ಹೌದು, ನೀವು ಹೇಳಿದಂತೆಯೇ ಆಯಿತು. ಕಣ್ಣು ತುಂಬಿ ಬಂದಿತು. ಹೃದಯ ಭಾರವಾಯಿತು. ಆದರೂ ಹೊರಟು ಬಂದೆ. ನನ್ನ ಮಗ ಋತುಪರ್ಣ ಶಾಲೆಗೆ ಹೋದನೆಂಬ ಸಂಭ್ರಮದ ಹೆಗ್ಗಳಿಕೆಯೆಲ್ಲಾ ಈ ಮಧ್ಯೆ ಮಸುಕು ಮಸುಕಾಗಿ ತೋರಿತು. ಮಕ್ಕಳನ್ನು ಅನಿವಾರ್ಯವಾಗಿ ಶಾಲೆಗೆ ಕಳುಹಿಸಬೇಕಾದ ಸಂಕಷ್ಟ ಸಹಿಸಿಕೊಳ್ಳುವುದೇ ದೊಡ್ಡ ಕಷ್ಟವೆನಿಸಿದ್ದು ಆಗಲೇ.
ಜೂ. ೧೧ ರಂದು ನನ್ನ ಮಗ ಮೊದಲ ದಿನ ಶಾಲೆಗೆ ಹೋದ. ಅವನ ಹಿಂದೆಯೇ ನಾನೂ ಮತ್ತು ನನ್ನ ಮಾವ ಅವನ ಶಾಲೆಯನ್ನು ನೋಡಿ ಬಂದೆವು. ಬಹಳ ಚೆನ್ನಾಗಿದೆ ಶಾಲೆ. ಎಷ್ಟೋ ಬಾರಿ ಇಂದಿನ ಒತ್ತಡದ, ಅಂಕ ಗಳಿಕೆಯಷ್ಟೇ ಮಾನದಂಡವಾಗಿಸಿದ ಶಿಕ್ಷಣದ ಬಗ್ಗೆ ಸಿಟ್ಟು ಬಂದದ್ದಿದೆ. ನಮ್ಮ ಮಕ್ಕಳಲ್ಲಿನ ನೈಜ ಪ್ರತಿಭೆಗೆ ಅವಕಾಶ ನೀಡದೇ ಯಾರೋ ನಿರ್ಧರಿಸಿದ “ಕಾಮನ್’ ಅಂಶಗಳನ್ನೇ ಎಲ್ಲಾ ಮಕ್ಕಳಿಗೂ ತುಂಬಿ ಕಳುಹಿಸುವ ಶಿಕ್ಷಣ ಒಂದು ಹೊರೆ ಎನಿಸಿದ್ದೂ ಇದೆ. ಅಷ್ಟೇ ಅಲ್ಲ. ನಮ್ಮ ಮಕ್ಕಳು ಒಮ್ಮೆ ಶಾಲೆಯ ಮೆಟ್ಟಿಲು ಹತ್ತಿದರೆಂದರೆ “ಕಟುಕರ ಮನೆಗೆ’ ಕಳುಹಿಸಿದಂತೆಯೇ ಎಂದೂ ಅತ್ಯಂತ ಕಟುವಾಗಿ ಅಂದುಕೊಂಡದ್ದಿದೆ.
ಅದಕ್ಕೆ ಕಾರಣ ಹತ್ತು ಹಲವು. ಅವುಗಳನ್ನೆಲ್ಲಾ ವಿವರಿಸುತ್ತಾ ಕುಳಿತರೆ ದೊಡ್ಡ ಪ್ರಬಂಧವಾಗಿ ಬಿಡುತ್ತದೆ. ಆಡುವ ವಯಸ್ಸಿಗೆ ಆಡುವಂತಿಲ್ಲ, ಒಂದು ಸುಂದರ ಮಳೆ ಬಿದ್ದು ಶುಭ್ರವಾದ ಆಗಸದಲ್ಲಿ ಒಂದು ಚೆಂದಾದ ಮಳೆಬಿಲ್ಲು ಮೂಡಿದರೆ ನೋಡಲಿಕ್ಕೆ ಪುರಸೊತ್ತಿಲ್ಲ. ಹೊರಗೆಲ್ಲೋ ಆಕಾಶದಲ್ಲಿ ವಿಮಾನ ಹಾರಿದ ಸದ್ದು ಕೇಳಿ ಪಟ್ಟನೆ ಹೊರಬಂದು ಇಣುಕಿ ನೋಡುವಂತಿಲ್ಲ. ಅಡುಗೆ ಮನೆಯಲ್ಲಿರುವ ಅಮ್ಮ ಒಮ್ಮೆಲೆ ಗದರಿಸುತ್ತಾಳೆ…”ಮತ್ತೆ ಹೊರಗೆ ಹೋದೆಯಾ…ಕಲಿಯೋದು ಯಾವಾಗ?’.
ಹೀಗೆ ಕಲಿಕೆಯಲ್ಲೇ ಕಲಿಯುವುದನ್ನು ಬಿಟ್ಟು ಉಳಿದೆಲ್ಲವನ್ನೂ ಕಲಿಯುವ ರಭಸ ನೋಡಿಯೇ ರೋಸಿ ಹೋದವನು ನಾನು. ಅದಕ್ಕೇ ನನ್ನ ಹೆಂಡತಿಗೇ ಅವನ ಪ್ರವೇಶ ಇತ್ಯಾದಿ ಕೆಲಸವನ್ನು ಮುಗಿಸಿಬಿಡು ಎಂದು ನಾನು ದೂರವಿದ್ದೆ. ವಾಸ್ತವವಾಗಿ ಮೊನ್ನೆ ಊರಿಗೆ ಹೋದಾಗ ಅವನ ಶಾಲೆ ನೋಡಿದ್ದೂ ನನ್ನ ಹೆಂಡತಿಯ ಬಲವಂತದಿಂದಲೇ.
ಊರಲ್ಲಿ ರಾತ್ರಿ ಶುರುವಾದ ಮಳೆ ಬೆಳಗ್ಗೆಯಿರಲಿ, ಮಾರನೆ ದಿನ ಸಂಜೆವರೆಗೂ ಬಿಟ್ಟಿರಲಿಲ್ಲ. ಅದರಲ್ಲೂ ನನ್ನ ಮಗ ಶಾಲೆಗೆ ಕೊಡೆ ಕೊಂಡೊಯ್ಯುವಂತಿಲ್ಲವಂತೆ. ಮೊದಲಿಗೆ ಗಾಬರಿಯಾದದ್ದು ನಿಜ. ಆದರೆ ಈ ಶಾಲೆಯಲ್ಲಿ ಅದೇ ಸಂಪ್ರದಾಯ. ಮಕ್ಕಳನ್ನು ಬಸ್ಸಿನಲ್ಲಿ ಕರೆದೊಯ್ಯುತ್ತಾರೆ. ಅವರಿರುವ (ಮಳೆ ಬರುತ್ತಿದ್ದರೆ) ಶಾಲಾ ಅಂಗಳಕ್ಕೇ ಶಾಲೆಯ ಶಿಕ್ಷಕಿಯರು, ಕೆಲಸಗಾರರು ಕೊಡೆ ಹಿಡಿದು ಮಕ್ಕಳನ್ನು ಕರೆದೊಯುತ್ತಾರಂತೆ. ನಮ್ಮೂರಿನಲ್ಲಿ ಕೊಡೆ ಇಲ್ಲದವರು ಸಂಕದಲ್ಲಿ ಕೊಡೆ ಇರುವವರು ದಾಟಿಸಿದಂತೆಯೇ. ಚೆನ್ನಾಗಿದೆ ಎನಿಸಿತು.
ಅಂದಹಾಗೆ ಶಾಲೆ ಚೆನ್ನಾಗಿದೆ, ನೋಡಲಿಕ್ಕೆ, ಕಲಿಯಲಿಕ್ಕೂ ಸಹ ಎನ್ನಬಹುದು. ಅದನ್ನು ನನ್ನ ಮಗ ದೊಡ್ಡವನಾಗಿ ದೃಢೀಕರಿಸಬೇಕು. ದೊಡ್ಡದಾದ ಊಟದ ಮನೆಯಿದೆ. ಅದನ್ನು ಕಂಡೇ ಅರ್ಧ ಖುಷಿಯಾಯಿತೆನಗೆ. ನಾನು ಮೂಲಭೂತವಾಗಿ ಆಹಾರಪ್ರಿಯ. ಶಾಲೆಗೆ ಹೋಗುವ ಮೊದಲು ಹೆಚ್ಚು ಊಟ ಮಾಡಬೇಡ, ನಿದ್ದೆ ಬರುತ್ತೆ ಎಂದು ನನ್ನ ದೊಡ್ಡಮ್ಮ ಎಚ್ಚರಿಸಿದರೂ ಪ್ರತಿ ಬಾರಿಯೂ ಉಲ್ಲಂಘಿಸುತ್ತಿದ್ದೆ. ಆಗ ನನ್ನ ಪ್ರಕಾರ “ನಿದ್ದೆ ಬಂದರೆ ತಪ್ಪಿಸಬಹುದು’, ಆದರೆ ಸಿಗುವ ಊಟ ತಪ್ಪಿದರೆ ಮತ್ತೆ ಸಿಗುವುದೇ ಎಂಬುದು ನನ್ನ ಲೆಕ್ಕಾಚಾರ.
ಮಾರ್ಬಲ್ ಶಿಲೆಯಿಂದ ಕೊಯ್ದು ಮಾಡಿಸಿದ ಊಟದ ಬೆಂಚುಗಳು (ಡೆಸ್ಕ್‌ಗಳ ಹಾಗೆ) ಮಕ್ಕಳಿಗೆ ಎಟುಕುವ ಹಾಗಿವೆ. ನಿತ್ಯವೂ ಮಧ್ಯಾಹ್ನ ಸೊಗಸಾದ ಊಟ ಹಾಕುತ್ತಾರೆ. ಅದಕ್ಕೆ ಪ್ರತ್ಯೇಕ ವ್ಯವಸ್ಥೆಯಿದೆ. ಸ್ವಚ್ಛತೆಗೆ ಆದ್ಯತೆಯಿದೆ. ನಾನು ಹೋದಾಗ ಹೊಸದಾಗಿ ಈ ವರ್ಷ ಅಡ್ಮಿಷನ್ ಆದ ಮಕ್ಕಳಿಗೆ ಹೊಸ ತಟ್ಟೆಗಳ ಬಂಡಲ್ ಬಂದು ಬಿದ್ದಿತ್ತು. ಅದನ್ನು ಲೆಕ್ಕ ಮಾಡಿ ತೆಗೆದುಕೊಳ್ಳುವುದರಲ್ಲಿ ಶಾಲೆಯ ಸಿಬ್ಬಂದಿಗಳು ಸುಸ್ತಾಗಿದ್ದರು. ಆ ತಟ್ಟೆಯಲ್ಲಿ ನನ್ನ ಮಗನಿಗೂ ಒಂದು ತಟ್ಟೆಯಿದೆ !
ಹೀಗೆ ಊಟದ ಕಥೆ ಮುಗಿದ ಮೇಲೆ ಪ್ರಾಂಶುಪಾಲರ ಬಳಿಗೆ ಬಂದೆ. ಅವರು ಬಹಳ ವಿನಯವಾಗಿ ಎಲ್ಲವನ್ನೂ ವಿವರಿಸುತ್ತಾ ಒಂದು ಕಿವಿಮಾತನ್ನು ಜೋರಾಗಿಯೇ ಹೇಳಿದರೆನ್ನಿ. “ನೋಡಿ, ನಾವು ಈ ಮಕ್ಕಳಿಗೆ ೮ ತಿಂಗಳು ಏನನ್ನೂ ಕಲಿಸುವುದಿಲ್ಲ. ನೀವು ಬೇಸರ ಮಾಡಿಕೊಳ್ಳಬೇಡಿ. ನಂತರ ಏನೂ ಕಲಿಸಿಲ್ಲ ಎಂದು ನಮ್ಮನ್ನು ದೂರಬೇಡಿ’. ವಿಚಿತ್ರ ಹೇಳಿಕೆ ಎನಿಸಿದ್ದು ನಿಜ. ಕಾರಣವೆಂದರೆ, ಈಗ ಶಾಲೆಗೆ ಸೇರಿದ ಮೊದಲ ದಿನವೇ ಇಂಗ್ಲಿಷ್‌ನ ೨೬ ಅಕ್ಷರಗಳನ್ನು ಕಲಿಯಬೇಕು, ವಾಕ್ಯ ರಚನೆ ಸಾಮರ್ಥ್ಯ ಬಂದರೂ ಪರವಾಗಿಲ್ಲ ಎಂದು ಒತ್ತಡ ಹಾಕುವ ದಿನಗಳಿವೆ. ಅಂಥದ್ದರಲ್ಲಿ ಎಂಟು ತಿಂಗಳ ಕಾಲ ಏನೂ ಕಲಿಯುವಂತೆಯೇ ಇಲ್ಲ ಎಂದರೆ ಹೇಗಾಗಬೇಡ.
“ಮತ್ತೆ ಅವರು ಏನು ಮಾಡುವುದು?’ ಎಂದು ಕೇಳಿದೆ. “ಸುಮ್ಮನೆ ಬಂದು ಕುಳಿತುಕೊಳ್ಳುತ್ತಾರೆ. ಹನ್ನೊಂದರ ಸುಮಾರಿಗೆ ಮತ್ತು ನಾಲ್ಕರ ಸುಮಾರಿಗೆ ಹಾಲು, ಬಿಸ್ಕತ್ ಕೊಡುತ್ತೇವೆ. ತಿಂದು ಕುಣಿದಾಡುತ್ತ ಇರುವುದು. ಅವರು ನಮಗೆ ಮೊದಲು ಶಾಲೆಯಲ್ಲಿರುವ ಅಭ್ಯಾಸ ಮಾಡಿಕೊಂಡರೆ ಸಾಕು’ ಎಂದು ಉತ್ತರಿಸಿದವರು ಪ್ರಾಂಶುಪಾಲರು. ಅದೂ ಚೆನ್ನೆಸಿತು.
ಮಕ್ಕಳಿಗೆ ಪಿಕ್ಚರ್, ಸಂಗೀತ ಕೇಳಿಸ್ತೀರಾ ಎಂದದ್ದಕ್ಕೆ “ಆ ಅಭ್ಯಾಸವೂ ನಮಗಿದೆ’ ಎಂದು ಉತ್ತರಿಸಿದ್ದು ಅವರಲ್ಲ ; ಅಲ್ಲಿದ್ದ ಆಡಿಯೋ ಮತ್ತು ವಿಡೀಯೊ ಕೋಣೆ. ಆದರೆ ಈ ಶಾಲೆಯ ಮುಂದೆ ಒಂದಷ್ಟು ಹಸಿರಿದೆ, ಅಪ್ಪಟ ಹಳ್ಳಿಯ ವಾತಾವರಣವೇ ಇದೆ. ಮಳೆಯ ಹನಿಗಳನ್ನು ಕಾಣಲು ಯಾವ ತೊಂದರೆಯೂ ಇಲ್ಲ. ದೊಡ್ಡದಾದ ಪ್ರದೇಶದಲ್ಲಿ ತಲೆ ಎತ್ತಿರುವ ಈ ಶಾಲೆಯ ಬಾಗಿಲಲ್ಲಿ ನಿಂತರೆ ಎದುರಿನ ಪ್ರಕೃತಿ ವೈಭವವನ್ನು ಸವಿಯಬಹುದು. ಅಂದರೆ ಇಲ್ಲಿನ ಮಕ್ಕಳ ಕಣ್ಣು ಒಂದಷ್ಟು ಕಾಲ ತಂಪಾಗಿರಬಹುದು !
ಒಟ್ಟೂ ನನ್ನ ಮಗನ ಶಾಲೆಯನ್ನು ಕಂಡು ವಾಪಸ್ಸಾದೆ. ಸಂಜೆ ೪ ಆಗುವಷ್ಟರಲ್ಲಿ ನನ್ನೊಳಗಿನ ತುಡಿತ ಹೆಚ್ಚುತ್ತಿತ್ತು. ಅವನು ಶಾಲೆಯಿಂದ ಬಸ್ಸಿನಲ್ಲಿ ಬಂದು ಇಳಿಯುವ ಸಂಭ್ರಮ ಹಾಗೂ ಅವನನ್ನು ಬರಮಾಡಿಕೊಳ್ಳಬೇಕೆಂಬ ನನ್ನ ಹಂಬಲ ಅದಕ್ಕೆ ಕಾರಣ. ಉಡುಪಿಗೆ ಹೋದ ನಾನು ಅಲ್ಲಿಂದ ಬಸ್ಸು ಹತ್ತಿದ್ದು ನಾಲ್ಕಕ್ಕೇ. ನನ್ನ ಮಗನ ಶಾಲೆಯ ಬಸ್ಸು ಸಾಲಿಗ್ರಾಮಕ್ಕೆ ತಲುಪುವುದು ೪. ೩೫ ರ ಸುಮಾರಿಗೆ. ಅದನ್ನು ಲೆಕ್ಕ ಹಾಕಿ ಬಸ್ಸು ಹತ್ತಿದರೂ ಪ್ರಯೋಜನವಾಗಲಿಲ್ಲ. ನನ್ನ ಬಸ್ಸು ಸಾಲಿಗ್ರಾಮಕ್ಕೆ ಮುಟ್ಟುವಾಗ ನನ್ನ ಮಗ ಅವನ ಬಸ್ಸಿನಿಂದ ಇಳಿದು ನಡೆದು ಹೋಗುತ್ತಿದ್ದ. ಜತೆಗೆ ಅಜ್ಜ ಇದ್ದರು. ಏನೇನೋ ಹೇಳುತ್ತಿದ್ದ.
ನಿಜ, ಆ ಗಳಿಗೆಯನ್ನು ಕಳೆದುಕೊಂಡೆ. ಆ ಬೇಸರ ನನ್ನನ್ನು ಗಾಢವಾಗಿ ವ್ಯಾಪಿಸಿಕೊಂಡಿದೆ. ಮರು ದಿನ ಮೈಸೂರಿಗೆ ಹೊರಡಲೇಬೇಕಿತ್ತು. ಸಿದ್ಧತೆಯನ್ನೂ ಮಾಡಿಕೊಂಡಿದ್ದೆ. “ನೀನ್ಯಾಕೆ ಹೋಗ್ತಿ ?’ ಎಂದು ಹಠ ಹಿಡಿದರೆ ಬಿಡಿಸಲು ಸಾಲಿಗ್ರಾಮದ ಗುರುನರಸಿಂಹನೇ ಬರಬೇಕು. ಅದಕ್ಕೇ ಆರು ತಿಂಗಳಿಂದ ಕೇಳುತ್ತಿದ್ದ ಸೈಕಲ್‌ನ್ನು, ಒಂದು ಚೆಂದವಾದ ಮಳೆ ಅಂಗಿ (ರೈನ್‌ಕೋಟ್) ನ್ನು ಕೊಂಡು ತಂದೆ. ಆವೆರಡರ ಸಂಭ್ರಮದಲ್ಲಿ ನಾನು ಹೋಗುತ್ತಿದ್ದೇನೆ ಎಂಬ ದುಃಖವನ್ನು ಮರೆಸಬೇಕಿತ್ತು ನನಗೆ. ನೋಡಿ, ನನ್ನ ದುರಾದೃಷ್ಟ. ಅಂದೂ ಮನೆಗೆ ಬಂದದ್ದು ಅವನು ಶಾಲೆಯಿಂದ ವಾಪಸ್ಸಾದ ಮೇಲೆಯೇ.
ಅವನು ಬಚ್ಚಲಲ್ಲಿ ಕಾಲು ತೊಳಿಯುತ್ತಿದ್ದ. ನಾನು ಅಂಗಳಕ್ಕೆ ಸೈಕಲ್‌ನ್ನು ಹೊತ್ತು ತಂದೆ. ಅಜ್ಜ “ಬಂದೇ ಬಿಡ್ತಲ್ಲೋ’ ಎಂದು ಅಬ್ಬರಿಸಿದರು. ಅವನು ಒಂದೇ ಹೊಡೆತಕ್ಕೆ ಮಾವಿನಕಾಯಿ ಉದುರಿಸುವವನಂತೆ ಅಂಗಳಕ್ಕೆ ಜಿಗಿದು ಬಂದ. ಕಣ್ಣೆದುರು ಅವನ ಕನಸಿನ ಸೈಕಲ್ಲಿತ್ತು. “ಹಸಿರು…ಗ್ರೀನ್’ ಕಲರ್‌ದ್ದು ತಾ ಅಂದಿದ್ದ. ಜತೆಗೆ ಸಿಗದಿದ್ದರೆ ಕೆಂಪು ಎಂದು ಅವನೇ ಆಪ್ಚನ್ ಕೊಟ್ಟಿದ್ದ. ಕೆಂಪೇ ಸಿಕ್ಕಿತು. ಸೈಕಲ್ ಕಂಡವನಿಗೆ ಅಪ್ಪನೂ ಬೇಕಿರಲಿಲ್ಲ..ಅಮ್ಮ..ಅಜ್ಜ..ಅಮ್ಮಮ್ಮ…ಯಾರೂ ಬೇಕಿರಲಿಲ್ಲ !
ಅಂಥದೊಂದು ಖುಷಿ ಅವನನ್ನು ಆವರಿಸಿಕೊಂಡು ಬಿಟ್ಟಿತ್ತು. ಸಣ್ಣದೊಂದು ಮಳೆ ರಾಗ ಹಾಡುತ್ತಿರುವ ಮಧ್ಯೆಯೇ ಸೈಕಲ್‌ನ್ನು ಕೊಂಚ ಓಡಿಸಿದ, ನಂತರ ಚಾವಡಿಗೆ ಬಂದ. ಅಲ್ಲಿ ಮತ್ತೆ ಅವನದ್ದು ಅದೇ ಅಭ್ಯಾಸ.
ಸಂಜೆ ಎಂಟೂವರೆಗೆ ಬಸ್ಸು. ಮಗ ಹೊಸದಾದ ಮಳೆ ಅಂಗಿಯನ್ನು ತೊಟ್ಟು ಅಜ್ಜನೊಂದಿಗೆ ಬಂದಿದ್ದ ಅಪ್ಪನನ್ನು ಕಳುಹಿಸಲು. ಮೊದಲೇ ಮನೆಯಲ್ಲೇ ಷರತ್ತು ವಿಧಿಸಿದ್ದೆ “ನೀನು ಅಳಬಾರದೆಂದು’. ಅದಕ್ಕೆ ಅವನೂ ಸಹಿ ಹಾಕಿದ್ದ. ನಾನೂ ಅವನು ಬಸ್ಸು ನಿಲ್ದಾಣದ ಕಲ್ಲಿನ ಮೇಲೆ ಕುಳಿತು ಹರಟುತ್ತಿದ್ದೆವು. ಅವನೂ ಸೈಕಲ್‌ನ ಗುಂಗಿನಲ್ಲೇ ಇದ್ದ. ಅಷ್ಟರಲ್ಲಿ ಬಸ್ಸು ಬಂದು ನಿಂತಿತು. ಥಟ್ಟನೆ ಹೊರಟು ನಿಂತೆ. ಮಗ ದಿಟ್ಟಿಸಿ ನೋಡುತ್ತಲೇ ಇದ್ದ. ನಾನು ಮೇಲೆ ಹತ್ತಿ ಕಿಟಕಿಯಲ್ಲಿ ಇಣುಕಿದೆ. ಅವನ ಕಣ್ಣಿನಲ್ಲಿ ನೀರು ತುಂಬಿತ್ತು. “ಅಪ್ಪಾ…ಹೋಗ್ಬೇಡ..ಬಾ..’ ಎಂದು ಕೂಗುತ್ತಿದ್ದ. ಅಜ್ಜ ಮೊಬೈಲ್‌ನಲ್ಲಿ ಮಾತಾಡುತ್ತಿದ್ದರು. ಅಪ್ಪ ಮತ್ತು ಮಗನ ಭಾವನೆ ಮುಖಾಮುಖಿಯಾಗಿದ್ದೇ ಆಗ. ನನಗೂ ಕಣ್ಣು ತೇವಗೊಂಡಿತು. ಅಳು ಉಕ್ಕಿ ಬಂತು. ಆದರೆ ಅನಿವಾರ್ಯತೆ ಅದನ್ನು ಗಂಟಲಲ್ಲಿಯೇ ಉಳಿಸಿತು, ನೀರಾಗಿ ಹರಿಯಲು ಅವಕಾಶ ಕೊಡಲೇ ಇಲ್ಲ.
ಅವನ ಸದಾ ಹೇಳುವ ಮಾತು “ಅಪ್ಪಾ…ನೀ ಹೀಗೆ ಮಾಡಿದ್ರೆ ನನ್ಗೆ ಬೇಜಾರಾಗುತ್ತೆ’ ಎಂಬುದು. ಈಗ ಮತ್ತೆ ಅವನಿಗೆ ಬೇಜಾರು ಆಗುವ ಹಾಗೆಯೇ ಮಾಡಿದ್ದೆ, ನಿಜಕ್ಕೂ ನನಗೂ ಬೇಜಾರೆನಿಸಿತು. ನಾವೀಗ ದಸರೆಯ ರಜೆ ಬರುವುದನ್ನೇ ಕಾಯುತ್ತಿದ್ದೇವೆ..ಅಲ್ಲಿಯವರೆಗೂ…ಏನೂ ಹೇಳುವಂತಿಲ್ಲ.ಬರಿಯ ಅನುಭವ. ಅವನು ರಸ್ತೆಯಲ್ಲಿ ನಿಂತ ಮನಸಾರೆ ಅತ್ತು ಹಗುರ ಮಾಡಿಕೊಂಡ. ನಾನು ದುಃಖವನ್ನು “ಬೌದ್ಧಿಕ’ ಲೆಕ್ಕಾಚಾರದಡಿ ಅನಿವಾರ್ಯತೆಯ ನೆವ ಹೇಳಿ ತಡೆದುಕೊಂಡೆ. ಅಹರ್ನಿಶಿಯವರೂ ತಮ್ಮ ಬ್ಲಾಗ್ನಲ್ಲಿ ತಮ್ಮ ಮಗನ ಮೊದಲ ದಿನದ ಅನುಭವ ಬರೆದಿದ್ದಾರೆ. ನಿಜಕ್ಕೂ, ಎಲ್ಲೇ ಇರಲಿ, ಎಲ್ಲರೂ ಮಕ್ಕಳೇ !

ನಾನು ದೊಡ್ಡವನಾಗಿದ್ದೆ, ಅವನು ಮಗುವಾಗಿಯೇ ಉಳಿದಿದ್ದ !