ಮನಸ್ಸಿನೊಳಗೆ ಖುಷಿ ಕುಣಿದಾಡುತ್ತಿದೆ ; ಹಾಗೇ ಸುಮ್ಮನೆ ಬೀಸಿ ಬರುವ ಗಾಳಿಗೆ ಸಂಪಿಗೆ ಎಸಳುಗಳು ತೂಗಾಡಿದ ಹಾಗೆ.ಜೂ. ೧೧ ರಂದು ನನ್ನ ಮಗ ಶಾಲೆಗೆ ಹೋಗುತ್ತಿದ್ದಾನೆ. ಪಾಠಶಾಲೆಯ ಮೊದಲ ದಿನವದು. ನನ್ನೊಳಗೆ ಸಂಭ್ರಮದ ಹಕ್ಕಿಯ ರೆಕ್ಕೆ ಹಾರಿಸುತ್ತಿರುವ ಸದ್ದು ವರ್ಣಿಸಲಾಗದು. ಬ್ರಹ್ಮಾವರ ಬಳಿಯ ಸಾಲಿಕೇರಿಯ ಶಾಲೆಯೊಂದಕ್ಕೆ ಅವನ ಪ್ರವೇಶ.

ನನ್ನ ಅಮ್ಮ, ಅಪ್ಪ ಇಂಥದೊಂದು ಸಂಭ್ರಮವನ್ನು ಕಂಡಿದ್ದರೋ, ಉಂಡಿದ್ದರೋ ತಿಳಿದಿಲ್ಲ. ನನಗೊಂದು ಅಂಥ ಅವಕಾಶ ಬಂದಿದೆ. ಸಾಲಿಗ್ರಾಮದಲ್ಲಿ ಅವನ ಅಜ್ಜನ ಮನೆಯಲ್ಲಿದ್ದು, ಓದುತ್ತಾನೆ ನನ್ನ ಮಗ.

ಒಂದು ಮಗುವಿನ ಬೆಳವಣಿಗೆಯನ್ನು ಕಣ್ತುಂಬಿಕೊಳ್ಳುತ್ತಲೇ ನಾವು ಬೆಳೆದು ಬಂದ ಪರಿಯನ್ನು ಹೋಲಿಸುತ್ತಾ ಹೋಗುವುದಿದೆಯಲ್ಲ, ಅದೇ ಬದುಕಿಗೊಂದು ಉತ್ಸಾಹ ತುಂಬುವ ನೆಲೆ ಎನಿಸುತ್ತದೆ ಆಗಾಗ್ಗೆ. ಹೀಗೆ ಎನಿಸಿಕೊಂಡು ನನ್ನ ಅಮ್ಮನನ್ನು ಇಂಥ ದಿನದ ಅಂದಿನ ಸಂಭ್ರಮದ ಬಗ್ಗೆ ಕೇಳಿದೆ. ಅಂದರೆ ನಾನು ಮೊದಲ ದಿನ ಶಾಲೆಗೆ ಹೋದ ಕ್ಷಣಗಳನ್ನು. ಅಮ್ಮ ನೆನೆಸಿಕೊಂಡು ಹೇಳಿದಳು. ಆದರೆ ಅವಳ ಜ್ಞಾಪಕಚಿತ್ರಶಾಲೆಯಲ್ಲೂ ಆ ಚಿತ್ರಗಳೆಲ್ಲಾ ಮಸುಕಾಗಿವೆ.

ನಾನು ಬೆಳೆದದ್ದು ನನ್ನ ದೊಡ್ಡಮ್ಮನ ಮನೆಯಲ್ಲಿ. ಅಂದರೆ ದೊಡ್ಡಮ್ಮ ಎಂದರೆ ತಾಯಿಯ ಅಕ್ಕ ಅಲ್ಲ. ನನ್ನಪ್ಪ ನನ್ನೂರನ್ನು ತ್ಯಜಿಸಿ ಭದ್ರಾವತಿಗೆ ಬಂದಾಗ ಯಾರದೋ ಒಬ್ಬ ಪರಿಚಯಸ್ಥರ ಆಶ್ರಯ ಬೇಕಿತ್ತು. ಆಗ ಸಿಕ್ಕಿದ್ದು ಇವರ ಮನೆ. ಪರಿಚಯವೂ ಆದದ್ದು ನಂತರವೇ. ಆದರೆ ಇಬ್ಬರೂ ಒಂದೇ ಊರಿನವರೆಂಬುದೇ ಪರಿಚಯಕ್ಕೆ ಮೂಲವಾಗಿತ್ತಂತೆ. ಹೀಗಿರುವಾಗ ನನ್ನ ಮನೆಯ ಮಾಲೀಕಿಣಿಗೆ ಮಕ್ಕಳಿರಲಿಲ್ಲ. ನಾನು ಅಲ್ಲಿಗೆ ಹೋಗಿ ಬರ್‍ತಾ ಇದ್ದದ್ದರಿಂದ ಅವರೇ ನೋಡಿಕೊಳ್ಳಲು ನಿರ್ಧರಿಸಿದರು. ನಂತರ ನನ್ನ ಅಪ್ಪ ಮನೆ ಸ್ಥಳಾಂತರಿಸಿದರೇನೋ ನಿಜ. ಆದರೆ ನಾನು ಆ ಮಾಲೀಕಿಣಿ ಮನೆಯಲ್ಲೇ ಉಳಿದೆ. ಹಾಗೆ ಆದದ್ದು ದೊಡ್ಡಮ್ಮ.

ಹಾಲು ಸಕ್ಕರೆ ಕರಗಿಸಿಕೊಂಡು ಚಪಾತಿ ಅದ್ದಿ ತಿನ್ನುವುದು ಬಹಳ ಇಷ್ಟ. ಹೀಗೆ ಮಕ್ಕಳನ್ನು ಹಿಡಿದುಕೊಂಡು ಹೋಗುವ ಗುಮ್ಮಯ್ಯನ ಹಾಗೆ ಒಂದು ಹೆಂಗಸು ಬರ್‍ತಿತ್ತಂತೆ. ಅವಳು ಹತ್ತಿರದ ಅಂಗನವಾಡಿಯವಳು. ಮಕ್ಕಳನ್ನೆಲ್ಲ ಕರೆದೊಯ್ದು ಸೇರಿಸುವವಳು. ಆಗ ಇದ್ದದ್ದು ಶಿಶುವಿಹಾರ, ಬಾಲವಾಡಿ ಅಂತ. ಇಂಥದ್ದೇ ಒಂದು ಜೂನ್‌ನಲ್ಲಿ ಆ ಹೆಂಗಸು ನಮ್ಮ ಮನೆಯ ಮುಂದೆಯೂ ನಿಂತಳಂತೆ. “ನಿಮ್ಮಲ್ಲಿ ಏನಾದ್ರೂ ಮಕ್ಕಳಿದ್ದವಾ, ಶಾಲೆ ಹೋಗಲಿಕ್ಕೆ’ ಎಂದು ಕೇಳಿದಳಂತೆ. ಅದಕ್ಕೆ ಈ ದೊಡ್ಡಮ್ಮ “ಹೌದು, ಇದ್ದಾನೆ. ಬಹಳ ಗಲಾಟೆ ಮಾಡ್ತಾನೆ. ಆದರೆ ಇನ್ನೂ ವಯಸ್ಸು ಕಡಿಮೆ’ ಎಂದರಂತೆ. ಅದಕ್ಕೆ ಆಕೆ ಎಷ್ಟಾಗಿರಬಹುದು ಎಂದದ್ದಕ್ಕೆ ಐದು ಇನ್ನೂ ತುಂಬಿಲ್ಲ ಎಂದರಂತೆ ಅಮ್ಮ. ವಾಸ್ತವವಾಗಿ ನನಗೆ ಐದು ತುಂಬಲು ಎಂಟು ತಿಂಗಳು ಬಾಕಿಯಿತ್ತು. ಆಕೆ “ಇರಲಿ, ನೋಡೋಣ’ ಎಂದು ಕರೆದೊಯ್ದಳಂತೆ. ಅದೇ ನನ್ನ ಮೊದಲ ದಿನ.

ಬಿಡಿ, ಆಗ ಈ ಅಂಕಗಳ ಲೆಕ್ಕಾಚಾರ ಇರಲಿಲ್ಲ. ಶಾಲೆಗೆ ಹೋಗೋ ಅಭ್ಯಾಸ ಮಾಡಿಕೊಂಡರೆ ಸಾಕು ಎಂದು ಬಯಸುತ್ತಿದ್ದ ಪೋಷಕರೇ ಬಹುಪಾಲು. ಈಗಿನದ್ದು ಹಾಗಲ್ಲ. ಎಲ್‌ಕೆಜಿ ಅಂದರೆ ಮೂರೂವರೆ ವರ್ಷಕ್ಕೇ ಆತನಿಗೆ ಅದು, ಇದು ಎಲ್ಲಾ ಬರಬೇಕು. ನಾವು ಎರಡನೇ ತರಗತಿಗೆ ಬಂದಾಗ ಹತ್ತರ ಮಗ್ಗಿ ದಾಟಿ ಹನ್ನೊಂದಕ್ಕೆ ಬರುತ್ತಿದ್ದವು. ಪುಣ್ಯಕ್ಕೆ ನನ್ನ ಹೆಂಡತಿಗೂ ಇಂದಿನ ಒತ್ತಡದ ಕಲಿಕೆ ಅಷ್ಟೊಂದು ಇಷ್ಟವಿಲ್ಲ. ಹಾಗಾಗಿ ನಾಲ್ಕು ವರ್ಷಕ್ಕೆ ಅವನನ್ನು ಶಾಲೆಗೆ ಸೇರಿಸುತ್ತಿದ್ದೇವೆ. ಅಲ್ಲಿಯವರೆಗೆ ಯಾವ ಬಾಲವಾಡಿಗೂ ಕಳಿಸಲಿಲ್ಲ. ಇದು ನನ್ನ ಹೆಗ್ಗಳಿಕೆ ಎಂದೇನೂ ಅಲ್ಲ. ಬಾಲ್ಯವನ್ನು ಅನುಭವಿಸಲಿ ಎಂದು ಸುಮ್ಮನಿದ್ದೆವು.
ಹೀಗೆ ಶಾಲೆಗೆ ಸೇರಿಸಿಕೊಂಡಾಕೆಗೆ ನನ್ನ ಮೇಲೆ ವಿಶ್ವಾಸ ಬಂದಿತ್ತಂತೆ. ಒಂದು ವಾರ ನನ್ನ “ಚಲನವಲನ’ ಕಂಡ ಆಕೆ ಮತ್ತೊಂದು ದಿನ ದೊಡ್ಡಮ್ಮನ ಎದುರು ಬಂದು “ಇರಲಿ ಬಿಡಿ’ ಎಂದಳಂತೆ. “ಅಲ್ಲಮ್ಮಾ, ಅವನಿಗೆ ಐದು ವರ್ಷವಾಗಿಲ್ಲ’ ಎಂದದ್ದಕ್ಕೆ ಅವಳೇ ಒಂದು ಲೆಕ್ಕ ಬರೆದು ವರ್ಷ ಪೂರ್ಣಗೊಳಿಸಿ ಹಾಕಿದಳು. ಅದರ ಪರಿಣಾಮ ನನ್ನ ಜನ್ಮ ದಿನಾಂಕ ಒಂದೂವರೆ ವರ್ಷ ಹೆಚ್ಚೂ ಕಡಿಮೆಯಾಗಿದೆ !

ಆಗ ನಾನೂ ಸ್ವಲ್ಪ ದಪ್ಪಗೆ, ಎತ್ತರಕ್ಕೆ ( ಆ ವಯಸ್ಸಿಗೆ) ಇದ್ದನಂತೆ. ಯಾವ ಎಜುಕೇಷನ್ ಇನ್ಸ್‌ಪೆಕ್ಟರ್‌ಗಳೂ ಕೇಳಿರಲಿಲ್ಲ. ನಾನು ಶಾಲೆಗೆ ಹೋಗಿ ಕುಳಿತುಕೊಳ್ಳಲು ಕಲಿತೆ. ಅಕ್ಷರವೆಲ್ಲಾ ಕಲಿತದ್ದು ಎಷ್ಟೋ ಗೊತ್ತಿಲ್ಲ. ನನ್ನ ಅಮ್ಮನೂ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ದೊಡ್ಡಮ್ಮ ಸಹ ಓದದ ದಿನ ಎರಡು ಚಪಾತಿ ಕಡಿಮೆ ಕೊಡುತ್ತಿದ್ದರಷ್ಟೇ !

ಒಂದೂ ಬೈಗುಳ ಉಡುಗೊರೆಯಾಗಿ ಕೊಡುತ್ತಿರಲಿಲ್ಲ. ತೀರಾ ಮಿತಿ ಮೀರಿದರೆ ಅಪ್ಪನಿಗೆ ದೂರು ಹೇಳುತ್ತಿದ್ದರು. ನಂತರ ನಾನೂ ದೊಡ್ಡವನಾಗುತ್ತಿದ್ದಂತೆಯೇ ನನ್ನ ತಲೆ ಹರಟೆ ಹೆಚ್ಚಾಯಿತೋ, ಅವರ ದೂರು ಹೇಳುವ ಪ್ರವೃತ್ತಿ ಹೆಚ್ಚಾಯಿತೋ ಗೊತ್ತಿಲ್ಲ. ಪ್ರತಿ ಭಾನುವಾರ ಅಪ್ಪನ ಎದುರು ವಿಚಾರಣೆ ನಡೆಯುತ್ತಿತ್ತು. ನಾನು ತಲೆತಗ್ಗಿಸಿಕೊಂಡು ನಿಲ್ಲುತ್ತಿದ್ದೆ. ನನ್ನ ದೊಡ್ಡಮ್ಮ ನನ್ನನ್ನು ಕರೆದುಕೊಂಡು ಹೋಗಿ “ಪೂಜೆ’ ಮಾಡಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದರು. ನಾನೂ ಸುಮ್ಮನೆ ಹಿಂಬಾಲಿಸಿಕೊಂಡು ಬರುತ್ತಿದ್ದೆ. ಇದು ಪ್ರತಿ ವಾರದ ಕಾರ್‍ಯಕ್ರಮ.

ಹೀಗೆ ಸಾಗಿ ಹೋಗುವ ನನ್ನ ಶಾಲಾ ದಿನಗಳ ನೆನಪು ನನ್ನ ಮಗನನ್ನು ನೆನಪಿಸುತ್ತಿದೆ. ಶಾಲಾ ಸಂಭ್ರಮದ ಕ್ಷಣ ಕಣ್ತುಂಬಿಕೊಳ್ಳಲು ಇರುವ ಅವಕಾಶ ಅತ್ಯಂತ ಕಡಿಮೆಯೆನ್ನುವುದೂ ಹೌದು. ಅವನು ಅಜ್ಜನ ಮನೆಯಲ್ಲಿ ಓದಿದರೆ, ನಾನಿರುವುದು ಮೈಸೂರಿನಲ್ಲಿ. ಈಗ ಊರಿನಲ್ಲಿ ಜಿರಾಪಟಿ ಮಳೆ ಶುರುವಾಗಿರುವ ಹೊತ್ತು. ಒಂದು ಮಳೆಗಾಲಕ್ಕೆ ಸಿದ್ಧಗೊಳ್ಳುವ ಪರಿ ಅದ್ಭುತ. ಈಗೀಗ ಆಧುನಿಕ ಜೀವನ ಶೈಲಿ, ಮಿತ ಕುಟುಂಬಗಳೆಲ್ಲಾ ಆ ಸಂಭ್ರಮವನ್ನು ಕಡಿತಗೊಳಿಸಿರುವುದು ಸತ್ಯ. ಇದರರ್ಥ ಕುಟುಂಬ ಯೋಜನೆ ವಿರೋಧಿ ನಾನಲ್ಲ. ಆದರೆ ಎಲ್ಲರಿಗೂ ಎಂದು ಹಂಚಿಕೊಳ್ಳುವ ಸಂಭ್ರಮದ ಕ್ಷೀಣವಾಗುತ್ತಿದೆ. ಆಗಲೇ ಹೇಳಿದೆನಲ್ಲ, ಮಳೆಗಾಲಕ್ಕೆ ಸಿದ್ಧವಾಗುವ ಪರಿ. ಶಿವರಾಮ ಕಾರಂತರ “ಮರಳಿ ಮಣ್ಣಿಗೆ’ ಕಾದಂಬರಿ ಓದಬೇಕು.

ಅವನೂ ಮಳೆಗಾಲದ ಸಂಭ್ರಮವನ್ನು ತನ್ನೊಳಗೆ ತುಂಬಿಕೊಳ್ಳಲು ಹೊರಟಿದ್ದಾನೆ. ಜತೆಗೆ ನಾನೂ ಇದ್ದೇನೆ. ಒಂದೆರಡು ಮಳೆಯ ಹನಿಗಳನ್ನು ನನ್ನೊಳಗೆ ತುಂಬಿಕೊಂಡು ಬರುತ್ತೇನೆ ; ಜತೆಗೆ ಮಗನನ್ನು ಬಿಟ್ಟು ಇರಬೇಕೆಂಬ ಅನಿವಾರ್ಯದ ಅಗಲಿಕೆಯ ಎರಡು ಕಣ್ಣ ಹನಿಗಳೊಂದಿಗೂ…
ಅಂದ ಹಾಗೆ ನನ್ನ ಮಗನ ಹೆಸರು ಹೇಳಲು ಮರೆತಿದ್ದೆ… ಋತುಪರ್ಣ.