ಹಲವು

ಅಪ್ಪ…ಮನುಷ್ಯನಾಗುತ್ತಿದ್ದಾನೆ !

ಒಮ್ಮೊಮ್ಮೆ ನಮ್ಮೊಳಗೂ ರಾಕ್ಷಸ ರಾವಣನಂತೆ ಧೀಂ..ಧೀಂ… ಎಂದು ಕುಣಿದು ಬಿಡುತ್ತಾನೆ.
ನಾವು ಎಷ್ಟೇ ತಾಳ್ಮೆಯ ಮೂರ್ತಿಯಾಗಿರಲಿ,  ಅದೆಲ್ಲಾ ಆ ಸಂದರ್ಭದಲ್ಲಿ ಲೆಕ್ಕಕ್ಕೆ ಬಾರದು. ಬೀಸಿ ಬರುವ ಬಿರುಗಾಳಿಗೆ ಮರಗಳು ತೂಗಿದಂತೆ ನಾವು ಬಾಗಿ ಬಿಡುತ್ತೇವೆ. ಯಕ್ಷಗಾನದ ಪ್ರಸಂಗದಲ್ಲಿ ಮಧ್ಯರಾತ್ರಿಯಷ್ಟೊತ್ತಿಗೆ ಬಂದು ನಿದ್ದೆಯ ನೆಲೆಗೆ ಒರಗುತ್ತಿರುವವರನ್ನೆಲ್ಲಾ ಬಡಿದೆಬ್ಬಿಸುವ ಹಾಗೆ. ಆದರೆ, ಈ ರಾಕ್ಷಸ ಒಂದು ಕ್ಷಣದಲ್ಲಿ ನಮ್ಮನ್ನೇ ಮಣಿಸಿ ಬಿಟ್ಟಿರುತ್ತಾನೆ. ನಮ್ಮ ಕೈ ಮೀರಿ ನಡೆಯುವ ಪ್ರಸಂಗಕ್ಕೆ ಸಾಕ್ಷಿಯಾಗಿ ಬಿಡುತ್ತಾನೆ.
ಈ ಪ್ರಸಂಗ ನನ್ನ ಮನಸ್ಸನ್ನು ಆಗಾಗ್ಗೆ ಕಲಕುತ್ತಲೇ ಇರುತ್ತದೆ. ಕಹಿ ನೆನಪಿನ ಮಾದರಿಯಲ್ಲಿ ಉಳಿದು ಹೋಗಿರುವ ಇವು ತಿಳಿ ನೀರನ್ನು ಕಲಕಿದಾಗ ಮೇಲೆ ಬರುವ ಬಗ್ಗಡದಂತೆ ಬರುತ್ತಲೇ ಇರುತ್ತದೆ. ಒಂದಂತೂ ನಿಜ. ಇಂಥದೊಂದು ಪ್ರಸಂಗದಿಂದ ನಾನು ಮನುಷ್ಯನಾಗಲು ಕಲಿತಿದ್ದೇನೆ. ಒಮ್ಮೊಮ್ಮೆ ಬರುವ ರಾಕ್ಷಸ ಅವತಾರದ ಪ್ರದರ್ಶನದ ಸಮಯವನ್ನು ಕಡಿಮೆಗೊಳಿಸುತ್ತಿದ್ದೇನೆ.
ಒಮ್ಮೆ ನನ್ನ ಮಗರಾಯ ಹೀಗೇ ಆಡುತ್ತಿದ್ದ. ಅವನದ್ದು ವಿಚಿತ್ರ ಹಠ. ಒಂದೆರಡು ಕ್ಷಣದಲ್ಲೇ ಅವನ ಮೇಲೆ ಯಾವ್ಯಾವುದೋ ಅವತಾರಗಳು ಬಂದು ಬಿಡುತ್ತವೆ. ಅಂದು ನನ್ನ ಪತ್ನಿಯೂ ಮನೆಯಲ್ಲಿರಲಿಲ್ಲ. ಬೆಳಗ್ಗೆಯಿಂದ ಅವನ ಯೋಗಕ್ಷೇಮ ನೋಡಿಕೊಳ್ಳುವ ಹೊಣೆಗಾರಿಕೆ ನನ್ನ ಮೇಲೆಯೇ ಇತ್ತು.
ಅವನದ್ದು ಒಂದು ಅಭ್ಯಾಸವಿದೆ. ಹಾಸಿಗೆಯಿಂದ ಮೇಲೆಳುವಾಗಲೇ ಅಂದಿನ ತಿಂಡಿಯ ವರದಿ ನೀಡಬೇಕು. ಏಳುತೇಳುತ್ತಲೇ “ಅಪ್ಪಾ…ಏನ್ ತಿಂಡಿ ?’ ಎಂದು ಕೇಳಿಕೊಂಡು ಬರುತ್ತಾನೆ. ನೀವು ಏನೇ ಹೇಳಿದರೂ ಅದಕ್ಕೆ ಉಲ್ಟಾವೇ. “ಉಪ್ಪಿಟ್ಟು..’ ಎಂದರೆ “ನನಗೆ ಇವತ್ತು ಉಪ್ಪಿಟ್ಟು ಬೇಡ, ರೊಟ್ಟಿ ಬೇಕು’ ಎಂದು ಪಟ್ಟು ಹಿಡಿಯುತ್ತಾನೆ. ಹಾಗೆಂದು ಮರು ದಿನ ರೊಟ್ಟಿ ಮಾಡಿದರೆ “ದೋಸೆ’ ಬೇಕಿತ್ತು ಎಂದು ಪಟ್ಟಿ ಒಪ್ಪಿಸುತ್ತಾನೆ. ಬರೀ ಪಟ್ಟಿ ಒಪ್ಪಿಸಿ ಸುಮ್ಮನಾಗುವುದಿಲ್ಲ. ರಾಗ ತೆಗೆಯುತ್ತಾನೆ. ಅವನನ್ನು ಸಮಾಧಾನಿಸುವವರೆಗೂ ಬೇರೆ ಏನೂ ಬೇಡ. 
ಅದೂ, ಇದೂ ಹೇಳಿ ಸಮಾಧಾನ ಪಡಿಸುವಷ್ಟರಲ್ಲಿ ಸೋತು ಹೋಗುವುದು ನಿಜ. ಅವತ್ತೂ ಹಾಗೆಯೇ ಆಗಿತ್ತು. ನಾನು ದೋಸೆ ಮಾಡಿದ್ದೆ. ಆತ ಚಪಾತಿ ಬೇಕೆಂದು ಪಟ್ಟು ಹಿಡಿದ. ಬಡಪೆಟ್ಟಿಗೆ ಒಪ್ಪಲಿಲ್ಲ. ನಾನು ಬಡಿಗೆ ಕೊಡಬೇಕೇ ಎಂದು ಗದರಿದೆ. ಸ್ವಲ್ಪ ಸ್ವರ ಬದಲಾಯಿತು. “ಅಪ್ಪ…ಸರಿ, ನಾಳೆ ಚಪಾತಿ ಮಾಡಬೇಕು’ ಎಂದ. ಷರತ್ತಿಗೆ ಒಪ್ಪಿಕೊಂಡೆ.
ಮುಗಿಯಿತು. ಸ್ನಾನ ಮಾಡುವುದೆಂದರೆ ತಕರಾರು. ಎಲ್ಲ ಕೆಲಸ ಮುಗಿದು ಮಧ್ಯಾಹ್ನ ೧೨ ರಷ್ಟೊತ್ತಿಗೆ ಸ್ನಾನಕ್ಕೆ ಕರೆದೆ. ಹಠ ಶುರು ಮಾಡಿದ. “ಇವತ್ತು ಶೀತ ಇದೆ. ಸ್ನಾನ ಬೇಡ’ ಎಂದು ಡಾಕ್ಟರ್ ಮಾದರಿಯಲ್ಲಿ ಹೇಳಿದ. ಅವನು ಸ್ನಾನ ಮಾಡಬಾರದೆಂದು ನಿರ್ಧರಿಸಿದ್ದನೆಂದು ತೋರುತ್ತೆ. ಏನೇ ಮಾಡಿದರೂ ಕೇಳಲಿಲ್ಲ. ಕೊನೆಗೆ ಕೊನೆ ಅಸ್ತ್ರವೆಂಬಂತೆ ನಾನು ಕೋಲು ತೆಗೆದುಕೊಂಡು ಕುರ್ಚಿಗೆ ಬಡಿದೆ. ಅವನ ಜೋರಾಗಿ ಅಳಲಾರಂಭಿಸಿದ. ನನ್ನ ತಾಳ್ಮೆ ಮೀರಿತು. ಬೆನ್ನಿಗೊಂದು ಪೆಟ್ಟು ಕೊಟ್ಟು ಬಿಟ್ಟೆ.
ನನ್ನ ಕೈ ಉರಿಯಂತೆ. ಅವನೂ ಹೇಳುತ್ತಿರುತ್ತಾನೆ, ನನ್ನ ಪತ್ನಿ ಸಹ. ಅವನ ಅಳು ಒಮ್ಮೆಲೆ ಬಂದ್ ಆಯಿತು. ಸೀದಾ ಬಚ್ಚಲಿಗೆ ಹೋದ. ನನ್ನೊಳಗಿನ ರಾಕ್ಷಸ ಕುಣಿದದ್ದು ನಿಜ. ಆ ಕುಣಿತದಲ್ಲಿ ಗೆದ್ದ ಅಮಲು ಬೇರೆ ಇತ್ತು. ಸುಮ್ಮನೆ ಸ್ನಾನ ಮಾಡುವಾಗ ಅವನ ಮುಖ ಕಳೆಗುಂದಿತ್ತು. ಹೆಚ್ಚು ನಾನೂ ಮಾತನಾಡಲಿಲ್ಲ.
ನಾನು ಆಫೀಸಿಗೆ ಬಂದೆ. ಸಂಜೆಯಾಗುವಷ್ಟರಲ್ಲಿ ಅವನಮ್ಮ ಬಂದಳು. ಅವನು ಮಧ್ಯಾಹ್ನ ಮಲಗಿದವ ಎದ್ದಿರಲಿಲ್ಲ. ಸ್ವಲ್ಪ ಮೈ ಬಿಸಿಯೂ ಆಗಿತ್ತು. ಏನೇನೋ ಕನವರಿಸುತ್ತಿದ್ದನಂತೆ. ನನ್ನಮ್ಮ ನಡೆದ ಕಥೆಯನ್ನೆಲ್ಲಾ ಪತ್ನಿಗೆ ವಿವರಿಸಿದ್ದರು. ನಾನೂ ರಾತ್ರಿ ಮನೆಗೆ ಹೋದಾಗ ನನ್ನ ಮಗನ ಹಣೆಯ ಮೇಲೆ ತಣ್ಣೀರಿನ ಬಟ್ಟೆ ಇಟ್ಟು ಪತ್ನಿ ಆರೈಕೆ ಮಾಡುತ್ತಿದ್ದಳು. ನನ್ನ ಸಿಟ್ಟು ಆರಿತ್ತು. ಏನಾಯ್ತು ಮಗನಿಗೆ ಎಂದು ಕೇಳಿದೆ. “ನಿಮ್ಮ ಪೆಟ್ಟಿಗೆ ಹೆದರಿದ್ದಾನೆ. ಅದಕ್ಕೇ ಜ್ವರ ಬಂದಿರಬೇಕು’ ಎಂದಳು.
ಮನಸ್ಸಿನೊಳಗೇಕೋ ಬೇಸರವಾಯಿತು. ಮಗನಿಗೆ ನಿದ್ದೆ ಬಂದಿರಲಿಲ್ಲ. “ಏನಪ್ಪಿ, ನಾನು ಹೊಡೆದದ್ದಕ್ಕೆ ಹೆದರುಕೊಂಡೆಯಾ?’ ಎಂದು ಕೇಳಿದೆ. “ಹೌದು, ಅಪ್ಪಾ…ನೀನು ಮೆಲ್ಲಗೆ ಹೊಡೆಯಪ್ಪ’ ಎಂದು ನನ್ನ ಹೊಡೆತಕ್ಕೆ ಒಪ್ಪಿಗೆ ಮೊಹರು ಒತ್ತುವಂತೆ ಹೇಳಿದ. ನನ್ನ ಮಗ ಹೊಡೆತವನ್ನು ತಪ್ಪೆಂದು ಹೇಳಲಿಲ್ಲ, ಹೊಡೆತದ ಪ್ರಮಾಣ ಕಡಿಮೆ ಇರಲಿ ಎಂದಿದ್ದ.
ನನ್ನ ಕಣ್ಣಲ್ಲಿ ಹನಿಗಳು ಹರಿದು ಹೋದವು. ಮಾತು ಹೊರಡಲಿಲ್ಲ. ಮಗನನ್ನು ತಬ್ಬಿಕೊಂಡೆ. “ಏನಪ್ಪಿ…ನೀನು ನಾನು ಹೇಳಿದಂಗೆ ಕೇಳೋಲ್ಲ, ಹಠ ಮಾಡ್ತೀಯಾ. ಸಿಟ್ಟು ಬರುತ್ತೆ’ ಎಂದೆ. ಅವನು ಮಾತನಾಡಲಿಲ್ಲ, ಸುಮ್ಮನೆ ತಲೆಯಾಡಿಸಿದ. ನನಗೆ ಅವನು ಹೇಳಿದ ಮಾತಿಗಿಂತಲೂ ಅದರಲ್ಲಿನ ದಯನೀಯ ನೆಲೆ ನನ್ನ ಮನಸ್ಸನ್ನು ತೀವ್ರವಾಗಿ ಕಾಡಿತು. ಅಂದಿನಿಂದ ನನ್ನೊಳಗಿನ ರಾಕ್ಷಸನಿಗೆ “ಕರುಣಾ’ ರಸವನ್ನು ಕಲಿಸುತ್ತಿದ್ದೇನೆ, ಯಶಸ್ವಿಯಾಗುವೆನೋ ಕಾದು ನೋಡಬೇಕು. ಅಪ್ಪ….ಮನುಷ್ಯನಾಗುತ್ತಿದ್ದಾನೆ !

Advertisements

4 thoughts on “ಅಪ್ಪ…ಮನುಷ್ಯನಾಗುತ್ತಿದ್ದಾನೆ !

  1. ನಾವಡರೇ,

    ನಿಮ್ಮ ಇತ್ತೀಚಿನ ಅಪ್ಪ-ಮಗನ ಭಾವನೆಗಳ ಬಿಂಬಿಸುವ ಎಲ್ಲ ಪೋಸ್ಟ್ ಗಳನ್ನು ಓದಿದೆ. ಎಲ್ಲವೂ ಭಾವನಾತ್ಮಕವಾಗಿವೆ.ನಿಮ್ಮ ಮಗನು ಹಳ್ಳಿಯ ವಾತಾವರಣದಲ್ಲಿ ಓದುತ್ತಿರುವ ವಿಷಯ ತಿಳಿದು ಸಂತೋಷವಾಯಿತು. ಋತುಪರ್ಣನಿಗೆ ಒಳ್ಳೆಯದಾಗಲಿ.

    ಋತುಪರ್ಣ- ಚಂದದ ಹೆಸರು.

  2. ನಾವುಡರೇ… ಕೆಲವು ದಿನಗಳ ಮೇಲೆ ಮತ್ತೆ ನಿಮ್ಮ ಬ್ಲಾಗಿಗೆ ಬಂದೆ…. ಒಂದಿಷ್ಟು ಒಳ್ಳೆ ಬರಹ ಓದೋ ಅವಕಾಶ ಸಿಗ್ತು. ಅಪ್ಪ…ಮನುಷ್ಯನಾಗುತ್ತಿರುವುದು ಸಂತೋಷದ ವಿಷಯವೇ!….
    -ಜಿತೇಂದ್ರ

  3. ಒಂದುಪಾಯ ಮಾಡಿ ನಾವಡರೇ, ಇನ್ನೆನಾದರೂ ನಿಮಗೆ ಮಗನ ಉಪಚಾರ ಮಾಡೋ ಪರಿಸ್ಥಿತಿ ಬಂದ್ರೆ, ತಿಂಡಿ ಏನ್ ಬೇಕು ಅಂತ ಅವನನ್ನೇ ಕೇಳಿಬಿಡಿ!:) ನೀವು ಮಾಡಿಟ್ಟ ತಿಂಡಿಗೆ ಹೊಂದಿಕೆಯಾದರೂ ಆದೀತು!, ತಮಾಷೆ ಬದಿಗಿರಲಿ,ಒಳ್ಳೆಯ ಬರಹ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s