕೇಳಿತು, ಏನು ಪಡೆದೆ ?
ಒಂದಿಷ್ಟು ಮೌನ ಎಂದೆ
ಎಲ್ಲಿಂದ ಎಂದು ಮತ್ತೆ ಕೇಳಿತು
ನಿನ್ನಿಂದ ಅಂದೆ,
ಅದಕ್ಕೆ ಅದು
ಉತ್ತರ ಸರಿಪಡಿಸಿತು
ಶೂನ್ಯದಿಂದ !
***