ಬದುಕಿನ ಪಟದಲ್ಲಿ ಯಾರೆಲ್ಲಾ ಮುಖ್ಯ ? ಬದುಕು ಕೊಟ್ಟವನು-ಬೆಳೆಸಿದವನು-ಬದುಕು ರೂಪಿಸಿದವನು-ಬದುಕಿಗೆ ಹಾರೈಸಿದವನು, ಸುಂದರ ಬಾಳಿಗೆ ಸಹಾಯವಾದವನು, ತಪ್ಪು ನಡೆಯ ತಿದ್ದಿ ಮತ್ತಷ್ಟು ದೂರ ಸಾಗುವಿಕೆಗೆ ಅಣಿಗೊಳಿಸಿದವನು, ಕಷ್ಟವೋ-ಸುಖವೋ, ಅಷ್ಟು ದೂರದವರೆಗೆ ಜತೆಗೆ ಸಾಗಿ ಬಂದವರು, ಇವರೆಲ್ಲರ ಮಧ್ಯೆ ಪಥದ ಪಯಣವನ್ನು ವಿಮರ್ಶೆ ಮಾಡಿ ಇಷ್ಟು ಸರಿ, ಇಷ್ಟು ತಪ್ಪು ಎಂದು ಮಾರ್ಕ್ಸ್ ಹಾಕಿದವರು ? ಇವರೆಲ್ಲಾ….

ಊರಿನ ಉಪ್ಪರಿಗೆಯ ಮನೆಯಲ್ಲಿ ಹುಟ್ಟಿದ ರುಕ್ಕು ಇವತ್ತು ಮೂವರು ಮೊಮ್ಮಕ್ಕಳಿಗೆ ಅಜ್ಜಿ. ರಜೆಗೆ ಬಂದ ಮೊಮ್ಮಕ್ಕಳಿಗೆಲ್ಲಾ ಕಥೆಯ ಉಣಬಡಿಸುವಾಗ ಹೀಗೇ ಆಲೋಚಿಸುತ್ತಾಳೆ. ಮಕ್ಕಳ ಬಳಿ ಇದೆಂಥಾ ಪ್ರಶ್ನೆ ? ಎಂದು ಕಒಳ್ಳುವ ಅರವತ್ತಾದ ರುಕ್ಕು ತನ್ನ ಅರಳು ಮರಳಿಗೆ ಪಿಚ್ಚೆನ್ನುತ್ತಾಳೆ. ಪಕ್ಕದ ಕೇರಿ ಭಟ್ಟರ ಎದುರು ಕೂತು ತರ್ಕ ಮಂಡಿಸುವುದಕ್ಕೆ ಸ್ವಲ್ಪ ಹಿಂಜರಿಕೆ. ಇನ್ನು..

ಊರ ದೇವಸ್ಥಾನದಲ್ಲಿ ದಾಸರು ಬದುಕಿನ ಬಗ್ಗೆ ವಿಚಾರ ಮಂಡಿಸುವಾಗ ಈಕೆಗೆ ಪುರಸೊತ್ತಿಲ್ಲ. ಕೊಟ್ಟಿಗೆಯ ದನ ಬಿಚ್ಚಿ ಸಗಣಿ ಎತ್ತಿ ಹಾಕುವಷ್ಟರಲ್ಲಿ ಸೂರ್ಯ ದೊಡ್ಡವನಾಗಿರುತ್ತಾನೆ. ತಿಂಡಿ ತಿಂದು ತೋಟದ ಹಾದಿ ಹಿಡಿದರೆ ಬರುವಾಗ ಸೂರ್‍ಯನಿಗೆ ತುಂಬು ಯೌವ್ವನ. ಪುನ ಃ ಗದ್ದೆ-ತಫಟ. ಸಂಜೆಗೆ ದನಗಳೆಲ್ಲಾ ಕೊಟ್ಟಿಗೆ ಬಾಗಿಲಲ್ಲಿ ಧರಣಿ. ಅವುಗಳ ಷೋಡಶೋಪಾಚಾರ ಎನ್ನುವಷ್ಟರಲ್ಲಿ ಪೇಟೆಯಿಂದ ವಾಪಸ್ಸಾಗುವ ಮಗನ ಕುಶಲೋಪರಿ.

ಹುಟ್ಟಿದ ಹೊತ್ತಲ್ಲಿ ಅಮ್ಮ ಮುಖ್ಯವಾದಳು, ನಂತರ ಅಪ್ಪ ಮುಖ್ಯವಾದ. ಬೆಳೆಯುತ್ತಿದ್ದಾಗ ಜತೆಗಿದ್ದ ಅಣ್ಣ, ಅಕ್ಕ ಸಹ್ಯವಾದರು. ನಾಲ್ಕನೇ ಇಯತ್ತೆವರೆಗೆ ಮೂರು ಕಿ. ಮೀ. ಗುಡ್ಡೆ ಹತ್ತಿ ಇಳಿದು ಶಾಲೆಗೆ ಹೋಗುವಾಗ ಸೀತೂ ಭಟ್ಟರ ಗದ್ದೆಯ ಎಳೆ ಅಲಸಂದೆ ಕೋಡು ಇಷ್ಟವಾಗಿತ್ತು. ಎಷ್ಟು ಬಾರಿ ಓದಿದರೂ ತಲೆಗೆ ಹೋಗದ ಪಾಠ ಮತ್ತೆ ಹೇಳುವ ಮೇಸ್ಟ್ರು, ಒಬ್ಬಳೇ ನಡೆಯುವ ಒಂಟಿತನ ಹಂಚಿಕೊಳ್ಳುವ ನೆರೆ ಮನೆಯ ಭಟ್ಟರ ಮಾಣಿ ವೆಂಕೂ…

ಶಾಲೆ ಬಿಟ್ಟಾಗ ಮನೆಯ ಹೊಣೆ ಕೊಟ್ಟ ಅಪ್ಪ, ಯಾವುದೋ ಚಟಕ್ಕೆ ಎಲ್ಲವೂ ಮಾರಿದಾಗ ಆಶ್ರಯ ಕೊಟ್ಟ ಭಾಗೀರಥಮ್ಮ, ಬದುಕೇ ಬೇಡ ಎಂದ ಅಮ್ಮನಿಗೆ ಪುನಃ ಬದುಕು ಕಟ್ಟುವ ಹುರುಪು ತುಂಬಿದ ಗಂಗೊಳ್ಳಿಯ ಶಾರದೆ, ಮದುವೆಯಾಗಿ ಸ್ವಲ್ಪ ದೂರ ಬಂದ ಪತಿ, ಈಗ ಮಕ್ಕಳು, ಮೊಮ್ಮಕ್ಕಳು…ಇವರೆಲ್ಲರ ಮಧ್ಯೆ ನಡೆಯ ಸರಿ, ತಪ್ಪು ತಾಳೆ ಹಾಕುವ ಪ್ರವೃತ್ತಿ ರೂಪಿಸಿದ ಪ್ರಕೃತಿ. ಒಬ್ಬರೇ…ಇಬ್ಬರೇ…
ಎಂಬತ್ತು ತುಂಬಿದ ರುಕ್ಕುಗೆ ಉತ್ತರದ ಗಂಗೆ ಕರೆ ತಂದು “ಭಗೀರಥೆ’ ಯಾಗುವ ಬಯಕೆ. ಅಲ್ಲಿಗೆ ಯಾರು ಮುಖ್ಯರು ?