ಅಂಥದೊಂದು ಪುಳಕ ಅನುಭವಿಸಲು ಆರು ವರ್ಷದಿಂದ ಕಾಯುತ್ತಿದ್ದೆ !
ಹಿರಿಯ ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗುತ್ತಾರೆಂಬ ಸುದ್ದಿ ಹರಡಿದಾಗ ಆದ ಖುಷಿ ಅಷ್ಟಿಷ್ಟಲ್ಲ. ದೇವರಲ್ಲಿ ಬೇಡಿಕೊಂಡಿದ್ದೂ ಅದನ್ನೇ. ಕಾರಣವಿಷ್ಟೇ. ಇದುವರೆಗೆ ಬಹುಪಾಲು ವಯೋವೃದ್ಧ ರಾಜಕೀಯ ನಿರಾಶ್ರಿತರು ಈ ಪಟ್ಟ ಕಟ್ಟಿಕೊಂಡು ಮೆರೆದರೇನೋ ನಿಜ. ಆದರೆ  ರಾಷ್ಟ್ರಕ್ಕೆ ಆದ ಲಾಭ ಅಷ್ಟಕಷ್ಟೇ. ಒಂದು ಸಂದರ್ಭದಲ್ಲಂತೂ ರಾಷ್ಟ್ರಪತಿ ಹುದ್ದೆ ಎಂದರೆ “ರಬ್ಬರ್ ಸ್ಟ್ಯಾಂಪ್’ ಎನ್ನುವಂತಾಗಿತ್ತು.

ಈ ಹುದ್ದೆಗೆ ಆಯ್ಕೆಯಾದವರು ಶೈಕ್ಷಣಿಕವಾಗಿ ಉತ್ತಮವಾಗಿರಬಹುದು. ಆದರೆ ಭಾರತದ ಬಗ್ಗೆ ಕನಸು ಕಟ್ಟಿಕೊಂಡಿರಲಿಲ್ಲ. ತನ್ನ ಕನಸನ್ನು ಉಳಿದವರಿಗೂ ಹಂಚಿರಲಿಲ್ಲ. ಇಷ್ಟೆಲ್ಲಾ ಇರಲಿ, ನೀವೂ ಕನಸು ಕಾಣಿ, ಅದರಲ್ಲೂ ದೊಡ್ಡ ಕನಸು ಕಾಣಿ ಎಂದು ಕೂಗಿ ಹೇಳಿರಲಿಲ್ಲ.

“ಹೇಗಿದ್ದರೂ ಕನಸು ಕಾಣುತ್ತೀರಿ. ಹಾಗಾದ್ರೆ ಛೋಟಾ ಕನಸೇಕೆ ? ದೊಡ್ಡದೇ ಕಾಣಿರಲ್ಲ?’ ಎಂದು ಎಲ್ಲರಲ್ಲೂ ಕನಸು ಕಾಣುವುದನ್ನು ಬಿತ್ತಿದವರು ಅಬ್ದುಲ್ ಕಲಾಂ. ಅದುವರೆಗಿನ ರಾಷ್ಟ್ರಪತಿಗಳಲ್ಲಿ ಬಹುತೇಕರು ಅವಧಿ ಮುಗಿಸಿದರೆ ಸಾಕು ಎಂದುಕೊಂಡು ಭವನವನ್ನು ಹೊಕ್ಕವರು. ಅಂದರೆ ಅಂಥದೊಂದು ಜನರಲ್ಲಿ ಉತ್ಸಾಹ ಬಿತ್ತುವ, ಗುರಿ ನಿಗದಿಪಡಿಸಿ ಬನ್ನಿ, ಸಾಗೋಣ ಎಂದು ಕರೆದೊಯ್ಯುವ ಸಾಹಸವನ್ನು ಮಾಡುವುದಿರಲಿ, ಯೋಚಿಸಿಯೂ ಇರಲಿಲ್ಲ.

ಕಲಾಂ ಈ ವಿಷಯಕ್ಕೇ ಇಷ್ಟವಾಗುತ್ತಾರೆ. ತಮ್ಮ ಅವಧಿಯಲ್ಲಿ ಹೋದಲೆಲ್ಲಾ ಜನರೊಳಗೆ “ನೈತಿಕ ಶಕ್ತಿ’ ಯನ್ನು ವೃದ್ಧಿಸಲು ಪಣ ತೊಟ್ಟವರು. ಅದನ್ನು ಈಗಲೂ ನಡೆಸುತ್ತಲೇ ಇದ್ದಾರೆ. ಎಲ್ಲ ಕಾರ್‍ಯಕ್ರಮದಲ್ಲೂ ಅದಕ್ಕೆ ಸಂಬಂಧಿಸಿದಂತೆ ಯುವಶಕ್ತಿಗೆ ಪ್ರಮಾಣ ವಚನ ಬೋಧಿಸುತ್ತಾ, ನೈತಿಕ ನೆಲೆಯೊಳಗೆ ಬಂಧಿಸುತ್ತಿದ್ದಾರೆ ಎನ್ನುವುದು ಅಕ್ಷರಶಃ ಸತ್ಯ. ಹೀಗೆ ಹೇಳಿದ ಮಾತ್ರಕ್ಕೆ ಎಲ್ಲರೂ ಒಳ್ಳೆಯವರಾಗುತ್ತಾರೆಯೇ ? ಎಂದು ಕೇಳಬೇಡಿ. ಆದರೆ ನಮ್ಮ ಮನಸ್ಸಿನೊಳಗೆ ಪರಿವರ್ತನೆಗೆ ಅಡಿಗಲ್ಲು ಹಾಕುವುದಂತೂ ನಿಜ.

ಬೆಂಗಳೂರಿನಲ್ಲಿದ್ದಾಗ ಐಟಿ ಮೇಳವನ್ನು ಉದ್ಘಾಟಿಸಲು ಕಲಾಂ ಬಂದಿದ್ದರು. ಅದೇ ಮೊದಲು, ಅಷ್ಟೊಂದು ಹತ್ತಿರದಿಂದ ಅವರನ್ನು ನೋಡಿದ್ದು. ಕಂಠೀರವ ಕ್ರೀಡಾಂಗಣದಲ್ಲಿ ಮಕ್ಕಳೆಲ್ಲಾ ತುಂಬಿದ್ದರು. ಸಾಮಾನ್ಯವಾಗಿ ಮಾಧ್ಯಮದವರಿಗೆ ವೇದಿಕೆಯ ಸುತ್ತಮುತ್ತ ಆಸನದ ವ್ಯವಸ್ಥೆ ಮಾಡಿರುತ್ತಾರೆ. ಆದರೆ ಈ ಕಾರ್‍ಯಕ್ರಮದಲ್ಲಿ ಮೈಲಿಯಷ್ಟು ದೂರ. ಕಲಾಂ ಅವರನ್ನು ಹತ್ತಿರದಿಂದ ನೋಡಬಹುದು, ಸಿಕ್ಕರೆ ಮಾತನಾಡಿಸಬಹುದು, ಕೈ ಕುಲುಕಬಹುದು-ಹೀಗೆಲ್ಲಾ ಅಂದುಕೊಂಡ ಬಂದ ನನಗೆ ಆಸನದ ವ್ಯವಸ್ಥೆ ಕಂಡೇ ಸಿಟ್ಟು ಬಂದಿತ್ತು. ಕಲಾಂ ಬಂದರು, ಕೈ ಬೀಸಿದರು, ಪ್ರಮಾಣ ವಚನ ಬೋಧಿಸಿದರು. ಮಕ್ಕಳು ಇದ್ದಲ್ಲೆಲ್ಲಾ ನಡೆದು, ಕೆನ್ನೆ ಚಿವುಟಿ ಮಾತನಾಡಿಸಿದರು. ಆಗ, ನನ್ನೊಳಗೆ ಆ ಮಕ್ಕಳನ್ನು ಕಂಡು ಹೊಟ್ಟೆ ಉರಿದದ್ದು ಸತ್ಯ. “ನಾನು ಅವರಲ್ಲಿ ಒಬ್ಬರಾಗಿದ್ದರೆ’ ಎಂದೆನಿಸಿತ್ತು.

ಒಂದು ಮಾತು. ಇವರಷ್ಟು ಇಷ್ಟವಾದವರು ಬೇರೊಬ್ಬರಿಲ್ಲ. ತುಂಬಿದ ಕೊಡಕ್ಕೆ ತಕ್ಕಂತೆ ವಿನಯ, ಕಾಳಜಿ, ಶ್ರದ್ಧೆ, ತಾಳ್ಮೆ. ಒಳ್ಳೆಯ ಮನುಷ್ಯನಲ್ಲಿರಬೇಕಾದ ಎಲ್ಲ ಗುಣಗಳೂ ಅವರಲ್ಲಿದೆ. ನಂತರ ಮತ್ತೆರಡು ಬಾರಿ ಬೆಂಗಳೂರಿನಲ್ಲೇ ಅವರ ಕಾರ್‍ಯಕ್ರಮದ ವರದಿ ಬರೆಯಲು ಅವಕಾಶ ಸಿಕ್ಕಿದರೂ ಅವರನ್ನು “ತಲುಪುವ’ ಅವಕಾಶ ಸಿಕ್ಕಿರಲಿಲ್ಲ. ಅಷ್ಟರಲ್ಲಿ ಅವರ ಅವಧಿ ಮುಗಿಯಿತು. ಮತ್ತೊಂದು ಅವಧಿಗೆ ಮುಂದುವರಿಯದೆಂದು ಆಸೆ ಇಟ್ಟುಕೊಂಡಿದ್ದೆ. ರಾಜಕೀಯ ಲೆಕ್ಕಾಚಾರಗಳು ಅದಕ್ಕೆ ಅವಕಾಶ ಕೊಡಲಿಲ್ಲ. ಮನಸ್ಸಿಗೆ ಆ ದಿನ ಬಹಳ ಬೇಸರವಾಗಿತ್ತು.

ತಾವಿದ್ದ ಅವಧಿಯಲ್ಲಿ ಅವರು ಏನು ಮಾಡಿದರು ಎಂದು ಕೇಳಬೇಡಿ. ಕ್ಷುಲ್ಲಕ ರಾಜಕೀಯದಲ್ಲಿ ತಲೆ ಹಾಕಲಿಲ್ಲ, ದುಡ್ಡು ಮಾಡಲಿಲ್ಲ. ಅತ್ಯಂತ ಶುಭ್ರವಾಗಿ ಬದುಕಿ, ಯಾರೂ ಬೆರಳೆತ್ತಿ ತೋರಿಸಿದಂತೆ ಭವನದಿಂದ ಹೊರ ಬಂದುಬಿಟ್ಟರು. ಆದರೆ ಆ ಐದೂ ವರ್ಷ ಓಡಾಡಿದಲ್ಲೆಲ್ಲಾ ಕನಸುಗಾರರನ್ನು ಬೆಳೆಸಿದರು, ಯುವಶಕ್ತಿಯನ್ನು ಸಂಘಟಿಸಲು ಸನ್ನದ್ಧರಾದರು. ನಮ್ಮ ಮುಂದೆ ಗುರಿಯೊಂದು ಇಟ್ಟು (ಭಾರತ ೨೦೨೦) ನಾವು ಮುಟ್ಟುತ್ತೇವೆ ಎಂಬ ಆತ್ಮವಿಶ್ವಾಸವನ್ನು ತುಂಬಿದರು. ಒಬ್ಬ ರಾಷ್ಟ್ರಪತಿಯಾದವರು ಮಾಡಬೇಕಾದದ್ದು ಅದನ್ನೇ ಎಂಬುದು ನನ್ನ ಅಭಿಮತ.

ಹೀಗೆ ನನ್ನೊಳಗೂ ಕನಸು ತುಂಬಿದ ಕನಸುಗಾರ ಮೊನ್ನೆ (ಜೂ.೨೭) ಮೈಸೂರಿನ ಜೆಎಸ್‌ಎಸ್ ಕಾಲೇಜಿನ ಕಾರ್‍ಯಕ್ರಮಕ್ಕೆ ಬಂದರು. ಅವರನ್ನು ಕಾಣಲೆಂದು ಅಲ್ಲಿಗೆ ಹೋಗಿದ್ದೆ. ಆದರೆ ಅವರ ಭೇಟಿಯಾಗುತ್ತೆ ಎಂದು ನಿರೀಕ್ಷಿಸಿರಲಿಲ್ಲ. ಹತ್ತಿರದಿಂದ ಕಂಡೆ. ಅದೇ ಉತ್ಸಾಹ, ಹುಮ್ಮಸ್ಸು, ಖುಷಿ-ತಮಾಷೆಯೆಂದರೆ ರಾಷ್ಟ್ರಪತಿಯಾದಾಗ ನೋಡಲೆಷ್ಟು ಮಂದಿ ಬರುತ್ತಿದ್ದರೋ ಅಷ್ಟೇ ಮಂದಿ ಅಂದೂ ನೆರೆದಿದ್ದರು. ಮಕ್ಕಳದ್ದು ಸಂತೆಯೇ ಸರಿ.

ಒಂದು ಒಳ್ಳೆಯ ಭಾಷಣ ಮಾಡಿ, ಪ್ರಮಾಣ ವಚನ ಬೋಧಿಸಿದರು. ನಾನೂ ಸ್ವೀಕರಿಸಿದೆ. “ಮೊದಲು ಒಳ್ಳೆ ಮನುಷ್ಯರಾಗಿ. ನಂತರ ಒಳ್ಳೆ ವೈದ್ಯ, ಎಂಜಿನಿಯರ್, ಉದ್ಯಮಿ ಎಲ್ಲವೂ ಆಗಬಹುದು ಎಂದರು. ಆ ಮಾತು ಸತ್ಯ. ಅಂದು ಬಿಡುಗಡೆಯಾಗಿದ್ದ ಅವರ ಉಪನ್ಯಾಸದ “ಹಾರ್ಟ್ ಟು ಹಾರ್ಟ್’ ಪುಸ್ತಕ ಖರೀದಿಸಿ ಹೊರಟೆ.

ನಂತರ ಜೆಎಸ್‌ಎಸ್ ವೈದ್ಯ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದವಿತ್ತು. ಅದೂ ಮುಗಿಯಿತು. ಪಕ್ಕದಲ್ಲೇ ಕಲಾಂ ಅವರೊಂದಿಗೆ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನನಗೆ ಅಲ್ಲಿ ಅವಕಾಶ ಕೇಳಲು ಹಿಂಜರಿಕೆ. ಅಷ್ಟರಲ್ಲಿ ಸಂಯೋಜಕರೊಬ್ಬರು ನಮ್ಮನ್ನು ಗುರುತಿಸಿ (ನಮ್ಮೊಂದಿಗೆ ಗೆಳೆಯರೊಬ್ಬರಿದ್ದರು)ಒಳಗೆ ಕರೆದರು. ಮನಸ್ಸು ಉಲ್ಲಸಿತಗೊಂಡಿತು. ತಡ ಮಾಡಲಿಲ್ಲ. ಒಳ ಹೊಕ್ಕೆ. ಕೆಲವೇ ಗಜಗಳ ದೂರದಲ್ಲಿ ಅವರೂ ಊಟ ಮಾಡುತ್ತಿದ್ದರು, ನಾವೂ ಸಹ. ನಮ್ಮದು ಮುಗಿಯುವಷ್ಟರಲ್ಲಿ ಅವರು ಪಟಪಟನೆ ಹೊರಟೇ ಬಿಟ್ಟರು. ನಾನು ಭೇಟಿ ಮಾಡುವ ಅವಕಾಶ ಕಳೆದುಕೊಂಡೆ ಎಂದುಕೊಂಡೆ. ತಕ್ಷಣವೇ ನಾನೂ ಕೈ ತೊಳೆದು ಹೋಗುವಾಗ ಅವರು ಹತ್ತಿರದ ಕೋಣೆಯಲ್ಲಿ ವಿಶ್ರಮಿಸುತ್ತಿದ್ದರು. ಹಾಗಾಗಿ ನಮ್ಮ ಸಂಪಾದಕರಾದ ಶ್ರೀ ವಿಶ್ವೇಶ್ವರ್ ಭಟ್ ಅವರೂ ಹೊರಗೆ ನಿಂತಿದ್ದರು.

ನಾನು ಅಲ್ಲಿಗೆ ಹೋದವನೇ, “ಸಾರ್, ಅವರ ಆಟೋಗ್ರಾಫ್ ಬೇಕಿತ್ತು ಎಂದೆ’. ಹೋಗ್ರೀ, ಪಡೆಯಿರಿ. ಹಾಕ್ತಾರೆ’ ಎಂದರು ಸಂಪಾದಕರು. “ನೀವು ಇನ್‌ಫ್ಲುಯೆನ್ಸ್ ಮಾಡಿ’ ಎಂದೆ. ಅದಕ್ಕೆ ಅವರು, “ಅದರ ಅವಕಾಶವಿಲ್ಲ’ ಎಂದರು. ಕಲಾಂ ಅವರು ಹೊರ ಬರುವ ಸೂಚನೆ ಕಂಡಿತು. ರಕ್ಷಣಾ ದಳದವರು ಒಳಗೆ ಬಿಡದೇ ತಕರಾರು ತೆಗೆಯುತ್ತಿದ್ದ. ಜತೆಗೆ ಹೋಗಿ ಎಂದು ಅಕ್ಷರಶಃ ಒಳಗೆ ತಳ್ಳಿದರು. ಹೋಗಿ ನಿಂತಿದ್ದು ಅವರೆದುರಿಗೇ ಪುಸ್ತಕ ಹಿಡಿದು. ನಗುತ್ತಾ, ನನ್ನ ಪೆನ್ನು ಕೇಳಿದರು, ಕೊಟ್ಟೆ. ಚೆಂದದೊಂದು ಆಟೋಗ್ರಾಫ್ ಮಾಡಿ ನಕ್ಕರು. ಕೈ ಕೊಟ್ಟೆ, ಕುಲುಕಿ ಹೊರ ನಡೆದರು. ನನಗೆ ಧನ್ಯನಾದೆ ಎನಿಸಿತು. ಬೇರೆ ಪತ್ರಿಕೆಯ ಸಹೋದ್ಯೋಗಿಗಳು ಕಲಾಂ ಅವರನ್ನು ಪ್ರಶ್ನೆ ಕೇಳಲು ದುಂಬಾಲು ಬಿದ್ದಿದ್ದರು. ಆಗ ನಾನು ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ, ಪತ್ರಕರ್ತನಾಗಿರಲಿಲ್ಲ. ಆ ಬಗ್ಗೆಯೂ ನಂತರ ಆಲೋಚಿಸಿದೆ, ನಾನು ಮಾಡಿದ್ದು ತಪ್ಪೇ ? ಪತ್ರಕರ್ತನಾಗಿ ಉತ್ತರಗಳನ್ನು ಬರೆದುಕೊಳ್ಳಬೇಕಿತ್ತೇ?-ಹೀಗೆಲ್ಲಾ ಯೋಚಿಸಿದೆ. ತಪ್ಪಿರಬಹುದು.
ಅಂದೇ ಅವರ ಇ ಮೇಲ್ ಗೆ ಪ್ರಶ್ನೆ ಕಳುಹಿಸಿದೆ. ೨೪ ಗಂಟೆಯೊಳಗೆ ಉತ್ತರ ಬಂತು. “ನೀನು ಪತ್ರಕರ್ತನಾಗಿದ್ದೀಯ. ಗ್ರಾಮೀಣ ಭಾರತದ ಯಶಸ್ಸನ್ನೇ ನಿನ್ನ ಯಶಸ್ಸೆಂದು ಸಂಭ್ರಮಿಸು, ಹರ್ಷ ಪಡು’ ಎಂದು ಉತ್ತರಿಸಿದ್ದರು. ಮತ್ತೊಂದು ಕನಸು ಕೊಟ್ಟ ಆ ಕನಸುಗಾರನ ಕೈ ಕುಲುಕಿದ ಸಂಭ್ರಮ ಅಂದು ನನ್ನನ್ನು ಆವರಿಸಿತ್ತು. ಈ ಗಳಿಗೆಗೆ ಆರು ವರ್ಷದಿಂದ ಕಾದಿದ್ದೆ !

ನೀವೂ ಅವರ ವೆಬ್ ಸೈಟ್ ಗೆ ಭೇಟಿ ಕೊಡಿ, ಅಲ್ಲಿ ಕನಸುಗಳೆಲ್ಲಾ ಹರಡಿಕೊಂಡಿವೆ, ನಿಮಗೆ ಬೇಕಾದದ್ದನ್ನು ಹೆಕ್ಕಿಕೊಳ್ಳಿ.