ನಿಜವಾದ ಸ್ನೇಹಿತರು
ಬಹಳ ವರ್ಷಗಳ ಹಿಂದೆ ಚೀನಾದಲ್ಲಿ ಇಬ್ಬರು ಪರಮಾಪ್ತ ಗೆಳೆಯರಿದ್ದರು. ನಮ್ಮ ಜಿಗ್ರಿ ದೋಸ್ತ್‌ಗಳಿದ್ದ ಹಾಗೆ. ಒಮ್ಮ ಅತ್ಯಂತ ಸುಂದರವಾಗಿ, ಮಧುರವಾಗಿ ತಂತಿವಾದ್ಯವನ್ನು ನುಡಿಸುತ್ತಿದ್ದ. ಮತ್ತೊಬ್ಬ ಅಷ್ಟೇ ಸಹೃದಯತೆಯಿಂದ ಕೇಳುತ್ತಿದ್ದ. ಒಬ್ಬ ಪರ್ವತದ ಬಗ್ಗೆ ನುಡಿಸಿ ಹಾಡಿದಾಗ, ಮತ್ತ್ತೊಬ್ಬ “ನಿಜವಾಗಲೂ ಪರ್ವತದ ಸೌಂದರ್ಯವನ್ನೇ ಅನುಭವಿಸುವಂತಿದೆ’ ಎಂದ.
ಹಾಗೆಯೇ ಮತ್ತೊಬ್ಬ ಜಲಧಾರೆ ಬಗ್ಗೆ ನುಡಿಸಿದ. ಅದನ್ನು ಕೇಳಿದ ಮೊದಲಿಗ “ಇಲ್ಲೇ ಜಲಪಾತ ಹರಿದಂತಾಗಿದೆ’ ಎಂದು ನುಡಿದ.
ಸಹೃದಯಿ ಕೇಳುಗ (ಗೆಳೆಯ) ಕಾಯಿಲೆ ಬಂದು ಸತ್ತು ಹೋದ. ಇದು ಮತ್ತೊಬ್ಬ ಗೆಳೆಯನಿಗೆ ಬಹಳ ಬೇಸರ ತಂತು. ತಕ್ಷಣವೇ ತನ್ನ ವಾದ್ಯದ ತಂತಿ ಹರಿದು ಹಾಕಿದ. ಎಂದೂ ನುಡಿಸದಿರಲು ನಿರ್ಧರಿಸಿದ. ಅಂದಿನಿಂದ ಇದು ಪರಮಾಪ್ತ ಸ್ನೇಹಕ್ಕೆ ಸಾಕ್ಷಿಯಾಯಿತು.

ನಾನ್ಹೇಗೆ ತುಂಬಲಿ ?
ನಾನ್‌ಇನ್ ಜಪಾನಿನ ಮಾಸ್ಟರ್‌ನನ್ನು ನೋಡಲು ಒಬ್ಬ ವಿಶ್ವವಿದ್ಯಾಲಯ ಪ್ರೊಫೆಸರ್ ಬಂದ. ಅವನಿಗೆ ಝೆನ್ ಜ್ಞಾನದ ಬಗ್ಗೆ ತಿಳಿದುಕೊಳ್ಳಬೇಕಿತ್ತು. ನಾನ್‌ಇನ್ ಅತಿಥಿಯ ಮುಂದೆ ಲೋಟವಿಟ್ಟು ಟೀ ಸುರಿಯತೊಡಗಿದ. ಲೋಟ ತುಂಬಿ ಟೀ ಹೊರಚೆಲ್ಲಿತು. ಇನ್ನೂ ಸುರಿಯುತ್ತಲೇ ಇದ್ದ. ಸುಮ್ಮನೆ ನೋಡುತ್ತಿದ್ದ ಪ್ರೊಫೆಸರ್ “ಲೋಟ ತುಂಬಿದೆ. ಇನ್ನು ಹಿಡಿಸಲಾರದು’ ಎಂದ. ಇದರಂತೆಯೇ ನೀನೂ ನಿನ್ನದೇ ಸ್ವಂತ ಅಭಿಪ್ರಾಯ-ಅನಿಸಿಕೆಗಳಿಂದ ತುಂಬಿಕೊಂಡಿದ್ದೀ. ನೀನು ಖಾಲಿಯಾಗದೇ ನಾನ್ಹೇಗೆ ಝೆನ್ ತೋರಿಸಲಿ ? ಎಂದು ನಾನ್‌ಇನ್ ಕೇಳಿದ.